Thursday, June 19, 2014

ಗುರುದತ್ತನ ಅಮ್ಮ ವಾಸಂತಿ ಪಡುಕೋಣೆ



ಜನ ಕಾಣದ ವಾಸಂತಿ ಪಡುಕೋಣೆ

ಅದೊಂದೇ ಸಲ ನಾನು ಅವರನ್ನು ನೋಡಿದ್ದು. ವರ್ಷಗಳ ಹಿಂದೆ, ಕರ್ನಾಟಕ ಸಂಘದಲ್ಲಿ ಹಿರಿಯ ಲೇಖಕಿಯರನ್ನು ಸನ್ಮಾನ ಮಾಡಿದಾಗ. ಆಗ ಚಿ.. ಮಂಗಳಾ ಮುಖ್ಯ ಅತಿಥಿಯಾಗಿದ್ದರು. ಆಗ ಅವರನ್ನು ಮೂಲತಃ ಕಂಡಿದ್ದುನನ್ನ ಮಗ ಗುರುದತ್ತ ಲೇಖಕಿಯಾಗಿ. ಗುರುದತ್ತನ ತಾಯಿಯಾಗಿ. ಅದರಾಚೆ ಯಾರಿಗೂ ಅವರ ಬಗ್ಗೆ ಅಷ್ಟೊಂದು ಕುತೂಹಲವಿರಲಿಲ್ಲ. ಆದರೆ, ಅವರ ಬಗ್ಗೆ ಎಲ್ಲರೂ ತಿಳಿಯಬೇಕಾದ್ದು ಇನ್ನೂ ಬಹಳವಿತ್ತು.
ಅವರು ಬರ್ಮಾದಲ್ಲಿ ಹುಟ್ಟಿದವರು. ೧೨ ವರ್ಷಕ್ಕೆ ಮದುವೆಯಾಗಿ, ೧೬ಕ್ಕೆ ಮಕ್ಕಳನ್ನು ಹಡೆಯಲು ಪ್ರಾರಂಭಿಸಿದವರು. ಕ್ಲರ್ಕ್ ಆಗಿದ್ದ ಗಂಡನೊಡನೆ, ಯಾವಾಗಲೂ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟಿನಲ್ಲಿ ಅತ್ಯಂತ ಪ್ರತಿಭಾವಂತರಾದ ಐದು ಮಕ್ಕಳನ್ನು ಸರಿಯಾದ ವಿದ್ಯಾಭ್ಯಾಸ, ಮೌಲ್ಯಗಳನ್ನು ಕೊಟ್ಟು ಬೆಳೆಸಲು ಹೆಣಗಿದವರು. ಬೆಂಗಳೂರು, ಕಲ್ಕತ್ತಾ, ಮುಂಬೈಯಲ್ಲಿ ಕೆಲಕೆಲ ವರ್ಷಗಳು ಕಳೆಯುತ್ತಾ ಬಂಗಾಲಿ, ಹಿಂದಿ, ಇಂಗ್ಲಿಷ್, ಕನ್ನಡ, ಗುಜರಾತಿ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ಪರಿಣತಿ ಪಡೆದವರು. ಮೊದಲು ಹೆಚ್ಚು ಶಾಲೆಯೇ ಕಂಡಿಲ್ಲದೆ, ಗುರುದತ್ತನೊಡನೆಯೇ ಮೆಟ್ರಿಕ್ ಪಾಸ್ ಮಾಡಿದವರು. ಸಮಯ ಸಿಕ್ಕಾಗಲೆಲ್ಲಾ ಸಿಕ್ಕ ಪುಸ್ತಕ, ಪತ್ರಿಕೆಗಳನ್ನು ಓದಿ ಬದುಕೆಲ್ಲಾ ಕಲಿತವರು. ಶಾಲೆಗಳಲ್ಲಿ ಕಲಿಸಿ, ಅವಕಾಶವಿದ್ದಾಗ ಗುಜರಾತಿ ಮಹಿಳೆಯರಿಗೆ ಇಂಗ್ಲಿಷ್ ಹೇಳಿಕೊಟ್ಟು, ರಾತ್ರಿ ಎಲ್ಲಾ ಕೂತು ವಾಟರ್ ಥಾಮ್ಸ್ನ್ನಿಂದ ಬರುತ್ತಿದ್ದ ಅಡ್ವಟೈಜಿಂಗ್ ಕಾಪಿಗಳನ್ನು ಕನ್ನಡ, ಬಂಗಾಲಿ, ಹಿಂದಿಗಳಿಗೆ ಅನುವಾದ ಮಾಡಿ ಸಂಸಾರ ತೂಗಿಸಲು ಕಷ್ಟಪಟ್ಟವರು.
ಮಹಾತ್ಮಾಜಿಯವರ ಆಂದೋಳನದಲ್ಲಿ ಸಕ್ರಿಯ ಪಾತ್ರ ವಹಿಸಲು ಆಗದಾಗ ಒದ್ದಾಡಿದವರು. ಕತೆ, ಲೇಖನ, ಚಿತ್ರಕತೆ, ಕಾದಂಬರಿ, ಆತ್ಮಕಥೆ, ಬೇರೆ ಬೇರೆ ಭಾಷೆಗಳಿಂದ ಪ್ರಖ್ಯಾತ ಕಾದಂಬರಿಗಳ ಅನುವಾದ, ನಾಟಕ, ಸಿನಿಮಾ-ಹೀಗೆ ಹೊಸ ಹೊಸ ಅಭಿವ್ಯಕ್ತಿಗಳ ಹುಡುಕಾಟದಲ್ಲೇ ಇದ್ದವರು. ಮಧ್ಯಮ ವರ್ಗೀಯ ಮೌಲ್ಯಗಳಲ್ಲಿ ಹೂತು ಹೋದ ಜನಮಗ ಕುಣಿತ ಕಲಿಯಲು ಒಪ್ಪಿಗೆ ಕೊಟ್ಟಳುಎಂದೆಲ್ಲಾ ಹಂಗಿಸಿದರೂ ಲಕ್ಷಿಸಿದೆ, ಗುರುದತ್ತನ ಪ್ರತಿಭೆ, ಆಸಕ್ತಿಗಳನ್ನು ಗುರುತಿಸಿ, ಉದಯಶಂಕರರ ಅಲ್ಮೋಡಾದ ನೃತ್ಯಶಾಲೆಗೆ ಅವನನ್ನು ಕಳಿಸಿದವರು. ಬದುಕೆಲ್ಲಾ ಎಡಬಿಡದೆ ಕಾಡುತ್ತಿದ್ದ ಗುರುದತ್ತ, ಗೀತಾ, ಅವರ ಮಗ ತರುಣನ ಅಕಾಲ ಸಾವಿನ ನೋವಿನ ನೆರಳಿನಲ್ಲೇ, ಒಬ್ಬರೇ ಮಾತುಂಗಾದ ತಮ್ಮ ಹಳೆಯ ಮನೆಯಲ್ಲಿ ಇರುತ್ತಾ, ಸುತ್ತುಮುತ್ತಲಿನ ಜೋಪಡಿಗಳ ಮಕ್ಕಳಿಗೆ ಪಾಠ-ಹಾಡು ಕಲಿಸಲು, ನೋಡಿಕೊಳ್ಳಲು ಜೊತೆಗಿದ್ದ ಮಂಜುಳಾಗೆ ಇಂಗ್ಲಿಷ್ ಹೇಳಿಕೊಡಲು ಪ್ರತಿದಿನ ಕೂತವರು.
ತಮ್ಮ ಹಕ್ಕುಗಳ ಬಗ್ಗೆ, ಸಮಾಜದಲ್ಲಿ ತಮ್ಮ ಸ್ಥಾನದ ಬಗ್ಗೆ, ಎಲ್ಲ ಕಡೆ ತಾವು ಎದುರಿಸುತ್ತಿರುವ ಶೋಷಣೆಯ ಬಗ್ಗೆ, ಗಂಡಿನಿಂದ ತಮಗಾಗುತ್ತಿರುವ ಅನ್ಯಾಯ, ದಬ್ಬಾಳಿಕೆಯ ಬಗ್ಗೆ, ಒಳಗು-ಹೊರಗುಗಳನ್ನು ಸಮವಾಗಿ ತೂಗಿಸಲು ತಾವು ಪಡಬೇಕಾದ ಶ್ರಮದ ಬಗ್ಗೆ, ತಮಗೆ ಸಿಗದ ಅವಕಾಶಗಳ ಬಗ್ಗೆ, ಮಾಡಲಾರದ ನಿರ್ಧಾರಗಳ ಬಗ್ಗೆ ಉಚ್ಛ ಸ್ವರದ ಘೋಷಣೆಗಳನ್ನು ಸಿಕ್ಕ ವೇದಿಕೆಗಳಿಂದ ಮಾಡುತ್ತಿರುವ ಹಲವು ಸ್ತ್ರೀವಾದಿಗಳಿಗಿಂತ ತುಂಬಾ ಭಿನ್ನ ವಾಸಂತಿ. ಯಾವ ಸೊಲ್ಲಿಲ್ಲದೆ, ತಾವು ಬದುಕಿದ ರೀತಿಯಿಂದಲೇ, ಬದುಕಿನ ಬಗ್ಗೆ ಅತ್ಯಂತ ಮಹತ್ವದ, ಪರಿಣಾಮಕಾರಿಯಾದ ಹೇಳಿಕೆಗಳನ್ನು ನೀಡಿದವರು. ಸರಿ ತೋರಿದಂತೆ ಬಾಳಿದವರು.
ವಾಸಂತಿ ಪಡುಕೋಣೆ ಏಪ್ರಿಲ್ ೧ರಂದು ತಮ್ಮ ೮೫ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರ ಬಗ್ಗೆ ಲೇಖನಕ್ಕಾಗಿಪತ್ರಿಕೆಯಿಂದ ಫೋನ್ ಬಂದಾಗ, ಬರೆಯುವ ಮೊದಲು ಅವರು ಮಗಳು ಕಲಾವಿದೆ ಲಲಿತಾ ಲಾಜ್ಮಿಯವರೊಡನೆ ಮಾತಾಡಬೇಕೆನಿಸಿತು. ಅಂಧೇರಿಯಲ್ಲಿರುವ ಅವರಿಗೆ ಫೋನ್ ಮಾಡಿದಾಗ, - ದಿನಗಳ ನಂತರ ತಾವು ವಾಸಂತಿಯವರ ಮಾತುಂಗಾದ ಮನೆಗೆ ಬಂದು ದಿನ ಇರುವುದಾಗಿಯೂ, ಅಲ್ಲೇ ನಾನು ಅವರನ್ನು ಬಂದು ನೋಡಬಹುದೆಂದೂ ಹೇಳಿದರು. ಅಂದು ಸಂಜೆ ನಾನವರ ಮನೆಯ ಬೆಲ್ ಮಾಡಿದಾಗ, ಬಾಗಿಲು ತೆಗೆದವರು ಲಲಿತಾ, ಚೆಲುವೆ. ಅತ್ಯಂತ ಸ್ನೇಹಮಯಿ. ಅವರ ಹಿಂದೆಯೇ ಬೊಗಳುತ್ತಾ ಬಂದ ಅವರ ಎರಡು ನಾಯಿಗಳಿಗೆ ಸುಮ್ಮನಿರಲು ಹೇಳುತ್ತಾ ನನ್ನನ್ನು ಕೂರಲು ಹೇಳಿದರು. “ಅಮ್ಮ ಇಲ್ಲದಿರುವುದನ್ನು ಇವರಿಬ್ಬರೂ ತುಂಬಾ miss ಮಾಡ್ತಿದಾರೆ... ಅದಕ್ಕೇ ತುಂಬಾ ರೆಸ್ಟಲೆಸ್ ಆಗಿದಾರೆ. ಒಳಗೆ ಬಿಟ್ಟು ಬರ್ತೀನಿ...” ಎಂದವರೇ ಒಳಗೆ ಹೋದರು. ವಾಸಂತಿಯೊಡನೆ ೨೦ ವರ್ಷದಿಂದ ಇದ್ದ ದಕ್ಷಿಣ ಕನ್ನಡದ ಹುಡುಗಿ ಮಂಜುಳಾ ತಂದ ನಿಂಬೆಹಣ್ಣಿನ ಶರಬತ್ತು ಕುಡಿಯುತ್ತಾ, ಅವಳೊಡನೆ ಮಾತಾಡುತ್ತಿದ್ದಂತೆ, ಸ್ವಲ್ಪ ಹೊತ್ತಿನ ನಂತರ ಮರಳಿ ಬಂದು ಕೂತರು. ಅವರೊಡನೆ ತುಂಬಾ ಪುಸ್ತಕಗಳು, ಫೋಟೋಗಳು, ಹಳದಿ ತಿರುಗಿದ ಬಿಳಿ ಹಾಳೆಗಳ ಲೇಖನಗಳು ಇದ್ದವು. ಅದನ್ನು ನಮ್ಮೆದುರಿಗಿದ್ದ ಟೇಬಲ್ ಮೇಲೆ ರಾಶಿ ಹಾಕಿದರು.
