Wednesday, April 9, 2014

ಮೂರ್ತಿಯವರನ್ನು ನೆನೆಯುತ್ತಾ
ವಿ.ಕೆ.ಮೂರ್ತಿಯವರನ್ನು ನೆನೆಯುತ್ತಾ॒


ವಿ.ಕೆ. ಮೂರ್ತಿಯವರು ಇನ್ನಿಲ್ಲ. ಅಗಾಧ ಸಾಧನೆ ಮಾಡಿದರೂ ಸದ್ದಿಲ್ಲದೆ ಶಾಂತ
ರಾಗಿ ಬದುಕಿದ ಮೂರ್ತಿಯವರು, ಹಾಗೇ ಶಾಂತರಾಗಿ ಸದ್ದಿಲ್ಲದೆ ಇಂದು
ಬೆಳಿಗ್ಗೆ ಚಿರನಿದ್ರೆಗೆ ಜಾರಿ ಹೋದರು.
               *                *              *

ನೆರಳು ಬೆಳಕುಗಳಿಂದ ಬೆಳ್ಳಿ ತೆರೆ ಮೇಲೆ ಮಾಂತ್ರಿಕ ಜಗತ್ತನ್ನು ಸೃಷ್ಟಿಸಿದ ಮೂರ್ತಿ
ಯವರನ್ನು ಮೊದಲು ಕಂಡಿದ್ದು ನಾನು ೧೪ ವರ್ಶದವಳಾಗಿದ್ದಾಗ ಮುಂಬೈ
ನೋಡಲು ಹೋಗಿದ್ದಾಗ. ಆಗ ನಾವಿದ್ದ ನಮ್ಮ ಸೋದರತ್ತೆ ಭವಾನಿ ಮನೆಯ ಪಕ್ಕದಲ್ಲೇ
ಇದ್ದು ಅವರಿಗೆ ಆಪ್ತರಾಗಿದ್ದ ಕುಟ್ಟಿ ನಮ್ಮನ್ನು ಶೂಟಿಂಗ್ ತೋರಿಸಲು
ಕರೆದುಕೊಂಡು ಹೋಗಿದ್ದರು.. ಅವರು
ಮನೆಯವರಿಗೆ , ಗೆಳೆಯಗೆಳತಿಯರಿಗೆ, ಮೈಸೂರು ಎಸೋಸಿಯೇಶನ್ನಿನವರಿಗೆಲ್ಲಾ        
ಕುಟ್ಟಿ. ಸಿನೆಮಾ ವಲಯದವರಿಗೆ ಮೂರ್ತಿಸಾಬ್. ಶೂಟಿಂಗ್ ತೋರಿಸಿದ ಅವರು
 ಅಂದು ನಮಗೆ ದೇವರೇ ಆಗಿಬಿಟ್ಟಿದ್ದರು.
ಅದರಲ್ಲಿ ವೈಜಯಂತಿ ಮಾಲಾ ಬೇರೆ ನಟಿಸಿದ್ದಳೆಂದು ನೆನಪು.

