Tuesday, March 11, 2014

ನಗ್ನ ಸತ್ಯ


‘ನ್ಯೂಡ್ ಮಾಡೆಲ್’ಗಳೆಂದರೆ ನಮ್ಮೆಲ್ಲರ ಮನಸ್ಸಿನ ಮೇಲೆ ಮೂಡುವ ಚಿತ್ರಗಳು ಕೆಲವು. ತೆಳ್ಳಗೆ ಬೆಳ್ಳಗೆ ಬಳಕುವ ಯುವ ಚೆಲುವೆಯರು. ಮ್ಯಾಗಝೀನ್‌ಗಳ ಮೇಲೆ ಮೆರೆದು ಸಾವಿರಾರು ರೂಪಾಯಿ ಸಂಪಾದಿಸಿ ಎಲ್ಲೆಲ್ಲೂ ಗುಲ್ಲೆಬ್ಬಿಸುವ ರೂಪಸಿಯರು. ಪ್ರಸಿದ್ಧ ರಾಜಕಾರಣಿಗಳ ಮೇಲೆ ಮೋಡಿ ಹಾಕಿ ಸರ್ಕಾರಗಳನ್ನು ಉರುಳಿಸುವ ಚಾಲಾಕಿಯರು. ಆದರೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಇತ್ತೀಚೆಗೆ ಬಂದ ವರದಿ ಬೇರೆ ರೀತಿಯ ‘ನ್ಯೂಡ್ ಮಾಡೆಲ್’ಗಳ ಬಗ್ಗೆ.
ಮುಂಬೈನ ವಿ.ಟಿ. ಸ್ಟೇಷನ್ ಎದುರಿರುವ ಪ್ರಸಿದ್ಧ ಸಂಸ್ಥೆಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ರ ವರೆಗೆ ದಿನಾ ೮೦ ರೂಗಳಿಗಾಗಿ ಬಟ್ಟೆ ಕಳಚಿ ಕೂಡುವವರು ರಾಜಮ್ಮ, ಅರಿಸಿಯಾ, ಸರಸ್ವತಿ. ಇಲ್ಲಿನ “ಸ್ಕಲ್‌ಪ್ಚರ್ ಅಂಡ್ ಪೇಂಟಿಂಗ್” ಕೋರ್ಸಿನ ಮೂರರಿಂದ ಐದನೇ ವರ್ಷದ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಈ ಅವಶ್ಯಕತೆ. ರಾಜಮ್ಮ, ಅರಸಿಯಾ ಮದುವೆಯಾಗಿ ಮಕ್ಕಳಿರುವ, ಮೈಕೈ ತುಂಬಿಕೊಂಡ, ಕಪ್ಪು ಬಣ್ಣದ ಮಧ್ಯ ವಯಸ್ಸಿನ ಹೆಂಗಸರು. ಸರಸ್ವತಿ ೧೨ ವರ್ಷದ ಹುಡುಗಿ. ದಿನಾ ಬೆಳ್ಳಗ್ಗಿನಿಂದ ಸಂಜೆವರೆಗೂ ಬೆತ್ತಲಾಗಿ ವಿದ್ಯಾರ್ಥಿಗಳು ಹೇಳಿದ ಪೋಸಿನಲ್ಲಿ ಅಲ್ಲಾಡದೆ ಕೂತಿರುವುದೇ ಇವರ ಕೆಲಸ. ಒಂದು ಮುರುಕಲು ಮರದ ಡಬ್ಮದ ಮೇಲೆ ಮೈಕೈ ನೊಂದರೂ ಕಮಕ್ ಕಿಮಕ್ ಎನ್ನದೆ ಗಂಟೆಗಟ್ಟಲೆ ಕೂತಿರುವ ಇವರು ವಿದ್ಯಾರ್ಥಿಗಳಿಗೆ ಅಭ್ಯಾಸದ ವಸ್ತು. ದಿನಾ ‘ಕೆಲಸ’ ಮುಗಿಸಿ ಮನೆಗೆ ಹೊರಟಾಗ ಸಿಗುವುದು ೮೦ ರೂ. - ಮಿಕ್ಕೆಲ್ಲಾ ದಿನಗೂಲಿಯವರಂತೆಯೇ.
