Saturday, August 2, 2014

ಆರುಣಾ ಎಂಬ ಹುಡುಗಿ - ಅತ್ಯಾಚಾರಕ್ಕೆ ಸಿಕ್ಕ ಯುವ ಬದುಕೊಂದರ ನಾಶ


ಆರುಣಾ ಎಂಬ ಹುಡುಗಿ -ಅತ್ಯಾಚಾರಕ್ಕೆ ಸಿಕ್ಕ ಯುವ ಬದುಕೊಂದರ
ನಾಶ



ಇಂದು ಬೆಂಗಳೂರಿನಲ್ಲಿ ಎಲ್ಲೆಲ್ಲೂ ಬೃಹತ್ ಸಭೆಗಳು.
ಬೆಂಗಳೂರಿನ ಶಾಲೆಯೊಂದರಲ್ಲಿ  ಬಾಲಕಿಯೊಬ್ಬಳ ಮೇಲೆ ನಡೆದ
ಅತ್ಯಾಚಾರ ಖಂಡಿಸಿ ಪ್ರತಿಭಟನೆ.  ಇತ್ತೀಚೆಗೆ ಹೆಚ್ಚುತ್ತಿರುವ ಇಂತಹ
ಪ್ರಕರಣಗಳ ಬಗ್ಗೆ  ಜನರ ಆಕ್ರೋಶ ಈಗ ಮುಗಿಲು ಮುಟ್ಟಿದೆ.

ಈ ಸಂದರ್ಭದಲ್ಲಿ ಎಷ್ಟೋ ವರ್ಷಗಳ ಹಿಂದೆ ಮುಂಬೈ ಆಸ್ಪತ್ರೆಯೊಂ
ದರಲ್ಲಿ ನರ್ಸ್ ಒಬ್ಬಳ ಮೇಲೆ ನಡೆದ ಅತ್ಯಾಚಾರ, ಆ ಒಂ಼ದು ಕ್ರೂರ ಕ್ಷ್ಶಣ
ಹೊಸಕಿ ಹಾಕಿದ ಒಂದು ಸುಂದರ ಬದುಕಿನ ಬಗ್ಗೆ ನೆನಪಾಗಿ ಸಂಕಟ
ವಾಗುತ್ತದೆ.


೨೫ ವರ್ಷದ ಅರುಣಾ ಶಾನ್‌ಭಾಗ್ ಆಕರ್ಷಕ ತರುಣಿ. ಮುಂಬೈನ ಕೆ.ಇ.ಎಂ. ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಈ ಮೆಲುಮಾತಿನ ಹುಡುಗಿ ತುಂಬಾ ಚುರುಕು. ಕೆಲಸದಲ್ಲಿ ತುಂಬಾ ಆಸ್ಥೆ ವಹಿಸುತ್ತಿದ್ದ ಇವಳು ಡಾಕ್ಟರ್, ಮೇಟ್ರನ್‌ಗಳಿಂದ ಹಿಡಿದು ರೋಗಿಗಳವರೆಗೂ ಎಲ್ಲರ ಅಚ್ಚುಮೆಚ್ಚು. ಯಾವಾಗಲೂ ನಗುನಗುತ್ತಾ ಚಟುವಟಿಕೆಯಿಂದ ಓಡಾಡಿಕೊಂಡಿರುತ್ತಿದ್ದ ಈ ಹುಡುಗಿಯನ್ನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಡಾಕ್ಟರ್ ಒಬ್ಬ ಪ್ರೀತಿಸುತ್ತಿದ್ದ. ಅವರಿಬ್ಬರೂ ಮದುವೆಯಾಗಲು ಯೋಚಿಸುತ್ತಿದ್ದರು.