                      *             *             *
        
           ಮತ್ತೆ ಅವರನ್ನು ಭೇಟಿಯಾದದ್ದು ಮುಂಬೈ ಮಾತುಂಗಾದ ಮೈಸೂರು
ಎಸೋಸಿಯೇಶನ್ನಿನಲ್ಲಿ. ಎಪ್ಪತ್ತರ ದಶಕದ ಮೊದಲ ಭಾಗ. ಮೂರ್ತಿಯವರು
ಕೀರ್ತಿಯ ಉತ್ತುಂಗದಲ್ಲಿದ್ದ ಸಮಯ. ಅಂದು ಅಸೋಸಿಯೆಶನ್ನಿನಲ್ಲಿ ಅವರೇ
ನಿರ್ದೇಶಿಸಿದ ಹಾಸ್ಯ ನಾಟಕ. ಕಟ್ಟಡದ ಮುಂದಿದ್ದ ಲಾನ್ ನಲ್ಲಿ ಬೆತ್ತದ
ಕುರ್ಚಿಯ ಮೇಲೆ ಸಿಗರೇಟು ಸೇದುತ್ತಾ ಸಂಧ್ಯಾ ಜೊತೆ  ಕುಳಿತಿದ್ದರು. ಬಿಳೀ ಶರಟು, ಬಿಳೀ
ಪ್ಯಾಂಟು ತೆಳ್ಳನೆಯ ವ್ಯಕ್ತಿತ್ವ. ಅವರ ಗೆಳೆಯರೊಬ್ಬರು ಜೋಕ್ ಮಾಡುತ್ತಿದ್ದಂತೆ
ಕುಟ್ಟಿ ಮುಂಬೈ ಮಳೆಯಲ್ಲೂ ಕೊಡೆ ತೆಗೆದುಕೊಂದು ಹೋಗುವುದಿಲ್ಲ,ಏಕೆ ಗೊತ್ತಾ?
ಅವನು ಎರಡು ಹನಿಗಳ ನಡುವೆ ತೂರಿಕೊಂಡು ನಡೀತಾನೆಎಂದು. ಕೊನೆ
ವರೆಗೂ ಅವರು ಹಾಗೇ ಇದ್ದಿದ್ದು ಅವರ ವೈಶಿಷ್ಟ್ಯ.
           ಬ್ಯಾಂಕ್ ಕ್ಲರ್ಕಿನಂತೆ ಕಾಣುತ್ತಿದ್ದ ಈ ಮನುಶ್ಯನೇ
ಪ್ರಖ್ಯಾತ ಸಿನೆಮಟೊಗ್ರಾಫರ್ ಮೂರ್ತಿಯವರೇ?
ಭವಾನಿ ನನ್ನನ್ನು ಅವರಿಗೆ ಪರಿಚಯ
ಮಾಡಿಸಿದರು. ನಂತರ ಮಾತುಕತೆ ಶುರುವಾಯಿತು. ಅವರು ವರ್ಷಗಳಿಂದ
ಪರಿಚಿತರೇನೋ ಅನ್ನಿಸಿಬಿಟ್ಟಿತು. ಅಂಥಾ ಸಹಜ, ಸರಳ ಜೀವಿ. ಮುಂಬೈ
ಚಿತ್ರೋದ್ಯಮದಲ್ಲಿ ಇಂಥವರು ಇರುತ್ತಾರೆಯೇ? ಅವತ್ತು ಅವರು ಮಾಡಿಸಿದ್ದು
ಹಾಸ್ಯ ನಾಟಕ. ನಕ್ಕು ನಕ್ಕು ಸಾಕಾಗಿತ್ತು. ಅವರಿಗೆ ನಾಟಕದ ಹುಚ್ಚು ಎಷ್ಟಿತ್ತೆಂದರೆ
’ನೋಡಮ್ಮ ಉಮಾ, ಆಗೇನಾದರೂ ಯಾರಾದರೂ ಒಂದು ೧೦,೦೦೦ ರುಪಾಯಿ
ಸಂಬಳ ಕೊಡ್ತೀನಿ, ನಾಟಕ ಮಾಡಿಸಿಕೊಂಡಿ
           ರು ಅಂದಿದ್ರೆ, ಹಾಯಾಗಿದ್ದುಬಿಡ್ತಿದ್ದೆ’ಎಂದು
ಬಿಸಿಲು ಕೋಲು ಬರೆಯುತ್ತಿದ್ದಾಗ ಹೇಳಿದ್ದರು.

