Sunday, May 4, 2014

ಬಾವಿ - ಇತ್ತೀಚೆಗೆ ಬರೆದ ಕತೆಬಾವಿ
ಇತ್ತೀಚೆಗೆ ಬರೆದ ಕತೆಶಿಕಾಗೋದ ಓಕ್ಪಾರ್ಕಿನಲ್ಲಿದ್ದ ಮಗನ ಮನೆಯ ಹಾಲಿನಲ್ಲಿ
ಬರಲಿರುವ ಕನ್ನಡ ಸೀರಿಯಲ್ ಗಾಗಿ ಕಾಯುತ್ತಾ ಕೂತಿದ್ದರು ರಾಮನಾಥ.
ಮೊದಲೆಲ್ಲಾ ಹೆಂಡತಿ ಶೀಲಾ ಜೊತೆ ಶಿಕಾಗೋಗೆ ಬಂದಾಗ ಇದ್ದ
ಉತ್ಸಾಹ ಈಗ ಇರಲಿಲ್ಲ. ಇದ್ದಕ್ಕಿದ್ದಂತೆ ತೀರಿಕೊಂಡ ಅವಳ
ನೆನಪುಗಳನ್ನು ಹೊತ್ತು ವಿಮಾನ ಹತ್ತಿದ್ದೂ ಮಗ, ಸೊಸೆಯ ಬಲವಂತಕ್ಕೆ.
’ನೀವೊಬ್ಬರೇ ಇಲ್ಲಿ ಒಂಟಿಯಾಗಿ ಇರುವ ಪ್ರಶ್ನೆಯೇ ಇಲ್ಲ. ಸುಮ್ಮನೆ
ನಮ್ಮೊಂದಿಗೆ ಬನ್ನಿ. ಒಂದೆರಡು ತಿಂಗಳಿದ್ದು ಬರುವಿರಂತೆ’ ಎಂದು ಒತ್ತಾಯ
ಮಾಡಿದ ವಿನೀತನಿಗೆ ಖಡಾಖಂಡಿತವಾಗಿ ಇಲ್ಲವೆನ್ನುವ, ವಾದಿಸುವ
  ಶಕ್ತಿ ಕೂಡಾ
ತನ್ನಲ್ಲಿಲ್ಲವೆನ್ನಿಸಿತ್ತು. ಯಾಂತ್ರಿಕವಾಗಿ ಒಂದೆರಡು ಬಟ್ಟೆ , ಔಷಧಿಗಳನ್ನು
ಸೂಟ್ ಕೇಸಿನಲ್ಲಿ ಹಾಕಿಕೊಂಡು ಹೊರಡಲು ತಯಾರಾಗಿದ್ದರು.
ರೂಮಿನ ಬಾಗಿಲು ಮುಚ್ಚಿ ಕಪಾಟಿನಲ್ಲಿದ್ದ ತಮ್ಮ ಮದುವೆಯ
ಫೋಟೊ ಎತ್ತಿ ಒಂದು ಕಂದು ಕವರಿನಲ್ಲಿ ಹಾಕಿ ಸೂಟ್ಕೇಸಿನಲ್ಲಿ  ತನ್ನ ಬಟ್ಟೆಗಳ ನಡುವೆ
ಇಟ್ಟಿದ್ದರು. ಇಬ್ಬರೂ ಹದಿಹರೆಯದವರಂತೆ  ಕಾಣುತ್ತಿದ್ದ ಕಪ್ಪು
ಬಿಳುಪಿನ ಫೋಟೋ. ಕಣ್ಣುಗಳಲ್ಲಿ ಏನು ಹೊಳಪು, ಎಷ್ಟು ಸಂತಸ.  ಬದುಕೆಲ್ಲಾ ಹೀಗೇ
ಇರುವುದೆಂಬ ಭರವಸೆ ಹೊತ್ತ ಸಂಕೋಚದ ನಗು.
                                 *
ಇಲ್ಲಿಗೆ ಬಂದು ನಿಧಾನವಾಗಿ ತಿಂಗಳುಗಳು ಉರುಳಿತ್ತು. ಯಾವಾಗಲೂ ಮನಸ್ಸಿನಲ್ಲಿ
ಬಣಬಣ. ಶೀಲಾ ಜೊತೆ ಕಳೆದ ದಿನಗಳ ನೆನಪು.
ಅವತ್ತಿನಿಂದ ಹೊಸ ಸೀರಿಯಲ್ ’ಮಲಯ ಮಾರುತ’ ಪ್ರಾರಂಭ
ವಾಗಲಿತ್ತು. ಶೀಲಾ ಇದ್ದಿದ್ದರೆ ಎಷ್ಟು ಖುಶಿಯಾಗುತ್ತಿದ್ದಳೋ.
ಅಮೆರಿಕಾಗೆ ಬಂದಾಗ ಕನ್ನಡ ಸೀರಿಯಲ್ ಗಳನ್ನು ತುಂಬಾ ಮಿಸ್
ಮಾಡುತ್ತಿದ್ದಳು. ಇದು ಅವಳ ಮೆಚ್ಚಿನ ನಿರ್ದೇಶಕರ ಸೀರಿಯಲ್ ಬೇರೆ. ಹೌದು.
ಮತ್ತೆ ಮತ್ತೆ ॒ಶೀಲಾ ಇದ್ದಿದ್ದರೆ ಅನ್ನಿಸುತ್ತಲೇ ಇತ್ತು.


ಅಮೆರಿಕಾಗೆ ಪ್ಲೇನ್ ಹತ್ತುವಾಗ ಶೀಲಾ ಇದ್ದಿದ್ದರೆ. ಮನೆಯಲ್ಲಿ
ಬೆಳಿಗ್ಗೆ ಘಮ್ಮನೆಯ ಕಾಫಿ ಪರಿಮಳ ತೇಲಿ ಬಂದಾಗ ತಾನು ಮಾಡಿದ ಕಾಫಿಗಾಗಿ
ದಿನಾ ಬೆಳಿಗ್ಗೆ ಕಾಯುತ್ತಿದ್ದ ಶೀಲಾ ಇದ್ದಿದ್ದರೆ.

        ಸಂಜೆ ಸ್ಕೂಲಿಂದ ಬಂದ ಮೊಮ್ಮಗನ
ಜೊತೆ ಚೈನೀಸ್ ಚೆಕರ್ಸ್ ಆಡುವಾಗ ಅಲ್ಲಿ ಶೀಲಾ ಇದ್ದಿದ್ದರೆ. ಹೂವಿನಂತಿರುವ
        ಬ್ರೆಡ್ಡಿಗೆ ಬೆಣ್ಣೆ ಹಚ್ಚುವಾಗ ಶೀಲಾ ಇದ್ದಿದ್ದರೆ. ಬೆಳಿಗ್ಗೆ ಎಳೆ ಬಿಸಿಲಲ್ಲಿ  ವಾಕ್ ಹೋಗುವಾಗ
        ಅದೇ ಚಳಿಗಾಲ ಮುಗಿದು ಎಚ್ಚೆತ್ತುಕೊಳ್ಳುತ್ತಿದ್ದ ಹುಲ್ಲು, ಕಣ್ಣು ಬಿಡುತ್ತಿದ್ದ
        ಟ್ಯೂಲಿಪ್ ಹೂಗಳನ್ನು
        ನೋಡಿದಾಗ ಜೊತೆಗೆ ಶೀಲಾ ಇದ್ದಿದ್ದರೆ.
ಪ್ರತಿ ಚಿಕ್ಕಪುಟ್ಟ ಘಟನೆಯ ನಂತರವೂ ’ಶೀಲಾ ಇದ್ದಿದ್ದರೆ’ ಎಂದು
ಎದೆ ಬಡಿದುಕೊಳ್ಳುತ್ತಲೇ ಇತ್ತು.
                                   *