ಆದರೆ ೧೯೭೩ರ ನವೆಂಬರ್ ೨೭ರಂದು ಅವಳ ಬದುಕು ವಿಕೃತ ತಿರುವು ತೆಗೆದುಕೊಂಡಿತು. ರಾತ್ರಿ ಡ್ಯೂಟಿ ಮುಗಿಸಿ, ಯೂನಿಫಾರ್ಮ್ ಬದಲಿಸಲು ಬೇಸ್‌ಮೆಂಟ್‌ಗೆ ಅವಳು ನಡೆದಾಗ ಅವಳ ಹಿಂದೆಯೇ ಅದೇ ಆಸ್ಪತ್ರೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದವನೊಬ್ಬ ಅವಳನ್ನು ಹಿಂಬಾಲಿಸಿದ್ದ. ಬೇಸ್‌ಮೆಂಟ್‌ನಲ್ಲಿದ್ದ ಖಾಲಿರೂಮಿಗೆ ಅವಳನ್ನೆಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಮಾರನೆಯ ದಿನ ಬೆಳಿಗ್ಗೆ, ಅಲ್ಲಿಗೆ ಬಂದ ಕ್ಲೀನರ್ ಅರುಣಾ ಜ್ಞಾನತಪ್ಪಿ ಬಿದ್ದಿರುವುದನ್ನು ನೋಡಿದ. ಅವಳ ಕತ್ತಿನ ಸುತ್ತ ಸರಪಳಿಯೊಂದು ಮಿಗಿಯಲ್ಪಟ್ಟಿತ್ತು. ಬಹುಶಃ, ಅವಳು ಕೂಗಲು ಪ್ರಯತ್ನಿಸಿದಾಗ ಸುಮ್ಮನಾಗಿಸಲು ಅವನು ಹಾಗೆ ಮಾಡಿರಬೇಕು. ತಕ್ಷಣ ಅವಳಿಗೆ ಬೇಕಾದ ಉಪಚಾರವನ್ನೆಲ್ಲಾ ಮಾಡಲಾಯಿತು. ಆದರೆ, ಮತ್ತೆ ಅವಳು ಮಾತಾಡಲಿಲ್ಲ.
ಈ ಅತ್ಯಾಚಾರವೆಸಗಿದವನು ಸಿಕ್ಕಿಬಿದ್ದ. ಅವನಿಗೆ ೭ ವರ್ಷ ಜೈಲಾಯಿತೆಂದು. ಹೊರಗೆ ಬಂದ ಮೇಲೆ ಅವನು ತೀರಿಕೊಂಡನೆಂದೂ ಕೆಲವರು ಹೇಳುತ್ತಾರೆ. ೨೦ ವರ್ಷ ಜೈಲಾಯಿತೆಂದೂ ಕೆಲವರು ಹೇಳುತ್ತಾರೆ. ಯಾರಿಗೂ ಸರಿಯಾಗಿ ಗೊತ್ತಿಲ್ಲ.
ಅಂದು ವಾರ್ಡ್ ಸೇರಿದ ಅರುಣಾಗೆ ದೊಡ್ಡ ದೊಡ್ಡ ಸ್ಟೆಷಲಿಸ್ಟ್‌ಗಳಿಂದ ಎಲ್ಲಾ ತಪಾಸುಗಳಾಯಿತು. ಟ್ರೀಟ್‌ಮೆಂಟ್ ಆಯಿತು. ಆದರೆ, ಅವಳು ಬಿದ್ದ ದಿನ ಹೇಗಿದ್ದಳೋ ಹಾಗೇ ಇದ್ದಾಳೆ. ಯಾರಾದರೂ ಗಂಡಸರ ಧ್ವನಿ ಕೇಳಿದರೆ, ಮಂಚ ಸರಿಸಿದರೆ ಕಿರುಚಿಕೊಳ್ಳುತ್ತಾಳೆ. ಆಗಾಗ, ಜೋರಾಗಿ ಕೈಕಾಲು ಆಡಿಸುತ್ತಾಳೆ. ೨೨ ವರ್ಷಗಳಿಂದ ಆಸ್ಪತ್ರೆಯ ನರ್ಸುಗಳು, ವಾರ್ಡ್‌ಬಾಯ್‌ಗಳು, ಆಯಾಗಳು ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಿದ್ದಾರೆ. ಚಾಚೂತಪ್ಪದೆ ಅವಳನ್ನು ಆರಾಮವಾಗಿರಲು ಏನು ಬೇಕೋ ಎಲ್ಲಾ ಮಾಡುತ್ತಿದ್ದಾರೆ. ಅವಳನ್ನು ಪ್ರೀತಿಸುತ್ತಿದ್ದ ಡಾಕ್ಟರ್ ಐದು ವರ್ಷ ದಿನಾ ಅವಳನ್ನು ಬಂದು ನೋಡಿಕೊಂಡು ಹೋಗುತ್ತಿದ್ದ. ಆಸೆ ಇಟ್ಟುಕೊಂಡಿದ್ದ. ಆದರೆ, ಯಾವುದೋ ಒಂದು ಗಳಿಗೆಯಲ್ಲಿ ಅವನೂ ಅವಳನ್ನು ನೋಡಲು ಬರುವುದನ್ನು ನಿಲ್ಲಿಸಿಬಿಟ್ಟ. ಈ ಅತ್ಯಾಚಾರದ ಸುದ್ದಿ ಕೇಳಿದ ತಕ್ಷಣ ಅವಳ ಕುಟುಂಬದವರೆಲ್ಲಾ, ಅವಳ ಸಂಬಂಧ ಕಳಚಿಕೊಂಡರು. ಅವಳನ್ನು ದಿನಾ ನೋಡಿಕೊಳ್ಳಲು ಆಸ್ಪತ್ರೆಯ ಸ್ಟಾಫ್‌ಗೆ ಸ್ವಲ್ಪವೂ ಬೇಸರವಿಲ್ಲ. ೨ ವರ್ಷದ ಹಿಂದೆ, ಆಸ್ಪತ್ರೆಯ ಮ್ಯಾನೇಜ್‌ಮೆಂಟ್‌ನವರು, ವಾರ್ಡ್ ಖಾಲಿ ಮಾಡಲು, ಅವಳನ್ನು “ಕನ್‌ವಾಲೆಸೆಂಟ್ ಹೋಂ” ಒಂದಕ್ಕೆ ವರ್ಗಾಯಿಸಲು ನಿರ್ಧಾರ ಮಾಡಿದ್ದರು. ಆದರೆ, ಆಸ್ಪತ್ರೆಯವರೆಲ್ಲಾ ಸೇರಿ ಅದಕ್ಕೆ ಪ್ರತಿಭಟಿಸಿದರು. “ಎಲ್ಲಾ ರೋಗಿಗಳಂತೆ ಅವಳೂ ಒಬ್ಬಳು. ಅವಳನ್ನು ಎಲ್ಲೂ ಕಳಿಸಲು ಸಾಧ್ಯವಿಲ್ಲ” ಎಂದು ಮ್ಯಾನೇಜ್‌ಮೆಂಟಿನವರನ್ನು ಒಪ್ಪಿಸಿದರು. ಅವಳು ಇಂದೂ ಅವರೆಲ್ಲರಲ್ಲಿ ಒಬ್ಬಳು. ಅವಳಿಗಾಗಿ ಅವಳ ಪ್ರೀತಿಯ ತಿಂಡಿಗಳನ್ನು ಮಾಡಿ ತರುವರು ಹಲವರು. ಅವಳ ಹುಟ್ಟುಹಬ್ಬವಾದ ಜೂನ್ ೧ರಂದು ಅವಳ ಮೆಚ್ಚಿನ ಮಿನಿನಡಿಗೆ ತರುವರು ಕೆಲವರು. ಅರುಣಾಗೆ ಇಂದು ೪೭ ವರ್ಷ. ಕಳೆದ ೨೨ ವರ್ಷಗಳಿಂದ ಇದೇ ಹಾಸಿಗೆಯಲ್ಲಿ ಹೀಗೇ ಮಲಗಿದ್ದಾಳೆ ಅವಳು. ಇಂದು ಅವಳು ಹಿಂದಿನ ಜೀವಂತಿಕೆಯ ಒಂದು ಛಾಯೆ ಮಾತ್ರ.


-ಉಮಾ ರಾವ್   (ಲಂಕೇಶ್ ಪತ್ರಿಕೆ, ಜುಲೈ ೧೯೯೫)

No comments:

Post a Comment