                 *               *             *


ನಂತರ ನಾವು ಹೊಸರೀತಿಯ ನಾಟಕಗಳನ್ನು
ಆದಿಸುತ್ತಿದ್ದ ಟಾಮ್ ಆಲ್ಟರ್, ಬೆಂಜಮಿನ್ ಗಿಲಾನಿ, ಅಮೋಲ್ ಪಾಲೆಕರ್,
ನಸೀರುದ್ದೀನ್ ಶಾ ಅವರುಗಳನ್ನು ನೋಡಲು ಯಾವಾಗ ದಾದರಿನ
ಛಬಿಲ್ ದಾಸ್ ಸ್ಕೂಲಿನ ಆಡಿಟೋರಿಯಮ್ ಗೆ ಹೋದರೂ, ಅಥವಾ
ಶಬಾನಾ ಆಜ್ಮಿ, ಸ್ಮಿತಾ ಪಾಟಿಲ್, ಸತ್ಯದೇವ್ ದುಬೇ ಮುಂತಾದವರ ನಾಟಕಗಳನ್ನು
ನೋಡಲು ಪೃಥ್ವಿ ಥಿಯೇಟರಿಗೆ ಹೋದರೂ ಅಲ್ಲಿ ಕುಟ್ಟಿ ಹಾಜರಿರುತ್ತಿದ್ದರು.
ಅದೇ ಬಿಳೀ ಪ್ಯಾಂಟು, ಬಿಳೀ ಶರಟು, ಕೈಯ್ಯಲಿ ಸಿಗರೇಟಿನ ನಗುಮುಖದ  ಮನುಷ್ಯ.

                   *               *              *

೯೦ರ ದಶಕದಲ್ಲಿ ಅವರು ಬೆಂಗಳೂರಿಗೆ ಬಂದಿದ್ದರು. ನಾವು ಕೆಲವು ವರ್ಶಗಳ
ನಂತರ ಇಲ್ಲಿಗೆ ಬಂದೆವು. ಭೇಟಿಯಾದಾಗ ’ತುಂಬಾ ಖುಶಿಯಾಯ್ತು ನೀವು
ಬಂದದ್ದು. ಇಲ್ಲಿ
ಜನ ಸ್ವಲ್ಪ ರಿಸರ್ವ್ಡ್. ಮುಂಬೈನವರಂತಲ್ಲ’ ಎಂದು ನಕ್ಕರು.
ಏನೂ ಕೆಲಸ ಇಲ್ಲದೆ ಕೂಡೊದೂ ಬೇಜಾರು ಎಂದು ನೊಂದು ಕೊಂಡರು. ನಾನು
ನಾಣಿ, ಸಿಟಿ ಇನ್ಸ್ಟಿಟ್ಯುಟಿನಲ್ಲಿ ಜನನ್ನ ಸೇರಿಸಿ ನಾಟಕ ಮಾಡಬಹುದೂಂತ
ನೋಟೀಸ್ ಹಾಕಿದರೆ ಒಂದು ಹೆಸರೂ ಬರಬೇದವೇ?! ಜನಕ್ಕೆ ಉತ್ಸಾಹವೇ
ಇಲ್ಲ ಎಂದು ಆಶ್ಚರ್ಯ ಪಟ್ಟರು. ಕನ್ನಡ ಚಿತ್ರಗಳಿಂದಲೂ ಕರೆ ಬಂದಿಲ್ಲ
ಎಂದು ಅವರಿಗೆ ಸ್ವಲ್ಪ ಬೇಸರವಿದ್ದಂತಿತ್ತು.

