Wednesday, October 15, 2014

ಜೆಂಡರ್ ಬಯಸ್--ಒಂದೊಂದು ಕಡೆ ಒಂದೊದು ಥರಾ...ಕಂಬದ ಬದಿ ನಿಂತರೆ

ನನ್ನ ಗೆಳೆತಿಯನ್ನು ವಿ.ಟಿ.ಸ್ಟೇಷನ್ನಿನಲ್ಲಿ ಭೇಟಿ ಮಾಡಿ, ಅಲ್ಲಿಂದ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದ್ದ ಭೂಪೆನ್ ಕಕ್ಕಡ್ ಅವರ ಚಿತ್ರ ಪ್ರದರ್ಶನಕ್ಕೆ ಹೋಗುವುದಿತ್ತು. ಹಾರ್ಬರ್ ಲೈನ್ ಇಂಡಿಕೇಟರ್ ಹತ್ತಿರ .೩೦ಕ್ಕೆ ಸೇರುವುದೆಂದು ಗೊತ್ತುಪಡಿಸಿಕೊಂಡಿದ್ದೆವು.
ಕೆಲಸ ಮುಗಿಸಿ, ವಿ.ಟಿ. ತಲುಪಿದಾಗ ಇನ್ನೂ ೧೦ ನಿಮಿಷವಿತ್ತು. ಮನೆಗೆ ಮರಳುವವರ ನೂಕುನುಗ್ಗಲು, ಗಲಾಟೆ. ಟ್ರೈನುಗಳತ್ತ ಓಡುವವರು. ಪಟಪಟ ಬದಲಾಗುತ್ತಿದ್ದ ಇಂಡಿಕೇಟರ್ಗಳು. ಭೋಂ, ಭೋಂ ಮಾಡುತ್ತಿದ್ದ ಟ್ರೈನುಗಳು. ಆವರಿಸುತ್ತಿದ್ದ ನೀಲಿ-ಹಳದಿ ಬೆಳಕು. ಎಲ್ಲಾ ವಿಚಿತ್ರವಾಗಿತ್ತು. ತಳ್ಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸರಿದು ಪಕ್ಕದಲ್ಲಿದ್ದ ಕಂಬದ ಬದಿ ನಿಂತೆ, ಬರಹೋಗುವವರನ್ನು ನೋಡುತ್ತಾ. ಇದ್ದಕ್ಕಿದ್ದಂತೆ, ಸುತ್ತಮುತ್ತಲಿನ ಕೆಲವರು ನನ್ನ ಹತ್ತಿರವಾದಂತೆ ನಡಿಗೆ ನಿಧಾನಮಾಡಿ, ನನ್ನತ್ತ ದಿಟ್ಟಿಸಿ ಮುಂದುವರಿಯುತ್ತಿದ್ದಂತೆ ಭಾಸವಾಯಿತು. ಒಂದು ಕೆಂಪು ಟೀ ಶರಟಿನ ವ್ಯಕ್ತಿ ನನ್ನಿಂದು ಒಂದೆರಡು ಅಡಿ ದೂರ ನಿಂತು ಬಾರಿಬಾರಿ ನನ್ನತ್ತ ನೋಡತೊಡಗಿದ. ಟಿಕೆಟ್ ಕ್ಯೂಗಳಲ್ಲಿ ಗಂಡಸರು, ಹೆಂಗಸರು ಒಟ್ಟಿಗೆ ನಿಲ್ಲುವ ಬಗ್ಗೆಬೆಸ್ಟ್ ಬಸ್ಸುಗಳಲ್ಲಿ  ಲೇಡೀಸ್ ಓನ್ಲಿ ಜಾಗಗಳನ್ನು ಹೆಂಗಸರು ಉಪಯೋಗಿಸದ ಬಗ್ಗೆ, ರಾತ್ರಿ ೧೦ ಗಂಟೆಗೂ ಟ್ಯಾಕ್ಸಿಯಲ್ಲಿ ಒಬ್ಬಂಟಿ ಓಡಾಡಬಹುದಾದ ಸ್ವಾತಂತ್ರ್ಯದ ಬಗ್ಗೆ, ಮುಂಬೈಯಲ್ಲಿ ಹೆಣ್ಣಿಗಿರುವ ಸುರಕ್ಷತೆ ಬಗ್ಗೆ, ಖುಷಿ ಪಡುತ್ತಿದ್ದ ನನಗೆ, ಎಷ್ಟೋ ಜೊತೆ ಅಪರಿಚಿತ ಕಣ್ಣುಗಳಲ್ಲಿ ಇಲ್ಲೇಕೆ ಸಿಕ್ಕಿದೆನೆನ್ನಿಸಿ ಕಸಿವಿಸಿ. ನನ್ನ ಗೆಳತಿಯ ಪತ್ತೆ ಇಲ್ಲ. ಒಂದೆರಡು ಹೆಜ್ಜೆ ಹಾಕಿ ಠಾಣಾ ಲೋಕಲ್ಲಿನಿಂದ ಬಂದ ಹೆಂಗಸರ ಪ್ರವಾಹದ ಮೇಲೆ ಕಣ್ಣಾಡಿಸುತ್ತಿದ್ದಂತೆ, ಕೆಂಪು ಶರಟಿನವನು ಏನೋ ಗೊಣಗತೊಡಗಿದ. ಮುಜುಗರ ಹೆಚ್ಚಾಗಿ ಬುಕ್ ಸ್ಟಾಲ್ನತ್ತ ಹೆಜ್ಜೆ ಹಾಕಿದೆ. ಆಗಲೇ ಗೆಳತಿ ಪ್ರತ್ಯಕ್ಷ. ತಡ ಮಾಡಿದ್ದಕ್ಕೆ ಅವಳನ್ನು ಬೈದು, ನನ್ನ ಗೋಳು ಹೇಳಿಕೊಂಡೆ. ಅವಳು ನಗುತ್ತಾಸ್ಟುಪಿಡ್, ೨೦ ವರ್ಷದಿಂದ ಮುಂಬೈಯಲ್ಲಿದ್ದು ಇಷ್ಟೂ ಗೊತ್ತಿಲ್ಲವಾ? ಕಂಬದಡಿ ನಿಲ್ಲುವವರು ಕಾಲ್ಗರ್ಲ್ಸ್. ವಿ.ಟಿಯಲ್ಲಿ ರೀತಿ ಗುರುತಿಸುವ ಎಷ್ಟೋ ಕಂಬಗಳಿವೆ. ಅಲ್ಲಿ ನಿಂತರೆ ಏನಾಗುತ್ತೆ?” ಎಂದಳು.

ಬಿಂದಿಯ ಗುಟ್ಟೇನು?

ಆಗ ವ್ಯಾಂಕೋವರ್ನಲ್ಲಿ ಇತ್ತೀಚೆಗೆ ಆದ ಒಂದು ಅನುಭವ ನೆನಪಾಯಿತು. ಅಲ್ಲಿದ್ದ ತಿಂಗಳೂ ಪ್ರತಿ ಶನಿವಾರ, ಭಾನುವಾರ ಊರು ತಿರುಗಲು ಹೋಗುತ್ತಿದ್ದೆ. ಅಂದು ಗ್ಯಾಸ್ಟೌನಿಗೆ ಹೋಗುವ ಪ್ಲ್ಯಾನ್ ಹಾಕಿಕೊಂಡೆ. ಗ್ಯಾಸ್ಟೌನ್ ಶತಮಾನಕ್ಕೂ ಹಿಂದೆ ವ್ಯಾಂಕೋವರ್ ಹುಟ್ಟಿಕೊಂಡ ಸ್ಥಳ. ಇಂದಿಗೂ ಅದನ್ನು ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲಿಗೆ ಹೋಗುವ ಮೊದಲು ಸ್ನೇಹಿತರು ಎಚ್ಚರಿಸಿದ್ದರು. “ಕತ್ತಲಾದ ಮೇಲೆ ಅಲ್ಲಿರಬೇಡ, ಯಾರಾದರೂ ಮಾತಾಡಿಸಿದರೆ ಮಾತಾಡಬೇಡ. ಇಟ್ಸ್ ಫುಲ್ ಆಫ್ ಶೇಡಿ ಕ್ಯಾರೆಕ್ಟರ್ಸ್ ಎಂಡ್ ಡ್ರಗ್ ಅಡಿಕ್ಟ್ಸ್...” ಎಂದೆಲ್ಲಾ. ಅಂದು ಹೆಚ್ಚು ಜನರಿರಲಿಲ್ಲ. ಸಣ್ಣ ಮಳೆ ಬೇರೆ. ಸಾಮಿಲ್ ಕೆಲಸಗಾರರಿಗೆ ಸಾರಾಯಿ ಮಾರುವುದರ ಮೂಲಕ, ಗ್ಯಾಸ್ಟೌನ್ ಸ್ಥಾಪನೆಗೆ ಕಾರಣನಾದ ಗ್ಯಾಸಿ ಜ್ಯಾಕ್ ಪ್ರತಿಮೆ ನೋಡಿಕೊಂಡು, ಜಗತ್ಪ್ರಸಿದ್ಧ ಸ್ಟೀಮ್ಕ್ಲಾಕ್ ಹೊಡೆಯಲು ಕಾಯುತ್ತಾ ನಿಂತಿದ್ದಾಗ, ಅವಳು ನನ್ನನ್ನು ದಿಟ್ಟಿಸುತ್ತಿದ್ದ ಅನುಭವವಾಯಿತು. ಹಳೆಯ ಜೀನ್ಸ್, ಜ್ಯಾಕೆಟ್ಟಿನಲ್ಲಿದ್ದ ೩೦-೩೫ ವಯಸ್ಸಿನ ಏಷಿಯನ್ ಹೆಣ್ಣು. ಥೈಲ್ಯಾಂಡಿನವಳೇನೋ, ಮುಖದ ತುಂಬಾ ಅದಕ್ಕೇ ಸೇರಿದ್ದೇ ಅಲ್ಲವೇನೋ ಎನ್ನುವ ರೀತಿಯ ಮೇಕಪ್, ರೂಜ್, ಲಿಪ್ಸ್ಟಿಕ್, ಮೂಗುಬಟ್ಟು, ಕೈತುಂಬಾ ಬೆಳ್ಳಿ ಬಳೆಗಳು. ಹತ್ತಿರ ಬಂದುಯೂ, ಇಂಡಿಯನ್?” ಎಂದಳು.
ಎಸ್...”
ಡೋಂಟ್ ವೇರ್ ಸ್ಯಾರಿ?” ನನ್ನ ಜೀನ್ಸ್ ಮೇಲೆ ಕಣ್ಣಾಡಿಸುತ್ತಾ ಕೇಳಿದಳು.
ಡೂ, ಅಕೇಶನಲಿ... ನಾಟ್ ಎವ್ರಿಡೇ...” ಎಂದೆ.
ಮ್ಯಾಮ್, ಡು ಯೂ ಹ್ಯಾವ್ ಸಮ್ ಚೇಂಜ್...?” ಎನ್ನುತ್ತಾ ಹಿಂದೆ ಹಿಂದೆ ಬಂದಳು.
ಸಾರಿ.” ನಾನು ಅಲ್ಲಿಂದ ನಡೆದು ಸ್ವಲ್ಪ ದೂರದಲ್ಲಿ ನಿಂತಿದ್ದ - ಜನರ ಗುಂಪಿನ ಸುರಕ್ಷತೆಗೆ ಶರಣಾಗಲು ಬೇಗಬೇಗ ಕಾಲು ಹಾಕಿದೆ.
ಇದ್ದಕ್ಕಿದ್ದಂತೆ ಅವಳು ನನ್ನೆದುರು ಬಂದು ನಿಂತಳು. ನನ್ನ ಕುಂಕುಮದ ಮೇಲೆ ಬೆರಳಿಟ್ಟುವಾಟ್ ಡಸ್ ಇಟ್ ಮೀನ್? ಸೇ... ಡಸ್ ಇಟ್ ಮೀನ್ ಯೂ ಆರ್ ಟೇಕನ್?” ಎಂದಳು.

ಪ್ರಶ್ನೆಯಿಂದ ಚೇತರಿಸಿಕೊಳ್ಳಲು ದಿನಗಳೇ ಬೇಕಾಯಿತು.

-ಮುಂಬೈ ಡೈರಿ, ಲಂಕೇಶ್ ಪತ್ರಿಕೆ, ೧೯೯೪

No comments:

Post a Comment