ಎಷ್ಟೋ ವರ್ಷಗಳ ಡೈರಿಗಳು. ರಾಶಿ ರಾಶಿ ಫೋಟೋಗಳು. ಗುರುದತ್ ಗೀತಾ, ಮಕ್ಕಳು ಲೋನಾವಾಲಾದಲ್ಲಿ ಕಳೆದ ಗಳಿಗೆಗಳು, ಸಿನಿಮಾ ಮುಹೂರ್ತಗಳು, ವಹೀದಾ ಚಿತ್ರಗಳು, ವಾಸಂತಿ ತನ್ನ ಪ್ರೀತಿಯ ಬೆಕ್ಕನ್ನು ಎತ್ತಿಕೊಂಡು ನಿಂತಿರುವ ಹದಿಹರೆಯದ ಯುವತಿ. ಆತ್ಮಾರಾಮರ ಚಿತ್ರೋದ್ಯಮದ ಗೆಳೆಯರು. ಹುಟ್ಟುಹಬ್ಬ, ಪಾರ್ಟಿ, ಅವಾರ್ಡ್ ಬಂದ ಖುಷಿಯ ಸಂತೋಷಕೂಟಗಳು. ಲಲಿತಾ, ಗುರುದತ್ತ, ಆತ್ಮಾರಾಮ, ದೇವಿದತ್, ವಿಜಯ ಎಲ್ಲರೊಂದಿಗೆ ನಗುನಗುತ್ತಾ ಇರುವ ಸಂತೃಪ್ತ ತಾಯಿ. ಪ್ರಖ್ಯಾತ ಬ್ರಿಟಿಷ್ ಫೋಟೋಗ್ರಾಫರ್ ಒಬ್ಬರು ತೆಗೆದ ವಾಸಂತಿಯ ಅಪೂರ್ವ ಚಿತ್ರಗಳು. ಕಲ್ಪನಾ, ಅರುಣಾ, ತರುಣ... ಎಲ್ಲಾ ಮೊಮ್ಮಕ್ಕಳು. ಹೊಳಪುಗಣ್ಣಿನ ಪುಟಾಣಿಗಳು. ಮಧ್ಯೆ ಯಾವ್ಯಾವುದೋ ಪತ್ರಗಳು. ‘ಸೋಷಿಯಲ್ ವೆಲ್ಫೇರ್ಎಂಬ ಇಂಗ್ಲಿಷ್ ಲೇಖನ. ಬುದ್ಧದೇವ ಬಸು ಅವರ ಬಂಗಾಲಿ ಕತೆಯನ್ನು ಕನ್ನಡಕ್ಕೆ ಮಾಡಿದ ಅನುವಾದಅಪ್ಪನಾಗುವುದು.” ಸ್ತೋತ್ರಗಳು. ಮೊಮ್ಮಗಳು ಕಲ್ಪನಾ ಫೋರ್ಟ್ ಕಾನ್ವೆಂಟಿನಲ್ಲಿ ಧರಿಸುತ್ತಿದ್ದ ಬ್ಯಾಡ್ಜ್.
ಆತ್ಮಾರಾಮ್ ಅವರ ರೂಯಿಯಾ ಕಾಲೇಜಿನ ಐಡೆಂಟಿಟಿ ಕಾರ್ಡ್. ವಿವೇಕಾನಂದರ ಅಮೃತವಾಣಿ.
ಅದನ್ನೆಲ್ಲಾ ವಿಂಗಡಿಸುತ್ತಾ, ನನಗೆ ತೋರಿಸುತ್ತಾ ಲಲಿತಾ ಅಮ್ಮನನ್ನು ನೆನೆಸಿಕೊಂಡರು.


ಲಲಿತಾ ನೆನೆದಅಮ್ಮ

ಇವತ್ತಿಗೆ ಅವರು ಹೋಗಿ ಸರಿಯಾಗಿ ಒಂದು ತಿಂಗಳು. ಈಗ ತಾನೇ ಅವರ ಕಬರ್ಡ್ ಕ್ಲೀನ್ ಮಾಡುತ್ತಿದ್ದೆ. ಎಷ್ಟೊಂದು ಪುಸ್ತಕಗಳಿತ್ತು ಅಮ್ಮನ ಹತ್ತಿರ... ಷಿ ವಸ್ ವೆರಿ ಸೆಂಟಿಮೆಂಟಲ್... ಬೀರು ತುಂಬಾ ಕಾಗದಗಳು, ಡೈರಿಗಳು, ಫೋಟೋಗಳು, ಮೊಮ್ಮಕ್ಕಳ ಚಿಕ್ಕಪುಟ್ಟ ಗ್ರೀಟಿಂಗ್ ಕಾರ್ಡುಗಳು... ಅಲ್ಲದೆ ಷಿ ವಸ್ ವೆರಿ ಜನರಸ್... ಕನ್ನಡ ಕೇಳಿಬಿಟ್ಟರಂತೂ ತುಂಬಾ ಖುಷಿ... ತಮ್ಮ ಪುಸ್ತಕಗಳನ್ನು ಕೊಟ್ಟುಬಿಡೋರು... ಹಾಗಾಗಿ ಈಗನನ್ನ ಮಗ ಗುರುದತ್ತಇರುವುದು ಕೇವಲ ಕಾಪಿ... ನಾವು ಮಕ್ಕಳು ಒಂದೊಂದು ಇಟ್ಟುಕೊಂಡರೆ ಒಂದು ಉಳಿಯುತ್ತೆ... ಇನ್ನು ಇದ್ಯಾವುದು... ನನಗೆ ಕನ್ನಡ ಓದೋಕೆ ಬರೊಲ್ಲ... ಹೇಳಿ... ಬಿಮಲ್ ಮಿತ್ರಾಮಿಥುನ ಲಗ್ನಇದೊಂದೇ ಕಾಪಿ ಉಳಿದಿದೆ. ಅವರಜೀವನ ಹೋರಾಟಆತ್ಮಕಥೆಯಂತೂ ಒಂದು ಕಾಪಿಯೂ ಇಲ್ಲ... ಬೆಂಗಳೂರಲ್ಲಿ ಸಿಕ್ಕಬಹುದೇನು?
ತುಂಬಾ ಕಷ್ಟದಲ್ಲಿ ಬೆಳೆದೆವು ನಾವೆಲ್ಲಾ... ಅಮ್ಮ ಏನಾದರೂ ಕೆಲಸ ಮಾಡುತ್ತಿದ್ದಳು ಸಂಸಾರ ತೂಗಿಸೋಕೆ. ಅಪ್ಪ ಕ್ಲರ್ಕ್ ಆಗಿದ್ದರು. ಕಲ್ಕತ್ತಾದಿಂದ ಮಹಾಯುದ್ಧದ ಸಮಯದಲ್ಲಿ ಹೆದರಿ ಸಾವಿರಾರು ಜನ ಓಡಿಬಂದಾಗ, ನಾವೂ ಬಂದಿದ್ದೆವು-ಅಮ್ಮನ ಜೊತೆ. ಅಪ್ಪ, ಗುರುದತ್ತ ಕಲ್ಕತ್ತಾದಲ್ಲೇ ಉಳಿದಿದ್ದರು. ಹೇಗೆ ತುಂಬಿತ್ತು ಟ್ರೈನುಗಳು, ನಮ್ಮಂಥ ಮಕ್ಕಳನ್ನೆಲ್ಲಾ ಕಿಟಕಿಯಿಂದ ಒಳಗೆ ತಳ್ಳಿದರು. ಅಮ್ಮ ದಿನ ನಿಂತೇ ಪ್ರಯಾಣ ಮಾಡಿದ್ದಳು. ಆಗ, ಮುಂಬೈಗೆ ಬಂದರೂ ಕಷ್ಟವೇ. ಒಂದು ಸಲ ನೆನಪಿದೆ. ನಾನಿನ್ನೂ ತುಂಬಾ ಚಿಕ್ಕಹುಡುಗಿ. ಅಮ್ಮ ರೇಷನ್ ಅಂಗಡಿಯಿಂದ ಸೀಮೆಎಣ್ಣೆ ತರಲು ಕಳಿಸಿದ್ದಳು. ನಾನು ಗಂಟೆ ಕ್ಯೂನಲ್ಲಿ ನಿಲ್ಲಬೇಕಾಯಿತು. ನಂಬುತ್ತೀರಾ? ಕೊನೆಗೆ ನನ್ನ ಸರದಿ ಬಂದಾಗ ಸೀಮೆಎಣ್ಣೆ ಮುಗಿದಿತ್ತು!
ಅಮ್ಮ ತುಂಬಾ ಲೋನ್ಲಿಯಾಗಿದ್ದರು. ಕಳೆದ ವರ್ಷಗಳಿಂದ ಮಾತುಂಗಾ ಮನೆಯಲ್ಲಿ ಒಬ್ಬರೇ ಇದ್ದರು. ಅದು ಅವರ ಇಷ್ಟ. ಜೊತೆಗೆ, ಮಂಜುಳಾ ಅವರನ್ನು ನೋಡಿಕೊಳ್ಳೋಕೆ ಇದ್ದಳು. ನಾವು ಮಕ್ಕಳೆಲ್ಲಾ ಬೊಂಬಾಯಲ್ಲೇ ಇರುವುದರಿಂದ ಆಗಾಗ ಹೋಗಿ ಬರುತ್ತಿದ್ದೆವು. ಅವಳಿಗೆ ಪತ್ರಗಳನ್ನು ಬರೆಯುವ ಹುಚ್ಚು ತುಂಬಾ ಇತ್ತು. ಫ್ರೆಂಡ್ಸ್ಗೆ, ಕಜಿನ್ಸ್ಗೆ, ದೂರದ ನೆಂಟರಿಷ್ಟರಿಗೆ, ಎಂದೋ ಎಲ್ಲೋ ಪಕ್ಕದ ಮನೆಯಲ್ಲಿದ್ದವರಿಗೆ-ನೂರಾರು ಪತ್ರ ಬರೆಯುತ್ತಿದ್ದಳು. ಇತ್ತೀಚೆಗೆ ಬೇರೆ ಬರವಣಿಗೆ ಕಡಿಮೆಯಾಗಿತ್ತು. ಆದರೆ ಪತ್ರ ಬರೆಯುವುದು ಮಾತ್ರ ಕಡಿಮೆಯಾಗಿರಲಿಲ್ಲ.
