Monday, March 31, 2014

ಟೇಬಲ್ ಸ್ಪೇಸ್











ಟೇಬಲ್ ಸ್ಪೇಸ್

ಯಶವಂತ ಚಿತ್ತಾಲರ ನೆನಪಿನಲ್ಲಿಒಂದು ಟಿಪಿಕಲ್ ಮುಂಬೈ ಕತೆ



ಮುಂಬೈ ಫೋರ್ಟ್ ಪ್ರದೇಶದಲ್ಲಿರುವ ಖ್ಯಾತ ಫಿರೋಜ಼್ ಶಾ ಮೆಹ್ತಾ ರಸ್ತೆಯ  ಬದಿಯ ಗನ್ ಬೋ ಸ್ಟ್ರೀ ಟ್ ಎಂಬ ಸಣ್ಣ ಗಲ್ಲಿಯಲ್ಲಿದ್ದ  ೧೯೩೫ ರಲ್ಲಿ ಕಟ್ಟಿದ್ದ ’ರುಸ್ತ್ಂ ಬಿಸ್ಡಿಂಗ್’ ಮನ್ಸೂನಿನ ಮಳೆಯ ಹೊಡೆತ ತಡೆಯಲಾರದೆ ಕುಸಿದು ಬಿದ್ದಿತೆಂಬ ನ್ಯೂಸ್ ತಣ್ಣಗೆ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಕುಳಿತು ಓದಿದಾಗ ಮೊದಲು ನೆನಪಾದದ್ದು ಗೋಪಿ ಪ್ರಸಾದನದು. ನಾನು ಮುಂಬೈ ಸೇರಿ ಕೆಲಸ ಮಾಡಲು ಪ್ರಾರಂಭ ಮಾಡಿದ ದಿನಗಳಿಂದ ಮತ್ತೆ ತಾಯ್ನಾಡಿಗೆ  ವಾಪಸ್ಸಾಗುವವರೆಗೂ ಸುಮಾರ್ ೧೦ ವರ್ಶಗಳ ಕಾಲ ಅವನೊಡನೆ ನನಗೆ ನಿರಂತರ ಸಂಪರ್ಕವಿತ್ತು.

ತಾನು ಕ್ರಿಷ್ಚಿಯನ್ ಧರ್ಮಕ್ಕೆ ಸೇರಿದವನೆಂದು ಹೇಳುತ್ತಿದ್ದ ಗೋಪಿ ಪ್ರಸಾದ್ ಬರ್ಮಾದಲ್ಲಿ ಹುಟ್ಟಿ ಎರಡನೇ ಮಹಾಯುಧ್ಧದ ನಂತರ  ತಂದೆ ತಾಯಿಯರೊಡನೆ ಕೊಚಿನ್ ಗೆ ಬಂದು, ಮಲೆಯಾಳಂ ಕಲಿತು, ಬಿಎ ಮಾಡಿ,  ಅವರ ನಿಧನದ ನಂತರ ಕೆಲಸ ಹುಡುಕಿ ಕೊಂಡು ಮುಂಬೈಗೆ
ಬಂದು ದಿನನಿತ್ಯಕ್ಕೆ ಬೇಕಾಗುವಷ್ಟು ಮರಾಟಿ ಮಾತಾಡುವುದನ್ನೂ ಕಲಿತಿದ್ದ. ಶುದ್ಧ ಇಂಗ್ಲಿಶ್ ನಲ್ಲಿ ಅಲಂಕಾರಿಕ ವಾಕ್ಯಗಳನ್ನು ರೆಯಬಲ್ಲವನಾಗಿದ್ದು ೭೦,೮೦ರ ದಶಕಗಳ ಅಡ್ ವಟೈಝಿಂಗ್  ಕ್ಶೇತ್ರದ ಬೇಡಿಕೆಗಳಿಗೆ ಹೊಂದುವಷ್ಟು ಪ್ರತಿಭೆ ಹೊಂದಿದ್ದ.
ಹಾಗಾಗಿ ಫ಼್ರೀ ಲಾನ್ಸ್ ಕಾಪಿರೈಟಿಂಗಿನಲ್ಲಿ ಹೊಟ್ಟೆ ಹೊರೆಯುವಶ್ಟು ದುಡ್ಡು ಮಾಡಿಕೊಳ್ಳುವುದು ಅವನಿಗೆ ಸಾಧ್ಯವಾಗಿತ್ತು.

ಆ ಕಾಲದಲ್ಲಿ ಇವನಂತೆ ಕೆಲಸ ಹುಡುಕಿಕೊಂಡು ಬಂದ ಯುವಕರು ತಮ್ಮ ಯುವ ಹೃದಯಗಳೊಳಗೆ ನಾರಿಮನ್ ಪಾಯಿಂಟ್ನಲ್ಲೋ, ಫ಼್ಲೋರಾ ಫ಼ೌಂಟನ್ ನಲ್ಲೋ ಪಾಶ್ ಅನ್ನಿಸಿಕೊಳ್ಳುವ ತಮ್ಮದೇ ಆಫ಼ೀಸನ್ನು ಹೊಂದುವ , ಇಲ್ಲವೇ ಮೊದಲು ಬಾಡಿಗೆಗೆ  ಪಡೆಯುವ, ಇಲ್ಲವೇ ಅಲ್ಲಿರುವ ಕಂಪನಿಗಳಲ್ಲಿ  ಕೆಲಸ ಗಿಟ್ಟಿಸಿಕೊಳ್ಳುವ ಕನಸುಗಳನ್ನು ಹೊತ್ತೇ ಬರುತ್ತಿದ್ದರು. ಇವರಲ್ಲಿ ಹೆಚ್ಚಾಗಿ ಕಮರ್ಶಿಯಲ್ ಆರ್ಟಿಸ್ಟ್ ಗಳೂ, ಟೈಪಿಸ್ಟ್ ಗಳು, ಅಡ್ ವಟೈಜಿಂಗ್ ಕಾಪಿರೈಟರ್ ಗಳು, ಅಕೌಂಟೆಂಟುಗಳು, ಹೀಗೇ ಸೆಲ್ಫ್ ಎಂಪ್ಲಾಯ್ದ್ ಆಗುವ ಸಾಧ್ಯತೆಯವರು ತಮ್ಮದೇ ಜಾಗಕ್ಕಾಗಿ ಹಪಹಪಿಸಿತ್ತಿದ್ದರು. ಅದರೆ ಮುಂಬೈ ಒತ್ತಡ, ಸ್ಪರ್ಧಾತ್ಮಕ ಶೈಲಿಯ ಬದುಕಿನ ಜಂಜಡದಲ್ಲಿ ಹೋರಾಡಿ ಒಂದೊಂದಾಗಿ ತಮ್ಮ ಕನಸುಗಳನ್ನು ಕೈಬಿಡಲು ಅವರಿಗೆ ಹೆಚ್ಚು ಕಾಲ ಬೇಕಾಗುತ್ತಿರಲಿಲ್ಲ.
ಇಂಥವರ ಸಮಸ್ಯೆಗೆ  ಪರಿಹಾರ ನೀಡಲು ಮುಂಬೈ ತಯಾರಾಗಿಯೇ ಇತ್ತು. ಫ಼ೋರ್ಟ್ ಪ್ರದೇಶದ ಕಿರಿದಾದ ಗಲ್ಲಿಗಳಲ್ಲಿ ನಿಂತಿದ್ದ ಮೂರು-ನಾಲ್ಕು ಮಹಡಿಯ ಕಟ್ಟಡಗಳಲ್ಲಿ ಕುಟುಂಬಗಳು ಕಡಿಮೆಯಾಗಿ  ಆ ಫ಼್ಲ್ಯಾಟುಗಳಲ್ಲಿ  ನಿಧಾನವಾಗಿ ಪುಟ್ಟ ಪುಟ್ಟ ಆಫ಼ೀಸುಗಳು  ತಲೆ ಎತ್ತಿದುವು. ಕಾಲು ತೆಗೆಯದೆ ಅಲ್ಲೇ ಕಚ್ಚಿ ಕೊಂಡಿದ್ದ ಒಂದೊಂದು ಗುಜರಾತಿ, ಮರಾಠಿ  ಸಂಸಾರಗಳು ತಮ್ಮ ಒಂದು ರೂಮಿನ ಫ಼್ಲಾಟಿನಲ್ಲಿ ದಿನಾ ಒಂದು ಗಂಟೆಗೆ ಸರಿಯಾಗಿ ಮಾಡುವ ಬಿಸಿಬಿಸಿ ರೊಟ್ಟಿಗಳ ಘಮ,೪ ಗಂಟೆಗೆ ಕುದಿಸುವ ಚಹಾದ ಪರಿಮಳ ಆ ಮನೆಗಳಿಂದ ಈ ಆಫೀಸುಗಳ ತುಂಬಾ ಹರಿದು ಎಲ್ಲರ ಹಸಿವನ್ನು ಹೊಡೆದೆಬ್ಬಿಸುತ್ತಿತು.

ಈ ಫ಼್ಲ್ಯಾಟುಗಳ ಒಡೆಯರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು  ನಾಲ್ಕು, ಆರು, ಎಂಟು ಟೇಬಲ್ ಸ್ಪೇಸ್ ಗಳನ್ನಾಗಿ ಪರಿವರ್ತಿಸಿ  ಬಾಡಿಗೆಗೆ ಕೊಡ ತೊಡಗಿದರು. ಅಂದರೆ ಫ಼್ಲಾಟಿನ ಮಾಲಿಕರು ಅದನ್ನು ಮೂರು ಅಡಿ ಉದ್ದ ಮೂರು ಅಡಿ ಅಗಲದ ಸ್ಥಳಗಳನ್ನಾಗಿ ಪರಿವರ್ತಿಸಿ,ಅದರಲ್ಲಿ ಒಂದೊಂದು ಟೇಬಲ್ ಹಾಕಿದರು.  ಅದರ ಮೇಲೆ ಅವರವರ ಕೆಲಸಕ್ಕೆ ತಕ್ಕಂತೆ, ಟೈಪ್ ರೈಟರ್, ಡ್ರಾಯಿಂಗ್ ಬೋರ್ಡ್, ಫ಼ೈಲ್ ಗಳು, ಸ್ಟ್ಯಾಂಪ್ ಪೇಪರುಗಳು,  ಪೈಂಟಿಂಗ್ ಸಲಕರಣೆಗಳು ಏನು ಬೇಕಾದರೂ  ಇಟ್ಟುಕೊಳ್ಳಬಹುದಿತ್ತು. ಉದಾಹರಣೆಗೆ  ವಿಳಾಸ: ೪, ಫ್ಲ್ಯಾಟ್ ೧೧, ರುಸ್ತಮ್ ಬಿಲ್ಡ್ಡಿಂಗ್ ರೀತಿ ಇದ್ದರೆ ಆ ನಂಬರ್ ೪ ಹೊರಗಿನವರಿಗೆ ಅಫೀಸಿನ ನಂಬರ್ ಅನ್ನಿಸಿದರೂ ಅದು ಟೇಬಲ್ ನಂಬರ್ ಮಾತ್ರ ಆಗಿರುತ್ತಿತ್ತು. ಆದರೆ ಅಲ್ಲಿ ಕೆಲಸ ಮಾಡುವವರನ್ನು ಯಾರಾದರೂ ಎಲ್ಲಿ ಕೆಲಸ ಮಾಡ್ತೀಯಾಂತ  ಕೇಳಿದಾಗ ರೋಪಾಗಿ ಫ಼ೋರ್ಟ್ ಏರಿಯಾ ಅನ್ನಬಹುದಿತ್ತು.

ಈ ರೀತಿ ಇದ್ದ ಒಂದು  ಫ಼್ಲ್ಯಾಟನ್ನು ಅಗ್ಗದ ಬಾಡಿಗೆಗೆ ಗಿಟ್ಟಿಸಿದ್ದವನು  ಕೊಂಕಣಿ ನೀಲಕಾಂತ್ ಅಮೋನ್ಕರ್. ದೇವಾನಂದನಂತೆ ನಡೆಯುತ್ತಿದ್ದ  ಅವನು ಆರಡಿ ಎತ್ತರವಿದ್ದ .  ಮನೆಯಲ್ಲೇ ಬಣ್ಣ ಹಚ್ಚುತ್ತಿದ್ದ ಅವನ ಕೂದಲು ಅಲೌಕಿಕ ಕಪ್ಪು ಬಣ್ಣವಿದ್ದು ಬೈತಲೆಯ ಅತ್ತ ಇತ್ತ ಮಾತ್ರ ಬೆಳ್ಳಗಿರುತ್ತಿತ್ತು.  ಅವನು ಅಲ್ಲಿ ೪ ಟೇಬಲ್ಗಳನ್ನು ಹಾಕಿ ಬಾಡಿಗೆಗೆ ಕೊಟ್ಟಿದ್ದ. ಅದರ ನಡುವೆ ಒಂದು ಬಿಳಿ ಸನ್ ಮೈಕಾ ಟೇಬಲ್ ಹಾಕಿ ರಿಸೆಪ್ಶನಿಸ್ಟ್ ಎಂಬ ಫಲಕ ಇಟ್ಟು, ಅದರಲ್ಲಿ ಅಲ್ಕಾ ಎಂ ಕಪ್ಪು ಸಿಂಧಿ ಹುಡುಗಿಯೊಬ್ಬಳನ್ನು ತಂದು ಕೂಡಿಸಿದ್ದ.  ಜೊತೆಗೆ ಅಲ್ಲೇ ಒಂದು ಅಟ್ಟ ಕಟ್ಟಿಸಿ , ಚಿಕ್ಕ ಕ್ಯಾಬಿನ್ ಒಂದನ್ನು ಮಾಡಿಸಿ,  ಅದಕ್ಕೆ ಒಂದು ಫೋನು, ಒಂದು ಕುರ್ಚಿ, ಒಂದು ಟ್ಯೂಬ್ ಲೈಟ್, ಒಂದು ಪುಟ್ಟ ಫ್ಯಾನ್ ಸಿಕ್ಕಿಸಿ ಚೇರ್ಮನ್ ಅಂಡ್ ಎಮ್ ಡಿ, ಅಮೋನ್ಕರ್ ಎಸ್ಸೋಸಿಯೇಟ್ಸ್ ಎಂದು ಬೋರ್ಡು ತಗುಲಿಸಿದ್ದ. ಅಲ್ಲಿಂದ ಅವನು ಬೇರೆ ಬೇರೆ ರೀತಿಯ ದಂಧೆಗಳನ್ನು ಮಾಡುತ್ತಿದ್ದ. ಚಿಕ್ಕ ಚಿಕ್ಕ ಬಿಸಿನೆಸ್ ಗಳನ್ನು ಕುದುರಿಸಿ ಕೊಡುವುದು, ಸಣ್ಣ ೫ ಬೈ ೨ ಜಾಹೀರಾತುಗಳನ್ನು ಮರಾಠಿ ಪೇಪರುಗಳಲ್ಲಿ ಹಾಕಿಸಿಕೊಡುವುದು, ಅದನ್ನು ತಮ್ಮಲ್ಲೇ ಬಾಡಿಗೆಯಿದ್ದವರ ಕೈಯ್ಯಲ್ಲಿ ತಯಾರಿ ಮಾಡಿಸುವುದು, ಅಡ್ವಟೈಜಿಂಗ್ ಏಜೆನ್ಸಿಗಳಿಗೆ ಆರ್ಟಿಸ್ಟ್ ಗಳನ್ನು, ಮಟೀರಿಯಲ್ ಗಳನ್ನು ಸಪ್ಲೈ ಮಾಡುವುದು ಹೀಗೆ. ಎಲ್ಲದರಲ್ಲೂ ಅವನ ಕಮಿಶನ್ ಇರುತ್ತಿತ್ತು.  ಅಲ್ಕಾ ಅಲ್ಲಿ ಕೆಲಸ ಮಾಡುವವರಿಗೆ ಬರುವ  ಫೋನ್ ಮೆಸೇಜುಗಳು, ಪತ್ರಗಳು, ಡಾಕ್ಯುಮೆಂಟುಗಳನ್ನು ವ್ಯವಸ್ಥಿತವಾಗಿ ಇಟ್ಟು ಅವರವರಿಗೆ ಕೊಡುತ್ತಿದ್ದಳು. ಬರ್ತ್ ಡೇ ಗಳು ಬಂದಾಗ ಎಲ್ಲರಿಗೂ ಚೂಡಾ, ಲಡ್ಡು, ಚಹಾ ಆರ್ಡರ್ ಮಾಡುತ್ತಿದ್ದಳು.

ಗೋವಾ ದಿಂದ, ಮಂಗಳೂರಿನಿಂದ ಕೆಲಸ ಹುಡುಕಿಕೊಂಡು ಬಂದ ಹುಡುಗರು ಮೊದಲು ತಮ್ಮ ಹೆಸರು, ಕಾಂಟ್ಯಾಕ್ಟ್ ನಂಬರನ್ನು ಅಮೋನ್ಕರ್ ಹತ್ತಿರ ಬಿಟ್ಟಿರುತ್ತಿದ್ದರು. ಚಿಕ್ಕ ಪುಟ್ಟ ಆಫೀಸುಗಳಲ್ಲಿ ವೇಕೆನ್ಸಿಗಳು ಬಂದರೆ ಅವರು ಸಂಪರ್ಕಿಸುತ್ತಿದ್ದುದು ಅಮೋನ್ ಕರ್ ನನ್ನೆ.  ಗೋವಾ ಕೊಂಕಣಿಗಳೆಂದರೆ ಅವನಿಗೆ ಮಂಗಳೂರು ಕೊಂಕಣಿಗಳಿಗಿಂತ ಹೆಚ್ಚು ಪ್ರೀತಿ ಎಂಬ ಪ್ರತೀತಿಯೂ ಇತ್ತು.  ಆದರೆ ಅವನಿಗೆ ಗ್ಯಾರಂಟಿ ಆದಾಯ ತಂದು ಕೊಡುತ್ತಿದ್ದುದು ಈ ಟೇಬಲ್ ಸ್ಪೇಸ್ ಗಳು. ಎಂದೂ ಅವು ಖಾಲಿ ಇರುತ್ತಲೇ ಇರಲಿಲ್ಲ. ಬದಲು ಒಂದು ವೈಟಿಂಗ್ ಲಿಸ್ಟ್ ಇರುತ್ತಿತ್ತು. ಅದು ಸರಿಯಾದ  ಆರ್ಡರ್ನಲ್ಲೇ ಮಂದುವರಿಯುತ್ತಿದ್ದು ಗೋವಾ ಕೊಂಕಣಿಗಳು ಬಂದರೆ ಮಾತ್ರ ಏರುಪೇರಾಗುತ್ತಿತ್ತು.

ನಾನು ಕೆಲಸ ಮಾಡುತ್ತಿದ್ದ ಅಡ್ವಟೈಜಿಂಗ್ ಏಜೆನ್ಸಿಯ ಒಡೆಯ  ಫ಼್ರಾಂಕ್ ನರೋನ್ಹಾ ಕೂಡಾ ಒಬ್ಬ ಗೋವಾ ಕೊಂಕಣಿಯೇ ಇದ್ದು  ಅವನು ಅಮೋನ್‌ಕರ್ ಗೆಳೆಯನಾಗಿದ್ದ. ಬೆಳಗಾಗೆದ್ದು ರಮ್ ಕುಡಿದು ಅಫೀಸಿಗೆ ಬರುತ್ತಿದ್ದ  ಫ಼್ರಾಂಕ್ ತನ್ನ ಸಣ್ಣಪುಟ್ಟ ಕೆಲಸಗಳಿಗೆ ಅಮೋನ್‌ಕರ್ ನನ್ನು ಅವಲಂಬಿಸಿದ್ದ. ನನಗೂ ಆಗಾಗ ಅಲ್ಲಿಗೆ ಹಲವು ಬಾರಿ ಹೋಗಿ ಬರಬೇಕಾಗುತ್ತಿತ್ತು. ಹಾಗೆ ನನಗೆ ಅಮೋನ್‌ಕರ್ ಅಫೀಸಲ್ಲಿ  ಪರಿಚಯವಾದವನು ಗೋಪಿ ಪ್ರಸಾದ್.

ಅಲ್ಲಿದ್ದ ಟೇಬಲ್ ಸ್ಪೇಸುಗಳಲ್ಲಿ ಕೆಲಸ ಮಾಡುತ್ತಿದ್ದ ಮಿಕ್ಕ ಹುಡುಗರು ೨೦ ರಿಂದ ೨೫ ವರ್ಷದವರಿರಬಹುದು. ಅವರೆಲ್ಲರ ಮಧ್ಯೆ ಈ ಗೋಪಿ ಪ್ರಸಾದ್ ಒಂದು ಹಳೇ ಇಮಾರತಿನಂತೆ ಕಾಣುತ್ತಿದ್ದ. ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ್ದ ನರೆತ ಕೂದಲು,  ಕಪ್ಪು ಟೆರಿಲೀನ್ ಪ್ಯಾಂಟು. ಮಾಸಲು ಬಣ್ಣದ  ದೊಗಳೆ ಬುಶ್ ಶರಟು ಹೊರಗೆ ಬಿಟ್ಟು ಕೊಂಡು ಹಾಕಿಕೊಳ್ಳುತ್ತಿದ್ದ. ಬಾಸ್ ನಿಂದ ಕ್ಲರ್ಕ್ ವರೆಗೂ ಜೀನ್ಸ್ ತೊಡುವ ಅಡ್ವಟೈಜಿಂಗ್ ರಾಜ್ಯದಲ್ಲಿ ಅವನೊಬ್ಬ ವಿಚಿತ್ರವಾಗಿ ಕಾಣುತ್ತಿದ್ದ.  ’ಒಹ್, ಐ ಅಯಾಮ್ ಏನ್‌ಶಂಟ್’ ಎಂದು ಹೇಳಿಕೊಳ್ಳುತ್ತಾ ನಗುತ್ತಿದ್ದ.  ಫ್ರಾಂಕ್ ಗಿಂತಲೂ,  ಅಮೋನ್ ಕರ್ ಗಿಂತಲೂ, ಅಡ್ವಟೈಜಿಂಗ್ ಕ್ಷೇತ್ರದಲ್ಲೇ ನಾನು ಕಂಡವರೆಲ್ಲರಿಗಿಂತಲೂ ಅವನು ವಯಸ್ಸಾದವನು ಎನ್ನಿಸಿ ನನಗೆ ವಿಚಿತ್ರ ಸಂಕಟವಾಗುತ್ತಿತ್ತು. ಕಾಪಿರೈಟರ್ ಆಗಿದ್ದ ಅವನಿಗೆ ಮತ್ತೆ ಮತ್ತೆ ಕರೆಕ್ಷನ್ ಗಳಿಗೆ ಇವನು ಬರೆದ  ಜಾಹೀರಾತುಗಳು ಬಂದಾಗ, ಫೋನಿನಲ್ಲಿ ಇವನನ್ನು ಏಜೆನ್ಸಿಯವರು ತಡವಾಯಿತೆಂದು  ಗೊಣಗಿದಾಗ, ಮಾತು ಮಾತಿಗೆ ಫ಼॒ ॒ಪದ ಬಳಸಿ ಅವನೊಡನೆ ಮಾತಾಡಿದಾಗ , ಆ ಸ್ಥಳ, ಆ ಕೆಲಸ ಅವನಿಗೆ ತಕ್ಕುದಲ್ಲ ಎನ್ನಿಸುತ್ತಿತ್ತು. ಆದರೆ ಅವನು ಕೋಪ ಗೊಂಡಿದ್ದು, ನಗೆ ಅವನ ಮುಖದಿಂದ ಅಳಿಸಿದ್ದನ್ನು ನಾನು ನೋಡಿರಲಿಲ್ಲ.

ಅಮೋನ್ ಕರ್ ನ ಆಫೀಸಿನಲ್ಲಿ ಬಾಡಿಗೆಗೆ ಇದ್ದವರು ಬದಲಾಗುತ್ತಲೇ ಇರುತ್ತಿದ್ದರು. ಶಿರೀಶನಿಗೆ ಲಿಂಟಾಸ್ ನಲ್ಲಿ ಕೆಲಸ ಸಿಕ್ಕಿತೆಂದು ಹೋದರೆ, ನಿತಿನ್ ತಾನು ಕೆಲಸ ಮಾಡುತ್ತಿದ್ದ  ಯಾವುದೋ ಏಜೆನ್ಸಿಯ ಕೈಲ್ಲಿದ್ದ ಫಾರ್ಮಸಿಟಿಕಲ್ ಕ್ಲಯಂಟ್ ನ ಲೇಬಲ್ ಆರ್ಡರುಗಳನ್ನು ತಾನು ಎಗರಿಸಿಕೊಂಡು ಒಂದು ಪುಟ್ಟ ಆಫೀಸು ತೆರೆದಿದ್ದ. ಸಾಠೆ ಎಳೆಂಟು ತಿಂಗಳು ಯಾವ ಕೆಲಸದಲ್ಲೂ ನಿಲ್ಲಲಾಗದೆ ಬೇರೆ ದಾರಿಯಿಲ್ಲದೆ  ಅಂಬೆಜೋಗೈ ಗೆ ಮರಳಿದ್ದ. ಆದರೆ ಮರು ದಿನವೇ ಮತ್ತೆ ಅಲ್ಲಿ ಹೊಸ ರಕ್ತ ತುಂಬಿಕೊಳ್ಳುತ್ತಿತ್ತು. ಅಲ್ಲಿ ಪರ್ಮನೆಂಟ್ ಎಂಬವನಂತೆ ಇದ್ದವನೆಂದರೆ ಗೋಪಿ ಪ್ರಸಾದ್.ಆಗ ಕೇವಲ ೨೫ ವರ್ಶದವನಾಗಿದ್ದ ನನಗೂ ಗೋಪಿ ಪ್ರಸಾದನಿಗೂ ವಯಸ್ಸಿನಲ್ಲಿ ಅಷ್ಟೊಂದು ಅಂತರವಿದ್ದರೂ ಅವನು ಅದೇನೋ ಸಹಜವಾಗಿಂಬಂತೆ ನನಗೆ ಆತ್ಮೀಯನಾಗಿಬಿಟ್ಟಿದ್ದ.

ಟೇಬಲ್ ನಂಬರ್ ೪ ರಲ್ಲಿ ಕೂರುತ್ತಿದ್ದ ಅವನ ಟೇಬಲ್ ಮೆಲೆ ಎದ್ದು ಕಾಣುತ್ತಿದ್ದುದು ಒಂದು ದೊಡ್ಡ ಬಿಳಿಯ ಪಿಂಗಾಣಿ ಕಪ್ ಮತ್ತು ಹಳೆಯದೊಂದು ಟೈಪ್ ರೈಟರ್. ಸಹಜವಾಗಿ ದೊಡ್ಡದಿದ್ದ ಆ ಪಿಂಗಾಣಿ ಕಪ್ಪು ಯಾರೋ ತನ್ನ ಅಭ್ಯಾಸ ಕಂಡು ಉಡುಗೊರೆಯಾಗಿ ಕೊಟ್ಟದ್ದೆಂದು ಹೇಳುತ್ತಿದ್ದ,  ಯಾವಾಗಲೂ  ಚಹಾ ಆಗಲೀ, ಕಾಫಿ ಆಗಲೀ ಅವನು ೨ ಗ್ಲಾಸು ಆರ್ಡರ್ ಮಾಡುತ್ತಿದ್ದ.
ವರ್ಷಗಳೇ ತುಂಬ ಕಷ್ಟಪಟ್ಟು ವಿರಾರ್ ನಲ್ಲಿ ಒಂದು ರೂಮು, ಬಾತ್ ರೂಮಿನ ಮನೆ ಮಾಡಿದ್ದ ಅವನಿಗೆ ಮದುವೆಯಾಗಿರಲಿಲ್ಲ. ಎಲ್ಲರೂ ಮಧ್ಯಾಹ್ನ ತಮ್ಮತಮ್ಮ ಡಬ್ಬಗಳನ್ನು ತೆಗೆದಾಗ ಇವನು ಎದ್ದು ಹತ್ತಿರವೇ ಇದ್ದ ಗುರುಪ್ರಸಾದದಲ್ಲಿ ಇಡ್ಲಿ ಸಾಂಬಾರನ್ನೋ, ಐಡಿಯಲ್ ಕೆಫೆಯಲ್ಲಿ ಪಾರ್ಸಿ ಧನ್ ಸಕ್ ಅನ್ನೋ ಅಥವಾ ಲೈಟ್ ಆಫ್ ಏಶಿಯಾ ದಲ್ಲಿ ಚಹಾ ಆಮ್ಲೆಟ್ ನ್ನೋ ತಿನ್ನುತ್ತಿದ್ದ. ನಾನು ಆ ಸಮಯದಲ್ಲಿ ಅಲ್ಲಿದ್ದರೆ  ನನ್ನನ್ನೂ ಜೊತೆಗೆ ಎಳೆದುಕೊಂಡು ಹೋಗುತ್ತಿದ್ದ.  ಶುಕ್ರವಾರ ಸಂಜೆಗಳು ನಾವಿಬ್ಬರೂ ಮೊಕಾಂಬೋಗೆ ಹೋಗಿ ಬಿಯರ್ ಕುಡಿಯುವ ಅಭ್ಯಾಸ ನಿಧಾನವಾಗಿ ಆಗಿತ್ತು. ಆದರೆ ನಮಗೆ ಯಾವಾಗಲೂ ಸರ್ವ್ ಮಾಡುತ್ತಿದ್ದ ಹರಿದ ಕಾಲರಿನ ಮುದುಕ ವೇಟರ್ ಜಾನ್ ನನ್ನು ನ್ಡಿದಾಗ ಟೇಬಲ್ ಸ್ಪೇಸಿನಲ್ಲಿ ಕೆಲಸ ಮಾಡುವ ಮುದುಕರನ್ನು ನೋಡಿದಾಗ ಅಗುವಂತೆಯೇ ಸಂಕಟವಾಗುತ್ತಿತ್ತು.

ಗೋಪಿ ಪ್ರಸಾದ್ ಬಿಡುವಿನ ವೇಳೆಯಲ್ಲಿ ಏಶಿಯಾಟಿಕ್ ಲೈಬ್ರರಿಗೆ ಹೋಗಿ ಧೂಳು ತುಂಬಿದ ಓಬಿರಾಯನ ಕಾಲದ ಬುಕ್ ಶೆಲ್ಫುಗಳ ನಡುವೆ ಇದ್ದ ಬೃಹದಾಕಾರದ ಟೇಬಲ್ ಮೇಲೆ ಕೋಲಿಗೆ ಸಿಕ್ಕಿಸಿ ಇಟ್ಟಿರುತ್ತಿದ್ದ ನ್ಯೂ ಯಾರ್ಕ್ ಟೈಮ್ಸ್, ಶಿಕಾಗೊ ಟ್ರಿಬ್ಯೂನ್ ಗಳನ್ನು ಓದುತ್ತಿದ್ದ.  ಪ್ರತಿ ಗುರುವಾರ ಸಂಜೆ ಅಲ್ಕೊಹಾಲಿಕ್ಸ್ ಅನಾನಿಮಸ್ ನಲ್ಲಿ ವಾಲಂಟಿಯರ್ ಕೆಲಸಕ್ಕೆ ಹೋಗುತ್ತಿದ್ದ ಗೋಪಿ , ತನ್ನ ಬಗ್ಗೆ ಏನೂ ಹೆಚ್ಚಿಗೆ ಹೇಳಿ ಕೊಳ್ಳುತ್ತಿರಲಿಲ್ಲ. ಕ್ರಿಸ್ಚಿಯನ್ ಆದವನ ಹೆಸರು ಗೋಪಿ ಹೇಗೆ? ’ನಂಗೂ ಗೊತ್ತಿಲ್ಲ. ಚಿಕ್ಕೋನಿಂದ ನನ್ನನ್ನು ಎಲ್ಲರೂ ಹಾಗೇ ಕರೆಯುತ್ತಿದ್ದರು’ ಎಂದು ನಕ್ಕುಬಿಡುತ್ತಿದ್ದ. ತುಂಬಾ ಶಿಷ್ಟ ನಡುವಳಿಕೆಯಿದ್ದ ಅವನನ್ನು ಯಾವ ವೈಯ್ಯಕ್ತಿಕ ಪ್ರಶ್ನೆ ಗಳನ್ನು ಕೇಳುವುದೂ ಸಾಧ್ಯವಿರಲಿಲ್ಲ. ಪ್ರತಿ ತಿಂಗಳೂ ಒಂದನೇ ತಾರೀಕು ಸರಿಯಾಗಿ ಬಾಡಿಗೆ ಕೊಡುತ್ತಿದ್ದ ಅವನು ಅಮೋನ್ ಕರ್ ಗೆ ಅಚ್ಚುಮೆಚ್ಚು.

ಅಚ್ಚರಿಯೆಂದರೆ ಅಷ್ಟೊಂದು ಒಬ್ಬಂಟಿಯಾಗಿದ್ದ ಅವನನ್ನು ಭೇಟಿಯಾಗಲು ವಿಚಿತ್ರ ವ್ಯಕ್ತಿಗಳು ಬರುತ್ತಿದ್ದರು.  ಜೆಜೆ ಸ್ಕೂಲ್ ಅಫ್ ಆರ್ಟಿನಲ್ಲಿ ಓದುತ್ತಿದ್ದ,ಕಿವಿ ಉದ್ದಕ್ಕೂ ಬೆಳ್ಳಿ ರಿಂಗು ಗಳನ್ನು ಧರಿಸಿದ್ದ  ಫಿಲಿಪೀನ್ಸ್ ಹುಡುಗಿ ಸ್ಟೆಲ್ಲ. ಕೆಳಗೆ ಬಂದು ಕಾರು ನಿಲ್ಲಿಸಿ  ಫೋನ್ ಮಾಡಿ ಕರೆಯುತ್ತಿದ್ದ ಸ್ಮಾರ್ಟ್ ಎಡ್ವಟೈಜಿಂಗಿನ ಒಡತಿ ೪೫ ವರ್ಷದ ನಿವೇದಿತಾ ಕಂಟ್ರಾಕ್ಟರ್. ಎದುರು ಆಫೀಸಿನ ಥಳುಕಿನ  ರೆಸೆಪ್ಶನಿಸ್ಟ್ ರೀಟಾ. ಆಗಾಗ ಚಿಕ್ಕ ಪುಟ್ಟ ಪೋಸ್ಟರುಗಳಿಗೆ ಕಾಪಿ ಬರೆಸಿಕೊಳ್ಳುತ್ತಿದ್ದ ಫ್ರಾಂಕ್.  ಎಲ್ಲರೂ ಗೋಪಿಯಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಬರುತ್ತಿದ್ದರೆಂದು ಎಷ್ಟೋ ವರ್ಷದ ಒಡನಾಟದ ನಂತರ ನನಗೆ ತಿಳಿಯಿತು.

ಸ್ಟೆಲ್ಲ ತಾನು ಚುಚ್ಚ್ಚಿಸಿ ಕೊಂಡ ಕಿವಿ ಕೀವಾಗಿ ತೊಂದರೆ ಕೊಟ್ಟದ್ದರಿಂದ ಹಿಡಿದು ತನ್ನ ಬಾಯ್ ಫ಼್ರೆಂಡ್ ಡ್ರಗ್ಸ್ ತಗೊಳ್ಳುತ್ತಾನೆಂದು  ಬಂದಿರುವ ಅನುಮಾನದ ವರೆಗೂ ಎಲ್ಲಾಗೋಪಿಗೆ  ಹೇಳುತ್ತಿದ್ದಳು. ಅವಳಿಗೆ ವಿಪರೀತ ಜ್ವರ ಬಂದಾಗ  ಡಾಕ್ಟರ್ ಹತ್ತಿರ ಕರೆದುಕೊಂದು ಹೋದವನೂ ಅವನೇ. ಊರಿಂದ ದುಡ್ಡು ಬರುವುದು ತಡವಾದಾಗ ಸಾಲ ಕೊಡುತ್ತಿದ್ದವನೂ ಅವನೇ.  ಊರಿಗೆ ರಜಕ್ಕೆಂದು ಹೋದಾಗ ತನ್ನ ಮೂಲೆಯಲ್ಲಿ ಅವಳ ಆರ್ಟ್ ಮಟೀರಿಯಲ್ ಗಳನ್ನು ಇಟ್ಟುಕೊಳ್ಳುತ್ತಿದ್ದವನೂ ಅವನೇ.
ಅಲ್ಕಾನ್ನ ನೋಡಲು ಬಂದ ಹುಡುಗ ’ತುಂಬಾ ಕಪ್ಪು, ಬೇಡ’ ಎಂದಿದ್ದಿರಬಹುದು,  ನಿವೇದಿತಾಳ ಗಂಡನ ಕುಡಿತ ಹೆಚ್ಚಾಗಿದ್ದು, ಡಿವೋರ್ಸ್ ಪೇಪರ್ಸ್ ಫ಼ೈಲ್ ಮಾಡಿರುವ ಸಂಗತಿ ಇರಬಹುದು, ಹೋದ ಸಲ ಅಫೀಸಿನ ನ್ಯೂ ಇಯರ್ ಪಾರ್ಟಿಗೆ ದುಡ್ಡಿಲ್ಲವೆಂದು ನನ್ನ ಹಣದಲ್ಲೇ ಬಿಯರ್ ತರಿಸಿದ ಅಮೋನ್ ಕರ್   ದುಡ್ಡು ಇನ್ನೂ ತಿರುಗಿ ಕೊಟ್ಟಿಲ್ಲವೆಂಬ ವಿಷಯವಿರಹುದು ಎಲ್ಲಾ ಗೋಪಿಯ ಸೇಫ಼್ ವಾಲ್ಟಿನೊಳಗೆ ಹೋಗುತ್ತಿತ್ತು. ಅದೆಂದೂ ಹೊರಬರುವುದಿಲ್ಲವೆಂಬ ಧೈರ್ಯ ಎಲ್ಲರಿಗೂ ಇತ್ತು. ಅದರಿಂದ ಅವರಿಗೆ ವಿಚಿತ್ರ ಸಮಾಧಾನ ಸಿಗುತ್ತಿತ್ತು. ಆದರೆ ಅವನು ಎಂದೂ  ಬೇರೆಯವರ ಎದುರಿಗೆ ತೆರೆದುಕೊಳ್ಳುತ್ತಿರಲ್ಲ, ಎಂದೂ ಸಹಾಯ ತೆಗೆದು ಕೊಳ್ಳುತ್ತಿರಲಿಲ್ಲ. . ಒಂದು ಸಲ ವಾರವೆಲ್ಲಾ ಅಫೀಸಿಗೆ ಬರದವನು ಮತ್ತೆ ಬಂದಾಗ ತುಂಬಾ ಇಳಿದು ಹೋಗಿದ್ದ. ಕೇಳಿದಾಗ ವೈರಲ್ ಫೀವರ್ ನಿಂದ ತುಂಬಾ ಮಲಗಿಬಿಟ್ಟಿದ್ದನ್ನು ಹೇಳಿದ್ದ. ನನಗ್ಯಾಕೆ ಹೇಳಲಿಲ್ಲ ಎಂದು ಜೋರುಮಾಡಿದಾಗ ’ಇಟ್ಸ್ ಓಕೆ, ನಥಿಂಗ್ ಸೀರಿಯಸ್ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದ. ಇದು ನನ್ನಲ್ಲಿ ವಿಚಿತ್ರ ಕಿರಿಕಿರಿಯನ್ನೂ ಹುಟ್ಟಿಸುತ್ತಿತ್ತು.

ನಾನು ಮುಂಬೈಯ್ಯಿಂದ ಹೊರಟು ಬಂದದಿನ  ವಿದಾಯ ಹೇಳಲು ಹೋದಾಗ ಒಂದು ವಿಚಿತ್ರ ಘಟನೆ ನಡೆದಿತ್ತು. ನರೆ ಕೂದಲಿನ ಬಾಬ್ ಕಟ್ಟು, ಪುಟ್ಟ ಹೂಗಳಿದ್ದ ಮಾಸಿದ ಫ್ರಾಕು, ಕೈಯ್ಯಲ್ಲೊಂದು ಚೀಲ ಹಿಡಿದ ವ್ರುದ್ಧೆಯೊಬ್ಬಳು ಗೋಪಿಗಾಗಿ ಕೇಳಿಕೊಂಡು ಆಫೀಸಿಗೆ ಬಂದಿದ್ದಳು. ಹೊರಗಿನಿಂದ ಅದೇ ಬಂದ ಗೋಪಿ ಟೇಬಲ್ ಮುಂದೆ ಕುರ್ಚಿಯಲ್ಲಿ ಕೂತಿದ್ದ ಅವಳನ್ನು ನೋಡಿದ ತಕ್ಷಣ ಅಧೀರನಾದ. ಅವನ ಮುಖ ಬಿಳಿಚಿಕೊಂದು ಕೈ ಕಾಲು ಸಣ್ಣಗೆ ನಡುಗತೊಡಗಿದುವು. ಆ ಕ್ಷಣ ಕೈಯ್ಯಲ್ಲಿದ್ದ ಬ್ರೀಫ಼್ ಕೇಸ್ ಅಲ್ಲೇ ಕುಕ್ಕಿ ಬಿರಬಿರನೆ ಹೊರಗೆ ನಡೆದಿದ್ದ. ಮೊದಲಬಾರಿ ಗೋಪಿ ಕೋಪ ಗೊಂಡಿದ್ದನ್ನು ನಾನು ನೋಡಿದ್ದೆ. ಆದರೆ ಅವನನ್ನು ಕಾರಣ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ.

ಅಂದು  ನಾನು ರುಸ್ತ್ಂ ಬಿಲ್ದಿಂಗಿನಿಂದ ಹೊರಗೆ ಬಂದು ಮುಂಬೈಯ್ಯಲ್ಲಿ ನನಗೆ  ಅಷ್ಟೊಂದು ಆತ್ಮೀಯವಾಗಿದ್ದ, ನಿರ್ಮಾಣದ ನಂತರ ಎಂದೂ ಸುಣ್ಣಬಣ್ಣ ಕಾಣದ ಆ ಕಟ್ಟಡದತ್ತ ಸ್ವಲ್ಪ ಹೊತ್ತು ನಿಂತು ನೋಡಿದೆ. ಮುನಿಸಿಪಾಲಿಟಿಯವರು ಅದೇ ಅಪಾಯದಲ್ಲಿರುವ ಕಟ್ಟಡವೆಂದು ಅದಕ್ಕೆ ಚೀಟಿ ಅಂಟಿಸಿ ಹೋಗಿದ್ದರಿಂದ ಕೆಲಸಗಾರರು ಅದರ ಮುಂಬಗಿಲಿಗೆ ಗಟ್ಟಿ ಮರದ ತೊಲೆಗಳನ್ನು ಆಧಾರ ಸ್ಥ್ಂಭಗಳಾಗಿ ನಿಲ್ಲಿಸಲು ಒಂದು ಕಡೆ ಪೇರಿಸುತ್ತಿದ್ದರು. ಎಲ್ಲೆಲ್ಲೂ ಧೂಳು ಏಳುತ್ತಿತ್ತು.

ನಾನು ಬೆಂಗಳೂರಿಗೆ ಬಂದು ಇಲ್ಲಿ ತಳ ಊರುವ ಜಂಜಡಗಳಲ್ಲಿ ಗೋಪಿ ಮನಸ್ಸಿನಿಂದ ಮರೆಯಾಗಿದ್ದ. ಮತ್ತೆ ನಾನವನಿಗೆ ಫೋನೂ ಮಾಡಿರಲಿಲ್ಲ.  ಇವತ್ತು ಪೇಪರಿನಲ್ಲಿ ಓದಿದ ನ್ಯೂಸ್ ಮನಸ್ಸು ಕಲಕಿತ್ತು.  ಬೆಳಿಗ್ಗೆ ೧೧ ಗಂಟೆಗೆ ಕಟ್ಟಡ ಕುಸಿದಿತ್ತು. ಪೀಕ್ ಅವರ್. ಏನೆಲ್ಲಾ ಆಗಿರಬಹುದು. ಎಷ್ಟು ಜನ ಇದ್ದರೋ ಒಳಗೆ.  ಫೋನ್ ಪುಸ್ತಕ ತೆರೆದು ಮುಂಬೈ ನಂಬರುಗಳನ್ನು ತೆಗೆದಿಟ್ಟುಕೊಂದೆ.  ಆ ಕ್ಷಣದಲ್ಲಿ ಮರದ ತೊಲೆಗಳ ಆಧಾರದ ಮೇಲೆ ನಿಂತಿರುವ ರುಸ್ತುಂ ಬಿಲ್ದಿಂಗ್ , ಅಲ್ಲಿನ ಅಮೋನ್ಕರ್ ಆಫ್ಹೀಸು, ಬಿಲ್ದಿಂಗ್ ತುಂಬಾ ಇರುವ ನೂರಾರು ಟೇಬಲ್ ಸ್ಪೇಸುಗಳು,ಅಲ್ಲಿ ದಿನವೆಲ್ಲಾ ಕೂತು  ತಲೆಬಗ್ಗಿಸಿ ಕೆಲಸ ಮಾಡುವ ತರುಣರು,  ಎಲ್ಲರ ನಡುವೆ ಮೊದಲ ಮಹಡಿಯ  ಟೇಬಲ್ ೪ ರ ಲ್ಲಿ ಹಳೆಯ ಆಲದ ಮರದಂತೆ ಕೂತಿರುವ ಗೋಪಿ, ಅವನ ಮುಂದಿರುತ್ತಿದ್ದ ದೊಡ್ಡ ಪಿಂಗಾಣಿ ಬಟ್ಟಲು,  ಅವನನ್ನು ಭೇಟಿಯಾಗಲು ಬರುತ್ತಿದ್ದ ನೊಂದ ಎಳೆ ಮನಸ್ಸುಗಳು ಎಲ್ಲವೂ ಕಣ್ಣಿಗೆ ಕಟ್ಟಿತು॒ ॒ಅದೇಕೋ ಆ ಚಿತ್ರವನ್ನು ಕದಡುವ ಮನಸ್ಸಿಲ್ಲದೆ ಹಾಗೇ ಫೋನ್ ಕೆಳಗಿಟ್ಟೆ.

-ಉಮಾ ರಾವ್

ಚಿತ್ರ: ಸೃಜನ ಕಾಯ್ಕಿಣಿ
(ಪ್ರಜಾವಾಣಿಯಲ್ಲಿ ಪ್ರಕಟಿತ)


Monday, March 24, 2014

ಪ್ರೀತಿಯ ಚಿತ್ತಾಲರಿಗೆ.



ನಿಮ್ಮನ್ನು  ಎಷ್ಟೊಂದು ಮಿಸ್ ಮಾಡ್ತೀನಿ.
ಹೌದು. ಸೂರ್ಯ ಮುಳುಗುತ್ತಿರುವಾಗ ನನ್ನ ಅಣುಶಕ್ತಿ ನಗರದ  ಹದಿನಾರನೇ ಮಹಡಿಯ ಕಿಟಕಿಗಳಿಂದ ರುಯ್ಯನೆ  ನುಗ್ಗುತ್ತಿದ್ದ ಮಾನ್ಸೂನಿನ ಗಾಳಿ ಸೃಷ್ಟಿಸಿದ  ಮ್ಲಾನತೆಯ  ನಡುವೆ
ಇದ್ದಕ್ಕಿದ್ದಂತೆ ಕಿಣಿಕಿಣಿಸುತ್ತಾ ಬರುತ್ತಿದ್ದ  ನಿಮ್ಮ ಲವಲವಿಕೆಯ ಕರೆಗಳನ್ನು ಮಿಸ್
ಮಾಡ್ತೀನಿ. ನಿಮ್ಮ
ಅಕ್ಕರೆಯನ್ನು, ಜೋಕುಗಳನ್ನು,
ನೀವು ಬರೆಯುತ್ತಿದ್ದ ಅಂದಿನ ಕತೆಯ ಬಗ್ಗೆ ಹೇಳುವಾಗ ನಿಮಗಿರುತ್ತಿದ್ದ  ಉತ್ಸಾಹವನ್ನು ಮಿಸ್ ಮಾಡ್ತ್ತೀನಿ. ಪ್ರತಿ ಪುಸ್ತಕ ಬಂದೊಡನೆ ನಿಮ್ಮ ನಲ್ಮೆಯ
ಸಹಿಯೊಂದಿಗೆ ತಲಪುತ್ತಿದ್ದ ಪ್ರತಿ,
ನೀವಷ್ಟು ದೊಡ್ಡ ಬರಹಗಾರರಾಗಿದ್ದೂ  ಆಗಲೇ ಬರೆಯಲು ಪ್ರಾರಂಭ ಮಾಡಿದ್ದ ನನ್ನ ಕತೆಗಳಿಗೆ ನೀವು ಅಷ್ಟೊಂದು
ಅಸ್ಥೆಯಿಂದ ಬರೆದು ಕಳಿಸುತ್ತಿದ್ದ  ದೀರ್ಘ ಟಿಪ್ಪಣಿಗಳನ್ನು  ಕಳಕಳಿಯಿಂದ ನೆನೆಸಿಕೊಳ್ತೀನಿ.

 ಪ್ರತಿ ಚಟುವಟಿಕೆಯಲ್ಲೂ ನಿಮ್ಮ ಶಿಸ್ತು, ನಾವು ನಿಮ್ಮ ಮನೆಗೆ ಬಂದಾಗ
ತೊಡುತ್ತಿದ್ದ ಒಂದು ಸುಕ್ಕೂ ಇಲ್ಲದ ಇಸ್ತ್ರಿ ಶರಟು, ಕೊಡುತ್ತಿದ್ದ ಕುರುಕುರು ಚಕ್ಕುಲಿ,
ಸುಂದರ ಉದ್ದದ ಗ್ಲಾಸುಗಳಲ್ಲಿ ಬರುತ್ತಿದ್ದ
ಚಿಲ್ಲ್ಡ್ ಬಿಯರ್ ಎಲ್ಲವೂ ಪರ್ಫ಼ೆಕ್ಟ್ ಆಗಿರಬೇಕು ನಿಮಗೆ. ಆಗ ನೀವು ಓದಿ
ತೋರಿಸುತ್ತಿದ್ದ ನಿಮ್ಮ ಲೇಟೆಸ್ಟ್ ಬರಹದ  ತುಣುಕುಗಳು,
ನಮ್ಮೆಲ್ಲರ  ಪ್ರತಿಕ್ರಿಯೆಗಾಗಿ
ಪುಟ್ಟ ಮಗುವಿನಂತೆ ಕಾಯುತ್ತಿದ್ದ ಕಾತರ ಎಲ್ಲವನ್ನೂ ಮಿಸ್ ಮಾಡ್ತೀನಿ. ನಾನು ’ಚೆನ್ನಾಗಿದೆ’ ಎಂದರೆ
ನಾನು ಹೇಳುವಂತೆ  ’ತುಂಂಂಂಂಂಂಂಬಾ ಚೆನ್ನಾಗಿದೆಯಾ?’ ಎಂದು ನೀವು ತಮಾಷೆ ಮಾಡುತ್ತಿದ್ದುದು,
ಕೊಂಕಣಿ ಭಾಷೆಯ ರಾಗದಲ್ಲಿ ನೀವು ಆಡುತ್ತಿದ್ದ ಇಂಗ್ಲಿಶ್ ಮತ್ತು ಕನ್ನಡದ ಮಾತುಗಳು
ಇನ್ನೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿವೆಅ॒ದನ್ನು  ಎಷ್ಟೊಂದು ಮಿಸ್ ಮಾಡ್ತೀನಿ.


ನಮಗೆ ಮುಂಬೈ ಎಂದರೆ ನೀವಿಲ್ಲದಿಲ್ಲ. ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್, ಅದರೆದುರು ಕಪ್ಪು
ಬಂಡೆಗಳ ನಡುವೆ ಭೋರ್ಗರೆಯುತ್ತಿದ್ದ ಸಮುದ್ರ. ಬಾಲ್ಕನಿಯಲ್ಲಿದ್ದ ನಿಮ್ಮ ಈಸಿಚೇರ್.
ಅಷ್ಟೊಂದು ಸುಂದರವಾಗಿ ಅಲಂಕರಿಸಿದ್ದ ಅಚ್ಚುಕಟ್ಟಾದ ನಿಮ್ಮ ಪ್ರೀತಿಯ  ಫ಼್ಲ್ಯಾಟ್..
ಬ್ರಾಹ್ಮೀ ಮುಹೂರ್ತದಲ್ಲಿ ನೀವು ತಪ್ಪದೆ ಎದ್ದು ಬರೆಯುವಾಗ ಕೂಡುತ್ತಿದ್ದ ಕುರ್ಚಿ, ಅದರಲ್ಲಿ
ಮುತ್ತು ಪೋಣಿಸಿದಂತೆ ನೀಟಾದ ನೋಟ್ ಬುಕ್ಕಿನಲ್ಲಿ ಹರಿತವಾದ ಪೆನ್ಸಿಲ್ಲಿನಿಂದ ತೊಡೆಮೇಲೆ ನೋಟ್ ಬುಕ್
ಇಟ್ಟುಕೊಂಡು ಬರೆಯುತ್ತಿದ್ದ ನೀವು. ಈ ಬೆಳಗಿನ ಚಿತ್ರ ನಮ್ಮ ಮುಂದೆ ಬಿಡಿಸಿದವರು ನೀವೇ.

ಕರ್ನಾಟಕ ಸಂಘದಲ್ಲಿ, ಮೈಸೂರು ಎಸ್ಸೋಸಿಯೆಶನ್ನಿನಲ್ಲಿ ಪ್ರತಿ ಕನ್ನಡ ಕಾರ್ಯಕ್ರಮಕ್ಕೂ
ತಪ್ಪದೆ ಬರುತ್ತಿದ್ದ ನೀವು. ನಿಮ್ಮ ಜೇಬಿನಲ್ಲಿ ಯಾವಾಗಲೂ ಇರುತ್ತಿದ್ದ ಹರ್ಷಿ  ಚಾಕೊಲೇಟ್ ಗಳು. ಅಕಸ್ಮಾತ್ ಶುಗರ್ ಕಡಿಮೆಯಾದರೆ?॒ ಮತ್ತೆ ಶಿಸ್ತು.

ನಿಮ್ಮ ಮೊಮ್ಮಗಳು ವೈಶಾಲಿಯ ಬಗ್ಗೆ ನೀವು ಪುಂಖಾನುಪುಂಖವಾಗಿ ಬರೆದ ಮುದ್ದಿನ ಪದ್ಯಗಳೂ,
ಫೋನಿನಲ್ಲಿ ವಿವರಿಸುತ್ತಿದ್ದ ಅಭಿನಂದನನ ಆಟಗಳು, ಮಾಲತಿ ಅವರನ್ನು ಪ್ರತಿವರ್ಷ ತವರೂರಿಗೆ
ಕರೆದುಕೊಂಡು ಹೋಗುತ್ತಿದ್ದ ಅಸ್ಥೆ, ಒಂದು ಚಿತ್ತು ಕಾಟು ಇಲ್ಲದ ನಿಮ್ಮ ಮಾನ್ಯುಸ್ಕ್ರಿಪ್ಟ್ ಗಳು ..ಎಲ್ಲವೂ ಹಾಗೇ ಇದೆ ॒ನಮ್ಮ ಮನದಲ್ಲಿರುವ ಬ್ಯಾಂಡ್ ಸ್ಟ್ಯಾಂಡ್
ಅಪಾರ್ಟ್ ಮೆಂಟಿನಲ್ಲಿ.

ಇಲ್ಲಿ ಎಲ್ಲರಿಗೂ ಪರಿಚಯ ಅದ್ಭುತ ಸಾಹಿತಿ ಯಶವಂತ ಚಿತ್ತಾಲರು. ಅವರು ಬರೆದ ಹೊಸ
ರೀತಿಯ , ನಗರ ಪ್ರಜ್ನೆ ಒಸರುವ ಕತೆ, ಕಾದಂಬರಿಗಳು. ಅಪರೂಪಕ್ಕೆ ಸಮಾರಂಭಗಳಲ್ಲಿ
ಟಿಪ್ ಟಾಪಾಗಿ  ಪ್ರತ್ಯಕ್ಷರಾಗುತ್ತಿದ್ದ,
ಕನ್ನಡಿಗರ ಪ್ರೀತಿಗಾಗಿ ಹಂಬಲಿಸುತ್ತಿದ್ದ ಈ ಸರಳ, ಸಂಪನ್ನ ವ್ಯಕ್ತಿ.

ಐ ಮಿಸ್ ಯೂ ಎಂದು ಹೇಳುವಾಗ ವಿಚಿತ್ರ  ಸಂಕಟ, ಅಶ್ಚರ್ಯ ಎರಡೂ ಆಗುತ್ತದೆ ॒ಏಕೆಂದರೆ
ನೀವು ಒಂದು ನಡುರಾತ್ರಿ ಎಲ್ಲಾ ಬಿಟ್ಟು ಸದ್ದಿಲ್ಲದೆ ನಿಮ್ಮ ಪ್ರೀತಿಯ ಬ್ಯಾಂಡ್ ಸ್ಟ್ಯಾಂಡ್ ಮನೆಯಿಂದ 
ನಿಮ್ಮೆದುರಿನ ಕಡಲಿನ ಕತ್ತಲೊಳಗೆ  ನಡೆದು ಬಿಟ್ಟಿರಿ. ಆದರೆ ನೀವು ನನ್ನ,  ನಿಮ್ಮೆಲ್ಲಾ
ಆಪ್ತ ಮುಂಬೈ  ಗೆಳೆಯರ ಬಳಗದ ಹೃದಯಗಳಲ್ಲಿ ಹಾಗೇ ನಗುತ್ತಿದ್ದೀರಿಟಿ॒ಪಿಕಲ್ ಕೊಂಕಣಿ ಶೈಲಿಯಲ್ಲಿ
’ಜೋಕಾ,,,?!’ ಎಂದು ಕೇಳುತ್ತಾ!


ಚಿತ್ರ: ಸ್ಮಿತಾ ಕಾಯ್ಕಿಣಿ

Monday, March 17, 2014

ತಿಮ್ಮಯ್ಯನೂ, ರಾಮಾಗಳೂ,ಲಿಂಗಲೆಕ್ಕಾಚಾರಗಳೂ...








ತುಮಕೂರು

ತುಮಕೂರು ಆಗಿನ್ನೂ ಪುಟ್ಟ ಊರು. ನನಗಾಗ ಆರೇಳು ವರ್ಷಗಳಿರಬಹುದು. ಅಲ್ಲಿ ನಮ್ಮದು ದೊಡ್ಡ ಮನೆ. ವಿಶಾಲವಾದ ಕಾಂಪೌಂಡು. ಹತ್ತಾರು ಮರಗಳು. ಬಸರಿ, ಮಾವು, ಹಲಸು, ನೇರಿಳೆ, ನೆಲ್ಲಿ, ಎಲಚಿ, ಹೀಗೆ. ಜೊತೆಗೆ ಮನೆಯ ಸುತ್ತ ಹೂಗಿಡಗಳು. ನಂದಿಬಟ್ಟಲು, ದಾಸವಾಳ, ಕಣಿಗಲೆ, ಮಲ್ಲಿಗೆ, ಮೊಲ್ಲೆ, ಸ್ಫಟಿಕ, ಜಾಜಿ, ಸೇವಂತಿಗೆ. ಒಂದು ಮೂಲೆಯಲ್ಲಿ ಗೋರಂಟಿ ಮತ್ತು ಸಂಪಿಗೆ ಮರಗಳು. ಮನೆಯ ಹಿಂದೆ ಕೊಟ್ಟಿಗೆ. ಅಲ್ಲಿ ಒಂದು ಬಿಳಿ ಹಸು ಪದ್ಮ, ಸೀಮೆ ಹಸು ಲಕ್ಷ್ಮಿ, ಅದರ ಮಗಳು ಕಮಲ. ಕರು ಬಸಣ್ಣ..ಒಂದು ಸೀನೀರಿನ  ಬಾವಿ.

ನಮ್ಮದು ಒಟ್ಟು ಕುಟುಂಬವಾಗಿತ್ತು. ಮನೆ ತುಂಬಾ ಜನ. ಎಲ್ಲ ನೋಡಿಕೊಳ್ಳೋಕೆ ಕೆಲಸದವರು. ಅಡಿಗೆ ಭಟ್ಟರು, ಡ್ರೈವರ್, ಮನೆಗೆಲಸ ಮಾಡುವ ಹೆಂಗಸರು ಗಂಡಸರು. ಗಂಡಾಳು ತಿಮ್ಮಯ್ಯ. ಹತ್ತು ಕಿಮೀ ದೂರವಿದ್ದ ಪಂಡಿತನ ಹಳ್ಳಿಯಿಂದ ಸೈಕಲ್ಲು ತುಳಿದು ಬರುತ್ತಿದ್ದ. ಅವನು ದೊಡ್ಡ ಆಳು. ಕಚ್ಚೆ ಪಂಚೆ, ಕ್ಲೋಸ್ಡ್ ಕಾಲರ್ ಶರಟು, ಹೆಗಲ ಮೇಲೆ ಕೆಂಪು ಬಿಳಿ ಗೀರು ಗೀರು ಟವಲು. ತಲೆಗೆ ಬಿಳಿ ಪೇಟ. ಬಿಸಿಲಿಗೆ ಸುಟ್ಟು ಒರಟಾಗಿದ್ದ ಮುಖದ ಚರ್ಮ. ಎರಡು ಕಿವಿಯಲ್ಲಿ ಹೊಳೆಯುವ ಬಿಳಿ ಕಲ್ಲಿನ ಕಡಕು ಹಾಕುತ್ತಿದ್ದ ಅವನ ನಿಲುವಿನಲ್ಲಿ ಒಂದು ರೀತಿಯ ಗತ್ತಿತ್ತು. ಅದಕ್ಕೆ ಕಾರಣ ಆ ಕಡಕುಗಳು ಎಂಬುದು ನನ್ನ ಅಂದಿನ ಅನಿಸಿಕೆ.

ಇನ್ನು ಲಕ್ಕಿ. ೪೦ ವರ್ಷದ ಕಪ್ಪು ಸುಂದರಿ. ಕಡು ಕೆಂಪು, ನೀಲಿ, ಹಸಿರು ಬಣ್ಣದ ಸಣ್ಣಂಚಿನ ಸೀರೆಗಳು ಉಟ್ಟು ಬರುತ್ತಿದ್ದ ಅವಳ ಕೊರಳಲ್ಲಿದ್ದ ಬೆಳ್ಳಿ ಸರ , ಹವಳದ ಮಣಿ, ಕೈಯ್ಯಲ್ಲಿದ್ದ ಹಸಿರು ಕಪ್ಪು ಗಾಜಿನ ಬಳೆಗಳು, ಬೆಳ್ಳೀ ಕಡಗ, ಮೂಗಿನಲ್ಲಿದ್ದ ಚಿನ್ನದ ಮೂಗುಬಟ್ಟು ಎಲ್ಲಾ ಸೇರಿ ಅವಳ ದೇಹದ ಬಣ್ಣವನ್ನು ಇನ್ನೂ ಕಪ್ಪಾಗಿಸಿ ಅವಳ ಚೆಲುವನ್ನು ಎದ್ದು ಕಾಣುವಂತೆ ಮಾಡುತ್ತಿದ್ದುವು. ಎಲ್ಲರಂತೆ ಅವಳು ರವಿಕೆಗೆ ಗುಂಡಿಗಳ ಬದಲು ಸುಮ್ಮನೆ ಗಂಟು ಹಾಕಿಕೊಳ್ಳುತ್ತಿದ್ದುದು ನೋಡಿ ನನಗೆ ನಾಚಿಕೆಯಾಗುತ್ತಿತ್ತು. ಅವಳ ಕೈಮೇಲೆ ಇದ್ದ ರಂಗ ಎನ್ನುವ ಹಚ್ಚೆ ಅವಳ ಗಂಡನ ಹೆಸರಾಗಿರಲಿಲ್ಲ. ಯಾರದೆಂದು ಒಂದು ದಿನ ನಮ್ಮ ಅಜ್ಜಿ ತಮಾಷೆಯಾಗಿ ಕೇಳಿದಾಗ ಅವಳು ಮುನಿಸಿಕೊಂಡು ಹೋದವಳು ಮಾರನೆಯ ದಿನ ಕೆಲಸಕ್ಕೆ ಬಂದಿರಲಿಲ್ಲ.ಯಾವ ಕಾರಣಕ್ಕೋ ಮದುವೆಯಾಗಿ ಒಂದೆರಡು ವರ್ಷಕ್ಕೇ ಗಂಡನನ್ನು ಬಿಟ್ಟು ಬಂದು ಈಗ ಸುಮಾರು ೧೫ ವರ್ಷದ ತಂಗಿಯ ಮಗಳು ಚಿಕ್ಕಿಯನ್ನು ಸಾಕಿಕೊಂಡಿದ್ದು ಬಿಟ್ಟಿದ್ದಳು. ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಬರುತ್ತಿದ್ದರು.

ಆಗ ಗಂಡಸರು ಮತ್ತು ಹೆಂಗಸರು ಮಾಡುವ ಕೆಲಸ ತುಂಬಾ ಕರಾರುವಾಕ್ಕಾಗಿ ವಿಭಜನೆಯಾಗಿತ್ತು. ಗಂಡಸರ ಬಟ್ಟೆ ತಿಮ್ಮಯ್ಯ ಒಗೆಯಬೇಕು. ಹೆಂಗಸರದು ಲಕ್ಕಿ. ಅಕಸ್ಮಾತ್ ಎಲ್ಲಾ ಒಗೆಯುವ ಬಟ್ಟೆಗಳೂ ಗುಡ್ಡೆ ಬಿದ್ದಿದ್ದರೂ ಯಾರಾದರೂ ಮನೆಯವರೇ ಗಂಡಸರ ಬಟ್ಟೆ ಬೇರೆ ಮಾಡಿ ತಿಮ್ಮಯ್ಯನಿಗೆ ಕೊಡಬೇಕಿತ್ತು. ಅವನು ಅಪ್ಪಿತಪ್ಪಿಯೂ ಹೆಂಗಸರ ಸೀರೆ ಮುಟ್ಟುತ್ತಿರಲಿಲ್ಲ. ಇದರ ಜೊತೆಗೆ ಸೌದೆ ಒಡೆಯುವುದು,ಕಾಂಪೌಂಡು ಗುಡಿಸುವುದು, ಹಸುವಿಗೆ ಮೇವು ಹಾಕುವುದು, ನಮ್ಮಆಲ್ಸೇಶನ್ ನಾಯಿ ಯನ್ನು ತಿರುಗಾಡಿಸುವುದು, ಅಂಗಡಿಗೆ ಹೋಗಿ ಸಾಮಾನು ತರುವುದು,ಚಿಕ್ಕ ಹುಡುಗರನ್ನು ಹೇರ್ ಕಟ್ಟಿಗೆ ಕರೆದುಕೊಂಡು ಹೋಗುವುದು ಇತ್ಯಾದಿ ಕೆಲಸ ಅವನದಾಗಿತ್ತು.

ಅದೇ ಲಕ್ಕಿ ಬೀದಿ ಬಾಗಿಲ ಮೆಟ್ಟಲಿಗೆ ನೀರು ಹಾಕಿ ರಂಗೋಲಿ ಹಾಕುವುದು, ಮುಸುರೆ ಪಾತ್ರೆ ತೊಳೆಯುವುದು, ಹೆಂಗಸರ ಬಟ್ಟೆ ಒಗೆಯುವುದು, ಮನೆ ಗುಡಿಸಿ ಸಾರಿಸುವುದು, ಮುಂತಾದ ಕೆಲಸಗಳನ್ನು ಮಾಡುತ್ತಿದ್ದಳು. ಅವಳೇನಾದರೂ ಕಾರಣದಿಂದ ರಜಾ ಹಾಕಿದರೂ ತಿಮ್ಮಯ್ಯನಿಗೆ ಇವತ್ತು ಇಷ್ಟು ಮನೆ ಗುಡಿಸಿ ಬಿಡು ಅಂತಲೋ, ಬಟ್ಟೆ ಇಷ್ಟು ಹಿಂಡಿ ಹಾಕಿಬಿಡು ಎಂದು ಹೇಳುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಅಂದರೆ ಹೆಣ್ಣು ಗಂಡಿನ ಪಾತ್ರಗಳ ಈ ವಿಭಜನೆಯನ್ನು ಎಲ್ಲರೂ ಪ್ರಶ್ನಿಸದೇ ಒಪ್ಪಿಕೊಂಡಿದ್ದರು.

ಮುಂಬೈ

ನಾನು ಮದುವೆಯಾಗಿ ಮುಂಬೈ ಗೆ ಹೋದಾಗ ರಾಮಾ ಗಳ ಪರಿಚಯವಾದದ್ದು.

೬೦-೭೦ ರ ದಶಕಗಳಲ್ಲಿ ರಾಮಾಗಳು ಮುಂಬೈನ ಕೊಲಾಬಾ ದಿಂದ ದಾದರ್, ಮಾತುಂಗಾ ಸಯಾನ್ ವರೆಗೂ ಹರಡಿಹೋಗಿದ್ದರು. ಹೋದ ಹೊಸತರಲ್ಲಿ ನನ್ನ ಗೆಳತಿ ಫೋನಲ್ಲಿ ಮಾತಾಡುತ್ತಾ ನೋಡು, ಇವತ್ತು ರಾಮಾ ಬರಲೇ ಇಲ್ಲ. ಮನೆ ಕೆಲಸ ಎಲ್ಲಾ ಮಾಡ್ಕೊಳ್ಳೋದರಲ್ಲಿ ಸಾಕಾಗಿ ಹೋಯಿತು ಎಂದಾಗ ಅವಳ ಕೆಲಸದವನ ಹೆಸರು ರಾಮಾ ಅಂದುಕೊಂಡಿದ್ದೆ.  ಆದರೆ ಮುಂಬೈ ಉದ್ದಗಲಕ್ಕೂ ತುಂಬಿಕೊಂಡ ಅಂಥಾ ರಾಮಾಗಳೆಂದು ಕರೆಯಲ್ಪಡುತ್ತಿದ್ದ ಸಾವಿರಾರು ಕೆಲಸದವರು ಮನೆಗಳನ್ನು ಸ್ವಚ್ಚವಾಗಿಟ್ಟು, ಗೃಹಿಣಿಯಯರಿಗೆ ಮನಶಾಂತಿ ನೀಡುತ್ತಿದ್ದರು ಎಂದು ಆಮೇಲೆ ತಿಳಿಯಿತು. ತುಮಕೂರಿನಿಂದ ಬಂದ ನನಗೆ ಈ ಗಂಡಸರು ಯಾವ ಹಿಂಜರಿಕೆಯೂ ಇಲ್ಲದೆ ಸೀರೆ ಒಗೆಯುವುದರಿಂದ ಅಡುಗೆ ಮಾಡುವವರೆಗೂ ಎಲ್ಲಾ ಕೆಲಸ ಮಾಡುವುದು ನೋಡಿ ಅಚ್ಚರಿ ಯಾಗಿತ್ತು.

ಬಿಳಿಯ ಶರಟು, ದೊಗಳೆ ಪೈಜಾಮಾ ಅಥವಾ ಧೋತಿ ತೊಟ್ಟು ಬರುತ್ತಿದ್ದ ಅವರು ತೆಳ್ಳಗೆ ಎತ್ತರಕ್ಕಿರುತ್ತಿದ್ದರು. ಹೆಚ್ಚು ಮಾತಿನವರಲ್ಲ. ಎಲ್ಲರ ಮನೆಯಲ್ಲೂ ಅವರನ್ನು ರಾಮಾ ಯೆ ಕರೋ ರಾಮಾ ವೋ ಕರೋ ಎಂದು ಹೇಳುತ್ತಿದ್ದರು. ತುಂಬಾ ನಂಬಿಕಸ್ಥರೆಂದೂ, ಅಚ್ಚುಕಟ್ಟು ಕೆಲಸ ವಂತರೆಂದೂ, ಕೆಲಸಕ್ಕೆ ಚಕ್ಕರ್ ಹೊಡೆಯದವರೆಂದೂ ಪ್ರಸಿದ್ಧರಾಗಿದ್ದರು. ಅವರಿಗೆ ಆ ಹೆಸರು ಏಕೆ ಬಂತೆಂದು ಯಾರಿಗೂ ಗೊತ್ತಿರಲಿಲ್ಲ. ರಾಜ್ ಕಪೂರ್ ನ ಪ್ರಸಿದ್ದ ಸಿನಿಮಾ ಹಾಡು ರಾಮಯ್ಯಾ ವಸ್ತಾವಯ್ಯಾ ಮೂಲಕ ಅವರು ಅಮರರಾಗಿದ್ದಾರೆ!

ನನಗೆ ತಿಳಿದು ಬಂದ ಪ್ರಕಾರ, ಈ ರಾಮಾಗಳು ಒಂದು ಕಾಲದಲ್ಲಿ ಆಂಧ್ರದ ಭೀಕರ ಬರ ಪ್ರದೇಶಗಳಿಂದ ಹೊಟ್ಟೆ ಪಾಡಿಗಾಗಿ ಬಂದವರಂತೆ. ಇಲ್ಲಿ ಯಾವ ಕೆಲಸ ಮಾಡಲೂ ತಯಾರಿದ್ದ ಅವರು ಬರಬರುತ್ತ ಹೆಚ್ಚು ಮನೆಗಳಲ್ಲಿ ಕೆಲಸ ಹಿಡಿದು ಜನಪ್ರಿಯರಾದರಂತೆ. ಮುಖ್ಯವಾಗಿ ಮುಂಬೈ ನ ಗಡಿಬಿಡಿ ಬದುಕಿಗೆ ತಕ್ಕಂತೆ ಬೆಳಿಗ್ಗೆ ಬಂದು ಪಾತ್ರೆ, ಕಸ, ಬಟ್ಟೆ ಎಲ್ಲಾ ಮಾಡುವುದಲ್ಲದೆ, ಮತ್ತೆ ರಾತ್ರಿ ಎಂಟು ಗಂಟೆಗೆ ಬಂದು ಅಚ್ಚುಕಟ್ಟಾಗಿ ಬಿಸಿ ಬಿಸಿ ರೊಟ್ಟಿ ಮಾಡಿ ಹಾಕಲೂ ತಯಾರಿರುತ್ತಿದ್ದರಂತೆ. ಆ ಕಾಲದಲ್ಲಿ ಹೆಂಗಸರು ಕೆಲಸದವರು ಯಾರೂ ಸಂಜೆ ಕೆಲಸಕ್ಕೆ ಬರುತ್ತಿರಲಿಲ್ಲ. ಜೊತೆಗೆ ಕುಡುಕ ಗಂಡನ ಹೊಡೆತ, ಮಕ್ಕಳ ಕಾಯಿಲೆ ಕಸಾಲೆ, ತಿಂಗಳ ಸರದಿಯ ಮುಜುಗರಗಳ ಕಾರಣಗಳಿಂದ ಎಲ್ಲಾ ಮರಾಠಿ ಬಾಯಿಗಳ ಹಾಗೆ ರಜಾ ಹಾಕುತ್ತಿರಲಿಲ್ಲ. ಮುಂಬೈ ಜನಕ್ಕೆ ಇವರು ಪ್ರಿಯರಾಗಿ ಬಿಟ್ಟರು. ಇವರೆಲ್ಲ ಎಂಟು ಹತ್ತು ಜನ ಸೇರಿ ರೂಮುಗಳಲ್ಲಿರುತ್ತಿದ್ದರು. ವರ್ಷಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ ಮಕ್ಕಳು ತಂದೆ ತಾಯಿಯನ್ನು ನೋಡಿಕೊಂಡು ಬರುತ್ತಿದ್ದರು. ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆ ಒಡೆಯುವ ಆಟದಲ್ಲಿ ಇವರು ತುಂಬುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ ತಾವು ಏನು ಕೆಲಸ ಮಾಡುತ್ತೇವೆಂದು ಊರಿನಲ್ಲಿ ಹೇಳುತ್ತಿರಲಿಲ್ಲವಂತೆ.

ಆದರೆ ಅವರ ಕೆಲಸಕ್ಕೆ ಕಂಟಕ ತಂದಿದ್ದು ಟೆಕ್ಸ್ ಟೈಲ್ ಮಿಲ್ಲುಗಳು ಮುಚ್ಚುವಿಕೆ. ಆಗ ಬೀದಿ ಪಾಲಾದ ಸಹಸ್ರಾರು ಕಾರ್ಮಿಕರ ಕುಟುಂಬಗಳ ಹೆಂಗಸರು ಮನೆಗೆಲಸ ಹುಡುಕಿಕೊಂಡು ಅಲೆಯತೊಡಗಿದರು. ನಾವು ಅಷ್ಟೂ ಕೆಲಸ ಮಾಡ್ತೀವಿ, ಬೆಳಿಗ್ಗೆ ಸಂಜೆ ಬರ್ತೀವಿ , ಎಷ್ಟಾದರೂ ಸಂಬಳ ಕೊಡಿ, ಬೇಕಾದರೆ ನಿಮ್ಮ ಮಕ್ಕಳನ್ನೂ ನೋಡಿ ಕೊಳ್ತೀವಿ ಎಂದು ಬೀದಿ ಬೀದಿ ಅಲೆದು ನಿಧಾನವಾಗಿ ರಾಮಾಗಳ ಜಾಗ ಆಕ್ರಮಿಸಿದರು.

ನೂರಾರು ವರ್ಷಗಳಿಂದ ಬಂದ ಪಾತ್ರಗಳನ್ನು ಈ ಮುಂಬೈ ಒಂದೇ ಕ್ಷಣದಲ್ಲಿ ಅಳಿಸಿ ಹಾಕಿಬಿಟ್ಟ ರೀತಿ ನೋಡಿ ಎಂದು ಇಂದಿಗೂ ಅಚ್ಚರಿಯಾಗುತ್ತದೆ.

ಶಿಕಾಗೋ

ಪಾಶ್ಚಿಮಾತ್ಯ ದೇಶಗಳಲ್ಲಿ ಈ ಜೆಂಡರ್ ರೊಲ್ಸ್ ಗಳ ಬಗ್ಗೆ ದಿನಕ್ಕೊಂದು ಸೆಮಿನಾರುಗಳು ನಡೆಯುತ್ತವೆ. ದಿನನಿತ್ಯದ ಬದುಕಿನ ಒಂದೊಂದು ಹಂತದಲ್ಲೂ ನೂರಾರು ವರ್ಷಗಳಿಂದ ಬೇರೂರಿರುವ ಈ ಪಾತ್ರಗಳನ್ನು ಒಡೆಯವ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಭಾಷೆಯನ್ನು ಬದಲಿಸಲಾಗುತ್ತಿದೆ.(ಉದಾ: ಚೇರ್ಪರ್ಸನ್.)

ಮಕ್ಕಳಿಗೆ ಹುಟ್ಟಿನಿಂದ ಗಂಡೆಂದರೆ ಹೀಗಿರಬೇಕು , ಹೆಣ್ಣು ಹೀಗಿರಬೇಕು ಎಂದು ಯಾವ ರೀತಿಯ ಕಂಡೀಶನಿಂಗ್ ಆಗದ ಹಾಗೆ ಎಚ್ಚರ ವಹಿಸಿ, ಸಹಜ , ಸಕಾರಾತ್ಮಕ ಬೆಳವಣಿಗೆಯ ಮೇಲೆ ಒತ್ತು ಕೊಡಲಾಗುತ್ತಿದೆ. ಆದರೆ ಅಮೆರಿಕಾದಲ್ಲೂ ಇಂದಿಗೂ ಬ್ಲೂ ಫಾರ್ ಬಾಯ್ಸ್, ಪಿಂಕ್ ಫಾರ್ ಗರ್ಲ್ಸ್ ಎಲ್ಲಾ ಕಡೆ ಚಲಾವಣೆಯಲ್ಲಿದೆ. ಮಕ್ಕಳ ಅಂಗಡಿಗಳಲ್ಲಿ ಕಣ್ಣು ಕೋರೈಸುವಂತೆ ಆಕರ್ಷಕವಾಗಿ ಈ ಥೀಮ್ ಗಳನ್ನು ಪ್ರದರ್ಶಿಸಿರುತ್ತಾರೆ.

ಮಗು ಹುಟ್ಟಿದ ತಕ್ಷಣ ಗಂಡಾದರೆ ತೆಳು ನೀಲಿ ಬಟ್ಟೆ, ಹೊದಿಕೆಗಳು, ಪರಿಕರಗಳು, ಮಗುವಿನ ಕೋಣೆಗೂ ತೆಳು ನೀಲಿ ಬಣ್ಣ ಹೀಗೆ. ಅದೇ ಹೆಣ್ಣಾದರೆ ಎಲ್ಲೆಲ್ಲೂ ತಿಳಿ ಗುಲಾಬಿ. ಈ  ಬಣ್ಣಗಳಿಂದಲೇ ಹುಟ್ಟುವ ಒಳ ಅರ್ಥಗಳು , ಮಕ್ಕಳ ಮನಸ್ಸಿನ ಮೇಲೆ ಹುಟ್ಟಿನಿಂದಲೇ ಆಗುವ ಪರಿಣಾಮ ಏನಿರಬಹುದು? ಇದನ್ನು ಅಲ್ಲಿನ ಮಕ್ಕಳ ಬಟ್ಟೆ, ಅವು ಬಳಸುವ ಉಪಕರಣಗಳನ್ನು ಮಾರುವ ವ್ಯಾಪಾರೀ ಸಂಸ್ಥೆಗಳಂತೂ ಹೆಚ್ಚು ಹಣ ಗಳಿಸಲು ಬಂಡವಾಳ ಮಾಡಿಕೊಂಡು, ಲಾಭ ಗಳಿಸಲು ಈ ನೀಲಿ-ತೆಳಿ ಗುಲಾಬಿ ಕಾಂಸೆಪ್ಟ್‌ಗೆ ಹೆಚ್ಚು ಹೆಚ್ಚು ಒತ್ತುಕೊಟ್ಟು ಪರ್ಪೆಚುಯೇಟ್ ಮಾಡುತ್ತಿವೆ. ಇದು ನಿಧಾನವಾಗಿ ಅಂತರ ರಾಷ್ಟ್ರೀಯ ಮಾಲ್ ಗಳ ಮೂಲಕ ನಮ್ಮ ದೇಶದಲ್ಲೂ ಕಾಲಿಡುತ್ತಿರುವುದು ಕಾಣಬರುತ್ತಿದೆ. ಇದರ ಬಗ್ಗೆ ಸಂಶೋಧನೆ ಮಾಡಿದ  ಕೆಲವು ವಿಜ್ಞಾನಿಗಳ ಪ್ರಕಾರ ಈ ಬಣ್ಣಗಳ ಆಯ್ಕೆ ಸೈಂಟಿಫಿಕ್ ಎಂದಿದ್ದರೂ, ಅಲ್ಲ ಎನ್ನುವುದಕ್ಕೂ ಸಾಕಷ್ಟು ಪುರಾವೆಗಳಿವೆ.

ಸುಮಾರು ೫೦ರ ದಶಕದಲ್ಲಿ ಅಮೆರಿಕಾದಲ್ಲಿ ಚಾಲ್ತಿ ಗೆ ಬಂದ ಈ ಅಭ್ಯಾಸ, ಅದಕ್ಕೆ ಮೊದಲು ಉಲ್ಟಾ ಇತ್ತಂತೆ. ಅಂದರೆ ಗಂಡು ಮಕ್ಕಳಿಗೆ ಗುಲಾಬಿ, ಹೆಣ್ಣು ಮಕ್ಕಳಿಗೆ ತಿಳಿ ನೀಲಿ! ಅದೇಕೆ ಬದಲಾಯಿತು ಅನ್ನುವುದಕ್ಕು ಸ್ಪಷ್ಟ ಕಾರಣಗಳಿಲ್ಲ. ಒಂದು ಮೂಲದ ಪ್ರಕಾರ, ಜರ್ಮನಿಯಲ್ಲಿ ನಾಜಿಗಳು ಸಲಿಂಗಕಾಮಿಗಳಾಗಿದ್ದ ಹುಡುಗರಿಗೆ ಗುಲಾಬಿ ಹಚ್ಚೆ ಹಾಕುತ್ತಿದ್ದುದರಿಂದ ಈ ಬಣ್ಣ ಗಳನ್ನು ಎಲ್ಲ ದೇಶಗಳಲ್ಲೂ ಅದಲು ಬದಲು ಮಾಡಿದರು ಎನ್ನುವುದು. ಆದರೆ ಸತ್ಯ ಇದೇ ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ.

ಕೆಲವರು ಗಮನಿಸಿರುವುದು, ಕೆಲವು ಬಣ್ಣಬಣ್ಣದ ಗಿಣಿಗಳಲ್ಲಿ , ಗಂಡು ಗಿಣಿಗೆ ನೀಲಿ ಮೂತಿ, ಹೆಣ್ಣು ಗಿಣಿಗೆ ಗುಲಾಬಿ ಬಣ್ಣದ ಮೂತಿಯಿರುತ್ತದೆ , ಆ ಮೂಲದಿಂದ ಈ ಅಭ್ಯಾಸ ಶುರುವಾಯಿತೆಂದು! ಸಧ್ಯಕ್ಕೆ ಅದನ್ನು ನಂಬುವುದೇ ಬುದ್ಧಿವಂತಿಕೆಯಲ್ಲವೇ?
(ಕೆಂಡಸಂಪಿಗೆ, ಸೆಪ್ಟೆಂಬರ್, ೨೦೦೯)
ಚಿತ್ರ: ಪಿಕಾಸ್ಸೋ

Tuesday, March 11, 2014

ನಗ್ನ ಸತ್ಯ






‘ನ್ಯೂಡ್ ಮಾಡೆಲ್’ಗಳೆಂದರೆ ನಮ್ಮೆಲ್ಲರ ಮನಸ್ಸಿನ ಮೇಲೆ ಮೂಡುವ ಚಿತ್ರಗಳು ಕೆಲವು. ತೆಳ್ಳಗೆ ಬೆಳ್ಳಗೆ ಬಳಕುವ ಯುವ ಚೆಲುವೆಯರು. ಮ್ಯಾಗಝೀನ್‌ಗಳ ಮೇಲೆ ಮೆರೆದು ಸಾವಿರಾರು ರೂಪಾಯಿ ಸಂಪಾದಿಸಿ ಎಲ್ಲೆಲ್ಲೂ ಗುಲ್ಲೆಬ್ಬಿಸುವ ರೂಪಸಿಯರು. ಪ್ರಸಿದ್ಧ ರಾಜಕಾರಣಿಗಳ ಮೇಲೆ ಮೋಡಿ ಹಾಕಿ ಸರ್ಕಾರಗಳನ್ನು ಉರುಳಿಸುವ ಚಾಲಾಕಿಯರು. ಆದರೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಇತ್ತೀಚೆಗೆ ಬಂದ ವರದಿ ಬೇರೆ ರೀತಿಯ ‘ನ್ಯೂಡ್ ಮಾಡೆಲ್’ಗಳ ಬಗ್ಗೆ.
ಮುಂಬೈನ ವಿ.ಟಿ. ಸ್ಟೇಷನ್ ಎದುರಿರುವ ಪ್ರಸಿದ್ಧ ಸಂಸ್ಥೆಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ರ ವರೆಗೆ ದಿನಾ ೮೦ ರೂಗಳಿಗಾಗಿ ಬಟ್ಟೆ ಕಳಚಿ ಕೂಡುವವರು ರಾಜಮ್ಮ, ಅರಿಸಿಯಾ, ಸರಸ್ವತಿ. ಇಲ್ಲಿನ “ಸ್ಕಲ್‌ಪ್ಚರ್ ಅಂಡ್ ಪೇಂಟಿಂಗ್” ಕೋರ್ಸಿನ ಮೂರರಿಂದ ಐದನೇ ವರ್ಷದ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಈ ಅವಶ್ಯಕತೆ. ರಾಜಮ್ಮ, ಅರಸಿಯಾ ಮದುವೆಯಾಗಿ ಮಕ್ಕಳಿರುವ, ಮೈಕೈ ತುಂಬಿಕೊಂಡ, ಕಪ್ಪು ಬಣ್ಣದ ಮಧ್ಯ ವಯಸ್ಸಿನ ಹೆಂಗಸರು. ಸರಸ್ವತಿ ೧೨ ವರ್ಷದ ಹುಡುಗಿ. ದಿನಾ ಬೆಳ್ಳಗ್ಗಿನಿಂದ ಸಂಜೆವರೆಗೂ ಬೆತ್ತಲಾಗಿ ವಿದ್ಯಾರ್ಥಿಗಳು ಹೇಳಿದ ಪೋಸಿನಲ್ಲಿ ಅಲ್ಲಾಡದೆ ಕೂತಿರುವುದೇ ಇವರ ಕೆಲಸ. ಒಂದು ಮುರುಕಲು ಮರದ ಡಬ್ಮದ ಮೇಲೆ ಮೈಕೈ ನೊಂದರೂ ಕಮಕ್ ಕಿಮಕ್ ಎನ್ನದೆ ಗಂಟೆಗಟ್ಟಲೆ ಕೂತಿರುವ ಇವರು ವಿದ್ಯಾರ್ಥಿಗಳಿಗೆ ಅಭ್ಯಾಸದ ವಸ್ತು. ದಿನಾ ‘ಕೆಲಸ’ ಮುಗಿಸಿ ಮನೆಗೆ ಹೊರಟಾಗ ಸಿಗುವುದು ೮೦ ರೂ. - ಮಿಕ್ಕೆಲ್ಲಾ ದಿನಗೂಲಿಯವರಂತೆಯೇ.
ರಾಜಮ್ಮ ಈ ಕೆಲಸ ಮಾಡುವುದು, ಆ ವರಮಾನದಿಂದ  ಸಂಸಾರ ಸಾಗಿಸುವುದು ಅವಳ ಗಂಡನಿಗೆ ಗೊತ್ತಿಲ್ಲ. ತಮಿಳುನಾಡಿನಿಂದ ಇಲ್ಲಿಗೆ ಎಷ್ಟೋ ವರ್ಷಗಳ ಹಿಂದೆ ಬಂದವಳು. “ಅಲ್ಲಿ ಮಳೆ ಆಗಲಿಲ್ಲ. ಕೆಲಸ ಸಿಗುತ್ತಿರಲಿಲ್ಲ. ಅದಕ್ಕೇ ಇಲ್ಲಿ ಬಂದೆವು. ಇಲ್ಲಿ ಏನು ಕೆಲಸ ಮಾಡಲಿ? ಮನೆ ಕೆಲಸ ಮಾಡಿದರೆ ೩೦೦-೪೦೦ ರೂಪಾಯಿ ಸಿಗುತ್ತೆ. ಬದುಕೋಕಾಗುತ್ತಾ? ಅದಕ್ಕೇ ಇದಕ್ಕೇ ಒಪ್ಪಿಕೊಂಡೆ” ಎನ್ನುವ ರಾಜಮ್ಮ ಮಕ್ಕಳನ್ನು ಊರಿನಲ್ಲಿ ಅವರಜ್ಜಿಯ ಹತ್ತಿರ ಬಿಟ್ಟಿದ್ದಾಳೆ. ಪ್ರತಿ ತಿಂಗಳೂ ಓದು ಬರಹಕ್ಕಾಗಿ ಹಣ ಕಳಿಸುವ ತೃಪ್ತಿ ಅವಳಲ್ಲಿದೆ. ತಮ್ಮ ಮಕ್ಕಳು ತಮ್ಮಂತೆ ಬದುಕಬಾರದೆಂದು ಮರಗುವ ಅರಸಿಯಾ, ಮಗನನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಓದಿಸುವ ಕನಸು ಕಾಣುತ್ತಾಳೆ. ಅವರು ಬೆತ್ತಲೆ ಕೂತಷ್ಟು ಹೊತ್ತೂ ಅವರ ಮಕ್ಕಳನ್ನೇ ನೆನೆಸಿಕೊಳ್ಳುತ್ತಿರುತ್ತಾರೆ.
ಮುಂಬೈಯಲ್ಲಿ ಈ ಆರ್ಟ್ಸ್ ಸ್ಕೂಲುಗಳಿಗೆ ಮಾಡೆಲ್ ಮಾಡುವವರು ಈ ಮೂರು ಜನ ಮಾತ್ರ. ಅಂಗಸೌಷ್ಟವ ಚೆನ್ನಾಗಿರುವವರು ಇಷ್ಟು ಕಡಿಮೆ ಹಣಕ್ಕೆ ಯಾರೂ ಬರುವುದಿಲ್ಲ. ಈ ಕಪ್ಪು ದಪ್ಪ-ಮಧ್ಯವಯಸ್ಸಿನ ಹೆಣ್ಣುಗಳಿಗೆ ಬೇರೆಲ್ಲೂ ಬೇಡಿಕೆಯಿಲ್ಲ. ಹೀಗಾಗಿ ಇವರು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕಾಯಂ ಮಾಡೆಲ್‌ಗಳಾಗಿದ್ದಾರೆ. ಆದರೆ ಎಷ್ಟು ವರ್ಷಗಳು ತಪ್ಪದೆ ಕೆಲಸ ಮಾಡಿದ್ದರೂ, ಇವರಿಗೆ ಬೇರೆ ಕೆಲಸಗಾರರಿಗೆ ಸಿಗುವ ಯಾವ ‘ಬೆನಿಫಿಟ್ಸ್’ ಇಲ್ಲ. ಪ್ರತಿ ವರ್ಷ ಇವರನ್ನೇ ಬಳಸಿ, ಪ್ರತಿ ವಿದ್ಯಾರ್ಥಿ ಇವರನ್ನೇ ಸ್ಕೆಚ್ ಮಾಡಿ ಬೇಸರ ಬಂದಿದೆ, ಆದರೆ ಬೇರಾರೂ ಇಲ್ಲ ಎಂದು ಕೆಲವು ವಿದ್ಯಾರ್ಥಿಗಳೆಂದರೆ, ಇವರೊಡನೆ ಮಾತನಾಡಿ, ಇವರ ಕತೆ ಕೇಳಿದ ಮೇಲೆ ‘ನ್ಯೂಡ್’ಗಳನ್ನು ಪೇಂಟ್ ಮಾಡುವುದನ್ನೇ ಬಿಟ್ಟುಬಿಟ್ಟ ಒಬ್ಬ ಸಹೃದಯಿಯೂ ಇದ್ದಾನೆ.
“ಇಲ್ಲಿನ ವಿದ್ಯಾರ್ಥಿಗಳೆಲ್ಲಾ ನಮ್ಮನ್ನು ನೋಡಿ ಪೇಂಟ್ ಮಾಡುತ್ತಾರೆ. ಕಲಿಯುತ್ತಾರೆ. ಪ್ರಖ್ಯಾತರಾಗುತ್ತಾರೆ. ಆದರೆ ನಮ್ಮನ್ನು ಕೇಳುವವರ‍್ಯಾರು? ನಮಗೇನಾದರೆ ಯಾರಿಗೆ ಯೋಚನೆ?” ಎನ್ನುವ ಇವರಿಗೆ ಈಗ ತಮ್ಮ ಕೆಲಸ ಯಾಂತ್ರಿಕವಾಗಿ ಹೋಗಿದೆ. ಆದರೂ, ವಿದ್ಯಾರ್ಥಿಗಳು ಕ್ಲಾಸ್‌ರೂಮಿಗೆ ಬಂದು ಬಣ್ಣ, ಬ್ರಶ್, ಕ್ಯಾನ್‌ವಾಸ್‌ಗಳ ತಯಾರಿ ಮಾಡಿಕೊಂಡು ಸಿದ್ಧವಾಗುವ ಕೊನೇ ಕ್ಷದವರೆಗೂ ತನ್ನ ಪೆಟ್ಟಿಕೋಟಿಗೆ ಅಂಟಿಕೊಂಡೇ ಇರುವ ರಾಜಮ್ಮನಿಗೆ, ಇಷ್ಟು ವರ್ಷಗಳ ನಂತರವೂ ಅದನ್ನೂ ಕಳಚುವ ಆ ಕ್ಷಣ ವಿಚಿತ್ರ ನೋವಿನಲೆ ಹರಿಸಿ ಹೋಗುತ್ತದೆ. ಅಳುಕು, ಸಂಕೋಚ ಮುತ್ತುತ್ತವೆ.
ಆದರೆ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಹೆಸರು ಕೇಳುತ್ತಿದ್ದಂತೆಯೇ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದುದು ಆ ಸಂಜೆಗಳು. ದಟ್ಟಮರಗಳಿಂದ ತುಂಬಿದ ವಿಶಾಲವಾದ ಆವರಣದ ನಡುವೆ ನಿಂತ ಹಳೆಯ ಕಟ್ಟಡ. ಆವರಣದ ತುಂಬಾ ಹರಡಿದ ಜಮಖಾನಾಗಳು, ಕುರ್ಚಿಗಳು. ನಡುವೆ ವೇದಿಕೆ. ಕಿಕ್ಕಿರಿದ ಜನ. ಮುಂಬೈನ ಎಲ್ಲಾ ಸ್ತರಗಳಿಂದ ಬಂದವರು. ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾ ಪಟುಗಳು, ಆಫೀಸ್ ಕ್ಲರ್ಕ್‌ಗಳು, ಗೃಹಿಣಿಯರು, ವಿದ್ಯಾರ್ಥಿಗಳು. ಸೂರ್ಯಾಸ್ತ ಸಮೀಪಿಸಿದಂತೆ ಗೂಡಿಗೆ ಮರಳಿ ಬೆಚ್ಚಗೆ ಕೂತು ಚಿಲಿಪಿಲಿ ಮಾಡುವ ಹಕ್ಕಿಗಳು. ಕೆಂಪು-ನೀಲಿ ಆಗಸದಲ್ಲಿ ಇಣುಕುವ ಪೇಲವ ತಾರೆಗಳು. ಶುಭ್ರ ಬಿಳಿ ಪಂಚೆ, ಗರಿಮುರಿ ಕುರ್ತಾ ಧರಿಸಿ, ವೇಳೆಗೆ ಸರಿಯಾಗಿ ನೇರವಾಗಿ ನಡೆದು ಬರುವ ತೆಳುಕಾಯದ ತೇಜಸ್ವಿ ಜಿಡ್ಡು ಕೃಷ್ಣಮೂರ್ತಿಯವರು ವೇದಿಕೆ ಹತ್ತಿದಂತೆ ಎಲ್ಲೆಲ್ಲೂ ಗಾಢ ಮೌನ. ಎಲ್ಲರಿಗೂ ಕೈಮುಗಿದು, ಬದುಕಿನ ಬಗ್ಗೆ ತಮ್ಮ ಅನನ್ಯ ವಿಚಾರಧಾರೆ ಅವರು ಹರಿದು ಬಿಟ್ಟಂತೆ, ಈ ಗಡಿಬಿಡಿ ಗೊಂದಲದ ಬದುಕಿನ ಅರ್ಥ ಕಂಡುಕೊಳ್ಳಲು ಹವಣಿಸುವ ದುಗುಡದ ಮನಗಳು. ಅವರು ಬದುಕಿರುವವರೆಗೂ ಪ್ರತಿ ಜನವರಿ ತಿಂಗಳಲ್ಲಿ ೪-೫ ದಿನ ಸಹಸ್ರಾರು ಜನರಿಗೆ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಆವರಣ ಪುಣ್ಯಕ್ಷೇತ್ರ.
ಆದರೆ, ನಾವೆಲ್ಲ ಜೇಕೆಯವರ ವಿಚಾರಧಾರೆಯಲ್ಲಿ ತಲ್ಲೀನರಾಗಿ, ಕಣ್ಮುಚ್ಚಿ ಕುಳಿತು ನಮ್ಮ ದಿನದಿನದ ಕಿರಿಕಿರಿಗಳನ್ನು ಸಣ್ಣಪುಟ್ಟ ಹತಾಶೆಗಳನ್ನು, ಮಹಾತ್ವಾಕಾಂಕ್ಷೆಯ ಅಬ್ಬರವನ್ನು ಮೀರುವ ಪ್ರಯತ್ನದಲ್ಲಿದ್ದಾಗ, ಆ ಸಂಜೆಯೂ ರಾಜಮ್ಮ ಮುರುಕಲು ಪೆಟ್ಟಿಗೆಯ ಮೇಲಿಂದ ಎದ್ದು, ಸೀರೆ ಸುತ್ತಿಕೊಂಡು, ಅಂದಿನ ಗಳಿಕೆ ೮೦ ರೂಪಾಯಿಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು, ತನ್ನ ಜೋಪಡಿಯತ್ತ ದಣಿದ ಹೆಜ್ಜೆಗಳನ್ನು ಹಾಕಿದ್ದಳಲ್ಲಾ... ನಮ್ಮಲ್ಲಿ ಯಾರಿಗಾದರೂ ಅವಳ ಹೆಜ್ಜೆಯ ಸಪ್ಪಳ ಕೇಳಿತ್ತೇನು?
*
(ಮುಂಬೈ ಡೈರಿ, ಲಂಕೇಶ್ ಪತ್ರಿಕೆ, ೧೯೯೫)