                   *                *              *

ಒಂದು ಪತ್ರಿಕೆಯಲ್ಲಿ ಬಂದ ಅವರ ಸಂದರ್ಶನದಲ್ಲಿ ಮಾತನಾಡುತ್ತ
ಸಂದರ್ಶಕಿ ’ನೀವು ಇಷ್ಟೆಲ್ಲ ಸಾಧನೆ ಮಾಡಿದೀರಾ ಆದರೆ ನಿಮ್ಮ ಆತ್ಮ ಚರಿತ್ರೆ ಯಾಕೆ
ಬರೆದಿಲ್ಲ? ಇಟ್ ವಿಲ್ ಬಿ ಸೋ ಇನ್ಟರಸ್ಟಿಂಗ್!’ ಎಂದು ಕೇಳಿದಾಗ
’ಐ ಆಮ್ ನಾಟ್ ಅ ರೈಟರ್, ಐ ಕ್ಯನ್ ಓನ್ಲಿ ಮೇಕ್ ಫ಼ಿಲ್ಮ್ಸ್’ಎಂದಿದ್ದರು.
ಅಗ ನನ್ನ ಟ್ಯೂಬ್ ಲೈಟ್ ಆನ್ ಆಗಿತ್ತು. ಲೇಖಕಿಯಾಗಿ, ಅವರು ಅಷ್ಟು
ಚೆನ್ನಾಗಿ ಬಲ್ಲ ನಾನು ಏನು ಮಾದುತ್ತಿದ್ದೇನೆ? ಮಾರನೆಯ ದಿನವೇ ಅವರ ಮನೆಗೆ
ಹೋಗಿ ಕೇಳಿದ್ದೆ. ’ನಾನಂಥಾದ್ದು ಏನು ಸಾಧಿಸಿದ್ದೇನೆ ’ ಎಂದು ಸಂಕೋಚದಿಂದ
 ಮೊದಲು ಅನುಮಾನಿಸಿದ ಅವರು ನಂತರ ಒಪ್ಪಿದ್ದರು.
ಹಾಗೆ ಜನ್ಮ ತಾಳಿದ ’ಬಿಸಿಲುಕೋಲು ’ಮೂಲಕ ಈ ಅದ್ಭುತ ವ್ಯಕ್ತಿಯ ಬದುಕಿನ ನಿಕಟ
ಪರಿಚಯವಾಯಿತು. ಆ ಪುಟ್ಟ ಹುಡುಗನ ಕಡುಬಡತನ, ಯಾವಗಲೂ ಕಾಡುತ್ತಿದ್ದ ಹಸಿವು,
ಮೂಕಿ ಚಿತ್ರ ನೋದುತ್ತ ಮರೆಯುತ್ತಿದ್ದ ತಾಯಿಯಿಲ್ಲದ ಮನೆ, ಸಿನೆಮಾ ಹುಚ್ಚಿನಲ್ಲಿ
ಊರು ಬಿಟ್ಟು ಮುಂಬೈ ಗೆ ಓಡಿ ಹೋದವನ ಕೆಚ್ಚು, ನಂತರದ ಯಶಸ್ಸು, ಎ॒ಂದೂ ಬದಲಾಗದ
ಸಹಜ ಸರಳ ಸ್ವಭಾವ, ತಾವೇ ಮಾಡಿಕೊಡುತ್ತಿದ್ದ ಘಮ್ಮೆನ್ನುವ ಕಾಫಿ.॒.ಎಲ್ಲವೂ
ನನ್ನೊಳಗೆ ಅಳಿಸದಂತೆ ಹೊಕ್ಕಿತು.

                    *                *              *

ಅವರು ಚಿತ್ರರಂಗದಲ್ಲಿ ಸಾಧಿಸಿದ್ದು ಇತಿಹಾಸ. ಅಷ್ಟು ಕಡಿಮೆ ತಂತ್ರಜ್ನಾನ ಉಪಯೋಗಿಸಿ
ಅಂಥಾ ಅದ್ಭುತ ಫ಼್ರೇಮ್ಗಳನ್ನು ನಮ್ಮ ಮುಂದಿಟ್ಟ ಅವರ ಕೈಚಳಕಕ್ಕೆ ಜಗಲ್ಲೇ ಬೆರಗಾಗಿತ್ತು.
ಸಿನಿಮಾಟೊಗ್ರಫ಼ಿ ಕ್ಷೇತ್ರದಲ್ಲಿ ಮೂರ್ತಿಸಾಬ್ ಅಂಥಾ ಪರ್ಫ಼ೆಕ್ಶನಿಸ್ಟ ಇಲ್ಲ ಎಂದು ಪ್ರತೀತಿ.
ಅವರ ಶಿಶ್ಯರಲ್ಲೊಬ್ಬರಾದ ಶಿರೀಶ್ ದೇಸಾಯಿ ನೆನಪಿಸಿಕೊಳ್ಳುವ ಒಂದು ಘಟನೆ ಹೀಗಿದೆ.

’ಮೂರ್ತಿಸಾಬ್ ಬಾಯಲ್ಲಿ ಏನೂ ಹೇಳದೆಯೇ ಕ್ಯಾಮರಾಮನ್ ಗೆ ಕಲಿಯಬೆಕಾದ
ಎಲ್ಲವನ್ನೂ ಕಲಿಸಿದ್ದರು. ಮೂರ್ತಿಸಾಬ್ ಮತ್ತು ಶಮ್ಮಿ ಕಪೂರ್ ತುಂಬಾ ಅತ್ಮೀಯ ಗೆಳೆಯರು.
ಶಮ್ಮಿ ಕಪೂರ್ ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿ. ಒಂದು ಸಲ ಅವರೊಡನೆ ಶೂಟ್ ಮಾದು
ತ್ತಿದ್ದೆ. ಶಾಟ್ ನದುವೆ ಶಮ್ಮಿ ಕಪೂರ್ ಅ ಪಾತ್ರದ ’ಲುಕ್’ ತಪ್ಪು
ಎಂದು ಕಾಮೆಂಟ್ ಮಾಡಿದರು. ನಾನು ಸರಿ ಇದೆ ಎಂದೆ. ದೊಡ್ಡ ವಾಗ್ವಾದವೇ ಆಗಿ ಹೋಯಿತು.
ಆದರೆ ನಾನು ಬಿಟ್ಟುಕೊಡಲಿಲ್ಲ. ಕೊನೆಗೆ ಶಮ್ಮಿ ನಿನಗೆ ಟ್ರೇನಿಂಗ್ ಕೊಟ್ಟವರು ಯಾರು?
ಎಂದು ಜೋರಾಗಿ ಕೇಳಿದರು.  ನಾನೌ ವಿ.ಕೆ.ಮೂರ್ತಿಸಾಬ್’ಎಂದೆ. ಶಮ್ಮಿ ಕಪೂರ್
ನಗಲು ಶುರು ಮಾಡಿದರು.  ’ಅದಕ್ಕೆ ನಿನಗೆ ಇಂಥಾ ಆಟಿಟ್ಯೂಡ್ ಇದೆ, ಅಶ್ಚರ್ಯವೇನಿಲ್ಲ’
ಎಂದರು. ನಾವು ತೆಗೆದು ಕೊಂಡ ನಿಲುವು ಸರಿ ಎಂದು ನಮಗೆ ಖಾತ್ರಿಯಾಗಿದ್ದಲ್ಲಿ ಎಂದೂ
ಬಗ್ಗ ಬಾರದೆಂದು ಮೂರ್ತಿಸಾಬ್ ನಮಗೆ ಹೇಳಿಕೊಟ್ಟಿದ್ದರು.

                     *                  *                *

ಅವರು ತಮ್ಮ ಶಿಶ್ಯರಿಗೆ ಹೇಳಿದ್ದು ಯಾವಾಗಲೂ ಮನಸ್ಸಿನಲ್ಲಿ ಕಾಡುತ್ತಿರುತ್ತದೆ.
ಬೆಳಕನ್ನೂ ಒಬ್ಬ ನಟನೆಂದು ತಿಳಿಯಿರಿ. ಇದು ರಾತ್ರಿಯೇ, ಬೆಳಗ್ಗೇ  ಎಣ್ದು ಬೆಳಕು
ಹೇಳುತ್ತದೆ. ಇಲ್ಲಿ ಭಯ ಸುತ್ತುವರಿದಿದೆಯೇ, ಪ್ರೇಮ ಸಲ್ಲಾಪದ ಪರಿಸರವಿದೆಯೇ,
ದುಃಖದ ಚಾಯೆ ಇದೆಯೇ ಎಂದು ಸುತ್ತಲಿನ ಬೆಳಕು ಹೇಳುತ್ತದೆ. ನೀವು ಬೇಳಕನ್ನು ಒಬ್ಬ
ನಟ ಎಂದುಕೊಂಡರೆ ಸರಿಯಾದ ಮೂಡ್ ಸೃಷ್ಟಿಸಲು ಸಾಧ್ಯವಾಗುತ್ತದೆ.


                       *                     *              *

(ಪ್ರಜಾವಾಣಿ ೮/೪/೧೪)
2 comments: