Thursday, April 17, 2014

ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ : ಹೆಣ್ಣು,,ಲೈಂಗಿಕತೆ, ದಾಂಪತ್ಯ ನಿಷ್ಠೆ  ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ : ಹೆಣ್ಣು,,ಲೈಂಗಿಕತೆ, ದಾಂಪತ್ಯ ನಿಷ್ಠೆ

ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ, ಹೆಚ್ಚಾಗಿ ಮಾತನಾಡಲು
ಇಷ್ಟಪಡದವ ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್
ಬಹುಮಾನ ವಿಜೇತ ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್.
ಆದರೆ, ಅಪರೂಪದ ಈ ಸಂದರ್ಶನದಲ್ಲಿ ಮಾರ್ಕ್ವೆಜ಼್ ತನ್ನ ಆತ್ಮೀಯ
ಗೆಳೆಯ, ಪತ್ರಕರ್ತ ಹಾಗೂ ಕಾದಂಬರಿಕಾರ, ಕೊಲಂಬಿಯಾ ಮೂಲದ ಪ್ಲಿನಿಯಾ
ಅಪುಲೆಯೋ ಮೆಂಡೋಜ್ ಜೊತೆ ತನ್ನೆಲ್ಲಾ ವಿಚಾರಗಳನ್ನು, ಪರದಾಟಗಳನ್ನು.
ನೆನಪುಗಳನ್ನು, ಗೀಳುಗಳನ್ನು, ಕನಸುಗಳನ್ನು ಹುಚ್ಚುಗಳನ್ನು  ನಿರಂಬಳವಾಗಿ
ಮುಕ್ತವಾಗಿ ತೆರೆದಿಟ್ಟಿದ್ದಾನೆ. ’ದ ಫ಼್ರೇಗ್ರೆನ್ಸ್ ಆಫ಼್ ಗ್ವಾವಾ’ ಎಂಬ ಪುಸ್ತಕವಾಗಿ
ಪ್ರಕಟವಾಗಿರುವ ಈ ಸಂದರ್ಶನದ ಒಂದು ಭಾಗ ಇಲ್ಲಿದೆ.

ಇವತ್ತು ನಮ್ಮನ್ನು ಅಗಲಿ ಹೋಗಿರುವ ನನ್ನ ಪ್ರೀತಿಯ ಮಾರ್ಕ್ವೆಜ಼್ ಗೆ
ಇದು ನನ್ನ ಶ್ರದ್ಧಾಂಜಲಿ.
  

ಪ್ಲೀನಿಯೋ ಅಪುಲೆಯೋ ಮೆಂಡೋಂಜ಼ಾ: ಹಿಂದೊಮ್ಮೆ, ಒಂದು ಕಾಕ್ಟೇಲ್ ಪಾರ್ಟಿಯಲ್ಲೀಂತ ನೆನಪು, ನಿನಗೆ  ಈ ಜಗತ್ತಿನ ಅತಿ ಸುಂದರ ಹೆಣ್ಣನ್ನು ಭೇಟಿಯಾಗುವ ಅದೃಷ್ಟ ಸಿಕ್ಕಿತ್ತು .  ನಿಮ್ಮಿಬ್ಬರ ನಡುವೆ ಒಂದು ಒಪ್ಪಂದವೂ ಆಗಿತ್ತು.  ಮಾರನೆಯ ದಿನ ನೀನು ಒಂದು ಬ್ಯಾಂಕಿನ ಗೇಟಿನ ಹತ್ತಿರ ಭೇಟಿಯಾಗುವ ಏರ್ಪಾಟು ಮಾಡಿಕೊಂದಿದ್ದೆ. ನೀನು ಸರಿಯಾದ ಸಮಯಕ್ಕೆ ಹೋದೆ. ನೀನು ಮತ್ತು ಜಗತ್ತಿನ ಅತಿಸುಂದರ ಹೆಣ್ಣಿನ ನಡುವೆ ಏನೋ ವಿಶೇಷವಾದಾದ್ದು ನಡೆಯಲಿದೆ ಅನ್ನುವ ಹೊತ್ತಿಗೆ , ನೀನು ಅಲ್ಲಿಂದ ಕಂಬಿ ಕಿತ್ತೆ. ಒಂದು ಮೊಲದಂತೆ. ನೀನೇ ಅಂದು ಕೊಂಡಿದ್ದಂತೆ, ಅವಳು ನಿಜವಾಗಿ ಅಂಥಾ ಸುಂದರಳಾದ ಹೆಣ್ಣಾದ್ದರಿಂದ
ಇದೊಂದು ಸಾಧಾರಣ ಸಂಬಂಧವಂತೂ ಆಗಲು ಸಾಧ್ಯವಿರಲಿಲ್ಲ.  ನಿನ್ನ ಸ್ನೇಹಿತರಿಗೆಲ್ಲ್ಲಾ ಚೆನ್ನಾಗಿ ತಿಳಿದಿರುವಂತೆ , ನಿನಗೆ  ನಿನ್ನ ಮತ್ತು ಮರ್ಸಡೀಜ಼್  ನಡುವಿನ ವೈವಾಹಿಕ ಸಂಬಂಧ ಬದುಕಿನಲ್ಲಿ ಎಲ್ಲಕ್ಕಿಂತಾ ಮುಖ್ಯ. ಹಾಗಾಗಿ ನಿನ್ನ ವೈವಾಹಿಕ ಸುಖಕ್ಕಾಗಿ ಇದು ನೀನು ಮಾಡಿದ ಮಹಾತ್ಯಾಗ ಅಂದು ಕೊಳ್ಳಬಹುದೇ?

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್: ನೀನು ಹೇಳುತ್ತಿರುವ ಈ ಹಳೇ ಕತೆಯಲ್ಲಿ ಒಂದು ತಪ್ಪಿದೆ. ನಾನು ಹಾಗೆ ಮಾಡಿದ್ದಕ್ಕೂ, ನನ್ನ ವೈವಾಹಿಕ ಜೀವನಕ್ಕೂ ಸಂಬಂಧವಿಲ್ಲ.ಈ ರೀತಿಯ ಸಂಬಂಧವನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ನೋಡಿದಾಗ, ಜಗತ್ತಿನ ಅತ್ಯಂತ ಸುಂದರ ಹೆಣ್ಣು ಅತ್ಯಂತ ಆಕರ್ಶಕಳಾಗಿರಬೇಕೆಂದೇನೂ ಇಲ್ಲ.  ಮುಂದೆ ಸೃಷ್ತಿಯಾಗಬಹುದಾದ ಭಾವನಾತ್ಮಕ ಸಮಸ್ಯೆಗಳಿಂದ ಆಗಬಹುದಾದ ನಷ್ಟವನ್ನು ಅವಳ ಚೆಲುವು ತುಂಬಬಲ್ಲುದು ಎಂದು ನನಗೆ ಅನ್ನಿಸಲಿಲ್ಲ. ಇಂತಹ ಸಂಬಂಧಗಳಲ್ಲಿ ಮೊದಲಿಂದಲೇ ’ಆಟದ ನಿಯಮ’ಗಳನ್ನು ಸ್ಪಷ್ಟಪಡಿಸಿ, ಅವುಗಳಲ್ಲಿ ನಂಬಿಕೆ ಇಟ್ಟುಬಿಟ್ಟರೆ ಹೆಂಗಸರು ಯಾವಾಗಲೂ ತುಂಬಾ ನಿಷ್ಠೆ ಯಿಂದ ನಡೆದು ಕೊಳ್ಳುತ್ತಾರೆ ಎನ್ನುವುದನ್ನು ನಾನು ಕಂಡಿದ್ದ್ದೇನೆ.  ಇಂತಹ ನಿಷ್ಠೆ ನಾಶವಾಗುವುದು ಆ ನಿಯಮಗಳಿಂದ ಅಪ್ಪಿ ತಪ್ಪಿ ಆಚೀಚೆ ಹೋದಾಗ.   ಬಹುಶಃ ಪ್ರಪಂಚದ ಅತ್ಯಂತ ಸುಂದರ ಹೆಣ್ಣಿಗೆ ಈ ಜಾಗತಿಕ ಚೆಸ್ ಆಟದ ಬಗ್ಗೆ ಅರಿವಿರಲಿಲ್ಲ, ಹಾಗಾಗಿ ಅವಳು ಅದನ್ನು ಬೇರೆಬೇರೆ ಬಣ್ಣದ ಕಾಯಿಗಳಿಂದ ಆಡಲು ಬಯಸಿದಳು.  ಅಥವಾ , ಅವಳು ನನಗೆ  ಕೊಡಲು ಅವಳಲ್ಲಿದ್ದುದು ಕೇವಲ ಅವಳ ಅಂದಚಂದ, ಬರೀ  ಅದು ನಮ್ಮಿಬ್ಬರ ನಡುವೆ ಸಮರ್ಪಕವಾದ ಸಂಬಂಧ ನಿರ್ಮಿಸಲು ಸಾಲದು ಎಂದು ನನಗನ್ನಿಸಿರಬಹುದು. ಆದ್ದರಿಂದ, ನಾನು ಮಾಡಿದ್ದು ತ್ಯಾಗವೇನೋ ಹೌದು, ಆದರೆ ಅಂಥಾ ಮಹಾತ್ಯಾಗವೇನೂ ಅಲ್ಲ. ಆ ಇಡೀ ಪ್ರಕರಣ ನಡೆದದ್ದು ಒಂದರ್ಧ ಗಂಟೆ ಕಾದಲ್ಲಿ, ಆದರೆ ಅದರ ಪರಿಣಾಮ ಬಹಳ ಮಹತ್ವಪೂರ್ಣವಾದದ್ದನ್ನು ಉಳಿಸಿ ಹೋಗಿತ್ತು- ಕಾರ್ಲೋ ಫೂಂತೇಯ ಒಂದು ಕತೆ.

ಮೆಂ: ನಿನ್ನ ಬದುಕಿನಲ್ಲಿ ಹೆಂಗಸರು ಎಷ್ಟು ಮಹತ್ವ ಪಡೆದಿದ್ದಾರೆ?

ಮಾ: ಹೆಂಗಸರು ನನ್ನ ಬದುಕಿನುದ್ದಕ್ಕ್ಲೂ ಎಷ್ಟು ಮುಖ್ಯ ಪಾತ್ರ ವಹಿಸಿದ್ದಾರೆಂಬುದನ್ನು ತಿಳಿಯದೆ ನನ್ನ ಜೀವನವನ್ನು ನೀನು ಅರ್ಥ ಮಾಡಿಕೊಳ್ಳುವುದೇ ಸಾಧ್ಯವಿಲ್ಲ. ನನ್ನನ್ನು  ಎತ್ತಿ ಆಡಿಸಿ ಬೆಳೆಸಿದ್ದು ನನ್ನ ಅಜ್ಜಿ. ನಮ್ಮ ಮನೆತುಂಬಾ ಇದ್ದ ಚಿಕ್ಕಮ್ಮ, ದೊಡ್ಡಮ್ಮಂದಿರೂ ನನಗೆ ಪ್ರೀತಿ, ಅಕ್ಕರೆಯ ಧಾರೆ ಎರೆದಿದ್ದರು. ನನ್ನ ಜೊತೆ ಇರುತ್ತಿದ್ದ ಕೆಲಸದ ಹುಡುಗಿಯರು ನನ್ನ ಬಾಲ್ಯದ ಎಷ್ಟೊಂದು ಖುಶಿಯ ಕ್ಷಣಗಳಿಗೆ ಕಾರಣರಾಗಿದ್ದರು.  ನನಗೆ ಓದು ಬರಹ ಕಲಿಸಿದಾಕೆ ತುಂಬಾ ಚೆಲುವೆ, ಲಾವಣ್ಯಮಯಿ. ಅವಳನ್ನು ನೋಡಬಹುದೆಂದು ನಾನು  ಶಾಲೆಗೆ ಹೋಗುವುದನ್ನು ಇಷ್ಟಪಡುತ್ತಿದ್ದೆ. ದುಕಿನ ಎಲ್ಲಾ ಗೊಂದಲಗಳ ನಡುವೆ ಉದ್ದಕ್ಕೂ ನನ್ನ  ಕೈ ಹಿಡಿದು ನಡೆಸಿಕೊಂಡುಹೋಗಲು ಯಾವಾಗಲು ಜೊತೆಯಾಗಿ  ಒಬ್ಬ ಹೆಣ್ಣು ಇರುತ್ತಲೇ ಇದ್ದಳು. ಎಂಥಾ ಪರಿಸ್ಥಿತಿಯನ್ನೂ  ಗಂಡಸರಿಗಿಂತ ಹೆಂಗಸರು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಹೆಂಗಸರ ಜೊತೆಯಿದ್ದಾಗ ನನಗೆ ಅಂಥಾ ಕೆಟ್ಟದ್ದೇನೂ ಆಗಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ.  ಅವರಿಂದ ನನಗೆ ಆ ಸುರಕ್ಷಾ ಭಾವ ಸಿಗುತ್ತದೆ. ಆದ್ದರಿಂದಲೇ ನಾನು ಗಂಡಸರಿಗಿಂತ ಹೆಂಗಸರೊಡನೆ  ಆರಾಮಾಗಿ ಇರಬಲ್ಲೆ ಅನ್ನಿಸುತ್ತದೆ.

ಮೆಂ: ಹೆಂಗಸರು, ಗಂಡಸರ  ಪಾತ್ರಗಳು ಚಾರಿತ್ರಿಕ ವಾಗಿ ವಿಭಜನೆಯಾಗಿರುವ ಬಗ್ಗೆ ನಿನ್ನ ವಿಚಾರಗಳು ಎಲ್ಲಿಂದ ರೂಪು ಗೊಳ್ಳುತ್ತವೆ?

ಮಾ: ಬಹುಶಃ ನನ್ನ ಅಜ್ಜಿ ಮನೆಯಲ್ಲಿ ಅಂತರ್ಯುದ್ಧಗಳ ಬಗ್ಗೆ ಕತೆಗಳನ್ನು ಕೇಳುತ್ತಿದ್ದ ಕಾಲದಿಂದ ಇರಬೇಕು. ಹೆಂಗಸರಿಗೆ  ಜಗತ್ತನ್ನು  ನಿರ್ಭಯವಾಗಿ ಎದುರಿಸುವ ಅಂಥಾ ಅಂತಃಶಕ್ತಿ ಇರದಿದ್ದರೆ ಅದೆಲ್ಲಾ ಸಾಧ್ಯವೇ ಆಗುತ್ತಿರಲಿಲ್ಲ ಎನ್ನಿಸುತ್ತಿತ್ತು. ಎಲ್ಲಿಗೆ ಹೋಗುತ್ತಿದ್ದೇವೆಂಬುದನ್ನೂ ತಿಳಿಯದೆ, ಯಾವಾಗ ಮರಳಿಬರುತ್ತೇವೆಂಬ ಅರಿವೂ ಇಲ್ಲದೆ, ಮನೆಯಲ್ಲಿ ಏನಾಗಬಹುದು  ಎಂಬುದನ್ನೂ ಚಿಂತಿಸದೆ ಗಂಡಸರು
ಹೆಗಲಮೇಲೆ ಗನ್ನೆತ್ತಿ ಹಾಕಿಕೊಂಡು ಆಗ ಹೇಗೆ ಹೊರಟು ಬಿಡುತ್ತಿದ್ದರು ಎಂಬುದನ್ನು ನನ್ನಜ್ಜ ನನಗೆ ಹೇಳುತ್ತಿದ್ದರು.. ಕೇವಲ ತಮ್ಮ ಕೆಚ್ಚು ಮತ್ತು ಭಾವನಾಶಕ್ತಿಗಳ ಸಹಾಯದಿಂದ ಹೆಂಗಸರು ಮುಂದಿನ ಪೀಳಿಗೆಯನ್ನು ಬೆಳೆಸಲು ಮನೆಯಲ್ಲೇ ಉಳಿಯುತ್ತಿದ್ದರು. ಯುದ್ಧದಲ್ಲಿ ಹತರಾದ ಗಂಡಸರ ಬದಲು ಹೊಡೆದಾಡಲು ಮತ್ತಷ್ಟು ಹೊಸ ಯೋಧರನ್ನು ಸೃಷ್ಟಿಸುತ್ತಿದ್ದರು. ಹೆಂಗಸರು ತಮ್ಮ ಗಂಡಂದಿರು ಮತ್ತು ಮಕ್ಕಳನ್ನು ಯುದ್ಧಭೂಮಿಗೆ ಕಳಿಸಿಕೊಡುವಾಗ ಗೆದ್ದು ಬಾ, ಇಲ್ಲವೇ ಮಡಿ. ಸೋತು ಮರಳಿ
       ಬರಬೇಡ ಎಂಬ ಮೌನ ಸಂದೇಶ ಅಲ್ಲಿರುತ್ತಿತ್ತು. ಕೆರ್ರಿಬಿಯನ್ ಹೆಂಗಸರ ಈ                 ನಿಲುವೇ ನಂತರ ನಮ ಸಮಾಜದಲ್ಲಿ ಬೇರೂರಿರುವ  ಪುರುಷತ್ವದ (ಮಖಿಸ್ಮೋ) ಪರಿಕಲ್ಪನೆಗೆ ಕಾರಣವಾಯಿತೇನೋ ಎಂದು ನನಗೆ ಒಂದೊಂದು ಸಲ ಅನ್ನಿಸುತ್ತದೆ.

ಮೆಂ: ನೀನು ಮೊದಲ ಸಲ ಹೆಣ್ಣೊಬ್ಬಳ ಆಕರ್ಷಣೆಗೆ ಒಳಗಾಗಿದ್ದು ಯಾವಾಗ ಎಂದು ನೆನಪಿದೆಯೇ?

ಮಾ: ನಾನಾಗಲೇ ಹೇಳಿದಂತೆ ನನ್ನನ್ನು ಮೊದಲು ಆಕರ್ಷಿಸಿದ್ದು ನನಗೆ ಓದು, ಬರಹ ಕಲಿಸಿದ ನನ್ನ ಟೀಚರ್. ಆಗ ನನಗೆ ಐದು ವರ್ಷ. ಆದರೆ ಅದು ಬೇರೆ ತರಹ. ನಿಜವಾಗಿಯೂ ನನ್ನಲ್ಲಿ ಉನ್ಮಾದ ಹುಟ್ಟಿಸಿದ್ದು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗಿ. ಒಂದು ದಿನ ರಾತ್ರಿ ಪಕ್ಕದ ಮನೆಯಲ್ಲಿ ಏನೋ ಸಂಗೀತ ಗೋಷ್ಠಿ
      ನಡೆಯುತ್ತಿತ್ತು.  ಆಗ ಅವಳು ಮುಗ್ಧಳಾಗಿ ತನ್ನೊಡನೆ ತೋಟದಲ್ಲಿ ನರ್ತಿಸಲು ನನ್ನನ್ನು ಕರೆದಳು. ನನಗಾಗ ಸುಮಾರು ಆರು ವರ್ಷ ಇದ್ದಿರಬೇಕು. ಅಂದು ಅವಳ ದೇಹದ ಸ್ಪರ್ಶ ನನ್ನಲ್ಲಿ ಹುಟ್ಟಿಸಿದ ಭಾವ ಪ್ರಳಯ ದಿಂದ ನಾನಿನ್ನೂ ಚೇತರಿಸಿಕೊಂಡಿಲ್ಲ. ನಾನು ಇವತ್ತಿನವರೆಗೂ ಅಷ್ಟು ತೀವ್ರತೆಯನ್ನು ಎಂದೂ ಅನುಭವಿಸಿಲ್ಲ.

ಮೆಂ: ಇತ್ತೀಚೆಗೆ ನಿನ್ನನ್ನು ಯಾರು ತುಂಬಾ ಆಕರ್ಷಿಸಿದ್ದಾರೆ?

ಮಾ: ನಿಜ ಹೇಳಬೇಕೆಂದರೆ, ನಿನ್ನೆ ರಾತ್ರಿ ನಾನು ಪ್ಯಾರಿಸ್ಸಿನ ರೆಸ್ಟೋರೆಂಟ್ ಒಂದರಲ್ಲಿ ನಾನು ನೋಡಿದ ಹೆಣ್ಣು. ನನಗೆ ಹೀಗೆ ಮತ್ತೆ ಮತ್ತೆ ಆಗುತ್ತದೆ. ಹಾಗಾಗಿ ನಾನು ಎಣಿಸುವುದನ್ನೇ ನಿಲ್ಲಿಸಿದ್ದೇನೆ. ನನಗೊಂದು ವಿಚಿತ್ರವಾದ ಸಹಜ ಪ್ರವೃತ್ತಿ ಇದೆ. ನಾನೊಂದು ಗುಂಪು ಜನರ ನಡುವೆ ನಡೆದು ಹೋದಾಗ , ಯಾವುದೋ ಒಂದು ನಿಗೂಢ ಸಂಕೇತ ನನ್ನ ದೃಷ್ಟಿಯನ್ನು  ಅಲ್ಲಿರುವ ಅತ್ಯಂತ ಕುತೂಹಲಕಾರಿ ಹೆಣ್ಣಿನತ್ತ ಕೊಂಡು ಒಯ್ಯುತ್ತದೆ. ಅವಳು ಅಲ್ಲಿರುವ ಎಲ್ಲರಿಗಿಂತ ಚೆಲುವೆಯಿಂದಿರಬೇಕೆಂದೇನಲ್ಲ, ನನಗರಿವಿಲ್ಲದೆಯೇ ಅವಳತ್ತ ನಾನು ಆಕರ್ಷಿತನಾಗುತ್ತೇನೆ.  ಆದರೆ ನಾನೆಂದೂ ಅದರ ಬಗ್ಗೆ  ಏನೂ ಮಾಡುವುದಿಲ್ಲ. ಅವಳಲ್ಲಿದ್ದಾಳೆ ಎಂಬ ಅರಿವಿದ್ದರೆ ಸಾಕು, ನಾನು ಖುಶಿಯಾಗುತ್ತೇನೆ. ಇದೊಂದು ರೀತಿಯ ನಿರ್ಮಲ ಸುಂದರ ಭಾವನೆ, ಒಂದೊಂದು ಸಲ ಮರ್ಸಡೀಜ಼್ ಕೂಡಾ ನನಗೆ ಅಂಥಾ ಹೆಣ್ಣನ್ನು ಹುಡುಕಿಕೊಳ್ಳಲು ಸಹಾಯ ಮಡುತ್ತಾಳೆ, ಅವಳನ್ನು ನೋಡಲು ಅನುಕೂಲವಾದ ಸ್ಥಳ ಆರಿಸಿ ಕೊಡುತ್ತಾಳೆ.

ಮೆಂ: ಲೈಂಗಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ಏನಾದರೂ ಮಿತಿಗಳಿರಬೇಕು ಎಂದು ನಿನಗೆ ಅನ್ನಿಸುತ್ತದೆಯೇ? ಅವುಗಳು ಏನು?

ಮಾ: ನಾವೆಲ್ಲ ನಮ್ಮ ನಮ್ಮ ಪೂರ್ವಾಗ್ರಹಗಳಿಗೆ ಕಟ್ಟುಬಿದ್ದೇ ಇರುತ್ತೇವೆ. ಮುಕ್ತಚಿಂತಕನಾಗಿ , ನನಗನ್ನಿಸುವುದೆಂದರೆ ಸೈದ್ಧಾಂತಿಕವಾಗಿ ಲೈಂಗಿಕ ಸ್ವಾತಂತ್ರ್ಯದ ಮೇಲೆ ಯಾವ ಕಟ್ಟು ಪಾಡುಗಳೂ ಇರಬಾರದೆಂದು. ಆದರೆ ನಿಜಜೀವನದಲ್ಲಿ ನಾನು ನನ್ನ ಕ್ಯಾಥೊಲಿಕ್ ಹಿನ್ನೆಲೆ ಮತ್ತು ಬೂರ್ಝ್ವಾ ಸಮಾಜದ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ, ನಮ್ಮಲ್ಲಿ ತುಂಬಾ ಜನರಿಗೆ ಆಗುವಂತೆ ನಾನೂ ಡಬಲ್ ಸ್ಟ್ಯಾಂಡರ್ಡ್ಸ್ ಗೆ ಬಲಿಯಾಗಿದ್ದೇನೆ

ಗಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ಼್ ನೊಂದಿಗೆ ಸಂದರ್ಶನದ ಭಾಗಗಳು: ಪ್ಲಿನಿಯೋ ಅಪುಲೆಯೋ  ಮೆಂಡೊಂಜ಼ಾ
       ಕನ್ನಡಕ್ಕೆ: ಉಮಾ ರಾವ್
(ಕೆಂಡಸಂಪಿಗೆ ೨೦೦೯)


      


1 comment: