Saturday, November 15, 2014

ಮುಂಬೈ ಅನುಭವ!ಮುಂಬೈ ಅನುಭವ!

ಆ ಹುಡುಗನನ್ನು ನಾನು ಮುಂಬೈನಲ್ಲಿ ಎಲ್ಲಿಯೂ ನೋಡಿರಬಹುದಾಗಿತ್ತು. ಸೀಮೆಎಣ್ಣೆಗಾಗಿ ಪುಟ್ಟ ತಂಗಿಯರೊಡನೆ ಗಂಟೆಗಟ್ಟಳೆ ರೇಶನ್ ಅಂಗಡಿಯ ಮುಂದೆ ಕ್ಯೂ ನಿಲ್ಲುವ, ದೀಪ ಕೆಂಪಾಗುತ್ತಲೂ “ಹರ್ಷದ್ ಮೆಹ್ತಾ ಲಾಕಪ್ ಮೇ... ಮಿಡ್ಡೇ-ಆಫ್ಟರ್‌ನೂನ್, ಮಿಡ್ಡೇ-ಆಫ್ಟರ್‌ನೂನ್...” ಎಂದು ಕೂಗುತ್ತಾ ಟ್ಯಾಕ್ಸಿಯತ್ತ ಧಾವಿಸಿ ಬರುವ, ಮುನಿಸಿಪಲ್ ಶಾಲೆಯ ಕಡುನೀಲಿ... ಬಿಳಿ ಮಾಸಲು ಯೂನಿಫಾರಂನಲ್ಲಿ, ಪುಸ್ತಕಗಳ ಭಾರಕ್ಕೆ ಬೆನ್ನು ಬಗ್ಗಿಸಿಕೊಂಡೇ ಶ್ರೀದೇವಿಯ ಬೃಹತ್ ಹೋರ್ಡಿಂಗಿನ ಮುಂದೆ ಮೈಮರೆತಿರುವ, ಗಣಪತಿ ಬಾಪ್ಪಾ ಮೋರ‍್ಯಾ ಎಂದು ಮೈಮರೆತು ಕುಣಿಯುವ, “ಆಯೀ ಕಾಮ್ ಪರ್ ದೋ ತೀನ್ ದಿನ್ ನಹೀಂ ಆಯೇಗಿ...’ ಎಂದು ಬಾಗಿಲು ತೆಗೆಯುತ್ತಲೇ ಬಡಬಡಿಸುವ- ಯಾವ ಹುಡುಗನೂ ಅವನಾಗಿರಬಹುದಾಗಿತ್ತು.
ಆದರೆ ನಾನು ಅವನನ್ನು ಕಂಡಿದ್ದು ಚೆಂಬೂರಿನ ಚಿಲ್ಡನ್ಸ್ ಹೋಮ್‌ನಲ್ಲಿ ವಾರಕ್ಕೊಮ್ಮೆ ಅಲ್ಲಿಯ ಮಕ್ಕಳನ್ನು ಭೇಟಿಯಾಗಿ ಮಾತುಕತೆಯಾಡಲು ಹೋಗುತ್ತಿದ್ದಾಗ. ಅವನ ವಯಸ್ಸು ಎಂಟು. ದುಂಡುಮುಖ, ಹೊಳೆಯುವ ಕಣ್ಣುಗಳು, ಮಟ್ಟಸವಾದ ಮೈಕಟ್ಟು, ಚಿಕ್ಕದಾಗಿ ಕತ್ತರಿಸಿದ ಕೂದಲು, ಮೊದಲು ಸಂಕೋಚಪಟ್ಟರೂ ಆಮೇಲೆ ನಿರಾಳವಾಗಿ ಮಾತಾಡಿದ.
“ನಿನ್ನ ಹೆಸರು...?”
“ವಿನಾಯಕ್, ವಿನಾಯಕ್ ಪಾಖರೆ”
“ನಿಮ್ಮ ಮನೆ ಎಲ್ಲಿದೆ?”
“ಮಲಾಡ್‌ನಲ್ಲಿ, ಅಲ್ಲಿ ನನ್ನ ಅಪ್ಪನ ‘ಮಟನ್ ಶಾಪ್’ ಇದೆ. ಆಯಿ ಎಲ್ಲೂ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲೇ ಇರುತ್ತಾಳೆ. ಅಡಿಗೆ ಮಾಡುತ್ತಾಳೆ. ನನ್ನ ತಮ್ಮಂದಿರನ್ನು ನೋಡಿಕೊಳ್ಳುತ್ತಾಳೆ.”
“ನೀನೇಕೆ ಮನೆಬಿಟ್ಟು ಓಡಿಬಂದೆ?”
“ಒಂದು ದಿನ ಸ್ಕೂಲಿನಲ್ಲಿ ಮೇಷ್ಟ್ರು ತುಂಬಾ ಹೊಡೆದರು. ತುಂಬಾ ಸಿಟ್ಟು ಬಂತು. ಅದಕ್ಕೆ ಅಲ್ಲಿಂದ ಓಡಿಹೋದೆ. ಲೋಕಲ್ ಹತ್ತಿ ವೀಟಿಗೆ. ತಾಜ್‌ಮಹಲ್ ಹೋಟೆಲ್ ಹತ್ತಿರ ಸ್ವಲ್ಪ ಹೊತ್ತು ಏನೂ ತೋಚದೆ, ಹಾಗೇ ತಿರುಗಾಡುತ್ತಿದ್ದೆ. ಆಗ ಹಸಿವಾಗಹತ್ತಿತ್ತು. ಭಿಕ್ಷೆ ಬೇಡಲು ಶುರು ಮಾಡಿದೆ. ಹಸಿವಾದಾಗಲೆಲ್ಲ ಭಿಕ್ಷೆ ಬೇಡುತ್ತಿದ್ದೆ. ಸ್ವಲ್ಪ ಹಣ ಕೈಸೇರಿದ ತಕ್ಷಣ ಏನಾದರೂ ಕೊಂಡು ತಿನ್ನುತ್ತಿದ್ದೆ. ಫುಟ್‌ಪಾತಿನ ಮೇಲೆ ಮಲಗುತ್ತಿದ್ದೆ. ಸ್ವಲ್ಪ ದಿನಗಳಲ್ಲಿ ನನಗೆ ಅಲ್ಲಿ ಕೆಲವು ಹುಡುಗರೊಂದಿಗೆ ದೋಸ್ತಿ ಆಯಿತು. ಆಮೇಲೆ, ನಾನು ಅವರ ಗ್ಯಾಂಗ್ ಸೇರಿಕೊಂಡೆ. ನಮ್ಮ ಗ್ಯಾಂಗಿಗೆ ಒಬ್ಬ ಲೀಡರ್ ಇದ್ದ. ಕಾಣ್ಯಾ ಥಾ, ಹೀಗೆ ಅವನಿಗೆ ಒಂದೇ ಕಣ್ಣಿತ್ತು. ನಮ್ಮ ಕೆಲಸವೆಂದರೆ ತಾಜ್‌ನ ಎದುರಿನ ಸಮುದ್ರದಲ್ಲಿ ಮುಳುಗುವುದು. ತಳದಿಂದ ಖಾಲಿ ವಿಸ್ಕಿ ಬಾಟಲುಗಳನ್ನು ಹೆಕ್ಕಿ ತರುವುದು. ಲೀಡರ್‌ಗೆ ಕೊಡುವುದು. ಎಲ್ಲರದನ್ನೂ ಕೂಡಿಸಿ ರೂಪಾಯಿಗೆ ಒಂದರಂತೆ ಮಾರಿ ನಾವು ಲಾಭ ಹಂಚಿಕೊಳ್ಳುತ್ತಿದ್ದೆವು. ಆಗಾಗ ಧಂದಾ ಆಗದಿದ್ದರೆ ಭಿಕ್ಷೆ ಬೇಡುತ್ತಿದ್ದೆವು.”
“ಭಿಕ್ಷೆ ಬೇಡಿದರೆ ಸಾಕಷ್ಟು ಹಣ ಸಿಕ್ಕುತ್ತಿತ್ತೆ?”
“ಓ! ನಾವು ಹೆಚ್ಚಾಗಿ ಅರಬ್ಬರು ಮತ್ತು ಗೋರೆಲೋಗ್ ಬಳಿ ಭಿಕ್ಷೆ ಬೇಡುತ್ತಿದ್ದೆವು. ಕರಿಯರು ಕಂಜೂಸಿಗಳು. ಹೆಚ್ಚು ಹಣ ಕೊಡುವುದಿಲ್ಲ. ಅರಬ್ಬರು ತುಂಬಾ ಒಳ್ಳೆಯವರು- ಒಂದೆರಡು ರೂಪಾಯಿ ಕೊಟ್ಟೇಕೊಡುತ್ತಾರೆ. ಒಂದೊಂದು ಸಲ ಹತ್ತು ರೂಪಾಯಿ ನೋಟು ಕೂಡ ಕೊಡುವುದುಂಟು. ಗೋರೆಲೋಗ್ ಭೀ ದಿಲ್ ವಾಲೇ ಹೋತೇ ಹೈ. ಅವರೂ ದುಡ್ಡು, ಚಾಕೋಲೇಟ್ ಎಲ್ಲಾ ಕೊಡ್ತಿದ್ದರು. ಕೆಲವರು ನಮ್ಮನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಖಾನಾ ಕೊಡಿಸುತ್ತಿದ್ದರು. ಅಲ್ಲದೆ ಅರಬ್ಬರನ್ನು ನಾವು ಹತ್ತಿರದಲ್ಲೇ ಇದ್ದ ಇನ್ನೊಂದು ಹೋಟೆಲಿಗೆ ಕರೆದುಕೊಂಡು ಹೋಗಿ, ತುಂಬಾ ದುಡ್ಡು ಮಾಡತ್ತಿದ್ದೆವು. ಆ ಜಾಗದಲ್ಲಿ ಬೆಳ್ಳಗೆ, ಚೆಂದಾಗಿರುವ ತುಂಬಾ ಹುಡುಗಿಯರಿದ್ದರು. ದಿನವೆಲ್ಲಾ ನಾಚ್‌ಗಾನಾ ನಡೆಯುತ್ತಲೇ ಇರುತ್ತಿತ್ತು. ಅಲ್ಲಿಗೆ ಅರಬ್ಬರನ್ನು ಕರೆದುಕೊಂಡು ಹೋದರೆ ಅವರಿಗೆ ತುಂಬಾ ಖುಷಿಯಾಗುತ್ತಿತ್ತು. ಆಗ ಕೈ ತುಂಬಾ ಹಣ ಕೊಡುತ್ತಿದ್ದರು. ಹಾಂ... ಬಹುತ್ ಮಜಾ ಆತಾ ಥಾ... ಮಜವಾಗಿರುತ್ತಿತ್ತು.”
“ನಿನಗೆ ಈ ಜಾಗ ಇಷ್ಟವಾಯಿತಾ? ಸ್ನೇಹಿತರಿದ್ದಾರಾ ಇಲ್ಲಿ?”
“ಹೂಂ. ನಂಗೆ ಈ ಜಾಗ ಇಷ್ಟ. ಸ್ನೇಹಿತರಿದ್ದಾರೆ. ಆದರೆ ನನಗೆ ಸ್ಕೂಲಿಗೆ ಹೋಗೋದಕ್ಕಿಂತ, ದಿನವೆಲ್ಲ ಕ್ರಿಕೆಟ್ ಆಡಲು ಇಷ್ಟ. ನಂಗೆ ನಮ್ಮ ಸಚಿನ್‌ನಂತೆ ಆಡೋಕೆ ಆಸೆ. ಅಲ್ಲದೆ ಕೇರಂ, ಪೈಂಟಿಂಗ್ ಎಲ್ಲಾ ಇಷ್ಟ. ರೇಡಿಯೋದಲ್ಲಿ ಬರುವ ಸಿನಿಮಾ ಹಾಡೆಲ್ಲಾ ಕಲಿತು ಹಾಡ್ತೀನಿ...”
“ಅಪ್ಪ-ಅಮ್ಮ ನೆನಪು ತುಂಬಾ ಆಗುತ್ತಾ? ಅವರು ನೋಡಲು ಬಂದಿದ್ದರಾ?”
“ನಾನಿಲ್ಲಿಗೆ ಬಂದು ಒಂದು ತಿಂಗಳಾಯಿತು. ಆಗಾಗ ಅವರ ನೆನಪಾಗುತ್ತೆ. ಅದೇಕೋ ಇನ್ನೂ ನನ್ನನ್ನು ನೋಡಲು ಬಂದಿಲ್ಲ. ಆದರೆ ಅವರು ಬಂದೇ ಬರ‍್ತಾರೆ, ನಂಗೊತ್ತು. ಇಲ್ಲಿನ ರ್ ಒಪ್ಪಿಗೆ ಕೊಟ್ಟ ಮೇಲೆ ನಾನು ಮನೆಗೆ ವಾಪಸ್ಸು ಹೋಗ್ತೀನಿ...”
ಆಗಲೇ ಅವನ ದೃಷ್ಟಿ ಪಕ್ಕದಲ್ಲೇ ಕ್ರಿಕೇಟ್ ಪ್ರಾರಂಭಿಸಿದ ಹುಡುಗರ ಮೇಲಿತ್ತು. ನಾನು ಅಲ್ಲಿಂದ ನಡೆದುಹೋದಂತೆ, ನನ್ನತ್ತ ಕೈಬೀಸಿದ.
ಇದಾಗಿ ಕೆಲವು ವರ್ಷಗಳಾಯಿತು.
ವಿನಾಯಕ ಪಾಖರೆ.
ನಾನೀಗ ಮುಂಬೈನಲ್ಲಿ ಅವನನ್ನು ಎಲ್ಲೆಡೆ ಕಾಣುತ್ತಲೇ ಇರುತ್ತೇನೆ.

(ಮುಂಬೈ ಡೈರಿ/ಲಂಕೇಶ್ ಪತ್ರಿಕೆ)

No comments:

Post a Comment