ಇವರು ತನ್ನ ಗುಂಗಿನಲಿರುವಾಗ ಟೈಟಲ್  ಸಾಂಗ್ ಮುಗಿದು ಮೊದಲ ಸೀನು ಶುರುವಾಗಿತ್ತು.
ತೆರೆಯ ಮೇಲೆ ಮೊದಲು ಮೂಡಿದ್ದು ಒಂದು  ಬಾವಿ. ಹಾಂಇ॒ದೇನಿದು. ಅದೇ ಬಾವಿ. ತಮ್ಮ ಮನೆಯ
ಹಿಂದಿದ್ದ ಬಾವಿ.ಹೇಗೆ ಸಾಧ್ಯ? ಬರೀ ತನ್ನ ಭ್ರಮೆ ಅಷ್ಟೆ. ಆದರೆ.॒ಎಲ್ಲಾ ಪರಿಚಿತ. ಅದೇ ಬಾವಿ ಕಟ್ಟೆ.
ಅಲ್ಲಲ್ಲಿ ಉದುರಿದ್ದ ಗಾರೆ.
ಸ್ವಲ್ಪ ತುಕ್ಕು ಹಿಡಿದಿದ್ದ ರಾಟೆ. ಒಂದು ಮೂಲೆಯಲ್ಲಿ ಈಗ ಮಸುಕಾದ ಕೆಂಪು  ಪೇಂಟ್‌ನಲ್ಲಿ ಚೆನ್ನ
ಬರೆದಿದ್ದ ’ಮೂರು ನಾಮ, ನಾಳೆ ಬಾ.’
ಮೇಲಿಂದ  ನೇತಾಡುತ್ತಿದ್ದ ಹಗ್ಗ. ಅದಕ್ಕೊಂದು ಕೊಡ. ತಾನು ಹುಟ್ಟಿದಾಗಿನಿಂದ ಕಂಡಿದ್ದ ಬಾವಿ॒
ತಪ್ಪಾಗುವುದು ಸಾಧ್ಯವೇ ಇರಲಿಲ್ಲ. ತೆರೆ ಮೇಲೆ ಇಬ್ಬರು ಹುಡುಗಿಯರು ನಿಧಾನವಾಗಿ ಬಂದು
ಬಾವಿಯ ಕಟ್ಟೆ ಮೇಲೆ ಕೂತು ಮಾತಾಡ ತೊಡಗಿದರು. ಏನೋ ಗುಟ್ಟು ಹಂಚಿಕೊಳ್ಳುತ್ತಿದ್ದಂತೆ.
ಹಾಗೆಯೇ ಬಾವಿ ಕಟ್ಟೆ ಹತ್ತಿ ಕೂತರು. ಅಯ್ಯೊಹು॒ಶಾರು! ಜಾರಿದರೆ ಗತಿ ಏನು?!
ಯಾವಾಗಲೂ ತಮ್ಮ ಮನೆಯಲ್ಲಿ ಯಾರು ಬಾವಿ ಕಟ್ಟೆಯ ಮೆಲೆ ಕೂತರೂ ಹಿಂದೆಯೇ ಕೇಳಿ ಬರುತ್ತಿದ್ದ
ಕೂಗು. ಅವರ ಕಾಲು ಸಣ್ಣಗೆ ನಡುಗಿತು. ಎಷ್ಟು ಆಳ. ಒಳಗೆ ತಿಳಿನೀರು. ಬಗ್ಗುತ್ತಿದ್ದಾರೆಜಾ॒ರಿದರೆ?
ದೃಶ್ಯ ಬದಲಾಗಿತ್ತು.

                                  *
ರಾಮನಾಥರ ಯೋಚನೆಗಳು ಹಾಗೆಯೇ ಎಲ್ಲೊ ತೇಲಿ ಹೋಗಿ ಟಿವಿ ಪರದೆಯ ಮೇಲೆ ಬರುತ್ತಿದ್ದ
 ಚಿತ್ರಗಳು ಮಸುಕಾದುವು. ಮತ್ತೆ ಅದೇ ಪ್ರಶ್ನೆ ಮನದ ಮೂಲೆಯಿಂದ ಇಣುಕಿತು.
        ತಾನು ಮನೆ ಮಾರಿದ್ದು ಸರಿಯೆ? ಆದರೆ.॒
        ಅತ್ಮೀಯ ಗೆಳೆಯ ಮೂರ್ತಿಗೆ ತಾನೆ ಮಾರಿದ್ದು. ಮಾರುವ ಮೊದಲು ತುಂಬಾ ಯೋಚಿಸಿ ಆಗಿದೆ.
        ಒಂದು ಫ಼್ಲಾಟ್ ಬುಕ್ ಮಾಡಿಯೂ ಆಗಿದೆ. ದುಡ್ಡು ಪೂರ್ತಿ ತಗೊಂಡೂ ಆಗಿದೆ.ಈಗ ತನ್ನ ತೀರ          
        ’ಪರ್ಸನಲ್ ಬಿಲಾಂಗಿಂಗ್ಸ್’ ಒಂದು ಟ್ರ್ರಂಕಿನಲ್ಲಿಟ್ಟು ಬೀಗ ಹಾಕಿ ’ಜೋಪಾನ, ಮುಂದಿನ
         ಸಲ ತಗೊಂಡು ಹೋಗ್ತೀನಿ. ಅಷ್ತು ಹೊತ್ತಿಗೆ ನನ್ನ ಫ಼್ಲಾಟ್   ರೆಡಿಯಾಗಿರುತ್ತದೆ.     
        ಅದನ್ನು ಕಾಪಾದುವ ಜವಾಬ್ಬಾರಿ ನಿನ್ನದು’ ಎಂದು ಒಪ್ಪಿಸಿ ಆಗಿದೆ. ಅವನು ’ಖಂಡಿತ’
           ’ನಿನ್ನ ಎಷ್ಟು ಪ್ರೀತಿಯ ವಸ್ತುಗಳು  ಇದರಲ್ಲಿವೇಂತ ನನಗೆ ಗೊತ್ತು.’
        ’ಇದು ಈಗಲೂ ನಿನ್ನ ಮನೇನೇ ಕಣೋ, ನಾ ಬೇರೆ ನೀ ಬೇರೆ ಏನೋ’ ಎಂದು
        ಬೆನ್ನು ತಟ್ಟಿದಾಗ ಅವನ ಕಣ್ಣಂಚಿನಲ್ಲಿ ಕಂಡು ಬಂದ  ಹನಿ ತನ್ನ ನಂಬಿಕೆ, ಅಕ್ಕರೆಯನ್ನು
        ಗಟ್ಟಿಯಾಗಿಸಿದ್ದುವು.
        ’ಅಪ್ಪ, ನಿಮ್ಮ ಸೀರಿಯಲ್ ಮುಗಿಯಿತಲ್ಲಾ, ಊಟಕ್ಕೆ ಏಳ್ತೀರಾ, ಇನ್ನೂ ಪ್ಯಾಕಿಂಗ್
        ಕೂಡಾ  ಮುಗಿದಿಲ್ಲ.॒ಎಂದು ಮಗ ಎಚ್ಚರಿಸಿದಾಗ , ಹೌದಲ್ಲಾ, ಎಲ್ಲೋ ಕಳೆದು ಹೋಗಿದ್ದೆ
        ಮುಂದೇನಾಯಿತೋ ಗೊತ್ತೇ ಆಗಲಿಲ್ಲ, ಏನೇನೋ ನೆನಪುಗಳು
        ಎಂದು ಕೊಳ್ಳುತ್ತಲೇ ಟಿವಿ ಆರಿಸಿ ರಾಮನಾಥ ಎದ್ದರು.