Friday, March 7, 2014

’ಕಾವ್ಯ ಸಮಾಜದ ಕಾರ್ಡಿಯೋಗ್ರಾಂ’ - ಜಯಂತ ಕಾಯ್ಕಿಣಿಯವರೊಂದಿಗೆ ಒಂದಷ್ಟು ಮಾತುಕತೆ



ಜಯಂತ ಕಾಯ್ಕಿಣಿಯವರ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕಾದರೆ, ೧೯೭೪ರಲ್ಲಿ ಬಂದ ಅವರ ಮೊದಲ ಕವನ ಸಂಕಲನ “ರಂಗದೊಂದಿಷ್ಟು  ದೂರ”ಕ್ಕೆ, ಮುನ್ನುಡಿ ಬರೆಯುತ್ತಾ ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ನೆನಪಾಗುತ್ತದೆ. “ಬಹುಶಃ ಕನ್ನಡ ಸಾಹಿತ್ಯಕ್ಕೆ ಗೌರೀಶ ಕಾಯ್ಕಿಣಿಯವರ ಅತ್ಯಂತ ಮಹತ್ವದ  ಕೊಡುಗೆಯೆಂದರೆ ಜಯಂತ.”
೧೯೫೫ರ ಜನವರಿ ೨೪ರಂದು ಗೋಕರ್ಣದಲ್ಲಿ ಹುಟ್ಟಿದ ಜಯಂತರು ಗೌರೀಶ ಕಾಯ್ಕಿಣಿ ಹಾಗೂ ಶಾಂತಾ  ಅವರ ಒಬ್ಬನೇ ಮಗ. ತಮ್ಮ ವಿದ್ಯಾಭ್ಯಾಸವನ್ನು ಕುಮಟಾ ಹಾಗೂ ಧಾರವಾಡಗಳಲ್ಲಿ ಮುಗಿಸಿ, ೧೯೭೭ರಿಂದ ಮುಂಬೈಯ ಒಂದು ಫಾರ್ಮಸೆಟಿಕಲ್ ಕಂಪನಿಯಲ್ಲಿ ಬಯೋಕೆಮಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಬರೆಯಲು  ಪ್ರಾರಂಭ ಮಾಡಿದ ಇವರು ಈವರೆಗೆ ೩ ಕವನ ಸಂಕಲನಗಳು, ೩ ಕಥಾ ಸಂಕಲನಗಳನ್ನು  ಪ್ರಕಟಿಸಿದ್ದಾರೆ. ಇವರ ೪ನೆಯ ಕಥಾ ಸಂಕಲನ ಅಚ್ಚಿನಲ್ಲಿದೆ. ಇವರು “ಯಾವ ನದಿ ಯಾವ ಪಾತ್ರ” ಎಂಬ ದೃಶ್ಯರೂಪಕವನ್ನೂ, ಇತ್ತೀಚೆಗೆ  ಎಲ್ಲರ ಗಮನ ಸೆಳೆದು ಜನಪ್ರಿಯವಾದ “ಪಿಗ್ಮೇಲಿಯನ್”ನ ರೂಪಾಂತರ “ಹೂ ಹುಡುಗಿ”ಯನ್ನೂ ಬರೆದಿದ್ದಾರೆ. “ರಂಗದೊಂದಿಷ್ಟು ದೂರ”, “ತೆರೆದಷ್ಟೇ  ಬಾಗಿಲು” ಮತ್ತು “ದಗಡೂ ಪರಬನ ಅಶ್ವಮೇಧ”ಕ್ಕಾಗಿ ಅಕೆಡಮಿ ಪ್ರಶಸ್ತಿಗಳು ಸಿಕ್ಕಿವೆ. “ನಗರ  ಪ್ರಜ್ಞೆಯ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ಅಭಿವ್ಯಕ್ತಿ” ಕಾಣಬರುವ ಇವರ ಪ್ರತಿ ಕೃತಿಯಲ್ಲೂ ಅನನ್ಯ “ಜಯಂತತೆ” ಇದೆ. ಈಗ ಇವರು ಪತ್ನಿ ಸ್ಮಿತಾ ಮತ್ತು ಮಕ್ಕಳು- ೮ ವರ್ಷದ ಸೃಜನಾ ಹಾಗೂ ಎರಡೂವರೆ ವರ್ಷದ ರಿತ್‌ವಿಕ್‌ನೊಂದಿಗೆ ಮುಲುಂಡಿನಲ್ಲಿ  ವಾಸಿಸುತ್ತಾರೆ.
ನಾನು ಅವರ ಮನೆಗೆ ಹೋದ ದಿನ ಮುಂಬೈ ತುಂಬಾ ಗಣಪತಿ ವಿಸರ್ಜನೆಯ ಸಂಭ್ರಮ. ಮೂರನೆಯ ಮಹಡಿಯಲ್ಲಿರುವ ಅವರ ಮನೆ ತಲುಪಿ ಬೆಲ್ ಮಾಡಿದಾಗ ಜಯಂತರೇ ಬಾಗಿಲು ತೆಗೆದರು. ಆಗ ತಾನೇ ತಿಂಡಿ, ಸ್ನಾನ ಮುಗಿಸಿದ್ದ ಜಯಂತ್ ಬಿಳಿ ಪೈಜಾಮಾ-ಕುರ್ತಾದಲ್ಲಿ ಫ್ರೆಶ್ ಆಗಿ ಕಾಣುತ್ತಿದ್ದರು. ಎಂದಿನ ನಗುಮುಖದಿಂದ ಸ್ವಾಗತಿಸಿ, ಪುಟ್ಟ ರಿತ್‌ವಿಕ್‌ನ ಕಪ್ಪು ಕನ್ನಡಕ ಹಾಕಿಕೊಂಡು ಅವನೊಡನೆ ಆಡವಾಡುತ್ತಲೇ, ಸಲುಗೆಯಿಂದ ನನ್ನೊಡನೆ ಹರಟಿದರು. ಸೃಜನಾ ಅಲ್ಲೇ ಕೂತು ಹೂವಿನ ಚಿತ್ರ ಬಿಡಿಸುತ್ತಿದ್ದಳು.
* ನೀವು ದಿನ ಹೇಗೆ ಪ್ರಾರಂಭಿಸುತ್ತೀರಿ?
- ನಾನು ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ನನ್ನ ಹಗಲು ರಾತ್ರಿಗಳಲ್ಲಿ ಯಾವುದು ಎಲ್ಲಿ ಮುಗಿಯಿತು, ನನ್ನ ರಾತ್ರಿ ಯಾವುದು, ಹಗಲು ಯಾವುದು ನನಗೇ ಖಚಿತವಾಗಿಲ್ಲ.
* ಅಂದರೆ ಮುಂಬೈ ಬಿಟ್ಟು ನೀವು ಬೇರೆ ಇನ್ನೇಲ್ಲಾದರೂ ಇದ್ದಿದ್ದರೆ, ಇನ್ನೂ ಹೆಚ್ಚು, ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಅನ್ನಿಸುತ್ತದೆಯೇ?
- ಇಲ್ಲ. ಮುಂಬೈ ಬದುಕು ಯಾಂತ್ರಿಕ ಅನ್ನುವುದು ಮಹಾ ಮಿತ್. ಎಂಥಾ ದೈನಿಕವನ್ನೂ ಯಾಂತ್ರಿಕಗೊಳಿಸಿಬಿಡುವುದು ನಮ್ಮ ಚೇತನಕ್ಕೆ ಸಂಬಂಧಪಟ್ಟ ವಿಷಯ. ಇನ್ ಫ್ಯಾಕ್ಟ್ ಮುಂಬೈ ಒಂದು ಮಹಾ ಬಿಡುಗಡೆಗೊಳಿಸುವ ಯೋಗ ಶಹರ. ಮುಂಬೈ ನನ್ನ ಗೆಳೆಯನಿದ್ದ ಹಾಗೆ.
* ನೀವು ಚಿಕ್ಕವಯಸ್ಸಿನಿಂದ ಬರೆಯುತ್ತಿದ್ದೀರಿ. ನಿಮ್ಮ ಬದುಕಿನಲ್ಲಿ ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿದವರು ಯಾರು?
_ ನನ್ನ ಬದುಕಿನಲ್ಲಿ ಬಂದ ಎಲ್ಲಾ ವ್ಯಕ್ತಿಗಳು.
* ಅದು ಸರಿ. ಆದರೆ ಸ್ಪೆಸಿಫಿಕ್ ಆಗಿ ಯಾರಾದರೂ ಇದ್ದಾರೇನು?
_ ಬಹುಶಃ ನನ್ನ ತಂದೆ ಅಥವಾ ಗೆಳೆಯ ಗೌರೀಶರು. ನನ್ನ ಕಣ್ಣು ತೆರೆದದ್ದೇ ಅವರ ಸತ್ಸಂಗದಲ್ಲಿ.
* ನಿಮ್ಮ ತಾಯಿ?
_ ನನಗೂ, ನನ್ನ ತಂದೆಗೂ ಒಂದು ವ್ಯಾವಹಾರಿಕ ಸ್ಥಿರತೆ ಕೊಟ್ಟವರು ನನ್ನ ತಾಯಿ ಶಾಂತಾ.
* ನಿಮ್ಮ ಬರವಣಿಗೆಯಲ್ಲಿ?
_ ನಾನು ಅಂಥಾ ಓದುಗನೇನಲ್ಲ. ನಮ್ಮ ತಂದೆ ತುಂಬಾ ಓದ್ತಿದ್ದರು. ಮನೆಯಲ್ಲಿ ಸಾಕಷ್ಟು ಪುಸ್ತಕ ಇರ್‍ತಿತ್ತು. ಬೇಂದ್ರೆಯವರಂತೂ ನಮ್ಮ ಮನೆ ದೇವರಂತೆ ಆಗಿಬಿಟ್ಟಿದ್ದರು. ಆದರೆ ನಾನು ಅಷ್ಟಾಗಿ ಪುಸ್ತಕಗಳ ಗೊಡವೆಗೆ ಹೋಗಿರಲಿಲ್ಲ. ನಾನು ಇಂಟರ್‌ನಲ್ಲಿದ್ದಾಗ ನನಗೆ ಪ್ಯಾರಾ ಟೈಫಾಯ್ಡ್ ಆಯ್ತು. ಆಗ ೩ ವಾರ ಹಾಸಿಗೆಯಲ್ಲಿದ್ದಾಗ, ಆಗ ಬರುತ್ತಿದ್ದ ಪತ್ರಿಕೆಗಳಲ್ಲಿ ಅಷ್ಟು ಕತೆ, ಕವಿತೆ ಓದಿದೆ. ನನಗೆ ಕವಿತೆಯ ರುಚಿ ಹುಟ್ಟಿಸಿದವರು ರಾಮಾನುಜನ್, ಗಂಗಾಧರ ಚಿತ್ತಾಲ ಮತ್ತು ತಿರುಮಲೇಶ್. ಹಾಗೆ ನೋಡಿದರೆ, ಚಂದಮಾಮ, ಅರೇಬಿಯನ್ ನೈಟ್ಸ್‌ನಿಂದ ಹಿಡಿದು ಎನ್.ನರಸಿಂಹಯ್ಯನವರ ಕಾದಂಬರಿಗಳ ತನಕ ನಮ್ಮ ಸಂವೇದನೆಯನ್ನು ರೂಪಿಸಿದ ಪುಸ್ತಕಗಳನ್ನು, ನಮ್ಮ ಶಾಲೆಯ ಮೇಷ್ಟ್ರುಗಳನ್ನು ಮರೆತಷ್ಟೇ ಸುಲಭವಾಗಿ ಮರೆತುಬಿಡುತ್ತೇವೆ.
* ನೀವು ಕತೆ, ಕವಿತೆ, ನಾಟಕ, ಸ್ಕ್ರೀನ್ ಪ್ಲೇ ಎಲ್ಲಾ ಬರೀತೀರಿ. ನಿಮಗೆ ತುಂಬಾ ಪ್ರಿಯವಾದದ್ದು ಯಾವುದು?
_ ಕವಿತೆ.
* ಏಕೆ?
_ ಅರ್ಧಗಂಟೇಲಿ ಬರೆದು ಮುಗಿದಿರುತ್ತೆ.
* ನೀವು ಬರೆಯುವಾಗ ಮೂಡಿಗಾಗಿ ಕಾಯುತ್ತೀರೇನು?
_ ಈ ಮೂಡುಗೀಡು ಎಲ್ಲಾ ಕೆಲವು ಸಾಹಿತಿಗಳೆಂಬ ಉಪಜೀವಿಗಳು ನಿರ್ಮಿಸಿಕೊಂಡ ಸುಳ್ಳುಪದಗಳು. ಅದರಲ್ಲಿ ನನಗೆ ನಂಬಿಕೆ ಇಲ್ಲ. ಬರೀಬೇಕೆಂದಾಗ ಕೂತು ಬರೀತೀನಿ.
* ನೀವು ಕವಿತೆಗೆ ಹೇಗೆ ಕಾಯುತ್ತೀರಿ?
_ ನಾನು ಕವಿತೆಗೆ ಕಾಯುವುದಿಲ್ಲ. ಬಹುಶಃ ನನ್ನ ಕವಿತೆಗಳು ನನಗಾಗಿ ಸಾಲುಗಟ್ಟಿ ಕಾಯುತ್ತವೆ.
* ನಿಮಗೆ ಅತ್ಯಂತ ತೃಪ್ತಿಕೊಟ್ಟ ನಿಮ್ಮ ಕತೆ, ಕವಿತೆ ಯಾವುದು?
_ ಹೇಳುವುದು ಕಷ್ಟ. ಪ್ರಯಾಣವೇ ಖುಷಿಯದಾದ್ದರಿಂದ ಯಾವ ಸೀಟು, ಯಾವ ಬಸ್ಸು, ಯಾವ ಟ್ರಾವೆಲ್ಸ್ ಏಕೆ ಬೇಕು?
* ಒಳ್ಳೆಯ ಕಾವ್ಯ ಅಂದರೇನು?
_ ಕಾವ್ಯ ಸಮಾಜದ ಹೃದಯಕ್ಕೆ ದಿಕ್ಸೂಚಿ, ಲಿಖಿತ ಕಾವ್ಯ ಸಮಾಜದ ಕಾರ್ಡಿಯೋಗ್ರಾಂ ಇದ್ದ ಹಾಗೆ. ಕಾವ್ಯದಲ್ಲಿ ಸಮಾಜ ತರುವುದು ಸುಲಭ. ಆದರೆ ಸಮಾಜದೊಳಗಿನ ಕಾವ್ಯವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ ಮತ್ತು ಕಷ್ಟ.
* ಕಾವ್ಯದ ಕ್ವಾಲಿಟಿ ಹೇಗೆ ಇಂಪ್ರೂ ಮಾಡಬಹುದು?
_ ಒಳ್ಳೆ ಕಾವ್ಯ ರೇಡಿಯೋವೇವ್ಸ್ ಥರಾ ನಮ್ಮೆಲ್ಲರ ಮೂಲಕ ಹಾಯುತ್ತಲೇ ಇರುತ್ತದೆ. ಸಂಪನ್ನ ಮನಸ್ಸು, ವಿಶಾಲ ಹೃದಯ ಸಿಕ್ಕರೆ ಸಾಕು. ಕಾವ್ಯ ಲ್ಯಾಂಡ್ ಮಾಡಲು ಜಾಗ ಸಿಕ್ಕಂತೆ. ಒಬ್ಬ ವ್ಯಕ್ತಿ ಒಳ್ಳೆಯ ಜೀವಿಯಾಗಿದ್ದಾಗಲೇ ಒಳ್ಳೆಯ ಕಾವ್ಯ ಬರೆಯಬಲ್ಲ. ಸಾಹಿತ್ಯ- ಚರಿತ್ರೆ ಇಂಥಾದ್ದೆಲ್ಲಾ ರೋಲ್-ಪ್ಲೇಯಿಂಗ್‌ಗೆ ತೊಡಗಿದರೆ ಕಾವ್ಯ ಅವನ ಸಮೀಪ ಸುಳಿಯಲೂ ಹೆದರುತ್ತದೆ. ಅವನ ಕೃತಿಗೆ ಶರೀರ ಬೆಳೆಯಬಹುದೇ ಹೊರತು ಶಾರೀರ ಅಲ್ಲ.
* ಬದುಕಿನಲ್ಲಿ ಸಾಹಿತ್ಯದ ಸ್ಥಾನ ಏನು?
_ ಸಾಹಿತ್ಯದಲ್ಲಿ ಬದುಕಿನ ಸ್ಥಾನ ಏನು ಎನ್ನುವ ಗೊಡ್ಡು ಪ್ರಶ್ನೆಗಿಂತ ಇದು ಚೆನ್ನಾಗಿದೆ.
* ಇದಕ್ಕುತ್ತರ?
_ ಬಲ್ಲವರನ್ನು ಕೇಳಿ.
* ನೀವು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಖ್ಯಾತಿ ಗಳಿಸಿದಿರಿ. ಅದರ ಫ್ಲಸ್ ಪಾಯಿಂಟ್ಸ್ ಏನು? ಮೈನಸ್ ಪಾಯಿಂಟ್ಸ್ ಏನು?
_ ಫೇಮ್ ಅನ್ನೋದು ದೊಡ್ಡ ಮಾಯಾಂಗನೆಯ ಸಹವಾಸ ಅನ್ನೋ ಭ್ರಮೆ ಬೇಗನೆ ಹೋಗಿರೋದರಿಂದ, ಫೇಮ್‌ನಲ್ಲಿ ಏನೂ ಇಲ್ಲಾಂತ ತಿಳಿದಿರೋದರಿಂದ ಎದೆ ಮೇಲೆ ಭಾರ ಇಲ್ಲ. ನಿರಾಳವಾಗಿರಬಹುದು. ಮೈನಸ್ ಪಾಯಿಂಟ್ಸ್- ನನ್ನ ಪರಿಚಯ ಇಲ್ಲದವರೆಲ್ಲಾ ನಾನು ಇನ್‌ಆಕ್ಸಿಸಿಬಲ್ ಜಂಬದವನು ಅಂದ್ಕೋತಾರೆ. ಸಮೀಪ ಹೋದರೆ ದೂರ ಓಡಿಹೋಗ್ತಾರೆ.
* ಈಗಿನ ಸಾಹಿತ್ಯ ಸಂದರ್ಭದಲ್ಲಿ ವಿಮರ್ಶೆಯ ಪಾತ್ರ...
_ ಈ ಸಾಹಿತ್ಯ ಪಾಹಿತ್ಯ ಎಲ್ಲಾ ಬೇಡ ಮೇಡಂ. ಪ್ರೇಮ, ಊಟ, ಆಟ... ಮಾಡಬೇಕು. ಅದರ ಬಗ್ಗೆ ಮಾತಾಡೋದೇನು? ಹಾಗೇ ಸಾಹಿತ್ಯವನ್ನೂ ಓದಬೇಕು, ಇಲ್ಲ ಬರೀಬೇಕು. ಅದರ ಬಗ್ಗೆ ಮಾತಾಡಬಾರದು.
* ಆವಾರ್ಡ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
_ ಆಸ್ ಲಾಂಗ್ ಆಸ್ ದ ವಿನ್ನರ್ ಡಸ್ ನಾಟ್ ಟೇಕ್ ಇಟ್ ಸೀರಿಯಸ್ಲಿ, ಅದರಲ್ಲೇನೂ ತೊಂದರೆ ಇಲ್ಲ. ಅದೊಂದು ಲಾಟರಿ ಇದ್ದಂತೆ. ಆದರೆ ಒಂದು ಅನಾಹುತ ಇದೆ. ಉಳಿದವರು ಸಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಪಾಯ ಇದೆ. ಒಬ್ಬ ಒಳ್ಳೆಯ ದಾದಿ, ಒಳ್ಳೆಯ ಡಾಕ್ಟರ್, ಒಳ್ಳೆಯ ಕಂಡಕ್ಟರ್, ಒಳ್ಳೆಯ ತೋಟಗಾರ- ಇವರೆಲ್ಲರಿಗಿಂತ ಸಾಹಿತಿ ಏನೂ ಮಿಗಿಲಲ್ಲ. ಇನ್ ಫ್ಯಾಕ್ಟ್ ೪-೫ ಪುಸ್ತಕ ಬರೆದ ವ್ಯಕ್ತಿಗಳಿಗಿಂತ, ೪-೫ ಬೆಕ್ಕು, ನಾಯಿ ಸಾಕಿಕೊಂಡು, ಮರ ಗಿಡ ಬೆಳೆಸಿಕೊಂಡಿರುವವರು ಹೆಚ್ಚು ಮಾನವೀಯರಾಗಿರುತ್ತಾರೆ. ಆದರೆ ಅದನ್ನು ಕುರಿತು ಯಾರೂ ಮಾತಾಡುವುದೇ ಇಲ್ಲ. ಅಂಥವರ ಮೌನ ಸಾಹಿತ್ಯಕ್ಕೆ ಬರುವಂತಾಗಬೇಕು.
* ಯೂ ಡೋಂಟ್ ಟೇಕ್ ಯುವರ್ ರೈಟಿಂಗ್ ಪ್ರೋsಸೆಸ್ ಸೀರಿಯಸ್ಲಿ. ನಿಮ್ಮದು ಅವಸರದ ಬರವಣಿಗೆ ಎನ್ನೋದು ನಿಮ್ಮನ್ನು ಸಮೀಪದಿಂದ ಬಲ್ಲವರಿಗೆಲ್ಲಾ ಗೊತ್ತಿದೆ. ಇದಕ್ಕೇನನ್ನುತ್ತೀರಿ?
_ ನಾನು ಏಳನೇ ತಿಂಗಳಲ್ಲಿ ಹುಟ್ಟಿದವನು ಮೇಡಂ. ನೋಡಿ ಪ್ರತಿಭೆ ಮತ್ತು ಶ್ರದ್ಧೆ ಇದ್ದರೆ ಸಾಲದು. ಇದರ ಜೊತೆಗೆ ಎಚ್ಚರ, ಶ್ರಮ, ಕಾರಕೂನಿ, ಮಹತ್ವಾಕಾಂಕ್ಷೆ ಎಲ್ಲ ಬೇಕು. ಇವು ನನ್ನಲಿಲ್ಲ. ಇದೆಲ್ಲ ಇದ್ದಿದ್ದರೆ, ಕೊಪ್ಪೋಲನ ಅಪ್ಪನಂಥಾ ಸಿನಿಮಾ ಮಾಡ್ತಿದ್ದೆ. ಇದು ಎಲ್ಲಿ ಸಿಗುತ್ತದೆಯೋ ಹೇಳಿ, ಕಂತಿನಲ್ಲಾದರೂ ಕೊಳ್ಳುವೆ.
* ನೀವು ಪ್ರೊಲಿಫಿಕ್ ಅಲ್ಲ. ಕೇಳಿದರೆ ಕೆಲಸ, ಸಂಸಾರ ಎನ್ನುತ್ತೀರಾ...
_ ಈ ಕುರಿತು ಖಂಡಿತ ಬೇಸರ ಇಲ್ಲ. ಉಲ್ಟಾ ಐ ಫೀಲ್ ಗುಡ್. ಅನ್‌ರಿಟನ್ ಥಿಂಗ್ಸ್ ಆರ್ ನಾಟ್ ವೇಸ್ಟೆಡ್ ಇನಸ್ಟಡ್, ಪರ್‌ಹ್ಯಾಪ್ಸ್ ದೇ ಎನ್‌ರಿಚ್ ಫ್ಯೂಚರ್ ರೈಟಿಂಗ್. ಜಾಣಮಾತಿನಲ್ಲಿ ಹೇಳುವುದಾದರೆ, ಬರೆಯುವವನಾಗಿ ಬದುಕುವುದಕ್ಕಿಂತ, ಬದುಕುವವನಾಗಿ ಬರೆಯುವುದು ಒಳ್ಳೇದಲ್ವಾ?
* ಪ್ರತಿ ಲೇಖಕರರೂ ತಮ್ಮ ಮ್ಯಾಗ್ನಮ್‌ಓಪಸ್ ಬಗ್ಗೆ ಕನಸು ಕಾಣುತ್ತಲೇ ಇರುತ್ತಾರೆ. ನಿಮಗೇನಾದರೂ ಹೀಗೆ ಇದೆಯೇ?
_ ಪ್ರತಿಸಲ ಬರೆದಾಗಲೂ ಥ್ಯಾಂಕ್ ಗಾಡ್, ಮೈ ಬೆಸ್ಟ್ ಈಸ್ ಯೆಟ್ ಟು ಕಮ್ ಎನ್ನುವ ನಿರಂತರದ ನಿರಂಬಳತೆ ಇರುತ್ತದೆ. ನನ್ನ ಬರಹ ಕುರಿತಾದ ಅತೃಪ್ತಿಯನ್ನು ಬಹುಶಃ ನಾನು ಈ ರೀತಿ ನೀಗಿಕೊಳ್ಳುತ್ತೇನೆ.
* ನೀವು ವಿಶೇಷಾಂಕಗಳಿಗೆ, ಯಾರಾದರೂ ಕೇಳಿದಾಗಷ್ಟೇ ಬರೀತೀರಿ. ಏಕೆ?
_ ನನ್ನ ಫಸ್ಟ್ ಲವ್ ಪೊಯೆಟ್ರಿ ನನ್ನ ಕವಿತೆಗಳನ್ನು ನನಗೆ ಬೇಕೆಂದಾಗ ಬರೀತೀನಿ. ಕವಿತೆ ಬರೆಯುವುದು ಪ್ರೇಮದ ಹಾಗೆ. ಕತೆ ಸ್ವಲ್ಪ ಮದುವೆ ಥರಾ. ಅದರಲ್ಲಿ ನಿರ್ವಹಣೆ, ವೇಳೆ, ಸಂಬಂಧಿಕರ ಒತ್ತಾಯ ಎಲ್ಲಾ ಬೇಕು.
* ಎಪ್ಪತ್ತರಲ್ಲಿ ನಿಮ್ಮ ಮೊದಲ ಕೃತಿ “ರಂಗದೊಂದಿಷ್ಟು ದೂರ”ಕ್ಕೆ ಅಕಾಡಮಿ ಆವಾರ್ಡ್ ಬಂದಾಗ, ನೀವು ಉದಯೋನ್ಮುಖರಾಗಿದ್ದಿರಿ. ಎಂಭತ್ತರಲ್ಲಿ ನಿಮ್ಮ ಕಥಾ ಸಂಕಲನ “ತೆರೆದಷ್ಟೇ ಬಾಗಿಲಿ”ಗೆ ಆವಾರ್ಡ್ ಬಂದಾಗ, ಆಗಿನ ಹೊಸ ಪೀಳಿಗೆಯ ಬರಹಗಾರರೊಂದಿಗೆ ನಿಮ್ಮ ಹೆಸರು ಕೇಳಿ ಬಂತು. ಈಗ ತೊಂಭತ್ತರಲ್ಲಿ ನಿಮ್ಮ “ದಗಡೂ ಪರಬ” ನಂತರ ಇಂದಿನ ತರುಣ ಪೀಳಿಗೆಯೊಂದಿಗೆ ನಿಮ್ಮ ಹೆಸರು ಕೇಳಿಬರುತ್ತಿದೆ. ಇದಕ್ಕೇನನ್ನುತ್ತೀರಿ?
_ ಹುಬ್ಬಳ್ಳಿ, ಧಾರವಾಡದ ಕಡೆಯಲ್ಲಿ ಕಾಯಕಲ್ಪ ಡಿಸ್ಪೆನ್ಸರಿ, ನವಜೀವನ ಡಿಸ್ಪೆನ್ಸರಿ ಅಂತ ನಿರಂತರ ತಾರುಣ್ಯಕ್ಕೆ ಔಷಧಿ ಕೊಡುವ ಡಾಕ್ಟರುಗಳಿದ್ದಾರೆ. ಅಂಥದ್ದೇನಾದರೂ ನನ್ನ ಬರವಣಿಗೆ ತೆಗೆದುಕೊಂಡಿದೆಯೋ ಯಾರಿಗೆ ಗೊತ್ತು.
* ನಿಮ್ಮ ಕತೆಯಲ್ಲಿ ಬರುವ, ವಿಶೇಷವಾಗಿ ಲೋವರ್ ಮಿಡ್ಲ್ ಕ್ಲಾಸ್ ಬದುಕಿನ ವಿವರಣೆ ಎಷ್ಟು ಸಹಜವಾಗಿರುತ್ತದೆ ಎಂದರೆ, ಇದನ್ನು ಹೇಗೆ ಸಾಧಿಸುತ್ತೀರಿ ಎಂದು ಅಚ್ಚರಿ ಪಡುವವರಿದ್ದಾರೆ. ಇದರ ಗುಟ್ಟೇನು?
_ ನನ್ನ ಸೌಂದರ್ಯದ ಗುಟ್ಟು ಲಕ್ಸ್ ಸುಪ್ರೀಮ್” ಎಂದು ರವೀನಾ ಟ್ಯಾಂಡೆನ್ ಹೇಳುವ ರೀತಿಯಲ್ಲಿ ಖಂಡಿತ ಹೇಳೋಕಾಗೋಲ್ಲ.
* ಈಗ ಸುತ್ತಮುತ್ತ ಇಷ್ಟೊಂದು ಕ್ರೌರ್ಯ, ಹಿಂಸೆ ಇದೆ. ದಿನೇದಿನೇ ಬರ್ಬರವಾಗುತ್ತಿರುವ ಈ ಸಮಾಜದಲ್ಲಿ ಬರವಣಿಗೆಯಿಂದ ಏನು ಮಾಡಬಹುದು?
_ ಬರವಣಿಗೆ ಮಾತ್ರ ಅಲ್ಲ, ಯಾವುದೇ ಆಸಕ್ತಿಗಳಿಂದ ನನ್ನ ಅಹಂಕಾರವನ್ನು ಕಳೆದುಕೊಂಡು ನನ್ನ ಸೇನಿಟಿ  ಕಾಪಾಡಿಕೊಳ್ಳುವುದು ಮತ್ತು ನನ್ನ ಆರೋಗ್ಯವನ್ನು ನನಗೆ ನಿಲುಕಬಹುದಾದಷ್ಟು ಜೀವಿಗಳು, ಮಕ್ಕಳೊಂದಿಗೆ ಹಂಚಿಕೊಳ್ಳುವುದು. ಮಮತೆಯ ವಲಯವನ್ನು ವಿಸ್ತರಿಸುವುದು.
* ನಿಮ್ಮ ಬದುಕಿನ ಆಂಬಿಷನ್ ಏನು?
_ ಅಯ್ಯಯ್ಯೋ! ಎರಡು ಹೊತ್ತು ಮೀನಿನೂಟ ಗ್ಯಾರಂಟಿ ಇದ್ರೆ ಗೋಕರ್ಣಕ್ಕೆ ಹೋಗಿ ಹಾಯಂತ  ಇದ್ದುಬಿಡ್ತೀನಿ.
* ಕನ್ನಡನಾಡಿನಿಂದ ದೂರವಿದ್ದೀರಿ. ನಿಮ್ಮ ಮನೆಮಾತು ಕೊಂಕಣಿ. ಇದೆಲ್ಲಾ ಯಾವ ರೀತಿ ನಿಮ್ಮ ಕನ್ನಡದ ಬರವಣಿಗೆಯನ್ನು ಅಫೆಕ್ಟ್ ಮಾಡುತ್ತದೆ?
_ ಗೋಕರ್ಣದ ನನ್ನ ಬಾಲ್ಯದ ದಿನಗಳಲ್ಲಿ ದೇವಸ್ಥಾನಗಳೇ ನಮ್ಮ ಆಟದ ಬಯಲುಗಳಾಗಿದ್ದವು. ಕಂಬಗಳ ಹಿಂದೆ, ಲಿಂಗಗಳ ಹಿಂದೆ ನಾವು ಆಡುತ್ತಿದ್ದೆವು. ಅಲ್ಲಿ ಒಬ್ಬ ಮೌನಿ ಸಾಧು ಇದ್ದ. ಅವನು ಯಾರೊಡನೆಯೂ ಮಾತಾಡುತ್ತಿರಲಿಲ್ಲ. ಆದರೆ, ಒಂದು ದಿನ ದೇವಸ್ಥಾನದ ಹಿಂಭಾಗದಲ್ಲಿ ಅವನು ಮಲಗಿದ್ದಾಗ ನಾವು ಕದ್ದು ನೋಡುತ್ತಿದ್ದೆವು. ಅವನು ನಿದ್ರೆಯಲ್ಲಿ ಸಿಕ್ಕಾಪಟ್ಟೆ ಬಡಬಡಿಸುತ್ತಿದ್ದ. ಅದೇನೆಂದು ಒಂದು ಚೂರೂ ತಿಳಿಯಲಿಲ್ಲ. “ಅದು ದೇವಭಾಷೆ. ಅವನು ದೇವರೊಡನೆ ಮಾತನಾಡುತ್ತಿದ್ದಾನೆ” ಎಂದು ನನ್ನ ಗೆಳೆಯ ಹೇಳಿದ್ದ.
* ನೀವು ಬಯೋಕೆಮಿಸ್ಟ್ ಆಗಿರದಿದ್ದರೆ, ಏನು ಮಾಡಬಯಸುತ್ತಿದ್ದಿರಿ?
_ ಸಿನಿಮಾ ಮಾಡಬಯಸುತ್ತಿದ್ದೆ.
* ನಿಮಗೆ ಸಿನಿಮಾ ಕುರಿತಾಗಿ ಇರುವ ಫ್ಯಾಸಿನೇಷನ್ ನಿಮ್ಮಬರವಣಿಗೆಯಲ್ಲೇನಾದರೂ ಮೈದೋರಿದೆಯೇ?
_ ಹೌದು. ನನ್ನ ಬರವಣಿಗೆಯಲ್ಲಿ ಸಾಕಷ್ಟು ವಿಷವಲ್‌ಗಳು ಬಂದು ನನ್ನನ್ನು ಪಾರುಮಾಡುತ್ತವೆ. ಐ ಆಮ್ ಥ್ಯಾಂಕ್‌ಫುಲ್ ಟು ದೆಮ್.
* ಎಷ್ಟೋ ಪುಸ್ತಕಗಳ ಕವರ್ ಡಿಜೈನ್ ನೀವೇ ಮಾಡಿದ್ದೀರಿ. ಚಿತ್ರಕಲೆಯಲ್ಲಿ ನಿಮಗೆ ತುಂಬಾ ಆಸಕ್ತಿ ಇದೆ. ನೀವು ಚೆನ್ನಾಗಿ ಹಾಡುತ್ತೀರಿ. ನಟಿಸುತ್ತೀರಿ. ಇದರಲ್ಲೆಲ್ಲಾ ಹೆಚ್ಚಿನದೇಕೆ ಸಾಧಿಸಲಿಲ್ಲ?
_ ಸೋಮಾರಿ.
* ನಿಮಗೆ ಹೇರಳವಾದ ಫ್ಯಾನ್ ಫಾಲೋಯಿಂಗ್ ಇದೆ. ಜಯಂತ್ ಎಂದರೆ ಒಂದು ಎನಿಗ್ಮಾ ಎಷ್ಟೋ ಜನರಿಗೆ. ಅದರಲ್ಲೂ ಹುಡುಗಿಯರಿಗೆ. ಇದಕ್ಕೇನನ್ನುತ್ತೀರಿ?
_ ಇದನ್ನು ಕೇಳೋದಕ್ಕೆ ತುಂಬಾ ಖುಷಿಯಾಗ್ತಿದೆ. ಇದು ನಿಜ ಆಗಿದ್ರೆ ಹೆಚ್ಚಿನ ಖುಷಿಯಾಗಿರೋದು.
* ನಿಮ್ಮದು ಪ್ರೇಮ ವಿವಾಹ. ನೀವು ಕೈಹಿಡಿದ ಹುಡುಗಿಯ ಯಾವ ಗುಣ ನಿಮ್ಮನ್ನು ಹೆಚ್ಚು ಆಕರ್ಷಿಸಿತು?
_ ನಾನು ಕೆಲಸ ಮಾಡುತ್ತಿದ್ದ ಔಷಧಿ ಕಂಪೆನಿಯಲ್ಲಿ ನಾನು ಪ್ರೊಡಕ್ಷನ್‌ನಲ್ಲಿದ್ದೆ. ಅವಳು ಕ್ವಾಲಿಟಿ ಕಂಟ್ರೋಲ್‌ನಲ್ಲಿದ್ದಳು. ನಾನು ಹೊಸದಾಗಿ ಸೇರಿದ ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಯಾವ ಜೋಕುಗಳಿಗೂ ನಗದೆ ಅವಳು ಗಂಭೀರವಾಗಿ, “ನಿನ್ನನ್ನು ಮಹಾ ದೊಡ್ಡ ಜೋಕರ್ ಎಂದು ತಿಳಿದಿದ್ದಿಯೇನೋ” ಎಂದು ಕೇಳಿದ ಕ್ಷಣಕ್ಕೆ ನನ್ನ ಎಲ್ಲಾ ಸ್ಟಂಪುಗಳೂ ಹಾರಿದ್ದುವು.
* ನಿಮ್ಮಗೆ ಅತ್ಯಂತ ಪ್ರಿಯವಾದ ತಿಂಡಿ-ತಿನಿಸು ಯಾವುದು? ಯಾರು ತಯಾರಿಸಿದ್ದು?
_ ಅರವತ್ತರ ದಶಕದ ಬಿಮಲ್‌ರಾಯ್ ಹೀರೋನಂತೆ ಹೇಳುವುದಾದರೆ ನನ್ನ ಅಮ್ಮ ತಯಾರಿಸಿದ ಮೀನಿನಡಿಗೆ. ಸ್ಮಿತಾ ಕೈಯ್ಯಿನ ಚಹಾ. ನಾನೇ ಮಾಡಿದ ಬೆಂಡೆಕಾಯಿ ಉಪ್ಕರಿ.
* ನಿಮ್ಮ ಪ್ರೀತಿಯ ಹವ್ಯಾಸಗಳೇನು?
_ ನಿರುಪದ್ರವಿ ಸುಳ್ಳು ಮಾತಾಡೋದು, ಆಲಸಿಯಾಗಿರೋದು, ವ್ಯಾಕರಣಗಳನ್ನು ಮುರಿಯುವುದು, ಡೆಡ್‌ಲೈನ್‌ಗಳನ್ನು ತಳ್ಳುವುದು.
* ನಿಮ್ಮ ಹೀರೋಗಳು ಯಾರು?
_ ಬ್ಯೋರ್ನ್ ಬೋರ್ಗ್, ಶಿವರಾಮ ಕಾರಂತ, ಸ್ಟಿಲ್‌ಬರ್ಗ್, ನಮ್ಮ ರಾಜ್‌ಕುಮಾರ್, ಏಣಗಿಬಾಳಪ್ಪ, ಕಪಿಲ್‌ದೇವ್, ಅರವಿಂದನ್, ಖೈರ್‌ನಾರ್, ಬೂಬ್ಕಾ, ರಿತ್‌ವಿಕ್ ಘಟಕ್, ಕೆರೆಮನೆ ಶಂಭು ಹೆಗಡೆ, ಚಾರ್ಲಸ್ ಶೋಭರಾಜ್, ಓ.ಪಿ. ನಯ್ಯಾರ್, ಸಾಲ್ವದರ್ ದಾಲಿ, ತಲತ್, ದಿನಕರ ದೇಸಾಯಿ, ಪು.ಲ. ದೇಶಪಾಂಡೆ, ಚಾಪ್ಲಿನ್... ಈಗ ಹೊಳೆಯುತ್ತಿರುವುದು. ಹೀಗೆಯೇ ಮುಂದೆ ಹೋಗಬಹುದು.
* ವಾಟ್ ಅಬೌಟ್ ಹೀರೋಯಿನ್ಸ್
_ ಈ ವಿಶ್ವದಲ್ಲಿರುವ ಸಕಲ ಹೆಣ್ಣು ಜೀವಿಗಳೂ ನನ್ನ ಹೀರೋಯಿನ್‌ಗಳೇ.
* ನಿಮ್ಮ ಬದುಕಿನಲ್ಲಿ ಬಂದ ಹುಡುಗಿಯರ ಬಗ್ಗೆ...
_ ಅವರ ಕಾಳಜಿ ಬೇಡ ಮೇಡಂ. ಎಲ್ಲರೂ ನನ್ನ ಮನಸ್ಸಿನಲ್ಲಿ ಸುರಕ್ಷಿತವಾಗಿ ಉಂಡುತಿಂದು ಆರಾಮಾಗಿ ಸುಖವಾಗಿದ್ದಾರೆ.
* ನಿಮ್ಮನ್ನು ಬೋರ್ ಹೊಡೆಯುವ ಸಂಗತಿಗಳು ಯಾವುವು?
_ ಅಂತಃಕರಣವಿಲ್ಲದ ಸಿದ್ಧಾಂತಿಗಳು. ತಮ್ಮ ಬಗ್ಗೆಯೇ ಮಾತಾಡುವ ವ್ಯಕ್ತಿಗಳು. ಕಚಗುಳಿ ಮಾಡಿದರೂ ನಗದವರು.
* ನಿಮಗೆ ಅತ್ಯಂತ ಸುಂದರವೆನ್ನಿಸುವ ಸಂಗತಿಗಳು ಯಾವುವು?
_ ಅಪರಿಚಿತ ಬೀರುವ ಸಹಜ ನಗೆ..
_ ನಿಮ್ಮನ್ನು ವಿಸ್ಮಯಗೊಳಿಸುವ ಸಂಗತಿಗಳೇನು?
_ ಭಾಷೆ, ತರ್ಕ, ಸಿದ್ಧಾಂತಗಳಿಗೆ ನಿಲುಕದ ಬದುಕಿನ ದಿವ್ಯ ಕ್ಷಣಗಳು.
    ನಿಮ್ಮನ್ನು ಕಾಡುವ ಸಂಗತಿಗಳು ಯಾವುವು?
    _ ಮೋಡ ಮುಸುಕಿದ ಮಳೆಗಾಲದ ಸಮುದ್ರ. ಆಸ್ಪತ್ರೆಗಳು, ಜೈಲುಗಳು, ೪೦ ದಾಟಿದ ವೇಶ್ಯೆಯರು, ಮನೆಯಿಂದ ಓಡಿಹೋದ ಮಕ್ಕಳು...
(ಲಂಕೇಶ್ ಪತ್ರಿಕೆ, ಮಾರ್ಚ್ ೧೯೯೫)


Monday, March 3, 2014



ಆತ್ಮೀಯರೇ,

ಇಷ್ಟೊಂದು ವರ್ಷಗಳು ಬರೆದದ್ದನ್ನು, ಮುಂದೆ ಬರೆಯಬಹುದಾದುದನ್ನು ಹಾಗೆಯೇ ಅಂತರ್ಜಾಲದಲ್ಲಿ ತೇಲಿ ಬಿಟ್ಟು  ಅದು ಎಲ್ಲೆಲ್ಲೋ ತಲುಪಿ ಅಲ್ಲಿ ಹುಟ್ಟಬಹುದಾದ ಪ್ರತಿಕ್ರಿಯೆಗಳಬಗ್ಗೆ ಕುತೂಹಲ ಹೆಚ್ಚಾಗಿ ಕೊನೆಗೆ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ಮೊದಲ ಪೋಸ್ಟ್ ಯಾವುದಾಗ ಬೇಕು ಎಂದು ನನ್ನ ಇಡೀ ಬದುಕಿನ ಬಗ್ಗೆ  ಹಾಗೇ ಯೋಚಿಸಿದಾಗ ಮುಂಬೈನ ಬೆಚ್ಚಗಿನ ನೆನಪುಗಳು, ಮುಂಬೈಯ್ಯಿಂದ ನಾನು ಪಡೆದ ಜೀವನೋತ್ಸಾಹ, ಹುರುಪು, ಚೈತನ್ಯ, ಕಲಿತ ಪಾಠಗಳು, ಕಂಡ ಬದುಕಿನ ಬೇರೆಬೇರೆ ಮಗ್ಗಲುಗಳ ನೋವು ನಲಿವಿನ  ಝಲಕು ಗಳು ಹರಿದು ಬರುತ್ತವೆ. ಹಾಗಾಗಿ ಮೊದಲು ಮುಂಬೈ ಬಗ್ಗೆಯ ಒಂದು ಬರಹವನ್ನೇ ಹಾಕೋಣವೆಂದಿದ್ದೇನೆ. ಯಾವಾಗಲೂ ನನ್ನ ಬರವಣಿಗೆ ಇರುವಂತೆ ನನ್ನ ಬ್ಲಾಗ್ ನಲ್ಲೂ ಯಾವರೀತಿಯ ಕ್ರಮ, ಕಟ್ಟುಪಾಡುಗಳು ಇರುವುದಿಲ್ಲ. ನನ್ನ ಲಹರಿಗೆ ತಕ್ಕಂತೆ ಬಂದದ್ದನ್ನು ನಿಮೊಲ್ಲ ರೊಡನೆ ಹಂಚಿ ಕೊಳ್ಳುತ್ತೇನೆ. ಜೊತೆಗೆ ನನ್ನ ಹುಚ್ಚಿನಲ್ಲೊಂದಾದ ತಿರುಗಾಟದ ದೃಶ್ಯಗಳನ್ನೂ ನಿಮ್ಮೆದುರು ಇಡುತ್ತೇನೆ.  ದಯವಿಟ್ಟು ನಿಮಗೇನನ್ನಿಸಿತು ತಿಳಿಸಿ. ಪ್ರತಿಕ್ರಿಯೆ ಹೇಗೇ ಇರಲಿ, ಬರಲಿ. ಬರವಣಿಗೆಗೆ  ಅದಕ್ಕಿಂತ ಉತ್ಸಾಹ ತುಂಬುವುದು ಯಾವುದೂ ಇಲ್ಲ.

ಪ್ರೀತಿಯಿಂದ
ಉಮಾ ರಾವ್