ರಾಜಮ್ಮ ಈ ಕೆಲಸ ಮಾಡುವುದು, ಆ ವರಮಾನದಿಂದ  ಸಂಸಾರ ಸಾಗಿಸುವುದು ಅವಳ ಗಂಡನಿಗೆ ಗೊತ್ತಿಲ್ಲ. ತಮಿಳುನಾಡಿನಿಂದ ಇಲ್ಲಿಗೆ ಎಷ್ಟೋ ವರ್ಷಗಳ ಹಿಂದೆ ಬಂದವಳು. “ಅಲ್ಲಿ ಮಳೆ ಆಗಲಿಲ್ಲ. ಕೆಲಸ ಸಿಗುತ್ತಿರಲಿಲ್ಲ. ಅದಕ್ಕೇ ಇಲ್ಲಿ ಬಂದೆವು. ಇಲ್ಲಿ ಏನು ಕೆಲಸ ಮಾಡಲಿ? ಮನೆ ಕೆಲಸ ಮಾಡಿದರೆ ೩೦೦-೪೦೦ ರೂಪಾಯಿ ಸಿಗುತ್ತೆ. ಬದುಕೋಕಾಗುತ್ತಾ? ಅದಕ್ಕೇ ಇದಕ್ಕೇ ಒಪ್ಪಿಕೊಂಡೆ” ಎನ್ನುವ ರಾಜಮ್ಮ ಮಕ್ಕಳನ್ನು ಊರಿನಲ್ಲಿ ಅವರಜ್ಜಿಯ ಹತ್ತಿರ ಬಿಟ್ಟಿದ್ದಾಳೆ. ಪ್ರತಿ ತಿಂಗಳೂ ಓದು ಬರಹಕ್ಕಾಗಿ ಹಣ ಕಳಿಸುವ ತೃಪ್ತಿ ಅವಳಲ್ಲಿದೆ. ತಮ್ಮ ಮಕ್ಕಳು ತಮ್ಮಂತೆ ಬದುಕಬಾರದೆಂದು ಮರಗುವ ಅರಸಿಯಾ, ಮಗನನ್ನು ಬೋರ್ಡಿಂಗ್ ಸ್ಕೂಲಿನಲ್ಲಿ ಓದಿಸುವ ಕನಸು ಕಾಣುತ್ತಾಳೆ. ಅವರು ಬೆತ್ತಲೆ ಕೂತಷ್ಟು ಹೊತ್ತೂ ಅವರ ಮಕ್ಕಳನ್ನೇ ನೆನೆಸಿಕೊಳ್ಳುತ್ತಿರುತ್ತಾರೆ.
ಮುಂಬೈಯಲ್ಲಿ ಈ ಆರ್ಟ್ಸ್ ಸ್ಕೂಲುಗಳಿಗೆ ಮಾಡೆಲ್ ಮಾಡುವವರು ಈ ಮೂರು ಜನ ಮಾತ್ರ. ಅಂಗಸೌಷ್ಟವ ಚೆನ್ನಾಗಿರುವವರು ಇಷ್ಟು ಕಡಿಮೆ ಹಣಕ್ಕೆ ಯಾರೂ ಬರುವುದಿಲ್ಲ. ಈ ಕಪ್ಪು ದಪ್ಪ-ಮಧ್ಯವಯಸ್ಸಿನ ಹೆಣ್ಣುಗಳಿಗೆ ಬೇರೆಲ್ಲೂ ಬೇಡಿಕೆಯಿಲ್ಲ. ಹೀಗಾಗಿ ಇವರು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕಾಯಂ ಮಾಡೆಲ್‌ಗಳಾಗಿದ್ದಾರೆ. ಆದರೆ ಎಷ್ಟು ವರ್ಷಗಳು ತಪ್ಪದೆ ಕೆಲಸ ಮಾಡಿದ್ದರೂ, ಇವರಿಗೆ ಬೇರೆ ಕೆಲಸಗಾರರಿಗೆ ಸಿಗುವ ಯಾವ ‘ಬೆನಿಫಿಟ್ಸ್’ ಇಲ್ಲ. ಪ್ರತಿ ವರ್ಷ ಇವರನ್ನೇ ಬಳಸಿ, ಪ್ರತಿ ವಿದ್ಯಾರ್ಥಿ ಇವರನ್ನೇ ಸ್ಕೆಚ್ ಮಾಡಿ ಬೇಸರ ಬಂದಿದೆ, ಆದರೆ ಬೇರಾರೂ ಇಲ್ಲ ಎಂದು ಕೆಲವು ವಿದ್ಯಾರ್ಥಿಗಳೆಂದರೆ, ಇವರೊಡನೆ ಮಾತನಾಡಿ, ಇವರ ಕತೆ ಕೇಳಿದ ಮೇಲೆ ‘ನ್ಯೂಡ್’ಗಳನ್ನು ಪೇಂಟ್ ಮಾಡುವುದನ್ನೇ ಬಿಟ್ಟುಬಿಟ್ಟ ಒಬ್ಬ ಸಹೃದಯಿಯೂ ಇದ್ದಾನೆ.
“ಇಲ್ಲಿನ ವಿದ್ಯಾರ್ಥಿಗಳೆಲ್ಲಾ ನಮ್ಮನ್ನು ನೋಡಿ ಪೇಂಟ್ ಮಾಡುತ್ತಾರೆ. ಕಲಿಯುತ್ತಾರೆ. ಪ್ರಖ್ಯಾತರಾಗುತ್ತಾರೆ. ಆದರೆ ನಮ್ಮನ್ನು ಕೇಳುವವರ‍್ಯಾರು? ನಮಗೇನಾದರೆ ಯಾರಿಗೆ ಯೋಚನೆ?” ಎನ್ನುವ ಇವರಿಗೆ ಈಗ ತಮ್ಮ ಕೆಲಸ ಯಾಂತ್ರಿಕವಾಗಿ ಹೋಗಿದೆ. ಆದರೂ, ವಿದ್ಯಾರ್ಥಿಗಳು ಕ್ಲಾಸ್‌ರೂಮಿಗೆ ಬಂದು ಬಣ್ಣ, ಬ್ರಶ್, ಕ್ಯಾನ್‌ವಾಸ್‌ಗಳ ತಯಾರಿ ಮಾಡಿಕೊಂಡು ಸಿದ್ಧವಾಗುವ ಕೊನೇ ಕ್ಷದವರೆಗೂ ತನ್ನ ಪೆಟ್ಟಿಕೋಟಿಗೆ ಅಂಟಿಕೊಂಡೇ ಇರುವ ರಾಜಮ್ಮನಿಗೆ, ಇಷ್ಟು ವರ್ಷಗಳ ನಂತರವೂ ಅದನ್ನೂ ಕಳಚುವ ಆ ಕ್ಷಣ ವಿಚಿತ್ರ ನೋವಿನಲೆ ಹರಿಸಿ ಹೋಗುತ್ತದೆ. ಅಳುಕು, ಸಂಕೋಚ ಮುತ್ತುತ್ತವೆ.
ಆದರೆ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಹೆಸರು ಕೇಳುತ್ತಿದ್ದಂತೆಯೇ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದುದು ಆ ಸಂಜೆಗಳು. ದಟ್ಟಮರಗಳಿಂದ ತುಂಬಿದ ವಿಶಾಲವಾದ ಆವರಣದ ನಡುವೆ ನಿಂತ ಹಳೆಯ ಕಟ್ಟಡ. ಆವರಣದ ತುಂಬಾ ಹರಡಿದ ಜಮಖಾನಾಗಳು, ಕುರ್ಚಿಗಳು. ನಡುವೆ ವೇದಿಕೆ. ಕಿಕ್ಕಿರಿದ ಜನ. ಮುಂಬೈನ ಎಲ್ಲಾ ಸ್ತರಗಳಿಂದ ಬಂದವರು. ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾ ಪಟುಗಳು, ಆಫೀಸ್ ಕ್ಲರ್ಕ್‌ಗಳು, ಗೃಹಿಣಿಯರು, ವಿದ್ಯಾರ್ಥಿಗಳು. ಸೂರ್ಯಾಸ್ತ ಸಮೀಪಿಸಿದಂತೆ ಗೂಡಿಗೆ ಮರಳಿ ಬೆಚ್ಚಗೆ ಕೂತು ಚಿಲಿಪಿಲಿ ಮಾಡುವ ಹಕ್ಕಿಗಳು. ಕೆಂಪು-ನೀಲಿ ಆಗಸದಲ್ಲಿ ಇಣುಕುವ ಪೇಲವ ತಾರೆಗಳು. ಶುಭ್ರ ಬಿಳಿ ಪಂಚೆ, ಗರಿಮುರಿ ಕುರ್ತಾ ಧರಿಸಿ, ವೇಳೆಗೆ ಸರಿಯಾಗಿ ನೇರವಾಗಿ ನಡೆದು ಬರುವ ತೆಳುಕಾಯದ ತೇಜಸ್ವಿ ಜಿಡ್ಡು ಕೃಷ್ಣಮೂರ್ತಿಯವರು ವೇದಿಕೆ ಹತ್ತಿದಂತೆ ಎಲ್ಲೆಲ್ಲೂ ಗಾಢ ಮೌನ. ಎಲ್ಲರಿಗೂ ಕೈಮುಗಿದು, ಬದುಕಿನ ಬಗ್ಗೆ ತಮ್ಮ ಅನನ್ಯ ವಿಚಾರಧಾರೆ ಅವರು ಹರಿದು ಬಿಟ್ಟಂತೆ, ಈ ಗಡಿಬಿಡಿ ಗೊಂದಲದ ಬದುಕಿನ ಅರ್ಥ ಕಂಡುಕೊಳ್ಳಲು ಹವಣಿಸುವ ದುಗುಡದ ಮನಗಳು. ಅವರು ಬದುಕಿರುವವರೆಗೂ ಪ್ರತಿ ಜನವರಿ ತಿಂಗಳಲ್ಲಿ ೪-೫ ದಿನ ಸಹಸ್ರಾರು ಜನರಿಗೆ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಆವರಣ ಪುಣ್ಯಕ್ಷೇತ್ರ.
ಆದರೆ, ನಾವೆಲ್ಲ ಜೇಕೆಯವರ ವಿಚಾರಧಾರೆಯಲ್ಲಿ ತಲ್ಲೀನರಾಗಿ, ಕಣ್ಮುಚ್ಚಿ ಕುಳಿತು ನಮ್ಮ ದಿನದಿನದ ಕಿರಿಕಿರಿಗಳನ್ನು ಸಣ್ಣಪುಟ್ಟ ಹತಾಶೆಗಳನ್ನು, ಮಹಾತ್ವಾಕಾಂಕ್ಷೆಯ ಅಬ್ಬರವನ್ನು ಮೀರುವ ಪ್ರಯತ್ನದಲ್ಲಿದ್ದಾಗ, ಆ ಸಂಜೆಯೂ ರಾಜಮ್ಮ ಮುರುಕಲು ಪೆಟ್ಟಿಗೆಯ ಮೇಲಿಂದ ಎದ್ದು, ಸೀರೆ ಸುತ್ತಿಕೊಂಡು, ಅಂದಿನ ಗಳಿಕೆ ೮೦ ರೂಪಾಯಿಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು, ತನ್ನ ಜೋಪಡಿಯತ್ತ ದಣಿದ ಹೆಜ್ಜೆಗಳನ್ನು ಹಾಕಿದ್ದಳಲ್ಲಾ... ನಮ್ಮಲ್ಲಿ ಯಾರಿಗಾದರೂ ಅವಳ ಹೆಜ್ಜೆಯ ಸಪ್ಪಳ ಕೇಳಿತ್ತೇನು?
*
(ಮುಂಬೈ ಡೈರಿ, ಲಂಕೇಶ್ ಪತ್ರಿಕೆ, ೧೯೯೫)

10 comments:

 1. ಒಬ್ಬ ಹೆಣ್ಣಿನ ಜೀವನ ತೆರೆದಿಟ್ಟಿದ್ದೀರಿ ಮೇಡಂ ಇಂತಹ ಜೀವನಗಳು ಅದೆಷ್ಟಿವೆಯೋ..
  -ಸುಗುಣ ಮಹೇಶ್
  ಕುವೈತ್

  ReplyDelete
 2. ನನಗೆ ಈ ಕಥೆ ಪೂರ್ಣ ಗೊತ್ತಿರಲಿಲ್ಲ, ಅಕ್ಯುಪೇಶನ್ ಸೇಫ್ಟಿ ಬಗ್ಗೆ, ಕಂಫರ್ಟ್ ಬಗ್ಗೆ ಏನೆಲ್ಲ ಕೊರೆಯುತ್ತೇವೆ, ಅವರಿಗೆ ಅಲ್ಲಿ ಅಕ್ಯುಪೇಶನ್ ಹಜಾರ್ಡ್ ಎನ್ನುವಂತಹ ಸಂಗತಿ ಇಲ್ಲದೆಯೋ ಹೇಗೆ ಆ ಕುರುಕಲು ಬೆಂಚು.ಸ್ಟೂಲಿನ ಮೇಲೆ ಕುಳಿತು ಬೆನ್ನುನೋವು ಬರಿಸಿಕೊಂಡು, ಅದೂ ಅಷ್ಟು ಕಡಿಮೆ ಸಂಬಳಕ್ಕೆ... ಏನು ಹೇಳುವುದು ಗೊತ್ತಾಗ್ತಿಲ್ಲ... ಉದ್ಯೋಗ ಖಾತ್ರಿ ಯೋಜನೆಯಲ್ಲಾದ್ರೂ ಬೆಳಗ್ಗೆ 10ರಿಂದ ಮಧ್ಯಾಹ್ನ 2-3ರವರೆಗೆ ಕೆಲಸ ಮಾಡಿದ್ರೆ 170/- ಕೊಡ್ತಾರೆ, ಜೆ ಜೆ ಸಂಸ್ಥೆಗೆ ಅದೂ ಗೊತ್ತಿಲ್ಲವಾ... 80 ರೂ. ಅಂದ್ರೆ ಇನ್ನೂ ಯಾವ ಕಾಲದಲ್ಲಿ ಇದ್ದಾರೆ? ಇಷ್ಟು ಕಡಿಮೆ ದಿನಗೂಲಿ... ಯಾರಾದ್ರೂ ಅವರ ಸಂಬಳವನ್ನಾದ್ರೂ ಹೆಚ್ಚಿಸುವಂತೆ, ಅವರೂ ಕೂಡ ಕಲಾವಿದರು, ಮಾಡೆಲ್ ಗಳು ಎಂಬಂತೆ ಅಲ್ಲದಿದ್ದರೂ ಕೊನೇ ಪಕ್ಷ ಕನಿಷ್ಟ ದಿನಗೂಲಿಯನ್ನಾದ್ರೂ ಕೊಡುವಂತೆ ಮಾಡಬಹುದಲ್ಲವೇ... ಅಲ್ಲಿಯ ಕಲಾವಿದ ವಿದ್ಯಾರ್ಥಿಗಳು, ಬೋಧಕರು ಯಾಕೆ ಇಷ್ಟು ಅಮಾನವೀಯವಾಗಿದ್ದಾರೆ? ಕೊನೇ ಪಕ್ಷ ಸೂಕ್ತ ರೀತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆಗೀಗ ವಿಶ್ರಾಂತಿ ಮತ್ತು ಒಳ್ಳೆಯ ವೇತನವನ್ನಾದ್ರೂ ನೀಡಬಹುದು...

  ReplyDelete
 3. ದಯವಿಟ್ಟು ತಾರೀಖು ಗಮನಿಸಿ.

  ReplyDelete
 4. ಇಂದಿಗೆ ಹಣದ ಮೌಲ್ಯ ಸ್ವಲ್ಪ ಬದಲಾಗಿರಬಹುದು! ಕೆಲಸ ಮಾಡುವ ಸ್ಥಳ ಕೆಲಸ ಬದಲಾಗಿರಬಹುದು. ಆದರೆ ಇಂತಹ ನಗ್ನಸತ್ಯಗಳು ಇನ್ನೂ ನಡೆಯುತ್ತಿವೆ ಕೆಲವೆಡೆಗೆ ಎಂದೇ ನನಗನ್ನಿಸುತ್ತದೆ ಮೇಡಂ. ಸಾರ್ವಕಾಲಿಕ ಸತ್ಯವೆಂದರೆ ಆ ಹೆಣ್ಣುಗಳ ಅಂತರಾಳದ ನೋವು!

  ReplyDelete
 5. ಉಮಾ ಮೇಡಂ, ನೀವು ಏನೇ ಬರದ್ರೂ ತುಂಬಾ ವಾಸ್ತವಿಕವಾಗೇ ಬರೆಯುತ್ತೀರ. ವಾಸ್ತವದ ಬದುಕು ಕಲ್ಪಿತ ಕಥೆಗಳಿಗಿಂತ ಘೋರ ಮತ್ತು ಭೀಕರ. ಹೀಗಾಗಿ ಕೆಲವೊಮ್ಮೆ ಕಾದಂಬರಿಗಳು, ಕಥೆಗಳು ನನ್ನೆದುರು ಬಂದರೂ ಗೌರವಿಸದೇ ಹೋಗಿದ್ದೇನೆ.

  ReplyDelete
 6. ಮ್ಯಾಮ್ ಈ ಲೇಖನ ಮನಸ್ಸಿಗೆ ತುಂಬಾ ನಾಟಿತು. ಈ ಆವರಣದಲ್ಲಿರುವ ಮೌನ ಕಾಡುತ್ತೆ.

  ReplyDelete
 7. ಓಹ್! ಇದೆಂತಹ ಯಾತನೆಯ ಸತ್ಯ ಮೇಡಂ.
  ಕೆಲವೇ ಮಂದಿಗಳ ಹೊರತಾಗಿ ಸಾಮಾನ್ಯವಾಗಿ ಹೊರಜಗತ್ತಿಗೆ ಇದು ಕಲ್ಪನೆಗೂ ನಿಲುಕದ್ದು. ಆದರೆ, ಆ ದುಡಿಮೆಯ ಪಗಾರದ ಬಗ್ಗೆ ತಿಳಿದಾಗ ನೋವಿನ ಜೊತೆಗೆ ಸೋಜಿಗ ಕಾಡುತ್ತದೆ. ಇದು 95ರ ದಶಕದ ಕೂಲಿಯೇ ಆಗಿದ್ದರೂ ಸಂವೇದನೆಗೆ ಪ್ರಾಧಾನ್ಯತೆ ಇರಬೇಕಾದ ಸೃಜನಾತ್ಮಕ ವಿದ್ಯಾ ಸಂಸ್ಥೆಯ ಮಾನಸಿಕ ಸ್ಥಿತಿ ಇಷ್ಟು ಶೋಚನೀಯವೆ?
  ಅನುಪಮಾ ಪ್ರಸಾದ್.

  ReplyDelete
 8. ನಾವೆಲ್ಲ ಇನ್ನೂ ಯಾವುದೋ ಲೋಕದಲ್ಲಿದ್ದೇವೆ ಗೆಳತಿ

  ReplyDelete