                                       *
        ಊಟ ಮುಗಿಸಿ, ಸ್ವಲ್ಪ ಹೊತ್ತು ಹರಟಿ  ಹೊಡೆದು ಎದ್ದು ಬಂದ ರಾಮನಾಥ
        ತನ್ನ ರೂಮಿನಲ್ಲಿ ಚದುರಿ ಬಿದ್ದಿದ್ದ ಬಟ್ಟೆಗಳೂ, ಪುಸ್ತಕಗಳು, ಅದೂ ಇದೂ ಎಲ್ಲಾ ಸೇರಿಸಿ
        ಸೂಟ್ಕೇಸಿನಲ್ಲಿ ತುರುಕಿದರು. ತನ್ನ ಟೇಬಲ್ ಮೆಲಿದ್ದ ತನ್ನ, ಶೀಲಾ ಕಪ್ಪು ಬಿಳು ಪಿನ
        ಫೋಟೊ ಒಳಗಿಡಲು ಕೈಗೆತ್ತಿಕೊಂಡಾಗ ಒಳಗೆ ಬಂದ ಮಗ’ಅದು ಇಲ್ಲೇ  ಇರಲಿ ಬಿಡಿ ಅಪ್ಪ...’
        ಎಂದವನೇ ಅವರ ಮುಖ ಸ್ವಲ್ಪ ಪೆಚ್ಚಾದದ್ದು ಕಂಡು  ’ನೀವು ಮತ್ತೆ ಬೇಗನೇ ಬರುತ್ತೀರಲ್ಲಾ’
        ಎಂದು ಸೇರಿಸಿದ. ರಾಮನಾಥ ಏನು ಹೇಳಬೇಕೋ ತೋಚದೆ ’ಇಲ್ಲ.॒ಇಲ್ಲಾ. ಆಗ ಮತ್ತೊಂದು
        ಕಾಪಿ ಮಾದಿಸಿ ತರ್ತೀನಿ ನಿನಗೋಸ್ಕರ ’ಎಂದದ್ದನ್ನು ಕಂಡು ಮಗ ಹೆಚ್ಚಿನ ಚರ್ಚೆಗೆ ಹೋಗಲಿಲ್ಲ.
        ಪಾಸ್ಪೋರ್ಟ್, ಹಣ, ಕಾರ್ಡುಗಳು, ಔಷಧಿ  ಎಲ್ಲಾ ಜೋಪಾನವಾಗಿ ಇಟ್ಟುಕೊಂದು ಎಲ್ಲಾ ಒಂದು ಸಲ
        ಚೆಕ್ ಮಾಡಿದಾಗ ತಾನೇನೂ ಮರೆತಿಲ್ಲ ಎಂದು ರಾಮನಾಥರಿಗೆ ಖಾತ್ರಿಯಾಯಿತು.
        ಎಷ್ಟು ಹೊತ್ತಾದರೂ ನಿದ್ದೆ ಬರದು. ಮತ್ತೆಮತ್ತೆ ಎದುರು ಬರುತ್ತಿದ್ದ ಆ ಬಾವಿ.
        ಅಮ್ಮ ತನಗೆ, ಚಿಕ್ಕಿಗೆ ಆ ಬಾವಿ ಕಟ್ಟೆ ಪಕ್ಕ ಕೂಡಿಸಿಕೊಂಡು ಕೈತುತ್ತು ಹಾಕುತ್ತಿದ್ದುದು.
        ತಾನು ಗೆಳೆಯರೊಡನೆ ಅಲ್ಲೇ ಒರಗಿ ನಿಂತು ಗಂಟೆಗಟ್ಟಳೆ ಹರಟುತ್ತಿದ್ದುದು. ಅಜ್ಜಿ ಉಸ್ ಉಸ್
        ಎನ್ನುತ್ತಾ ದೇವರ ಪೂಜೆಗಾಗಿ ನೀರು ಸೇದಿಕೊಳ್ಳುತ್ತಿದ್ದುದು. ಅದನ್ನು ಕಂಡ ಅಪ್ಪ ನೀನೇನೊ
        ಕಾಲೋ ಬೆನ್ನೋ ಉಳುಕಿಸಿಕೊಳ್ಳುತ್ತೀಯಾ ಎಂದು ಬೈಯ್ಯುತ್ತಿದ್ದುದು. ಅಂದು ಸಂಜೆ
        ಮಸುಕುಗತ್ತಲಿನಲ್ಲಿ ತಂಗಿ ಚಿಕ್ಕಿ ಬಾವಿ ಕಟ್ಟೆ ಹಿಂದೆ ಅಡಗಿ ಕೂತು ಯಾವುದೋ ಹುಡುಗನೊಡನೆ ಪಿಸಪಿಸ
        ಮಾತಾಡುತ್ತಿದ್ದುದನ್ನು ಕಂಡ ತಾನು ಕಾಣದಂತೆ ಮೆಲ್ಲಗೆ ಒಳಗೆ ಬಂದದ್ದು.ಆಗಲೇ ’ಚಿಕ್ಕೀ’
           ಎಂದು ಕರೆಯುತ್ತಾ ಬಂದ ಅಮ್ಮನಿಗೆ’ಈಗ ಚಿಕ್ಕಿ ಪಕ್ಕದ ಮನೆ ಶೈಲೂನ ಏನೋ
           ಕೇಳಲು ಹೋದಳು’ಎಂದು  ಸುಳ್ಳು  ಹೇಳಿ ಚಿಕ್ಕೀನ ಬಚಾಯಿಸಿದ್ದು. ಅಜ್ಜಿ ಪ್ರತಿ ಹಬ್ಬದ
           ಹಿಂದಿನ ದಿನ ಬೆಳ್ಳಿ ಪಾತ್ರೆ ರಾಶಿ ಹಾಕಿಕೊಂಡು ಫಳ ಫಳನೆ ಬೆಳಗುತ್ತಿದ್ದುದು. ತಮಗೆ
           ದಿನಾ ರಾತ್ರಿ ಸ್ವಾರಸ್ಯಕರ ಕತೆಗಳನ್ನು ಹೇಳುತ್ತಾ, ನಗಿಸುತ್ತಿದ್ದ,
          ದಿಗಿಲು ಗೊಳಿಸುತ್ತಿದ್ದ ತಾತ ಇದ್ದಕ್ಕಿದ್ದಂತೆ ಒಂದು ದಿನ
           ಮಾತಾಡುವುದನ್ನೇ ನಿಲ್ಲಿಸಿ , ಹಗಲು ರಾತ್ರಿ ಗೋಡೆಗೆ ಪೂಜೆ ಮಾಡಲು ಶುರು ಮಾಡಿದಾಗ ಅಪ್ಪ
           ಅಮ್ಮ ದೃತಿಗೆಟ್ಟಿದ್ದು. ಮನೆಯವರನ್ನೆಲಾ ಕರೆದು ತಾತ ಬಾವಿ ಕಟ್ಟೆ ಕಡೆ ಹೋಗದಂತೆ ಒಂದು
           ಕಣ್ಣಿಟ್ಟಿರಲು ಹೇಳಿದ್ದು.॒ ಶೀಲಾ ಹೋದ ದಿನ ಕಾರ್ಪೊರೇಶನ್ ನೀರು ಬರದೆ ಕಂಗಾಲಾದಾಗ
           ಬಂದವರೆಲ್ಲಾ ಏನೂ ಆಗದಂತೆ
           ಕೊಡಗಟ್ಟಳೆ ನೀರು ಒಬ್ಬರ ನಂತರ ಒಬ್ಬರುಸೇದಿ ಸೇದಿ ಹಾಕಿದ್ದು॒


           ಎಷ್ಟೊಂದು ನೆನಪುಗಳಿದ್ದುವು ಆ ಬಾವಿಗೆ.॒ ತಮ್ಮ ಇಡೀ ಬದುಕಿನ ಸಂತಸ, ಗಾಬರಿ,
           ನೋವು, ಮೋಸ, ತಲ್ಲಣಗನ್ನು ತನ್ನೊಳಗಿನ ತಣ್ಣನೆಯ ತಿಳಿನೀರಿನಲ್ಲಿ ಕರಗಿಸಿಟ್ಟುಕೊಂಡಿತ್ತು ಆ ಬಾವಿ.
          
                                               *

 ಅದೇಕೋ ಆ ಬಾವಿಯ ಚಿತ್ರ ರಾಮನಾಥರ ಮನದಿಂದ ಕರಗಲೇ ಇಲ್ಲ. ಪ್ಲೇನ್ ಹತ್ತಿದಾಗಲೂ
 ಅದೇ ದುಗುಡ. ಅದೇ ಯೋಚನೆ. ಸಧ್ಯ, ಏರ್ ಹೋಸ್ಟೆಸ್ ಸೀಟು ತೋರಿಸಿ ಕೈ ಹಿಡಿದು
 ಕೂಡಿಸಿದಳು. ಕಣ್ಣು ಮುಚ್ಚಿ ಕೂತ ಅವರಿಗೆ ಪ್ಲೇನ್ ಟೇಕಾಫ಼್ ಆದಾಗ ಕೊಂಚ ಮನ
 ಹಗುರಾಯಿತು॒
ಆದರೂ ತನಗೆ ಆ ಮನೆ ಮಾರಲು ಅವಸರ ವೇನಿತ್ತು?ತಾನು ತಪ್ಪು ಮಾಡಿದೆನೇ?
ಇದು ನಿನ್ನದೇ ಮನೆ, ನಾನು ನೀನು ಬೇರೇನಾ ಎಂದ ಗಳೆಯ,
ತನ್ನ ಬಗ್ಗೆ, ತಮ್ಮ ಮನೆಯ ಬಗ್ಗೆ ಅಷ್ಟೊಂದು ಅಭಿಮಾನವಿಟ್ಟುಕೊಂಡಿದ್ದವನು
ಇಷ್ಟು ಬೇಗ ಮನೆ ಶೂಟಿಂಗಿಗೆ ಬಾಡಿಗೆ ಕೊಟ್ಟು ಬಿಟ್ಟನೇ?ವರ್ಷವೂ ಕಾಯದೆ? ಹುಂ, ಮುಖ್ಯ
ಹಣ ಎಂದರೆ ಹಾಗೇ. ಎಂಥವರನ್ನೂ ಬದಲಾಯಿಸಿಬಿಡುತ್ತೆ. ಇರಲಿ, ಈಗ ಅದು ಅವನ ಮನೆ ,
ಅವನು ಏನು ಬೇಕಾದರೂ ಮಾಡಿಕೊಳ್ಳಲಿ, ಅದು ಅವನ ಹಕ್ಕು. ಊರಿಗೆ ಹೋದ ತಕ್ಷಣ ತನಗೆ
ಆಪ್ತವಾಗಿದ್ದ ಸಾಮಾನುಗಳನ್ನೆಲ್ಲಾ ತುಂಬಿಸಿಟ್ಟಿದ್ದ ಆ ಟ್ರಂಕು ಹೊರಗೆ ತಂದು ಬಿಡಬೇಕು.
ಅದ್ಯಾಕೆ ಅಲ್ಲಿರಬೇಕು.  ಎಷ್ಟಾದರೂ ಅದು ಈಗ ಬೇರೆಯವರ ಮನೆ. ಅದೂ ಅವರಿಗೆ
ಭಾರವೆನಿಸುತ್ತಿರಬಹುದು. ಯಾರಿಗೆ ಬೇಕು ಬೇರೆಯವರ ಜವಾಬ್ದಾರಿ. ರಾಮನಾಥ
ಯಾವಾಗ ನಿದ್ದೆ ಹೋದರೋ ಗೊತ್ತಿಲ್ಲ. ಲಂಡನ್ ನಲ್ಲಿ ಇಳಿದು,ಸ್ವಲ್ಪ ಹೊತ್ತು
ಕಾಲು ಚಾಚಿ ಕೂತು ಸುಧಾರಿಸಿಕೊಂಡು, ಬಿಸಿ ಬಿಸಿ ಕಾಫಿ ಕುಡಿದು ಮತ್ತೆ ಬೇರೆ ಪ್ಲೇನ್
ಹತ್ತಿದ್ದಾಯಿತು. ಯಾಂತ್ರಿಕವಾಗಿ ಅನೌನ್ಸ್ ಮೆಂಟುಗಳನ್ನು ಕೇಳುತ್ತಾ, ಅದರಂತೆ ಮಾಡುತ್ತಾ
ಹೋದ ದೇಹಕ್ಕೆ  ಪ್ಲೇನ್ ಹತ್ತಿ ತನ್ನ ಸೀಟಿನ ಮೇಲೆ ಕೂತಾಗ ಸ್ವಲ್ಪ ಆರಾಮ. ಸಧ್ಯ ಇನ್ನು
ಬೆಂಗಳೂರು ತಲಪುವ ವರೆಗೂ ಏನೂ ಆತಂಕವಿಲ್ಲ. ಪಕ್ಕದ ಸೀಟು ಖಾಲಿ ಇದ್ದಿದ್ದರಿಂದ
ಸ್ವಲ್ಪ ಅರಾಮಾಗಿ ಕೈಕಾಲು ಸಡಿಲ ಮಾಡಿಕೂತು ಕೊಂಡರು.

                                   *
ಬೆಂಗಳೂರು ಏರ್ ಪೋರ್ಟಿನಲ್ಲಿ ಎಲ್ಲಾ ಫ಼ಾರ್ಮಾಲಿಟೀಸ್ ಮುಗಿಸಿ ಸಾಮಾನು
ಟ್ರಾಲಿ ಯಲ್ಲಿ ನಿಧಾನವಾಗಿ ತಳ್ಳಿಕೊಂಡು ಹೊರಗೆ ಬಂದಾಗ ಎದುರಿಗೇ ಕೃಷ್ಣ
ನಿಂತಿದ್ದ. ಕೃಷ್ಣ ರಾಮನಾಥರ ತಮ್ಮ. ಆದರೆ ಅವರ ನಡುವೆ ಹತ್ತು ವರ್ಷಗಳ ಅಂತರ
ವಿದ್ದಿದ್ದರಿಂದ  ತುಂಬಾ ಚಿಕ್ಕವನಂತೆ ಕಾಣುತ್ತಿದ್ದ. ರಾಮನಾಥರ ಕಂಡರೂ ತಂದೆಯ ಸಮಾನ
ಎಂಬ ಭಾವ. ಗೌರವ. ತುಂಬಾ ಪ್ರೀತಿಯಿದ್ದರೂ ಸಲುಗೆಯಿ. ’ಹೇಗಿತ್ತು ಪ್ರಯಾಣ’ ಎನ್ನುತ್ತಲೇ ಸೂಟ್ ಕೇಸುಗಳನ್ನು
ಕಾರಿನಲ್ಲಿಟ್ಟ. ’ತುಂಬಾ ಆಯಾಸವಾಗಿರಬೇಕು’ ಎಂದು ಕಳಕಳಿಯಿಂದ ಕೇಳಿದ.
ಮನೆ ತಲಪೋಕೆ ಸುಮಾರು ಇನ್ನೂ ಎರಡು ಗಂಟೆಯಾದರೂ ಆಗುತ್ತೆ, ಸ್ವಲ್ಪ ಕಾಫಿ
ತಗೋತೀರಾ ಎಂದು ವಿಚಾರಿಸಿದ. ’ಏನೂ ಬೇಡ. ಕೂತು ಕೂತು ಹೊಟ್ಟೆ ತುಂಬಿದಂತೆಯೇ
ಇದೆ.ಎಂದು ರಾಮನಾಥ ನಕ್ಕರು. ’ ವಿಮಲಾ, ಚಿನ್ನು ಎಲ್ಲಾ ಚೆನ್ನಾಗಿದ್ದಾರಾ’ಎಂದು
ವಿಚಾರಿಸಿಕೊಂಡರು. ಕಾರು ಮನೆಯತ್ತ ಸಾಗಿತು.


                                    *

ಮನೆಗೆ ಬಂದಿಳಿದಾಗ ಸ್ನಾನಕ್ಕೆ ಬಿಸಿಬಿಸಿ ನೀರು. ಅವರಿಗಾಗಿಯೀ ಸುಸಜ್ಜಿತ ರೂಮು,
ಒಳ್ಳೆ ಊಟ ಎಲ್ಲ ಕಾದಿತ್ತು. ಮೊದಲ ಬಾರಿ ಅಮೆರಿಕಾದಿಂದ ಒಂಟಿ ಬಂದಿಳಿದ ಭಾವನನ್ನು ನೋದಿದಾಗ
 ವಿಮಲಾಗೆ ಸಂಕಟವಾಯಿತು. ’ಬೇಗ ಬೇಗ ಸ್ನಾನ ಮುಗಿಸಿ, ಊಟ ಮಾಡಿ ನಿದ್ದೆ ಮಾಡಿ.
ಆಯಾಸವಾಗಿರುತ್ತೆ. ಜೊತೆಗೆ ಜೆಟ್ ಲ್ಯಾಗ್ ಬೇರೆ’ಎಂದು ಕೃಷ್ಣ ಹೇಳಿದಾಗ ’ಅದು ನಿಜವೇ’
ಎಂದು ಅನ್ನಿಸಿ ರಾಮನಾಥ ಏನೂ ಮಾತನಾಡಲಿಲ್ಲ. ಊಟ ಹೆಚ್ಚು ಮಾತಿಲ್ಲದೆ ಸಾಗಿತು.
ಅಚ್ಚ ಭಾರತೀಯ ರುಚಿಯ ಸಾರು, ಪಲ್ಯ ತಿಂದು ’ಕೊನೆಗೆ ಮನೆ ಊಟ ಮಾಡಿದಂತಾಯಿತು.
ರುಚಿಯಾಗಿದೆ ಸಾರು, ಇನ್ನಷ್ಟು ಹಾಕಿಬಿಡು’ ಎಂದಾಗ ವಿಮಲಾ ಖುಶಿಯಾದಳು.
ಅಲ್ಲಿ ವಿನೀತನ ಹೆಂಡತಿ ಸುರಭಿ ಚೆನ್ನಾಗಿಯೇ ಅಡಿಗೆ ಮಾಡುತ್ತಿದ್ದಳು. ಆದರೆ ಏನೇ
ಆದರೂ ಅಲ್ಲಿನ ಎಣ್ಣೆ, ಪದಾರ್ಥಗಳು , ತರಕಾರಿ ಏನೋ ಬೇರೆಯೇ ಅನ್ನಿಸಿ ’ನೋಡು,
ವಿನೀತ್, ಇಲ್ಲಿ ಎಲ್ಲ ಎಷ್ಟು ರುಚಿಯಾಗಿದ್ದರೂ ಆ ಸಿಂಥಟಿಕ್ ಅಮೆರಿಕನ್ ಫ಼್ಲೇವರ್
ಅವನ್ನು ಬಿಡುವುದಿಲ್ಲ’ಎಂದು ಚುಡಾಯಿಸುತ್ತಿದ್ದರು. ಅದು ಮನೆಯಲ್ಲಿ ಒಂದು ದೊಡ್ಡ
ಜೋಕಾಗಿ ಬಿಟ್ಟಿತ್ತು. ಊಟ ಮುಗಿಸಿದವರೇ ಎಲ್ಲರಿಗೂ ಗುಡ್ನೈಟ್ ಹೇಳಿ ತಮ್ಮ
ರೂಮಿಗೆ ಹೋದರು. ಹಾಸಿಗೆಯ ಮೇಲೆ ಅಡ್ಡಾದಾಗ ಮತ್ತೆ ಶೀಲಾ ಕಾಡತೊಡಗಿದಳು.
ಆದರೆ ನುಗ್ಗಿ ಬಂದ ನಿದ್ದೆ ಅವರ ಎಲ್ಲಾ ದುಗುಡಗಳನ್ನು ಅಳಿಸಿ ಹಾಕಿತು.

                                 *

ಮಾರನೆಯ ದಿನ ಬೆಳಗಾಗೆದ್ದು ಕಾಫಿ ತಿಂಡಿ  ಆಗುತ್ತಲೇ ರಾಮನಾಥ ಟಿಪ್ಟಾಪಾಗಿ
ತಯಾರಾಗಿದ್ದನ್ನು ನೋಡಿ ಕೃಷ್ಣನಿಗೆ  ಆಶ್ಚರ್ಯವಾಯಿತು. ಇನ್ನು ನಿನ್ನೆ ತಾನೇ
ಅಷ್ಟು ದೂರದ ಪ್ರಯಾಣ ಮಾಡಿ ಬಂದಿದ್ದಾರೆ, ಜೆಟ್ ಲ್ಯಾಗ್ ಇರುತ್ತೆ, ಎಲ್ಲಿಗೆ
ಹೊರಟರೆಂದು ಅಸಮಾಧಾನವೂ ಆಯಿತು. ಇದನ್ನು ಗ್ರಹಿಸಿದಂತೆ ರಾಮನಾಥ
’ಹೋಗಿ ಒಂದು ಬಾರಿ ನಮ್ಮನೆ ನೋಡಿಕೊಂಡು ಬಂದು ಬಿಡ್ತೀನಿ..’ಎಂದರು.
 ಇನ್ನೆಲ್ಲಿ ’ನಮ್ಮ ಮನೆ’? ಕೃಷ್ಣ ಅವರಿಗೆ ನೋವು ಮಾಡಬಾರದೆಂದು ಸುಮ್ಮನಿದ್ದ.
’ಅದು ನನ್ನ ಟ್ರಂಕ್ ಇಟ್ಟಿದ್ದೀನಲ್ಲಾ ಅವರಿಗೂ ತೊಂದರೆ. ಜವಾಬ್ದಾರಿ. ಬೇಗ ತಂದು ಇಲ್ಲಿ
ಇಡಿಸಿಕೊಂದು ಬಿಟ್ಟರೆ ಮನಸ್ಸಿಗೆ ಸಮಾಧಾನ.॒ನೋಡಿ ಬರ್ತೀನಿ’॒
ಏನೋ ಹೆಳಲು ಹೋದ ಕೃಷ್ಣ ಸುಮ್ಮನಾಗಿ ತಲೆ ಬಗ್ಗಿಸಿದ.
ಆಗಲೇ ರಾಮನಾಥ ಗೇಟು ತೆಗೆದು ಆಟೊ ನಿಲ್ಲಿಸಿ ಆಗಿತ್ತು. ನಾನೇ ಕಾರಿನಲ್ಲಿ ಕರೆದು
ಕೊಂಡು ಹೋಗ್ತೀನಿ ಅಂತ ಹೇಳುವುದಕ್ಕೂ ಅವಕಾಶ ಕೊಡಲಿಲ್ಲವಲ್ಲಾ, ಏನೋ
ಒಬ್ಬರೇ ಹೋಗಬೇಕೆನಿಸಿತೇನೋ.

                                    *

ಆಟೋ ಡ್ರೈವರ್ ಗೆ ’ಬಸವನಗುಡಿ’ ಎಂದವರೇ ’ನಡಿ ಅಲ್ಲಿ ನಾನು ಯಾವ ರಸ್ತೆ ಅಂತ
ಡೈರೆಕ್ಶನ್ ಹೇಳ್ತೀನಿ’ ಎಂದರು.  ಜೆಪಿ ನಗರದ ಮಿನಿ ಫ಼ಾರೆಸ್ಟ್ ನಿಂದ ಭಯಂಕರ
ಟ್ರಾಫ಼ಿಕ್ ನಡುವೆ ಕರ್ಕಶ ಧ್ವನಿ ಮಾಡುತ್ತಾ ಆಟೋ ತೆವಳ ತೊಡಗಿತು. ಓಕ್ ಪಾರ್ಕಿನ
ಮೌನಕ್ಕೆ ಹೊಂದಿಕೊಂದಿದ್ದ ಮನಸ್ಸಿಗೆ ಕಿರಿಕಿರಿಯಾಗತೊಡಗಿತು. ಆದರೆ ತಮ್ಮೂರು,
ತಮ್ಮ ಜನ, ಕನ್ನಡ ಮಾತು, ಕನ್ನಡ ಪೋಸ್ಟರುಗ್‌ಳು, ಹಿಂದಿನ ಸ್ಪೀಕರಿನಿಂದ ಬರುತ್ತಿದ್ದ
ಕನ್ನಡ ಹಾಡು ಎಲ್ಲಾ ವಿಚಿತ್ರ ನೆಮ್ಮದಿ, ಖುಶಿ ತಂದುವು. ಮೊದಲಿಂದ ಪರಿಚಯವಿದ್ದ
ರಸ್ತೆಗಳಲ್ಲಿ ಆಟೋ ಓಡುತ್ತಿದ್ದಾಂತೆ ಎದುರಾದ ಫ಼್ಲೈ ಓವರ್ ಗಳು, ಕಡಿದ ಮರಗಳು,
ಮೆಟ್ರೋ ಕಂಬಗಳು ಕಟ್ಟಿ ಉಳಿದ ಅವಶೇಷಗಳು, ರಾಶಿ ರಾಶಿ ಕಸ ಎಲ್ಲ ಬೆಂಗಳೂರನ್ನು
ಬದಲಾಯಿಸಿದೆ ಎನ್ನಿಸಿ ಬೇಸರವಾಯಿತು.  ಬಸವನಗುಡಿಯ ತಮ್ಮ ಮನೆ ಹತ್ತಿರ ಬರುತ್ತಿದ್ದಂತೆ
ಫಲಕಗಳೂ ಕಿತ್ತು ಹೋಗಿ, ಗಲ್ಲಿಗಳಂತೆ ಕಾಣಿಸುತ್ತಿದ್ದ ರಸ್ತೆಗಳಲ್ಲಿ ಎಲ್ಲಿ ತಿರುಗಬೇಕೆಂಬುದೂ
ತಿಳಿಯದೆ ಗಲಿಬಿಲಿಯಾಯಿತು. ಡ್ರೈವರ್ ’ಇಲ್ಲಾ ಸರ್’ ಎಂದು ಮತ್ತೆ ಮತ್ತೆ ಕೇಳಿದಾಗ
ಇವರು ಹೂಂ ಗುಟ್ಟಿ
ಪಕ್ಕ ಪಕ್ಕ ಹಾದು ಹೋಗುತ್ತಿದ್ದ ಎರಡು ರಸ್ತೆಗಳಲ್ಲಿ ತಪ್ಪಾಗಿ ತಿರುಗಿಸಿ ಅವನ ಕಿರಿಕಿರಿಗೂ
ಗುರಿಯಾಗಿ ಕೊನೆಗೆ ಮೂರನೇ ರಸ್ತೆಯಲ್ಲಿ ತಮ್ಮ ಮನೆ ಕಣ್ಣಿಗೆ ಬಿದ್ದಾಗ ಸಮಾಧಾನವಾಯಿತು.. ಅದೂ
ಅಕ್ಕಪಕ್ಕದಮನೆಗಳು ಮೂರು ಮಹಡಿಯ ಅಪಾರ್ಟ್ ಮೆಂಟುಗಳಾಗಿಬಿಟ್ಟಿದ್ದರಿಂದ ಮಧ್ಯೆ
ಸಂಕೋಚದಿಂದಲೋ ಎಂಬಂತೆ ಹುದುಗಿ ಕೂತಿದ್ದ ಮನೆ. ಹಳೇ ಮಾಸಲು ಸುಣ್ಣ, ಹಸಿರು ಬಣ್ಣದ ಕಿಟಕಿ ಬಾಗಿಲುಗಳ
ತಮ್ಮ ವಿಶಾಲಮನೆ ಏಕೋ ಪುಟ್ಟದಾದಂತೆನಿಸಿ ಖೇದವಾಯಿತು. ಆಟೋದಿಂದ ಇಳಿದು ದುಡ್ಡು ಕೊಟ್ಟಾಗ
ಡ್ರೈವರ್ ’ಅಯ್ಯೋ, ಸುಮ್ಮನೆ ಸುತ್ತಿಸಿದಿರಿ.  ಶೂಟಿಂಗ್ ಮನೆ ಅಂದಿದ್ರೆ ಸೀದಾ ಕರೆದು
ಕೊಂಡು ಬರ್ತಿದ್ದೆಎಂದ ಕೊಂಕಾಗಿ ನಗುತ್ತಾ. ’ಏನ್ ಮಾತಾಡ್ತಾ ಇದಿ, ಇದು ನಾವು ಇರ್ತಿದ್ದ ಮನೆ’
ಎಂದ ಅವರ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಆಟೊ ಸ್ಟಾರ್ಟ್ ಮಾಡಿ ಹೊರಡಿಸಿಬಿಟ್ಟ.
ಏಕೋ ರಾಮನಾಥ ಅಲ್ಲೇ ತಮ್ಮ ಮನೆಯತ್ತ ದಿಟ್ಟಿಸುತ್ತಾ ನಿಂತುಬಿಟ್ಟರು.

                                   *

ಮಾಸಿದ ಹಸಿರು ಗೇಟು ತೆರೆದೇ ಇತ್ತು. ಗೇಟುಗಳನ್ನು ಹಿಡಿದು ನಿಲ್ಲಿಸಿದ್ದ ಗಾರೆ ತರಿದ
ಕಂಬಗಳು. ಅವೆರಡನ್ನು ಮೇಲೆ ಸೇರಿಸಿದ್ದ ಆರ್ಚ್. ಮೊದಲು ಹಬ್ಬಿದ್ದ ಜಾಜಿ ಬಳ್ಳಿ ಒಣಗಿ
ಕರಕಲಾಗಿತ್ತು. ಮನೆಯ ನಾಲ್ಕು ಮಟ್ಟಿಲು, ವೆರಾಂಡಾ.  ತೆಗೆದೇ ಇದ್ದ ಬಾಗಿಲಿನಿಂದ
ಕಾಣುತ್ತಿದ್ದ ಇನ್ನೂ ಚೆನ್ನಾಗೇ ಇದ್ದ ಕೆಂಪು ನೆಲ. ಮೇಲಿನ ಗಾಜು ಹಂಚಿನಿಂದ  ಅದರಮೇಲೆ ಬಿದ್ದು
ಕಣ್ಣು ಕೋರೈಸುವಂತೆ ಮಾಡುತ್ತಿದ್ದ ಒಂದು ಬಿಸಿಲು ಕೋಲು.
ದಿನಾ ಎಷ್ಟೊಂದು ಸಲ, ಕಸ ಬಳಿದು, ಉಜ್ಜಿ,
ಸಾರಿಸಿ ಹೊಳೆಯುವಂತೆ ಇಟ್ಟಿದ್ದ ಕೆಂಪು ನೆಲ. ಐವತ್ತು ವರ್ಷಗಳು ನಡೆದಾಡಿದವರ
ಹೆಜ್ಜೆ ಗುರುತುಗಳು, ಪುಟ್ಟ ಪುಟ್ಟಗೆಜ್ಜೆ ಕಾಲಿನಲ್ಲಿ ಅಂಬೆಗಾಲಿಡುತ್ತಿದ್ದ ವಿನೀತನ ಬಾಯಿಂದ
         ಸುರಿದ ಜೊಲ್ಲು, ಸತ್ಯನಾರಾಯಣ ಪೂಜೆಯ ದಿನ ತುಂಬಿದ  ಅರಿಶಿನ ಕುಂಕುಮ ಹೂವು ತುಳಸಿ
         ಪ್ರಸಾದ ಹಣ್ಣುಗಳ ಪರಿಮಳ, ಮಂತ್ರಘೋಶದ ನಾದ. ಗೋಡೆ ಪೂಜೆ ಮಾಡುತ್ತಿದ್ದ ಭ್ರಮಿತ ತಾತನ
         ಹತಾಶೆಯ ಉಸಿರು, ಶೀಲ ಹಾಕಿದ್ದ ಚೆಂದದ ಕಸೂತಿಯ ಕುಶನ್ ಕವರುಗಳ ಮೋಡಿ. ಅಲ್ಲಿ ಇಲ್ಲಿ
         ಬಿದ್ದಿದ್ದ ಆಟದ ಸಾಮಾನುಗಳು, ಮನೆಗೆ ಬಂದವರು ಕಾಫ಼ಿ ಕುಡಿದಿಟ್ಟ ಲೋಟಗಳು,
         ಅಮ್ಮ, ಶೀಲಾ, ಅಜ್ಜಿಎ॒ಲ್ಲರ ಬಳೆ ಸದ್ದು. ಮಾತಿನ ಕಲರವ. ಮಕ್ಕಳ ಜಗಳ, ಕೂಗಾಟ.
         ಪೀಪಿ ಗಲಾಟೆ.॒ಒಂದೇ, ಎರಡೇ.  ಅಷ್ಟೆಲ್ಲವನ್ನೂ ತನ್ನ ನೆನಪಿನಲ್ಲಿ ಕರಗಿಸಿಕೊಂಡೂ
         ಏನೂ ತಿಳಿಯದಂತೆ  ಮೊದಲಿನಂತೆಯೇ
         ಹೊಳೆಯುತ್ತಿತ್ತು ಆ ಹಾಲಿನ ಕೆಂಪು ನೆಲ.

                                       *

         ಹೊರಗೇ ನಿಂತು ನೋಡಿದಾಗ ಒಂದರ ಹಿಂದೊಂದು ಎಲ್ಲಾ ಬಾಗಿಲುಗಳೂ ತೆರೆದಿದ್ದುವು.
         ಹಾಲಿನಲ್ಲಿ ಮಿರುಗುಟ್ಟುತ್ತಿದ್ದ ಕೆಂಪು ನೆಲ. ಮಧ್ಯೆ ಬೆಳಕು ಚೆಲ್ಲಿದ್ದ ಬಿಸಿಲು ಕೋಲು. ಅದರ ಪ್ರಖರತೆಯಲ್ಲಿ
         ನಡುಮನೆಯಲ್ಲಿ ನೆರಳುಗಳಂತೆ ಓಡಾಡುತ್ತಿದ್ದ ಒಂದಷ್ಟು ಜನ. ಯಾರ ಮುಖವೂ ಕಾಣದು.
         ಅವರೆಲ್ಲಾ ಯಾರು? ಅದರ ತೆರೆದ ಬಾಗಿಲಿನ ಹಿಂದೆ ವಿಶಾಲವಾದ ಹಿತ್ತಿಲು. ಅದರ ಮಧ್ಯೆ
         ನಿಶ್ಚಲವಾಗಿ ನಿಂತಿದ್ದ ಬಾವಿ. ಅದೇ ಬಾವಿ. ಅಮೆರಿಕಾದಲ್ಲಿ ಟಿವಿ ತೆರೆಯ ಮೇಲೆ ಕಂಡು
         ತನಗೆ ಅಷ್ಟೊಂದು ಕಾಡಿದ್ದ ಬಾವಿ. ಅದನ್ನು ದಿಟ್ಟಿಸುತ್ತಲೇ ರಾಮನಾಥ ಅಲ್ಲೇ ನಿಂತರು.
         ತಾನು ಆ ಪೆಟ್ಟಿಗೆ ಬೇಗ ತೆಗೆದುಕೊಂಡು ಹೊರಟು ಬಿಡಬೇಕು. ಸಾಧ್ಯವಾದರೆ ಇವತ್ತೇ.
         ತನ್ನ ಹೃದಯಕ್ಕೆ ಹತ್ತಿರಾದ ಏನೇನೆಲ್ಲಾ ಇತ್ತು ಅದರಲ್ಲಿ. ಮೂರು ತಲೆಮಾರಿನ , ಮಾಸಿದ
         ಕಂದು ಬಣ್ಣದ ಫೋಟೊಗಳು. ಕಟ್ಟು ಹಾಕಿದ ಅವುಗಳೊಳಗೆ
         ಮದುವೆಗಳು, ಮುಂಜಿಗಳು, ನಾಮಕರಣಗಳು, ಷಷ್ಠಿಪೂರ್ತಿಗಳಿಗೆ ಬಂದಿದ್ದ
        ನೆಂಟರು. ಎಷ್ಟು ನಂಟಿತ್ತು ಆಗ. ಅಜ್ಜಿ ಮಾಡಿದ್ದ ಸ್ಯಾಟಿನ್ ರಿಬ್ಬನ್ ಕಸೂತಿಗೆ ಕಟ್ಟು ಹಾಕಿಸಿಟ್ಟ ಕಲಾಕೃತಿಗಳು.
         ತಮ್ಮ ಊರಿಗೆ ವಿದ್ಯುತ್ ಬರುವ ಮೊದಲು ಪ್ರತಿ ಸಂಜೆ ಹಚ್ಚುತ್ತಿದ್ದ ಹಿತ್ತಾಳೆ ದೀಪದ ಕಂಬಗಳು.
        ಅಸಲಿ ಚಿನ್ನದ ಕುಸುರಿ ಕೆಲಸ ಮಾಡಿಸಿ ತಂಜಾವೂರಿನಿಂದಲೇ ತರಿಸಿದ್ದ ಬೆಣ್ಣೆ ಕೃಷ್ಣನ
        ಚಿತ್ರ. ಹಳೆ ಗ್ರಾಮಫೋನ್ ರೆಕಾರ್ಡುಗಳು. ಇಂದಿಗೂ ಅದರಿಂದ ಹೊರಗೆ ಹರಿಯಲು ಸಿದ್ಧವಿದ್ದ
        ’ನಳ ದಮಯಂತಿ’, ’ಶಾಕುಂತಲಾ’ ನಾಟಕಗಳು. ಜೊತೆಗೆ ನಗುವ ರೆಕಾರ್ಡ್, ಚೌಡಯ್ಯನವರ
        ಪಿಟೀಲು, ಅಜ್ಜಿಯ ಪ್ರೀತಿಯ ಸೈಗಲ್ ಹಾಡುಗಳು. ತನ್ನ  ಟೆನಿಸ್ ರಾಕೆಟ್. ತಮ್ಮ ಮದುವೆ ಆಲ್ಬಮ್.
        ದಂತದ ರಾಜ, ರಾಣಿ, ಕಾಲಾಳುಗಳ ಚದುರಂಗ. ಅಮ್ಮ ಬದುಕಿರುವವರೆಗೂ ತಲೆ ಹತ್ತಿರ ಇದ್ದ
        ಅವಳು ಕಳೆದುಕೊಂಡ ೩ ತಿಂಗಳ ಮಗುವಿನ ಫೋಟೋ. ತಾತ ಸ್ವಾತಂತ್ರ್ಯ ಹೋರಾಟದಲ್ಲಿ ನೂಲುತ್ತಿದ್ದ
        ತಕಲಿ. ಅಜ್ಜಿಯ ದಪ್ಪ, ಮೆತ್ತನೆಯ ಖಾದಿ ಸೀರೆಗಳು. ಊರಿಗೆ ಬಂದಿದ್ದ ವಿನೋಬಾ ಭಾವೆ,
        ಗೊಲ್ ವಾಲ್ಕರ್, ಮಿರ್ಜ಼ಾ ಇಸ್ಮೇಲರ ಫೋಟೊಗಳು. ತಮ್ಮ ಮನೆಯ ಮುಂದೆ ನಿಂತಿದ್ದ
        ೧೯೩೯ರ ಮಾಡೆಲ್ ಮಾರಿಸ್ ಕಾರು. ಅದರ ಪಕ್ಕ ಅಪ್ಪ ಅಮ್ಮನೊಡನೆ ಅಜ್ಜಿಯ ತೋಳಿನಲ್ಲಿ ತಾನು.
        ಬಾವಿ ಕಟ್ಟೆ ಪಕ್ಕದಲ್ಲಿ ನಾಚುತ್ತಾ ನಿಂತಿರುವ ಅಮ್ಮ ಏಳು ತಿಂಗಳ ಬಸುರಿ. ಅಂದು ಅವಳಿಗೆ
        ಬಳೆ ತೊಡಿಸುವ ಸಂಭ್ರಮ. ಇಷ್ಟೊಂದು ನೆನಪುಗಳನ್ನು ಹೊತ್ತ ಆ ಪೆಟ್ಟಿಗೆ ಇನ್ನು ಇಲ್ಲಿ ಇರಬಾರದು.
        ಅವರಿಗೆ ಕಣ್ಣು ತುಂಬಿ ಬಂತು.
                                          *
        ಹೊರಗೇ  ನಿಂತು ಮನೆಯೊಳಗಿದ್ದ ಜಗತ್ತನ್ನು ಮತ್ತೆ ಸೃಷ್ಟಿಸುತ್ತಿದ್ದ ರಾಮನಾಥ ಮೆಟ್ಟಿಲು
        ಗಳನ್ನು ಒಂದೊಂದಾಗಿ ಹತ್ತಿ ಕಾಲಿಟ್ಟಾಗ, ಅಲ್ಲಿ ಓಡಾಡುತ್ತಿದ್ದ ನೆರಳುಗಳ ಮುಖ
        ಸ್ಪಷ್ಟವಾಗಿ, ಸುತ್ತಲಿದ್ದ ಲೈಟುಗಳು, ಕ್ಯಾಮರಾ ಮಾನಿಟರ್ ಗಳೂ, ಎಲ್ಲೆಲ್ಲೂ ಹರಡಿದ್ದ
        ವಯರುಗಳು, ಬಣ್ಣ ಹಚ್ಚಿಕೊಂಡು ಮೂಲೆಯಲ್ಲಿ ನಿಂತು  ಮೊಬೈಲ್ ನಲ್ಲಿ ಏನೋ ನೋಡುತ್ತಾ
        ಕಿಲಕಿಲ ನಗುತ್ತಿದ್ದ ಇಬ್ಬರು ಹುಡುಗಿಯರು ಎಲ್ಲಾ ಕಂಡು ಬಂದರು.

        ಬೆಳಕಿನಿಂದ ಒಳಗೆ ಬಂದು ದೃಷ್ಟಿ  ಮತ್ತಷ್ಟು ಹೊಂದಿಸಿಕೊಂಡು ಸುತ್ತಲೂ ನೋಡಿದರು.
        ಎದುರಿಗೆ ಬಾಗಿಲ ಮೇಲೆ ರಾರಾಜಿಸುತ್ತಿದ್ದ ಅಜ್ಜಿ ತಾತನ ಫೋಟೊ ನೋಡಿ
        ಅವರಿಗೆ ಎದೆ ಧಸಕ್ಕೆಂದಿತು. ಇದೇನು ಎಲ್ಲಾ ಖಾಲಿ ಮಾಡಿ ಹೊರಟಿದ್ದೆವಲ್ಲಾ.
        ಸುತ್ತಲೂ ತಿರುಗಿ ನೋಡಿದರೆ ಇನ್ನೂ ದೊಡ್ಡ ಶಾಕ್ ಕಾದಿತ್ತು.
       ಗೋಡೆಯ ತುಂಬಾ ತಮ್ಮ ಟ್ರ್ರಂಕಿನಲ್ಲಿದ್ದ ಪೂರ್ವಜರ ಚಿತ್ರಗಳು. ಎಲ್ಲಿಂದಲೋ ಬಾಡಿಗೆಗೆ ತಂದಿದ್ದ
        ಹಳೇ ಕಾಲದ ಕರಿಮರದ ಕುರ್ಚಿ ಮೇಜುಗಳ ಪಕ್ಕ ತಮ್ಮ ಪುರಾತನ ದೀಪದ ಕಂಬ.
        ಮೂಲೆಯ ಟೇಬಲ್ಲಿನ ಮೇಲೆ ಕಾಣುವಂತೆ ನಳ ದಮಯಂತಿ ರೆಕಾರ್ಡುಗಳು. ಟೀಪಾಯ್
        ಮೇಲೆ ದಂತದ ಚದುರಂಗ.  ಅಲ್ಲೇ ನೆಲದ ಮೇಲೆ ಬಿದ್ದು ಗಾಜು ಸೀಳಿದ್ದ ಫೋಟೋ.
        ಕೈಯ್ಯಲ್ಲೆತ್ತಿಕೊಂಡು ಬೆಳಕಿಗೆ ಹಿಡಿದು ನೋಡಿದಾಗ ಅದರೊಳಗೆ ನಾಚುತ್ತಾ ನಿಂತಿದ್ದ
       ೭ ತಿಂಗಳ ಬಸುರಿ ಅಮ್ಮ.

          ರಾಮನಾಥರ ಮೈ ಉರಿಯ ತೊಡಗಿತು. ತಲೆ ಸುತ್ತುತ್ತಿತ್ತು. ತನಗೆ ಏನಾಗುತ್ತಿದೆಯೆಂದೇ
         ತಿಳಿಯದಾಯಿತು. ನಡಗುತ್ತಿದ್ದ ಧ್ವನಿಯಲ್ಲಿ ’ಏನಾಗ್ತಾ ಇದೆ ಇಲ್ಲಿ?
         ಹೇಳೋರು ಕೇಳೋರು ಯಾರೂ ಇಲ್ಲವೆ. ’ಎಂದು ಘರ್ಜಿಸಿದಾಗ ಒಳಗಿಂದ ಬಂದ
         ಡೈರೆಕ್ಟರ್ ’ಸರ್, ಏನಾಯ್ತು.॒ನೀವು ಯಾರೋ ಗೊತ್ತಾಗಲಿಲ್ಲಾ...’ ಎಂದು ತೊದಲತೊಡಗಿದ.
         ’ಇದು ನನ್ನ ಮನೆ. ಇದನ್ನೆಲ್ಲ ಹೀಗೆ ಅಲಂಕಾರಕ್ಕೆ ಇಟ್ಟವರು ಯಾರು? ನಿಮಗೆ ಪೆಟ್ಟಿಗೆ
          ಮುಟ್ಟಲು ಪರ್ಮಿಶನ್ ಕೊಟ್ಟವರು ಯಾರು?ಎಂದಾಗ ಅವರ ಮೈ ನಡುಗುತ್ತಿತ್ತು.        
             ಏನೂ ಅರ್ಥವಾಗದ ಡೈರೆಕ್ಟರ್’ಒಂದು ನಿಮಿಷ ಸರ್,’  ಎಂದು ಮೊಬೈಲ್ ಎತ್ತಿಕೊಂಡು
         ಪಕ್ಕಕ್ಕೆ ಸರಿದು ’ಇಲ್ಲಿ ಯಾರೊ
         ಬಂದು ಗಲಾಟೆ ಮಾಡ್ತಿದಾರೆ, ನಿಮ್ಮ ಪರ್ಮಿಶನ್ ತಕ್ಕೊಂಡಿದ್ವಲ್ಲಾ ಸರ್॒ ಅಂತೆಲ್ಲಾ
         ಮಾತಾಡಿ ’ಸರ್, ಓನರ್ ಬರ್ತಿದಾರೆ, ಸಮಾಧಾನ ಮಾಡ್ಕೊಳ್ಳಿ,’ ಎಂದು ’ಒಂದು ಕೂಲ್ ಡ್ರಿಂಕ್
         ತಗೊಂಬಾರೋ’ ಎಂದು ಕೂಗಿ ಹಾಕಿದ.

                                           *

         ಅಲ್ಲಿ ನಿಂತಿರುವುದೇ ಹಿಂಸೆ ಎನ್ನಿಸಿ ರಾಮನಾಥರು ನಿಧಾನವಾಗಿ ನಡೆದು ಹಿತ್ತಲ ಕಡೆ
        ಬಂದರು. ಬಾವಿಯ ಪಕ್ಕ ಹಾಕಿದ್ದ ಎರಡು ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಕೂತು, ಕೈಯ್ಯಲ್ಲಿ
         ಸ್ಕ್ರಿಪ್ಟ್ ಹಿಡಿದು ಚರ್ಚೆ ಮಾಡುತ್ತಿದ್ದ ಇಬ್ಬರು ಯುವಕರು ’ಬನ್ನಿ ಸಾರ್,ಕೂತ್ಕೊಳ್ಳಿ’
         ಎನ್ನುತ್ತಾ ಅಲ್ಲಿಂದ ಎದ್ದು ಹೋದರು. ಕರ್ಚೀಫ಼ಿನಿಂದ ಮುಖ ಒರೆಸಿಕೊಂಡು ಕೂತಾಗ
         ಹಾಲಲ್ಲಿ ಎತ್ತಿಕೊಂಡ,ಗಾಜು ಸೀಳಿದ ಬಸುರಿ ಅಮ್ಮನ ಫೋಟೋ ಇನ್ನೂ  ಅವರ ಕೈಯ್ಯಲ್ಲೇ ಇತ್ತು.
         ಅದನ್ನು ಒಂದು ಸಾರಿ ಕೈಯ್ಯಲ್ಲೇ ಒರೆಸಿ  ತೊಡೆಯ ಮೇಲಿಟ್ಟು ಕೊಂಡು ಕೂತುಕೊಂಡರು.
         ಸ್ವಲ್ಪ ಹೊತ್ತಿನಲ್ಲೇ ಮೂರ್ತಿ ಅವಸರವಾಗಿ ಬರುತ್ತಿರುವುದು ಕಾಣಿಸಿತು. ಹಿತ್ತಲ ಮೇಟ್ಟಿಲು
         ಇಳಿಯುತ್ತಲೇ ಕೈ ಮುಂದೆ ಚಾಚಿ ಬಂದ ಅವರಿಗೆ ರಾಮನಾಥ ಕೈ ಕುಲುಕಲು
         ಮುಂದಾಗಲಿಲ್ಲ. ಪೆಚ್ಚಾದ ಮೂರ್ತಿ ’ಯಾವಾಗ ಬಂದ್ಯೋ,ಏನೊ ಒಂದು ಫೋನಾದ್ರೂ ಮಾಡೋ ದಲ್ವಾ
         ಊರಿಗೆ ಬರ್ತಿದೀನಿ ಅಂತ, ಇದೇನು ಹೀಗೆ ಧಿಡೀರ್ ಅಂತ!’ ಎಂದು ನಗಲು ಪ್ರಯತ್ನಿಸಿದರು.
         ರಾಮನಾಥ ಶೀತಲವಾಗಿ ’ಹೇಳಿದ್ರೆ ಏನು ಮಾಡ್ತಿದ್ದೆ’॒ ಎಂದರು. ಅದರ ಅರ್ಥ  ಗ್ರಹಿಸಿದ
         ಮೂರ್ತಿ ’ಅದೂ.॒ಅದೂ’॒ಎಂದು ತೊದಲಿದರು. ’ನೋಡು, ಈಗಲೇ ಇಲ್ಲಿ ಇಟ್ಟಿರೋ ನನ್ನ
         ಸಾಮಾನೆಲ್ಲಾ ಟ್ರ್ರಂಕಿನಲ್ಲಿ ಪ್ಯಾಕ್ ಮಾಡಿಸು. ನಾನು ತಗೊಂಡು ಹೊರಡ್ತೇನೆ’ಎಂದರು
         ರಾಮನಾಥ. ಅವರ ಧ್ವನಿಯಲ್ಲಿ ಖಚಿತತೆ ಇತ್ತು.

         ಹಿಂದೆ ಇದನ್ನೆಲ್ಲಾ ಕೇಳಿಸಿ ಕೊಳ್ಳುತ್ತಾ ನಿಂತಿದ್ದ ಡೈರೆಕ್ಟರ್ ’ಸರ್, ಒಂದ್ನಿಮಿಶ’ ಎಂದು
          ಮೂರ್ತಿಯವರನ್ನು ಸ್ವಲ್ಪ ದೂರ ಕರೆದುಕೊಂಡು ಹೋದ. ಮೊದಲು ಅಂಗಲಾಚಿಕೆಯಿಂದ
          ಶುರುವಾದ ಅವರ ಮಾತು,ಕೊನೆಗೆ ವಾಗ್ವಾದ, ಬೆದರಿಕೆವರೆಗೂ ತಲುಪಿತು. ಇಷ್ಟೊಂದು ಸೀನ್
          ಶೂಟ್ ಮಾಡಿಬಿಟ್ಟಿದ್ದೀವಲ್ಲಾ, ಮತ್ತೆ ಮಾಡೋದೂಂದ್ರೆ ಹೇಗೆ ಸಾಧ್ಯ, ಎಷ್ಟು ಲಾಸ್
          ಆಗುತ್ತೆ, ಹಾಗೆ ಮಾಡಿದರೂ ಕಂಟಿನ್ಯುಯಿಟಿ ಗತಿ ಏನು ॒ಇಷ್ಟೆಲ್ಲಾ ಇದ್ದವರು ನಮಗೆ ಪರ್ಮಿಶನ್
          ಕೊಡೋಕೆ ಮೊದಲು ಯೋಚಿಸಬೇಕಿತ್ತುಆ॒ ಕಾಲದ  ಆಮ್ಬಿಯನ್ಸ್ ಕ್ರಿಯೇಟ್ ಮಾಡೋದು
          ಸುಲಭಾನ..ಇಂಥಾ ಬೇಕಾರ್ ಅಜ್ಜ, ಅಜ್ಜಿ ಫೋಗಳು, ತಗಡು ಗ್ರಾಂಫೋನ್ ಪ್ಲೇಟ್ಗಳು,
          ತಾಮ್ರದ ಚೊಂಬು ಎಲ್ಲಾ ಸಿಗಬೇಕಾದ್ರೆ ಗುಜರಿಯಿಂದ ಗುಜರಿಗೆ ಅಲೀಬೇಕಷ್ತೆ ॒’

              ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಕೂತಿದ್ದ ರಾಮನಾಥರಿಗೆ ವಿಪರೀತ ಹಿಂಸೆ
          ಯಾಗಿ, ಅಲ್ಲಿ ಕೂಡುವುದೂ ಕಷ್ಟವಾಗತೊಡಗಿತು.   ’ನಂಗೆ ಲೇಟಾಗುತ್ತೆ.
          ಬೇಗ ಪ್ಯಾಕ್ ಮಾಡೋಕೆ ಹೇಳು ’ ಎಂದಾಗ ಮೂರ್ತಿ ಇತ್ತ ಬಂದರು. ಅವರಿಗೆ ಬೆನ್ನು ತಿರುಗಿಸಿ
          ಬಾವಿಯತ್ತ ನಡೆದ ರಾಮನಾಥ ’ಆ ಹುಡುಗರಿಗೆ ಹೇಳಿ ಈ ಬಾವಿಯಿಂದ ಒಂದಿಷ್ಟು
          ತಣ್ಣನೆ ನೀರು ಸೇದಿಸಿ ಕೊಡು.  ಕೊನೇ ಸಲ ಒಂದು ಲೋಟ ನಮ್ಮ ಬಾವಿ ನೀರು
          ಕುಡಿದು ಹೊರಡ್ತೀನಿ’ ಎಂದವರೇ  ಬಾವಿಯ ಹತ್ತಿರ ಬಂದು ಕಟ್ಟೆಗೆ ಒರಗಿ ಮೆಲ್ಲಗೆ ಬಗ್ಗಿ
          ನೋಡಿದರು. ಅವರ ಮನಃಪಟಲದಲ್ಲಿ ಹಿಂದೆಲ್ಲಾ ಬಗ್ಗಿದ ತಕ್ಷಣ ತಮ್ಮ ಪ್ರತಿಬಿಂಬವನ್ನು ಎಸೆಯುತ್ತಿದ್ದ
          ತಿಳಿಯಾದ  ಸ್ತಬ್ಧವಾದ  ನೀರಿನ  ಚಿತ್ರ ಮೂಡಿತ್ತು.

          ಆದರೆ ಅವರಿಗೆ ಅಲ್ಲಿ ಕಂಡದ್ದು ಕೇವಲ ಮೂರು ಅಡಿ ಕೆಳಗೆ ಗಾರೆ ಸಿಮೆಂಟಿನಿಂದ
          ಸೀಲ್ ಮಾಡಿದ್ದ ಬೂದು ಬಣ್ಣದ ತಳ. ಅದರ ಮೇಲೆ ಯಾರೋ ಕುಡಿದೆಸೆದಿದ್ದ
          ಮೂರ್ನಾಲ್ಕು ಖಾಲಿ ಕೋಕ್ ಕ್ಯಾನ್ ಗಳು. ಅಷ್ಟೆ.

          -ಉಮಾ ರಾವ್
           (ವಿಜಯವಾಣಿ ಯುಗಾದಿ ವಿಶೇಷಾಂಕ ೨೦೧೪)                                

No comments:

Post a Comment