ತುಂಬಾ ಇತ್ತೀಚೆಗೆ... ಅದೂ ಆತ್ಮಾರಾಮ ಹೋದಮೇಲೆ... ಪದೇಪದೇ ಹೇಳೋರು. ದೇವರೇ, ನನಗೆ ಇನ್ನು ಬದುಕೋಕೆ ಇಷ್ಟವಿಲ್ಲ. ವೈ ಡೋಂಟ್ ಯೂ ಟೇಕ್ ಮೀ ಅವೇ?
ಷಿ ಲೌವ್ಡ್ ಮ್ಯಾಕರೋನಿ ಅಂಡ್ ಮೊಗ್ರಾಸ್... ಹೌದು. ಮಲ್ಲಿಗೆ ಹೂ ಅಂದರೆ ಅವರಿಗೆ ತುಂಬಾ ಪ್ರೀತಿ. ಅವರು ಹೋಗುವ ಮುಂಚೆ ನಾನು, ನನ್ನ ಗಂಡ ಅಮ್ಮನ್ನ ನೋಡಲು ಹೊರಟಾಗ, ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್ನಲ್ಲಿ ಬಂದ ಗಜರಾವಾಲಿ ಹತ್ತಿರ ಮಲ್ಲಿಗೆ ಹೂ ಕೊಂಡಿದ್ದೆವು... ಅಮ್ಮ ಎಷ್ಟು ಖುಷಿಯಿಂದ ಮುಡಿದುಕೊಂಡಿದ್ದರು.
ಅಮ್ಮ ಒರಿಜಿನಲ್ ಆಗಿ ಬರೆಯೋದು ಬಿಟ್ಟು ಎಷ್ಟೋ ವರ್ಷಗಳಾಗಿ ಹೋದವು. ೩೦-೪೦ ವರ್ಷಗಳೇ ಆಗಿರಬೇಕು. ಯಾವಾಗ್ಲೂ ಡಿಪ್ರೆಸ್ಡ್ ಆಗಿರ್ತಿದ್ರು. ನನಗೆ ನೆನಪಿದ್ದಂತೆ, ಗುರುದತ್ತ ಹೋದಮೇಲೆ, “ನನ್ನ ಮಗ ಗುರುದತ್ತಬಿಟ್ಟರೆ, ಮಾಡಿದ್ದು ಬರೀ ಟ್ರಾನ್ಸ್ಲೇಷನ್ಸ್. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ಕನ್ನಡದಲ್ಲಿ ಏನು ಪುಸ್ತಕ ಬರೆದರೂ ಪಬ್ಲಿಷ್ ಮಾಡುವುದು ತುಂಬಾ ಕಷ್ಟ ಅಂತಿದ್ರು. “ಮೈ ಸನ್ ಗುರುದತ್ಇಂಗ್ಲಿಷ್ನಲ್ಲಿ ಬರೆದದ್ದರಿಂದ ತಕ್ಷಣಇಂಪ್ರ್ಲಿಂಟ್ನಲ್ಲಿ ಪಬ್ಲಿಷ್ ಆಯಿತು. ಇಲ್ಲದಿದ್ದರೆ... ಅವರಿಗೆ ಬಗ್ಗೆ ತುಂಬಾ ಫ್ರೆಸ್ಟ್ರಷನ್ ಇತ್ತು. ತಮ್ಮ ಬರವಣಿಗೆಗೆ ಏನೂ ರೆಸ್ಪಾನ್ಸ್ ಸಿಗದಿದ್ದುದು... ಬರಿ ಹಣ ಅಲ್ಲ... ಯಾವ ರೀತಿ ರೆಕೊಗ್ನಿಷನ್ ಸಿಕ್ಕಿರಲಿಲ್ಲ.
ನಮ್ಮಲ್ಲಿ ಗುರುದತ್, ಆತ್ಮರಾಮ್, ದೇವಿದತ್ ಫಿಲ್ಮ್ ಆರಿಸಿಕೊಂಡರು. ಇನ್ನು ವಿಜಯ್ ಅಡ್ವಟೈಜಿಂಗಿಗೆ ಹೋದ. ಇತ್ತೀಜೆಗೆ ಅವನು ಒಂದು ಮರಾಠಿ ಸೀರಿಯಲ್ ಮಾಡಿದಾನೆ ಟಿವಿಗೆ. ಅದು ಚೆನ್ನಾಗಿ ಬಂದಿದೆ. ನಾನೊಬ್ಬಳೇ ಪೇಂಟ್ ಮಾಡೋದು. ನನ್ನ ಮಗಳು ಕಲ್ಪನಾ ಕೂಡ ಫಿಲ್ಮ್ ಡೈರೆಕ್ಟ್ ಮಾಡ್ತಾಳೆ... ಅಮ್ಮನಿಗೆ ಕಲ್ಪನಾ, ಗುರುದತ್ತ ತುಂಬಾ ಅಚ್ಚುಮೆಚ್ಚು ಅನ್ನಿಸ್ತಿತ್ತು.
ಅಮ್ಮನಿಗೆ ಉಪ್ಪಿನಕಾಯಿ ಅಂದ್ರೆ ತುಂಬಾ ಇಷ್ಟ. ಪ್ರತಿ ಬೇಸಿಗೆಯಲ್ಲಿ ಅವರೇ ಉಪ್ಪಿನಕಾಯಿ ಹಾಕಿ ನಮಗೆಲ್ಲಾ ಕೊಡೋರು. ವರ್ಷ ಅವರು ಮಾವಿನಕಾಯಿ ತರಿಸಿದಾಗ ನಾನು ಗಲಾಟೆ ಮಾಡಿದ್ದೆ. ಸುಮ್ಮನೆ ಯಾಕೆ ಒದ್ದಾಡ್ತೀಯಾಂತ... ವರ್ಷ ಹಾಕಿಬಿಡ್ತೀನಿ. ಮುಂದಿನ ವರ್ಷ ನಾನಿರೋಲ್ಲ ಅಂದಿದ್ರು...
ನಾವೆಲ್ಲಾ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪ್ರಖ್ಯಾತರಾದಮೇಲೆ ಅವರಿಗೇಕೋ ಅನ್ನಿಸ್ತಿತ್ತು... ನನಗೂ ಕಾಲದವರಿಗೆ ಸಿಕ್ಕ ಅವಕಾಶ ಸಿಕ್ಕಿದ್ರೆ ಏನೆಲ್ಲಾ ಸಾಧಿಸಬಹುದಿತ್ತು ಅಂತ... ಆದರೆ ಹಾಗೆ ನೋಡಿದ್ರೆ ಗುರುದತ್ಗೂ ಅವನು ಬದುಕಿರೋವರೆಗೂ ಈಗ ಸಿಗುತ್ತಿರುವಂಥಾ ರೆಕೊಗ್ನಿಷನ್ ಏನೂ ಸಿಕ್ಕಿರಲಿಲ್ಲ. ಅವನ ಫಿಲ್ಮ್ಗೆ ಅವಾರ್ಡ್ಗಳು ಬಂದವು. ಜನ ಇಷ್ಟಪಟ್ಟರು... ಆದರೆ ಅವನು ಹೋಗಿ ಇಷ್ಟು ವರ್ಷಗಳ ಮೇಲೆ ಈಗ ಪ್ರಪಂಚದಲ್ಲೆಲ್ಲಾ ಅವನ ಫಿಲ್ಮ್ಗಳ ಫೆಸ್ಟಿವಲ್ಗಳನ್ನು, ಸೆಮಿನಾರ್ಗಳನ್ನು ನಡೆಸ್ತಿದಾರೆ... ಇಂಥಾ ಪ್ರಖ್ಯಾತಿ ಆಗ ಅವನಿಗೆ ಸಿಕ್ಕಿರಲಿಲ್ಲ.
ನಮ್ಮ ತಂದೆ ತೀರಿಕೊಂಡಾಗ ಅಮ್ಮ ನಮ್ಮೆಲ್ಲರನ್ನೂ ಕರೆದು ಹೇಳಿದ್ರು, “ನೋಡಿ, ನನಗೆ ಬಿಳೀ ಸೀರೆ ಉಟ್ಕೊಳ್ಳೋದು, ಬರೀ ಹಣೇಲಿರೋದು ಇಷ್ಟ ಇಲ್ಲ... ನಾನು ಹೇಗೆ ಇದ್ದೇನೋ... ಹಾಗೇ ಇರ್ತೀನಿ...” ನಾವೆಲ್ಲಾ ಹೇಳಿದೆವು, “ಅಮ್ಮ ನಿಂಗೆ ಹೇಗೆ ಬೇಕೋ ಹಾಗಿರುಅಂತ. ಅವರಿಗೆ ಎಂದೂ ಬಿಳೀ ಸೀರೆ ಅಷ್ಟು ಹಿಡಿಸುತ್ತಿರಲಿಲ್ಲ. ನಾನೊಂದು ಸಲ ಅಹಮದಾಬಾದಿಗೆ ಹೋದಾಗ ಒಂದು ಕಪ್ಪಂಚಿನ ಬಿಳೀಸೀರೆ ತಂದುಕೊಟ್ಟಿದ್ದೆ. ಅದನ್ನು ಉಡಲೇ ಇಲ್ಲ! ಆದ್ದರಿಂದಲೇ, ಅವರು ಹೋದಾಗಲೂ ನಾವು ಪದ್ಧತಿಯಂತೆ ಅವರಿಗೆ ಬಿಳಿಸೀರೆ ಹೊದ್ದಿಸಲಿಲ್ಲ. ಮುನ್ನಿ ಕಬೀರ್ ಗುರುದತ್ತನ ಮೇಲೆ ಚಿತ್ರ ತಯಾರಿಸುತ್ತಿದ್ದಾಗ, ಪದೇ ಪದೇ ಅಮ್ಮನ ಭೇಟಿಯಾಗಿ, ಅವರೊಡನೆ ಚರ್ಚೆ ಮಾಡೋಕೆ ಬರ್ತಿದ್ದರು. ಅವರಿಗೆ ಅಮ್ಮನ್ನ ಕಂಡರೆ ತುಂಬಾ ಪ್ರೀತಿ. ಸ್ವಲ್ಪ ದಿನಗಳ ಹಿಂದೆ, ಅವರು ಅಮ್ಮನಿಗೆ ಒಂದು ಒಳ್ಳೇ ಬಣ್ಣಬಣ್ಣದ ಟಸರ್ ಸೀರೆ ತಂದು ಕೊಟ್ಟಿದ್ದರು. ಅಮ್ಮ ಅದನ್ನುನನ್ನ ಹುಟ್ಟಿದಹಬ್ಬದ ದಿನ ಉಟ್ಕೋತೀನೀಂತಇಟ್ಕೊಂಡಿದ್ದರು ಹಾಗೇ. ವರ್ಷ ಅವರ ಹುಟ್ಟುಹಬ್ಬ ನೋಡಲೇ ಇಲ್ಲ. ಮೇ ೨೫. ನಾವೆಲ್ಲಾ ಅವರ ಹುಟ್ಟುಹಬ್ಬದ ದಿನ ಯಾವಾಗ್ಲೂ ಸೇರ್ತಿದ್ದೆವು. ಸೀರೆ ಅವರಿಗೆ ಹೊದಿಸಿದ್ವಿ...
ಇತ್ತೀಚೆಗೆ ಗುರುದತ್ತನ ಮಗ-ಮಗಳು, ಅವನ ಲೋನಾವ್ಲಾ ಫಾರ್ಮ್ ಹೌಸ್ ಮಾರಿದಾಗ ಅಮ್ಮನಿಗೆ ತುಂಬಾ ಬೇಸರವಾಯ್ತು. ಗುರುದತ್ ಅದನ್ನು ತುಂಬಾ ಪ್ರೀತಿಯಿಂದ ಕಟ್ಟಿದ್ದ. ಎಷ್ಟು ಸಲ ನಾವೆಲ್ಲಾ ಸೇರ್ತಿದ್ವಿ ಅಲ್ಲಿ. ಎಷ್ಟೊಂದು ಫಿಲ್ಮ್ ಸ್ಕ್ರಿಪ್ಟ್ ಚರ್ಚೆ ಆಗ್ತಾ ಇತ್ತು. ಈಗ ಕೂಡಾ ನೆನಪಿದೆ.. “ಸಾಹಿಬ್ ಬೀಬಿ ಔರ್ ಗುಲಾಮ್ ಮರದ ಕೆಳಗೆ ಕೂತು ಚರ್ಚಿಸಿದ್ದು... ಅಮ್ಮ ಕೂಡ ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಬರೆಯೋರು. ಮೊನ್ನೆ ಹೋದಾಗ ನೋಡಿದರೆ, ಅಲ್ಲೆಲ್ಲಾ ಪಾಳು ಬಿದ್ದಿತ್ತು. ನಾವು ಕೂಡುತ್ತಿದ್ದ ಸ್ಥಳದಲ್ಲಿ ಹುಚ್ಚಾಪಟ್ಟೆ ಕಾಡುಗಿಡ, ಪೊದೆ ಬೆಳೆದು ಬಿಟ್ಟಿತ್ತು... ಬೇಸರವಾಯಿತು...
ಅಮ್ಮನಿಗೆ ಮೊದಲಿಂದ ಕಲಿಸೋ ಹುಚ್ಚು ಬಹಳ. ಎಷ್ಟೊಂದು ಸ್ಕೂಲುಗಳಲ್ಲಿ, ಮನೆಯಲ್ಲಿ ಹೆಂಗಸರಿಗೆ-ಪಾಠ ಹೇಳ್ತಿದ್ರು. ಕೊನೇ ದಿನದವರೆಗೂ ಸುತ್ತಮುತ್ತಲಿನ ಜೋಪಡಿಗಳಲ್ಲಿರುವ ಮಕ್ಕಳು, ಇಲ್ಲಿನ ಕಸಗುಡಿಸುವವರ, ಕೆಲಸದವರ ಮಕ್ಕಳಿಗೆ ದಿನಾ ಕಲಿಸುತ್ತಿದ್ದರು. ಮಂಜುಳಾಗೆ ಇಂಗ್ಲಿಷ್ ಹೇಳಿಕೊಡ್ತಿದ್ದರು. ವಿವೇಕಾನಂದರ ಪುಸ್ತಕಗಳನ್ನು ಓದಿ ಹೇಳುತ್ತಿದ್ದರು. ಅವರು ಅಷ್ಟೇ ಶ್ರದ್ಧೆಯಿಂದ ಕಲಿಯುವುದಿಲ್ಲ ಎಂಬ ನೋವು ಇತ್ತು.
ಅವರು ಮನೆಗೆ ಬಂದು ಹೋಗುವವರೊಡನೆ, ಕೆಲಸದವರು-ದೋಭಿಗಳೊಡನೆ ಇತ್ತೀಚೆಗೆ ತುಂಬಾ ಮಾತಡೋರು... ಅವರ ಹತ್ತಿರ ತಮ್ಮ ವೈಯಕ್ತಿಕ ನೋವುಗಳನ್ನು ಸಂಸಾರದ ತೊಂದರೆಗಳನ್ನು ಬಿಚ್ಚುಮನಸ್ಸಿನಿಂದ ಹೇಳಿಕೊಳ್ಳೋರು!... ನಾವೆಷ್ಟು ಹೇಳಿದರೂ ಅವರಿಗೆ ಅರ್ಥ ಆಗ್ತಿರಲಿಲ್ಲ. ಎಷ್ಟೋ ಜನ ಕೇವಲ ಕುತೂಹಲಕ್ಕೋಸ್ಕರ ಹಾಗೆ ಬಂದು ಕೇಳ್ತಾರೇಂತ.
ತುಂಬಾ ಚೆನ್ನಾಗಿ ಅಡಿಗೆ ಮಾಡೋರು ಅಮ್ಮ. ದಿನಾ ರುಟೀನ್ ಕುಕಿಂಗ್ ಅವರಿಗೆ ಇಷ್ಟ ಇರ್ಲಿಲ್ಲ. ನಾವು ಅವರು ಹೋಗುವ ಒಂದು ವಾರ ಮುಂಚೆ ಹೋದಾಗಲೂ, ಏನೆಲ್ಲಾ ಮಾಡಿಸಿದ್ದರು. ಮಂಜುಳಾಗೆ ನಮ್ಮ ರೀತಿ ಅಡಿಗೆ ಎಲ್ಲಾ ಹೇಳ್ಕೊಟ್ಟಿದ್ದಾರೆ. ಈಗ ಮಂಜುಳಾ ಎಷ್ಟು ಚೆನ್ನಾಗಿ ಅಡಿಗೆ ಮಾಡ್ತಾಳೆ ಗೊತ್ತಾ?
ಮೊದಲಿಂದ ಅವರಿಗೆ ಡೈರಿ ಬರೆಯೋ ಅಭ್ಯಾಸ ಇತ್ತು. ಷಿ ವಸ್ ವೆರಿ ಡಿಸಿಪ್ಲಿನ್ಡ್ ಇನ್ ಹರ್ ಲೈಫ್... ಇಂಗ್ಲಿಷ್ನಲ್ಲೇ ಬರೆಯೋರು  ಡೈರಿ... ನೋಡಿ ಈಗ ತಾನೇ ಕಣ್ಣು ಹಾಯಿಸ್ತಿದ್ದೆ... ಗುರುದತ್ತನ ಸಾವು, ಗೀತಾ ಸಾವು, ಇತ್ತೀಚೆಗೆ ಅವರ ಮೊಮ್ಮಗನ ದುರ್ಮರಣ, ಆತ್ಮಾರಾಮನ ಸಾವು. ತಾಯಿ ತಂದೆಯ ಆಸರೆ ಇಲ್ಲದೆ ಬೆಳೆದ ಗುರುದತ್ತನ ಮಕ್ಕಳ ನೋವು... ಎಲ್ಲಾ ಇದೆ ಅಲ್ಲಿ ನೋಡಿ... ಒಂದು ವೆಡಿಂಗ್ ಆನಿವರ್ಸರಿ ದಿನ ಬರೀತಾರೆಅವರ್ ವೆಡಿಂಗ್ ಆನಿವರ್ಸರಿ. (ಹೌಸೂನ್ ೧೯೨೦ ಟು ೧೯೮೯) ಸಿಕ್ಸ್ಟಿನೈನ್ ಇಯರ್ಸ್ ಆರ್ ಓವರ್. ವಾಟ್ ಕೈನ್ಡ್ ಆಫ್ ಮ್ಯಾರೀಡ್ ಲೈಫ಼್? ಗಾಡ್ ಆಲೋನ್ ನೋಸ್ ವಾಟ್ ಈಸ್ ಇನ್ ಸ್ಟೋರ್ ಫಾರ್ ದಿ ಫ್ಯೂಚರ್.”
ವೈ ಡ್ರೀಮ್ ಆಫ್ ಗುರುದತ್? ಸಿನ್ಸ್ ಫ್ಯೂ ಡೇಸ್ ಕೀಪ್ ಸೀಯಿಂಗ್ ಹಿಸ್ ಡ್ರೀಮ್ಸ್. ಓಹ್! ಹೌ ಟ್ರೂ ಫೆಲ್ಟ್ ಅಂಡ್ ಎಂಜಾಯ್ಡ್ ಹಿಸ್ ಸ್ಮೈಲಿಂಗ್ ಫೇಸ್...” (ಏಪ್ರಿಲ್ , ೧೯೬೯)
ಮತ್ತೆ... ಶುಕ್ರವಾರ ೧೯, ಜೂನ ೧೯೬೩,
ವಾಟ್? ಟುಡೇ?”

(ಲಂಕೇಶ್ ಪತ್ರಿಕೆ/ಮುಂಬೈ ಡೈರಿ)

Friday, June 6, 2014

ದೇಹಾಂತ - ಒಂದು ಸಣ್ಣಕತೆ

ದೇಹಾಂತ


(’ದೇಹಾಂತ’೧೯೯೯ರಲ್ಲಿ ಪ್ರಿಸಂ ಬುಕ್ಸ್ ಗಾಗಿ  ಡಾ. ಜಿ.ಏಸ್. ಆಮೂರರು ಸಂಪಾದಿಸಿದ  ’ಈ ಶತಮಾನದ ಮಹಿಳೆಯರ ಆಯ್ದ ಇಪ್ಪತ್ತೈದು ಕತೆಗಳ ಸಂಕಲನ ’ಅವಳ ಕತೆಗಳು’ ನಲ್ಲಿ  ಸೇರಿದೆ.)

ರಾಜೀವನಿಗೆ ಆದ ತಳಮಳ ಶ್ರೀಪಾದು ಮಾಮನ ಸಾವಿನ ಸುದ್ದಿ ಕೇಳಿದ ತಕ್ಷಣ ಆದ ದುಃಖದಿಂದಲ್ಲ. ಆಗದ ದುಃಖದಿಂದ. ಹಾಗೆ ನೋಡಿದರೆ, ಶ್ರೀಪಾದು ಮಾಮ ಹೋದ ಸುದ್ದಿ ಕೇಳಿದ ತಕ್ಷಣ ತನಗೆ ಆಘಾತ ಆಗಬೇಕೆಂದು ರಾಜೀವ ಮನಸ್ಸಿನಲ್ಲಿ ನಿರೀಕ್ಷೆ ಮಾಡದೆ ಹೋಗಿದ್ದರೆ, ಈ ಪ್ರತಿಕ್ರಿಯೆಯ ಬಗ್ಗೆ ಅವನಿಗೆ ಅಪರಾಧಿ ಪ್ರಜ್ಞೆ, ಆಶ್ಚರ್ಯ, ತಳಮಳ ಇತ್ಯಾದಿ ಭಾವನೆಗಳು ನುಗ್ಗಿ ಬರಬೇಕಾಗೇ ಇರಲಿಲ್ಲ.
ಆಫೀಸಿನಿಂದ ಬಂದು ಶೂ ಬಿಚ್ಚುತ್ತಿರುವಾಗಲೇ, ರಮಾ ಕೈಲಿಟ್ಟ ಕಾಗದ, ಅವಳ ಪೆಚ್ಚು ಮುಖ ನೋಡಿ ಏನೋ ಕೆಟ್ಟ ಸುದ್ದಿ ಕಾದಿರಬೇಕೆಂದು ಅವನಿಗೆ ತಿಳಿದು ಬಂದಿತ್ತು. ಛಿ ॒ಆರಾಮವಾಗಿ ಕಾಫಿ ಕುಡಿದು, ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಆಂದ್ರೆ ಇನ್ನೇನು ಕಾದಿದೆಯೋ! ಅಕ್ಷರಗಳ ಮೇಲೆ ಕಣ್ಣೋಡಿಸಿ ತಲೆ ಎತ್ತಿದಾಗ ಅವನ ಅಸಹನೆಯ ಮುಖ ನೋಡಲು ಅದೃಷ್ಟವಶಾತ್ ರಮಾ ಎದುರಿಗಿರಲಿಲ್ಲ. ಕಾಗದ ಕಿವುಚಿ ನೆಲದ ಮೇಲೆಸೆದು ಉಸ್ಸೆಂದು ಗೋಡೆಗೆ ತಲೆಯಾನಿಸಿ ಹಿಂದೊರಗಿದ.
ರಮಾ ಕಾಫಿಯೊಂದಿಗೆ ಬಂದವಳು “ಆಗ್ಲೇ ಹತ್ತು ದಿನ ಆಗ್ಹೋಗಿದೆ ॒ಪಾಪ ॒ಅನ್ಯಾಯ ॒ಅಂಥಾ ಕಾಯಿಲೇನೂ ಆಗಿರಲಿಲ್ಲ’॒’ ಎಂದಳು.
“ಹೆಂಡತಿ ಮಕ್ಕಳುಮರಿ ಕೂಡ ಇರಲಿಲ್ಲ ॒ಆರಾಮವಾಗಿದ್ದ ॒ದೇವರು ಆಯಸ್ಸು ಕೊಡಲಿಲ್ಲ’॒’ ಎಂದಳು.
“ಏನು ಮಹಾ ವಯಸ್ಸು ॒ಹಾಯಾಗಿ ತಿಂದು ತಿರುಗಿ ಓಡಾಡಿಕೊಂಡಿರೋ ಕಾಲಕ್ಕೆ ಕಣ್ಮುಚ್ಚಿಕೊಂಡ’॒’ ಎಂದಳು.
“ಪ್ರತಿಸಲ ಯಾರು ಬೊಂಬಾಯಿಂದ ಆ ಕಡೆ ಹೋದರೂ ॒ರಾಜೀವ ಅವನ ಹೆಂಡತಿ ಮಕ್ಕಳನ್ನು ನೋಡಿ ಎಷ್ಟು ವರ್ಷಗಳಾಗ್ಹೋಯ್ತು ಎಂದು ಹಲಬ್ತಾನೇ ಇದ್ದ’॒’ ಎಂದಳು.
ರಾಜೀವನ ಕೈಗೆ ಲೋಟ ಬರುವ ಹೊತ್ತಿಗೆ, ಕಾಫಿ ಸ್ವಲ್ಪ ಆರಿತ್ತು. ಒಂದು ಗುಟುಕು ಹೀರಿದವನೇ “ಥತ್, ಎಷ್ಟು ಸಲ ನಿಂಗೆ ಹೇಳಬೇಕು ॒ನಿಂಗೊತ್ತಿಲ್ವೆ ॒ನಂಗೆ ಕಾಫಿ ಬಿಸಿಬಿಸಿ ಇರಬೇಕೂಂತ’॒’ ಎಂದು ಗದರಿದ.
ರಮಾ ಮಾತಿಲ್ಲದೆ ಅವನ ಕೈಯ್ಯಿಂದ ಕಾಫಿ ಲೋಟ ತೆಗೆದುಕೊಂಡು ಮತ್ತೆ ಬಿಸಿ ಮಾಡಿ ತರಲು ಅಡಿಗೆ ಮನೆಗೆ ನಡೆದಳು. ಹೂ ॒ಅಂದುಕೊಳ್ಳುತ್ತಿರಬೇಕು ॒ಸೋದರಮಾವ ಹೋದ ಸುದ್ದಿ ಕೇಳಿ ನಿಮಿಷಗಳೂ ಆಗಿಲ್ಲ. ಆಗಲೇ ಕಾಫಿ ಬಿಸಿ ತಣ್ಣಗಿನ ಬಗ್ಗೆ ಕಿರಿಕಿರಿ ॒ಎಂಥಾ ಕಲ್ಲು ಹೃದಯಾಂತ, ನಿಜವೇ॒
ಶ್ರೀಪಾದು ಮಾಮ ತಾನು ತುಂಬಾ ಚಿಕ್ಕವನಾಗಿದ್ದಾಗಿನಿಂದ ತನ್ನ ಅಚ್ಚುಮೆಚ್ಚಿನ ಮಾಮ. ಪ್ರತಿ ಭಾನುವಾರ ಮೈಸೂರಿಗೆ ಬರುವಾಗ ತನ್ನ ಪ್ರೀತಿಯ ಸೋಹನ್ ಪಾಪಡಿ, ಚಕ್ಕುಲಿ, ಬೆಣ್ಣೆ ಬಿಸ್ಕತ್ತಿನ ಪೊಟ್ಟಣ ಕೈಲಿ ಹಿಡಿದೇ ಬರುತ್ತಿದ್ದ. “ಶ್ರೀಪಾದು ಮಾಮ ಬಂದ ॒ಶ್ರೀಪಾದು ಮಾಮ ಬಂದ’॒’ ತಾನು ಜಮುನಾ ಗೇಟಿನಲ್ಲಿ ಅವನನ್ನು ಕಂಡ ತಕ್ಷಣ ಅಡಿಗೆ ಮನೆಯಲ್ಲಿರುತ್ತಿದ್ದ ಅಮ್ಮನಿಗೆ ಸುದ್ದಿ ಮುಟ್ಟಿಸುತ್ತಿದ್ದೆವು. ಭಾನುವಾರಗಳು ಬರುವುದೇ ಶ್ರೀಪಾದು ಮಾಮನಿಗೋಸ್ಕರ ಎಂದು ತಮಗೆ ಖಾತರಿಯಾಗಿತ್ತು.
ತಾನು ದೊಡ್ಡವನಾದಂತೆ ತನ್ನೆಲ್ಲಾ ಮಾಮಂದಿರಗೂ ಮದುವೆಯಾಗಿ ಮಾಮಿಯರು ಬಂದಿದ್ದರು. ಆದರೆ ಶ್ರೀಪಾದು ಮಾಮನಿಗೆ ಮದುವೆಯೇ ಆಗಿರಲಿಲ್ಲ. ಒಂದು ರೀತಿಯಲ್ಲಿ ಆಗ ತನಗೆ ಖುಷಿಯಾಗಿದ್ದೂ ಉಂಟು. ಬೇರೆಲ್ಲಾ ಮಾಮಂದಿರು ಮಾಮಿಯರು ಬಂದ ತಕ್ಷಣ ಮೈಸೂರಿಗೆ ಬರುವುದು. ತನಗೆ ಮುದ್ದು ಮಾಡುವುದು ಕಡಿಮೆಯಾಗಿತ್ತು. ಆದರೆ ಶ್ರೀಪಾದು ಮಾಮ ಯಾವ ಮಾಮಿಯ ಪಾಲೂ ಆಗದೇ ಇದ್ದದ್ದು ಅವನ ಪೂರ್ತಿ ಪ್ರೀತಿ ತನಗೇ ಸಲ್ಲಿತ್ತು.
ಒಂದು ದಿನ ಬಾಗಿಲ ಹಿಂದೆ ನಿಂತು ಕೇಳಿದ ಮಾತು. ಅಮ್ಮ ಬೇಸರ ಮಾಡಿಕೊಳ್ಳುತ್ತಿದ್ದಳು. “ಯಾವುದೋ ಹಾಳು ಹುಡುಗಿ ಹಿಂದೆ ಬಿದ್ದು ಅವಳು ಬೇರೆಯವನನ್ನು ಕಟ್ಟಿಕೊಂಡು ಹೋದ್ರೆ, ಶ್ರೀಪಾದು ಯಾಕೆ ಆಜನ್ಮ ಬ್ರಹ್ಮಚಾರಿ ಆಗಿರಬೇಕು’॒’
ಅಪ್ಪ ಸಮಾಧಾನ ಮಾಡಿದ್ದರು “ಎಲ್ಲಾ ಸ್ವಲ್ಪ ದಿನ. ಆಮೇಲೆ ಅದಾಗದೇ ಸರಿಹೋಗುತ್ತೆ. ಅವನಿಗೆ ತಾನೇ ಏನು ವಯಸ್ಸು ॒೨೩ ಹಾಗನ್ನಿಸೋದು ಸಹಜ. ಲಕ್ಷಣವಾದ ಹುಡುಗಿ ಮುಖ ನೋಡಿದರೆ ಎಲ್ಲಾ ಸರಿಹೋಗುತ್ತೆ’॒’
“ದೇವರೇ ॒ಸಧ್ಯ ಅವನು ಮದುವೆ ಆಗದೇನೇ ಉಳೀದೇ ಇದ್ರೆ ಸಾಕು ॒ನಿಮಗೆ ಅವನ ಹಠ ಗೊತ್ತಿಲ್ಲ’॒’
ಅಮ್ಮ ಮಾತು ಮುಗಿಸಿ ಹೊರಗೆ ಬಂದಾಗ, “ಇಲ್ಯಾಕೋ ಬಾಗಿಲಲ್ಲಿ ನಿಂತ್ಕೊಂಡು ದೊಡ್ಡೋರ ಮಾತು ಕೇಳ್ತಿದ್ದೀಯಾ’॒’ ಎಂದು ಗದರಿಸಿದ್ದಳು.
“ಕಾಫಿ ಮತ್ತೆ ಆರಿಹೋಗುತ್ತೆ’॒’ ರಮಾ ಹೆದರುತ್ತಲೇ ಜ್ಞಾಪಿಸಿದಳು.
“ಓ ಹೀಗೇ ಹಿಂದಿನದೆಲ್ಲಾ ಜ್ಞಾಪಕಕ್ಕೆ ಬಂತು’॒’ ಎಂದ ರಾಜೀವ. ಲೋಟ ತುಟಿಯ ಹತ್ತಿರಕ್ಕೆ ತೆಗೆದುಕೊಂಡು ಹೋಗುತ್ತಾ. ಆ ಮಾತುಗಳಲ್ಲಿದ್ದ ಬೇಸರದ ಛಾಯೆ ರಮಾಳ ಮುಖದ ಮೇಲೆ ಸಮಾಧಾನದ ಗೆರೆಗಳನ್ನು ಮೂಡಿಸಿದಂತೆ ಭಾಸವಾಯಿತು.
ಪೇಪರೋದಿ ಮುಗಿಸುವ ಹೊತ್ತಿಗೆ ಗಂಟೆ ಏಳೂವರೆ. ಹಾಗೇ ಹಾಸಿಗೆಯ ಮೇಲೆ ಅಡ್ಡಾದ ರಾಜೀವ. ಕಾಗದ ಬರೆಯಬೇಕು ॒ಶ್ರೀಪಾದರು ಮಾಮನ ಬಗ್ಗೆ ಸಂತಾಪ ಸೂಚಿಸಿ ಬರೆಯುವುದಾದರೂ ಯಾರಿಗೆ? ಹೆಂಡತಿ, ಮಕ್ಕಳು, ತಾಯಿ, ತಂದೆ ಯಾರೂ ಇಲ್ಲ. ಅಣ್ಣ, ತಮ್ಮ, ತಂಗಿಯರು ಹಚ್ಚಿಕೊಂಡಿಲ್ಲ, ಅದೂ ಅಷ್ಟು ಜನಕ್ಕೂ ಬರೆಯಲು ಸಾಧ್ಯವೇ? ರಾಜೀವನಿಗೆ ಹಾಯೆನಿಸಿತು. ಸಧ್ಯ, ಕೆಲಸವೊಂದು ಕಡಿಮೆಯಾಯ್ತಲ್ಲ ॒ಆದರೆ ತನಗೇಕೆ ಹೀಗಾಗಿ ಹೋಗಿದೆ? ಚಿಕ್ಕ ವಯಸ್ಸಿನಲ್ಲಿ ತನಗೋಸ್ಕರ ಎಷ್ಟು ಒದ್ದಾಡುತ್ತಿದ್ದ. ಈಗೇನೋ ನೋಡಿ ಹನ್ನೆರಡು ವರ್ಷಗಳಾಗಿರಬೇಕು. ಕೆಲಸ, ಮದುವೆ, ಮಕ್ಕಳು, ಜವಾಬ್ದಾರಿ ॒ತನಗೆ ಊರಿಗೆ ಹೋಗಲು ಸಮಯವಾದರೂ ಎಲ್ಲಿತ್ತು? ಆ ಕಡೆ ಹೋಗಿಬಂದವರ ಹತ್ತಿರವೆಲ್ಲಾ ಶ್ರೀಪಾದು ಮಾಮ ಹಲಬುತ್ತಿದ್ದನಂತೆ. “ರಾಜೀವನ ಹೆಂಡತಿ ಮಕ್ಕಳನ್ನು ನೋಡಿ ಹನ್ನೆರಡು ವರ್ಷವಾಗಿ ಹೋಯ್ತು ॒ಈ ಕಡೆ ಬಂದೇ ಇಲ್ಲ ॒ಹೇಗಿದಾರೋ ಏನೋ’॒’
ಅಷ್ಟು ನೋಡಬೇಕೆನಿಸಿದರೆ ಅವನಾದರೂ ಬರಬಹುದಾಗಿತ್ತು. ತಾನು ಎಂದಾದರೂ ಬಾ ಎಂದಿದ್ದನೇ? ಅಷ್ಟು ಹಚ್ಚಿಕೊಂಡಿದ್ದವನಿಗೆ ತಾನು ಕರೆಯಬೇಕೆಂಬ ಫಾರ್‍ಮಾಲಿಟಿ ಆದರೂ ಯಾಕೆ? ಆದರೆ ಅವನಿಗೆ ತನ್ನ ವಿಳಾಸ ಕೂಡ ಗೊತ್ತಿತ್ತೋ ಇಲ್ಲವೋ ॒ತಾನೆಂದಾದರೂ ಅವನಿಗೆ ಎರಡು ಸಾಲು ಕಾಗದ ಬರೆದು ಹಾಕಿದ್ದೆನೇ?
ಇದ್ದಕ್ಕಿದ್ದಂತೆ ಟೀವಿಯ ಚಿತ್ರಹಾರ್ ಶುರುವಾಯಿತು. ಕಿಶೋರ್ ಕುಮಾರ್ ಜೋರಾಗಿ ಹಾಡುತ್ತಿದ್ದ. “ರಮಾ ಟೀವಿ ಆರಿಸೋಕೆ ಹೇಳು. ಇವತ್ತೂ ನೋಡದಿದ್ದರೆ ಪ್ರಾಣ ಹೋಗುತ್ತೇನೋ’॒’ ಹಿಂದಿನಿಂದ ಚಿಕ್ಕು ಓಡಿಬಂದಿದ್ದ “ಅಪ್ಪ ಚಿತ್ರಹಾರ್ ಯಾಕೆ ನೋಡ್ಬಾರ್‍ದು ॒ಇದೊಂದು ಹಾಡು’॒’
“ನಾ ಹೇಳಿದ ಮಾತು ಸುಮ್ಮನೆ ಕೇಳು, ಪ್ರಶ್ನೆಗಳನ್ನು ಹಾಕ್ಬೇಡ. ಶ್ರೀಪಾದು ಮಾಮ’॒” ರಮಾ ಮಧ್ಯೆ ಬಾಯಿ ಹಾಕಿದಳು. “ಇವತ್ತು ಹೋಗಲಿ ಬಿಡು ಚಿಕ್ಕು ॒ಅಪ್ಪನಿಗೆ ಬೇಜಾರಾಗಿದೆ’॒’
“ಅಪ್ಪ ॒ಶ್ರೀಪಾದು ಮಾಮ ಯಾರು ॒ನಮ್ಮ ಸುರೂ ಮಾಮನ ಥರಾನಾ’॒’
“ಹೌದು, ಹೌದು. ನಿಂಗೆ ಅದೆಲ್ಲಾ ಅರ್ಥವಾಗೋಲ್ಲ. ಸುಮ್ಮನೆ ಆಡ್ಕೋ ಹೋಗು, ಬೇಕಾದರೆ ಪಕ್ಕದ್ಮನೆಗೆ ಹೋಗು.”
ಇಷ್ಟು ಹೊತ್ತಿನ ಮೇಲೆ ಪಕ್ಕದ ಮನೆಗೆ ಹೋಗಲು ಎಂದೂ ಇಲ್ಲದೆ ಪರ್ಮಿಷನ್ ಸಿಕ್ಕಿದ್ದರಿಂದ ಚಿಕ್ಕು ಸಂತೋಷದಿಂದ ಕುಣಿಯುತ್ತಾ ಓಡಿದ.
ರಮಾ ಕತ್ತಲಿನ ಕೋಣೆಯಲ್ಲಿ ಮೆಲ್ಲಗೆ ಬಂದಳು.
“ಊಟಕ್ಕಾದರೂ ಏಳ್ತೀರೇನು?”
“ಸರಿ ॒ತಟ್ಟೆ ಹಾಕು’॒’
“ಕಾಗದ’॒’
“ಯಾರಿಗೆ ಬರೆಯೋದು’॒’
“ನಮಗೆ ಸುದ್ದಿ ತಿಳಿಸಿದ ಕಾಶೀಗೆ ಬರೆಯೋದು’॒’
“ಕಾಶೀಗೆ! ಅವನೆಂಥಾ ಬಾದರಾಯಣ ಸಂಬಂಧಾಂತ’॒’
“ಬರೀದೇ ಇದ್ರೆ ಚೆನ್ನಾಗಿರೋಲ್ಲ’॒’
“ಸರಿ ಊಟವಾದ ಮೇಲೆ ಬರೀತೀನಿ.”
ರಾಜೀವ ಮುಜುಗರಗೊಂಡ. ಇವಳೂ ತನ್ನನ್ನು ಪರೀಕ್ಷಿಸುತ್ತಿದ್ದಾಳೇನೋ. ಎಷ್ಟೋ ಸಲ ಹೇಳಿದ್ದಳು. “ನಿಮಗೆ ನಿಮ್ಮವರನ್ನು ಒಂದು ಸಲಾನಾದ್ರೂ ನೋಡಬೇಕು ಅನ್ನಿಸೋದೇ ಇಲ್ವೇ ॒ವಿಚಿತ್ರಾಪ್ಪ. ಹನ್ನೆರಡು ವರ್ಷ ಆಯ್ತು ॒ಊರಿನ ಕಡೆ ಹೋಗಿ”
ಮಾತಿಲ್ಲದೆ ಊಟ, ಹಸಿವೇಯೇನೂ ಕಡಿಮೆಯಿರಲಿಲ್ಲ. ಗೊಜ್ಜು ರುಚಿಯಾಗಿದ್ದರಿಂದ ದಿನಕ್ಕಿಂತ ಹೆಚ್ಚಿಗೆಯೇ ಕಲಸಿಕೊಂಡ, ಸಾರು ಖಾರವೆನಿಸಿತು. ಆದರೆ ಹೇಳಲು ಧೈರ್ಯ ಬರಲಿಲ್ಲ. ಮತ್ತೆ ರೂಮಿಗೆ ಬಂದು ಹಾಸಿಗೆಯ ಮೇಲೆ ಉರುಳಿದ. ಹೊರಗಿನ ಬೀದಿಯ ದೀಪದ ಮಂದ ಬೆಳಕು ರೂಮನ್ನು ತುಂಬಿತ್ತು. ನಕ್ಷತ್ರಗಳು ಕಣ್ಣುಮುಚ್ಚಾಲೆಯಾಡುತ್ತಿದ್ದವು. ಎಂಥಾ ಸುಂದರ ರಾತ್ರಿ! ಪಕ್ಕದ ರೂಮಿನಲ್ಲಿ ಚಿಕ್ಕೂನ ಹಾಸಿಗೆಗೆ ಸೊಳ್ಳೆಪರದೆ ಇಳಿಬಿಡುತ್ತಿದ್ದ ರಮಾಳ ಬಳೆಗಳ ಕಿಣಿಕಿಣಿ ಶಬ್ದ. ಬೆಳಿಗ್ಗೆ ಬರ್ನಿ ಹತ್ತಿರ ಬಂದಾಗಲೂ ಇದೇ ರೀತಿ ಕಿಣಿಕಿಣಿ ಶಬ್ದ ಮಾಡಿದ್ದಳು. ಅಬ್ಬ ॒ಎಂಥಾ ಹುಡುಗಿ, ಏನು ಮೈಮಾಟ, ಅಲಂಕಾರ, ಕುಲುಕುಲು ನಗು, ಕಣ್ಮಿಂಚು. ಇವತ್ತಂತೂ ಕಾರಣವಿಲ್ಲದೆ ನಾಲ್ಕಾರು ಸಲ ಮೈ ಸವರಿಕೊಂಡೇ ನಡೆದಿದ್ದಳು. ಕೊಂಕು ನೋಟ ಬೀರಿದ್ದಳು. “ಚೀಪ್ ಗರ್ಲ್” ಎಂದು ಆಫೀಸಿನವರ ಎದುರಿಗೆ ಅಂದಿದ್ದರೂ ಮೈ ಕಾವೇರಿದ್ದು ನಿಜ. ಆದರೆ ಧೈರ್ಯ ಬಂದಿರಲಿಲ್ಲ, ಥತ್, ಆ ಥಾಮಸ್ ಥರಾ ದಿನಾ ಒಂದೊಂದು ಹೊಸ ಹುಡುಗಿಯ ಜೊತೆ ಫ್ಲರ್ಟ್ ಮಾಡಿ ಬಿಟ್ಟುಬಿಡುವ ಹಾಗಿದ್ದರೆ ಎಷ್ಟು ಚೆನ್ನಾಗಿತ್ತು. ಆದರೆ ಈಗಲೂ ಆ ರೀತಿಯ ಸಂಬಂಧಗಳೆಂದರೆ ಭಯ. ಹೆಂಡತಿ-ಜೀವಮಾನವೆಲ್ಲಾ ಜೊತೆಯಲ್ಲಿರಬೇಕಾದವಳೊಂದಿಗೆ ಮಾತ್ರ ಎಲ್ಲ ಸಂಬಂಧಗಳೂ ಎಂಬ ವಿಚಾರ ಮೈತಳೆದುಹೋಗಿವೆ. “ನೀನೊಬ್ಬ ಹಿಪೋಕ್ರೈಟ್ ನೀನೇನು ಇಮೋಷನಲ್ ಅಡಲ್ಟ್ರಿ ಮಾಡೋಲ್ಲ ಅಂತೀಯೇನು? ನನ್ನನ್ನು ಫೂಲ್ ಮಾಡಬೇಡ’॒’ ಎಂದ ಥಾಮಸ್ ಮೇಲೆ ತುಂಬಾ ಕೋಪ ಬಂದಿತ್ತು, ಜೊತೆಗೆ ಹೊಟ್ಟೆಕಿಚ್ಚೂ ಆಗಿತ್ತು.
ರಮಾ ಮೆಲ್ಲನೆ ಹತ್ತಿರ ಬಂದು ಪಕ್ಕದಲ್ಲಿ ಮಲಗಿದ್ದಳು. ನಸುಬೆಳಕಿನಲ್ಲಿ ಅವಳ ಉಬ್ಬುತಗ್ಗುಗಳು, ಆಗಲೇ ಬರ್ನಿಯ ನೆನಪಿನ ಗುಂಗಿನಲ್ಲಿ ಹುಚ್ಚೆದ್ದಿದ್ದ ಅವನಿಗೆ ಮತ್ತೇರಿಸಿದವು. ರಮಾನ ಹತ್ತಿರಕ್ಕೆಳೆದುಕೊಂಡ. ಕ್ಷಣ ಕ್ಷಣ ಕಳೆದಂತೆ ರಮಾ ನಿಧಾನವಾಗಿ ಕರಗಿ, ಅವನ ಮನಸ್ಸಿನ ತುಂಬಾ ಬರ್ನಿ ಆವರಿಸಿದಳು.
ತನ್ನ ಆವೇಶ ಕಡಿಮೆಯಾದಂತೆ, ಇದ್ದಕ್ಕಿದ್ದಂತೆ ತಣ್ಣಗಾದ ರಾಜೀವ, ರಮಾ ಏನಂದುಕೊಂಡಳೋ? ಶ್ರೀಪಾದು ಮಾಮ ಹೋದನೆಂದು ತಿಳಿದ ದಿನ ಕೂಡ ॒ಆದರೆ ॒ಯಾವುದೋ ಆದರ್ಶ ಹಿಡಿದು ಕುಳಿತಿದ್ದ ಶ್ರೀಪಾದ ಮಾಮ ಇಂಥಾ ಅನುಭವ ಒಂದು ಸಲವೂ ಅನುಭವಿಸದೇ ಪ್ರಾಣ ಬಿಟ್ಟಿದ್ದನೇ? ಅಥವಾ ಬೇರೆ ಯರೊಂದಿಗೂ ಹಮ್ಮಿಕೊಳ್ಳದಷ್ಟು ಆ ಹುಡುಗಿಯನ್ನು ಪ್ರೀತಿಸಿದ್ದನೇ? ಅದಕ್ಕೆಂಥಾ ಮನಸ್ಥೈರ್ಯಬೇಕು? ಮನಸ್ಥೈರ್ಯವೇನು ಮಣ್ಣ. ಅದೊಂದು ರೀತಿ ಮೂರ್ಖತನ, ಕೆಟ್ಟ ಹಟ. ತನ್ನನ್ನು ತಾನೇ ಪನಿಶ್ ಮಾಡಿಕೊಂಡು, ತಮ್ಮ ಜೀವನ ಹಾಳು ಮಾಡಿಕೊಂಡರೆ ಏನು ಬರುತ್ತೆ? ಸಾವಿನ ಸುದ್ದಿ ಕೂಡ ಬರ್ನಿಯ ಬಯಕೆಯ ಮೊನಚನ್ನು ಕಡಿಮೆ ಮಾಡಿರಲಿಲ್ಲ.. ಅಂಥಾದ್ದರಲ್ಲಿ ಶ್ರೀಪಾದು ಮಾಮ ॒ಎಲ್ಲೋ ಗಂಟೆ ಹೊಡೆಯಿತು. ಬೆಚ್ಚಿ ಬಿದ್ದ ರಾಜೀವ.
ಎಷ್ಟು ಹೊತ್ತಾದರೂ ನಿದ್ದೆ ಬರದು, ಹಲವಾರು ಬಾರಿ ಮಗ್ಗಲು ಬದಲಾಯಿಸಿದ. ಬಚ್ಚಲು ಮನೆಗೆ ಹೋಗಿ ಬಂದ. ನೋಡಿದರೆ ರಮಾಗೂ ನಿದ್ದೆ ಹತ್ತಿದಂತಿರಲಿಲ್ಲ. ಮೆಲ್ಲಗೆ ಕೇಳಿದ, “ನಿದ್ದೆ ಬರಲಿಲ್ಲವೆ’॒’
“ಇಲ್ಲ’॒’
“ಅಲ್ಲಾರೀ ನೀವು ಕಾಗದ ಬರೆಯೋದೇ ಮರೆತೇಬಿಟ್ರಿ, ಬೆಳಗಾಗೆದ್ದು ಆಫೀಸ್. ಇನ್ನು ಸಾಯಂಕಾಲ ಮನೆಗೆ ಬಂದ ಮೇಲೆಂದ್ರೆ ಎಷ್ಟು ತಡ’॒’ “ಅದೇಕೆ ಶ್ರೀಪಾದ ಮಾಮ ಸತ್ತ ವಿಷಯ ಹಾಗೆ ಪದೇ ಪದೇ ನ್ಯಾಗ್ ಮಾಡ್ತಿದೀಯಾ?! ಅವನು ನಮ್ಮ ಪಾಲಿಗೆ ಸತ್ತು ಯಾವುದೋ ಕಾಲವಾಗಿತ್ತು” ಬಾಯಿಂದ ಮಾತುಗಳು ಹೊರಬಿದ್ದ ಮೇಲೆ ಸ್ವಲ್ಷ ಹೆಚ್ಚಾಯಿತೇನೋ ಅನ್ನಿಸಿತು. ರಮಾ ತೆಪ್ಪಗಾದಳು.
ರಾತ್ರಿ ಕಳೆದಂತೆ ರಾಜೀವನಿಗೆ ಇನ್ನೂ ಮುಜುಗರ, ನಿದ್ದೆ ಬರದು, ಎದ್ದು ಹೋಗಿ ಕಾಂಪೋಸ್ ಆದರೂ ತೆಗೆದುಕೊಳ್ಳಲೇ? ಬೆಳಿಗ್ಗೆ ಡಿಸೋಜಾಗೆ ರಿಪೋರ್ಟ್ ಕೊಡಬೇಕು, ಅಮೇಲೆ ಈ ಕ್ಲಯಂಟ್ ಮೀಟಿಂಗಿಗೆ ಹೋಗಬೇಕು. ಅವನೋ ತುಂಬಾ ಕಿರಿಕಿರಿ ಮನುಷ್ಯ. ಹೇಳಿದ್ದೇ ಹೇಳಿ ಕೊರೀತಾನೆ. ಸಂಜೆ ಆ ಪಂಜಾಬಿ ಫರ್ಮಿನವರ ಜೊತೆ ಕಾಕ್‌ಟೇಲ್, ಅದೇ ಮಬ್ಬುಗತ್ತಲೆ ಕುಡಿತ, ಅಸಭ್ಯ ಜೋಕುಗಳು, ಬಲವಂತದ ಜೋರಾದ ನಗು. ಆದರೆ, ಹೇಗೋ ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಟ್ಟರೆ ತನಗೆ ಚಾಂದಿ. ಬರ್ನಿಗೆ ತಾನು ಹೆಚ್ಚಿಗೆ ಸಲಿಗೆ ತೋರಿಸಲಿಲ್ಲಾಂತ ಕೋಪ ಬಂದಿರಬಹುದೇ? ನಾಳೆ ಒಂದಿಷ್ಟು ತಮಾಷೆಯಾಗಿ ಮಾತಾಡಿ ನೋಡಬೇಕು. ತಪ್ಪಾದರೂ ಏನಿದೆ. ಆದರೆ ಈ ಸಲಿಗೆ ಮುಂದುವರೆಇದರೆ ॒ರಮಾಗೇ ಎರಡು ಬಗೆದಂತೆಯೇ? ತಾನೇನೂ ಶ್ರೀಪಾದ ಮಾಮನಲ್ಲವಲ್ಲ ॒ಯಾವುದೋ ಹುಡುಗಿಯ ನೆನಪಿನಲ್ಲಿ ಜೀವಮಾನವೆಲ್ಲಾ ಹಾಳು ಮಾಡಿಕೊಳ್ಳೋಕೆ ॒ಇದು ಕೇವಲ ಕ್ಯಾಷುಯಲ್ ಸಂಬಂಧ ಅಷ್ಟೆ. ಶ್ರೀಪಾದ ಮಾಮ ಬದುಕಿದ್ದರೆ, ತನ್ನನ್ನು ಬರ್ನಿಯ ಜೊತೆ ನೋಡಿದ್ದರೆ ಏನಂದುಕೊಳ್ಳುತ್ತಿರಬಹುದು? ಒಂದು ಕಾಂಟ್ರಾಕ್ಟ್‌ಗೋಸ್ಕರ ಬಾರಿನ ಮಬ್ಬುಗತ್ತಲೆಯಲ್ಲಿ ಕೊಳೆತ ಜೋಕುಗಳನ್ನು ಕತ್ತರಿಸುತ್ತಾ ಸಂಜೆ ಮೇಲೆ ಸಂಜೆ ಕಳೆಯುವ ತನ್ನನ್ನು ಅವನು ಗುರುತಿಸುತ್ತಿದ್ದನೇ?
“ಏನೋ ಆ ಚಂಚಲ ರಾಜೂನ್ನ ಕಟ್ಟಿಕೊಂಡು ಓಡಿಹೋದಾಗ ಮದುವೇನೇ ಮಾಡಿಕೊಳ್ಳೊಲ್ಲ ಅಂತಿದ್ದೆ’॒’
“ರಾಚಯ್ಯನ ಮನೆ ರಾಗಿ ರೊಟ್ಟಿ ಹೊಡೆದು ಬಂದು ಅಮ್ಮನ ಕೈಲಿ ಒದೆ ತಿಂದಿದ್ದು ಜ್ಞಾಪಕ ಇದೆಯೇನೋ’॒’
“ನಾನು ಡಾಕ್ಟರೇ ಆಗೋದು ॒ಹಳ್ಳಿಗಳಲ್ಲಿ ಸೇವೆ ಮಾಡೋದು ಅಂತಿದ್ದೆ’॒’
“ಅವತ್ತು ೧೦೫ ಡಿಗ್ರಿ ಜ್ವರ ಹೋಗಿ ಎಷ್ಟು ಹೆದರಿಸಿ ಬಿಟ್ಟಿದ್ಯೋ ॒ರಾತ್ರಿ ಎಲ್ಲಾ ನಾನು, ನಿಮ್ಮಮ್ಮ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಒದ್ದೆಬಟ್ಟೆ ಹಾಕ್ತಾ ಕೂತಿದ್ವಲ್ಲೋ’॒’
“ಮೋತಿ ಹೋದಾಗ ಮೂರು ದಿನ ಉಪವಾಸ ಮಾಡಿಬಿಡ್ಯಲ್ಲೋ ॒ಆ ನಾಯಿಮರಿ ಮೇಲೆ ಎಂಥಾ ವ್ಯಾಮೋಹ ॒ಇಂಥಾ ಹೆಂಗರುಳಾದ್ರೆ ಮುಂದೆ ಕಷ್ಟ’॒’
“ಇದ್ರೆ ರಾಜೀವನ ಹಾಗಿರಬೇಕು ॒ಒಂದು ಸಿಗರೇಟ್ ಮುಟ್ಟೋಲ್ಲ ॒ಒಂದು ದಿನ ಸಂಧ್ಯಾವಂದನೆ ತಪ್ಪಿಸೊಲ್ಲ’॒’
“ಅಂತೂ ಧೈರ್ಯ ಮಾಡಿ ಎಲ್ಲಾರನ್ನೂ ಎದುರು ಎತ್ತಿಹಾಕ್ಕೊಂಡೂ ಬೊಂಬಾಯಿಗೆ ಹೊರಟು ಬಿಟ್ಟೇನ್ನು,॒ ಶಬ್ಬಾಷ್ ॒ಯೋಚ್ನೆ ಮಾಡಬೇಡ ॒ಏನಾದ್ರೂ ತಾಪತ್ರಯ ಆದ್ರೆ ಬರಿ ॒ನಾನು ದುಡ್ಡು ಗಿಡ್ಡು ಬೇಕಾದ್ರೆ ಕಳಿಸ್ತೀನಿ’॒’
“ನೀನು ಸ್ವಲ್ಪ ಸೆಟಲ್ ಆಗ್ಬಿಡು, ಹಾಯಂತ ನಿಮ್ಮನೇಲಿ ಬಂದು ಇದ್ಬಿಡ್ತೀನಿ’॒’
ಊರಿಗೆ ಹೋದಾಗಲೆಲ್ಲಾ, ತನ್ನ ಬಾಲ್ಯವನ್ನು ಅದರ ಮೂಲಕ ಬಾಲ್ಯದ ತನ್ನನ್ನು ಜೀವಂತವಾಗಿಸುತ್ತಿದ್ದ ಶ್ರೀಪಾದ ಮಾಮ ತನ್ನ ಪಾಲಿಗೆ ಸತ್ತು ಹೋಗಿದ್ದು ಎಂದು?
ದುಡ್ಡಿನಾಸೆಗೆ ರಮಾಳ ಕೈಹಿಡಿದ ದಿನವೇ?
ಅಮ್ಮನಿಗೆ ಸೀರಿಯಸ್ ಎಂದು ತಿಳಿದೂ ೮ ಲಕ್ಷದ ಕಾಂಟ್ರಾಕ್ಟ್ ಕೈತಪ್ಪಿ ಹೋಗುತ್ತೇಂತ ಕೊನೇ ಗಳಿಗೇಲಿ ಅವಳ ಮುಖ ನೋಡಲು ಹೋಗದಿದ್ದಾಗಲೇ?
ತನ್ನ ಮೊದಲ ಪೆಗ್ ವಿಸ್ಕಿ ಮುಟ್ಟಿದಾಗಲೇ?
ಬರ್ನಿಯ ಮೈ ಡೊಂಕುಗಳನ್ನು ನೆನೆಯುತ್ತಾ ರಮಾಳನ್ನು ಹತ್ತಿರಕ್ಕೆಳೆದುಕೊಂಡಾಗಲೇ?
ಲಾಲವಾನೀ ತೋರಿಸಿದ ಎಂಟು ಸಾವಿರ ಸಂಬಳದ ಆಸೆಗೋಸ್ಕರ ಈ ಕಚಡಾ ಜಾಬ್ ಮಾಡಿಕೊಂಡ ದಿನವೇ?
ಕಾಂಟ್ರಾಕ್ಟ್ ಜೇಬಿಗೆ ಹಾಕಿಕೊಳ್ಳಲೋಸುಗ ಆ ಚಾವ್ಡಾಗೆ ತಾಜ್‌ನಲ್ಲಿ ರೂಮು ಬುಕ್ ಮಾಡಿಕೊಟ್ಟು, ತನ್ನ ಖರ್ಚಿನಲ್ಲಿ ಎಲ್ಲಾ ಏರ್ಪಾಟು ಮಾಡಿಕೊಟ್ಟಾಗಲೇ?
“ಅವನ ಕೊನೇ ಕರ್ಮ ಯಾರು ಮಾಡಿದರೋ’॒’ ಕತ್ತಲನ್ನು ಸೀಳಿ ಬಂದ ರಮಾಳ ಮಾತು ಕೇಳಿ ಬೆಚ್ಚಿ ಬಿದ್ದ ರಾಜೀವ.
“ಯಾರದು’॒’
“ಮತ್ಯಾರದು ॒ಶ್ರೀಪಾದು ಮಾಮನದು’॒’ ವಿಚಿತ್ರವಾದ ಧ್ವನಿಯಲ್ಲಿ ಮಾತಾಡಿದಳು ರಮಾ “ನ್ಯಾಯವಾಗಿ ನೀವೇ ಮಾಡಬೇಕಾಗಿತ್ತು. ನಿಮ್ಮನ್ನು ಮಗನಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದಾಂತ ಹೇಳ್ತಿದ್ರಿ ॒ಅವನಿಗಂತೂ ಹೆಂಡತಿ ಮಕ್ಕಳಿಲ್ಲ ॒ಅಂದ ಮೇಲೆ ॒“ರಾಜೀವ ನಿರುತ್ತರನಾದ, ಶ್ರೀಪಾದು ಮಾಮನ ಕೊನೇ ಕರ್ಮ ಯಾರು ಮಾಡಿದರೋ?
ಬೆಳಿಗ್ಗೆ ಎಂಟು ಗಂಟೆಗೆ ಆಫೀಸಿಗೆ ಹೊರಡುವ ಅವಸರದಲ್ಲಿದ್ದಾಗ ಫೋನಿನ ಕರೆ. ರಾಜೀವ ಬಚ್ಚಲು ಮನೆಯಲ್ಲಿರುವುದನ್ನು ನೋಡಿ, ರಮಾನೇ ಮಾತಾಡಿದಳು. ಇವನು ಹೊರಬರುತ್ತಲೇ ಹೇಳಿದಳು.
“ಬೆಂಗಳೂರಿನಿಂದ ಫೋನ್ ಬಂದಿತ್ತು. ಶ್ರೀಪಾದು ಮಾಮ ಇದ್ದಬದ್ದ ಒಂದು ಚೂರು ಆಸ್ತಿ ಎಲ್ಲಾ ನಿಮಗೇ ಬಿಟ್ಟುಹೋಗಿದಾನಂತೆ ॒ಅವೆಲ್ಲಾ ಸೆಟಲ್ ಮಾಡೋಕೆ ಅದಷ್ಟು ಬೇಗ ಬೆಂಗಳೂರಿಗೆ ಬರಬೇಕಂತೆ’॒’
ಅವಳಿಗೂ ಸಂತೋಷವಾದಂತಿತ್ತು. ಧ್ವನಿಯಲ್ಲಿ ಉತ್ಸುಕತೆಯಿದ್ದಂತಿತ್ತು, ದುಡ್ಡು ಯಾರಿಗೆ ಬೇಡ. “ಪಾಪ, ಎಷ್ಟು ಹಚ್ಚಿಕೊಂಡಿದ್ದ ನೋಡಿ’॒’ ಎಂದಳು. “ಹೋಗುವ ಮುಂಚೆ ಒಂದು ಬಾರಿಯೂ ನೋಡಲಾಗಲಿಲ್ಲ” ಎಂದಳು. “ಚಿಕ್ಕೋರಿದ್ದಾಗಲೇ ತಂದೇನ ಕಳಕೊಂಡ ನಿಮಗೆ ತಂದೆಗಿಂತ ಹೆಚ್ಚಾಗಿದ್ದ. ನಾವಿಂದು ಮನುಷ್ಯರಾಗಿ ಬದುಕುತ್ತಾ ಇರೋದು ಅವನಿಂದ. ಚಿಕ್ಕೂನ ನೋಡಿದ್ರೆ ಎಷ್ಟು ಸಂತೋಷಪಡ್ತಿದ್ನೋ’॒’ ಎಂದಳು.
ರಾಜೀವನ ನೀರವತೆ ನೋಡಿ, ಅನುಮಾನಿಸುತ್ತಾ “ಬೆಂಗಳೂರಿಗೆ ಯಾವಾಗ ಹೊರಡ್ತೀರಾ’॒’ ಎಂದಳು.
“ಆಂ’॒’
“ಬೆಂಗಳೂರಿಗೆ ಅರ್ಜೆಂಟಾಗಿ ಬರಲು ಹೇಳಿದರು’॒’
“ನಾನು ಬೆಂಗಳೂರಿಗೆ ಹೋಗುತ್ತಿಲ್ಲ’॒’
“ಏನು ಶ್ರೀಪಾದು ಮಾಮ ॒ಅಷ್ಟು ಆಸ್ತೀನೂ’॒’
“ತಿಳೀತು’॒’
“ಫಾರ್ಮಾಲಿಟೀಸ್ ಎಲ್ಲಾ ಇರುತ್ತೆ ॒ಸಾವು ಬಾಳಿನ ವಿಷಯ ॒ತಕ್ಷಣ ಹೋಗದಿದ್ದರೆ ಚೆನ್ನಾಗಿರೊಲ್ಲ’॒’
“ನಾನು ಹೇಳಿದೆನಲ್ಲಾ ॒ನಾನು ಹೋಗುತ್ತಿಲ್ಲಾಂತ’॒’
“ಮತ್ತೆ ॒ಆ ಆಸ್ತೀನೆಲ್ಲಾ ಏನು ಮಾಡ್ತಾರೆ’॒’
“ಅದನ್ನ ಕಟ್ಕೊಂಡು ನನಗೇನು ॒ಯಾವುದಾದ್ರೂ ಟ್ರಸ್ಟ್‌ಗೆ ಕೊಡಬಹುದು ॒ಅವರೇ ಹಂಚಿಕೊಳ್ಳಬಹುದು’॒’
“ಅದು ಶ್ರೀಪಾದು ಮಾಮನ್ನ ನೋಯಿಸಿದ ಹಾಗಲ್ಲವೆ ॒ಅವರ ಕೊನೇ ಗಳಿಗೆಯ ಆಸೆ ಪೂರೈಸದೆ’॒’
“ನನಗೇನೂ ಅರ್ಥ ಆಗ್ತಾ ಇಲ್ಲ’॒’
“ನಿಂಗೆ ಆಗೋದೂ ಇಲ್ಲ ॒ಅವನು ಆಸ್ತಿ ಬಿಟ್ಟಿದ್ದು ನನಗಲ್ಲ’॒’ ಮಂಪರಿನಲ್ಲಿರುವವನಂತೆ ಮಾತಾಡಿದ ರಾಜೀವ.
“ಅಯ್ಯೋ ॒ಅವರು ಫೋನ್‌ನಲ್ಲಿ ಕ್ಲಿಯರ್ ಆಗಿ ಹೇಳಿದರು ॒ಇದೇನೂ ತಮಾಷೆ ವಿಷಯವಲ್ಲವಲ್ಲ ॒ನೀವು ಸರಿಯಾಗಿದೀರಾ ತಾನೇ?”
“ಅವರು ಹೇಳಿದ್ದು ಸರೀಂತ ನನಗೂ ಗೊತ್ತು ॒ಆದರೆ ಹೇಳಿದೆನಲ್ಲಾ ॒ಶ್ರೀಪಾದು ಮಾಮ ಆಸ್ತಿ ಬಿಟ್ಟಿದ್ದು ನನಗಲ್ಲ’॒’ ಎಂದು ಗೊಣಗುತ್ತಾ ಆಫೀಸ್ ಬಸ್ ಹಿಡಿಯಲು ನಿಧಾನವಾಗಿ ಮನೆಯಿಂದ ಹೊರಗೆ ಹೆಜ್ಜೆ ಹಾಕಿದ ರಾಜೀವ.



-ಉಮಾ ರಾವ್