Thursday, May 22, 2014

ಹಿಮಶಿಖರಗಳ ನಡುವೆ ಒಬ್ಬ ಅಲೌಕಿಕ ಸಾಧಕಿ -ಜೆಟ್ ಸುಮ್ನಾ ತೆನ್ಜಿನ್ ಪಾಲ್ ಮೋ


ಹಿಮಶಿಖರಗಳ ನಡುವೆ ಒಬ್ಬ ಅಲೌಕಿಕ ಸಾಧಕಿ -ಜೆಟ್ ಸುಮ್ನಾ ತೆನ್ಜಿನ್ ಪಾಲ್ ಮೋ



ತೆನ್ಜಿನ್ ಪಾಲ್ ಮೋ. ದಿಲ್ಲಿಯಿಂದ ಧರ್ಮಶಾಲಾ ಗೆ  ಕಿಂಗ್ಫಿಶರ್ ವಿಮಾನ ಟೇಕಾಫ಼್ ಆದಾಗಲೂ  ನಾನು ಅವಳ ಹೆಸರು ಕೇಳಿರಲಿಲ್ಲ.ಧರ್ಮಶಾಲಾ, ಸುತ್ತಮುತ್ತಲಿನ ಕಾಂಗ್ರಾ ಕಣಿವೆ ತಿರುಗಾಟಕ್ಕೆಂದು ಹತ್ತು ದಿನಗಳ ಕಾರ್ಯಕ್ರಮ ಹಾಕಿಕೊಂಡು ಹೊರಟಿದ್ದೆವು. ಆ ಸ್ಥಳಗಳ ಬಗ್ಗೆ ಅದಷ್ಟೂ ಓದಿ ತಯಾರಿಯನ್ನೂ ಮಾಡಿಕೊಂದಿದ್ದೆವು. ೫ ದಿನ ಮೆಕ್ಲಾಯ್ಡ್ ಗಂಜ್ ನಲ್ಲಿ ಇರುವುದೆಂದು ಪ್ಲ್ಯಾನು ಮಾಡಿದ್ದೆವು.ಆದರೆ ಮೆಕ್ಲಾಯ್ಡ್ಗಂಜ್ ಹತ್ತಿರದಲ್ಲೇ ಜಗತ್ಪ್ರಸಿದ್ಧ ಸಂಸ್ಥೆ ಕಟ್ಟಿದ್ದ  ತೆನ್ಜಿನ್ ಪಾಲ್ ಮೋ  ಎಂಬ ಅಪೂರ್ವ ಹೆಣ್ಣಿನ ಹೆಸರೇ ನನ್ನ ಕಣ್ತಪ್ಪಿ ಹೋಗಿತ್ತು. ಅವಳ ಬಗ್ಗೆ ಕೇಳಿದ್ದು  ಭೂಮಿಯಿಂದ  ಸಾವಿರಾರು ಅಡಿಗಳೆತ್ತರದಲ್ಲಿ ತೇಲುತ್ತಾ ಒಂದು ಕಡೆ ಸಾಲುಸಾಲಾಗಿ ನಿಂತ ಹಿಮ ಪರ್ವತಗಳ  ಸೊಬಗು ನೋಡಿ ಆನಂದಿಸುತ್ತಿದ್ದಾಗ.  ಅವಳನ್ನು ಕಂಡ ಮೇಲೆ ಅದೂ ಒಂದು ರೀತಿ ಸರಿಯೇ ಎನ್ನಿಸುತ್ತಿದೆ. ಅವಳು ಈ ಭೂಮಿಗೆ ಸೇರಿದವಳೇ ಅಲ್ಲವೇನೋ ಅನ್ನಿಸುತ್ತದೆ.

ವಿಮಾನದಲ್ಲಿ ನನ್ನ ಪಕ್ಕದಲ್ಲಿ ಕುಳಿತದ್ದ ಹೆಣ್ಣಿನ ಪರಿಚಯ ಪ್ರಯಾಣದ ನಡುವೆ ಆಯಿತು. ಸುಮಾರು ನಲವತ್ತು ವಯಸ್ಸಿನ  ಅವಳು ಸ್ವಿಟ್ಜರ್ಲ್ಯಾಂಡ್ ನಿಂದ ಬಂದಿದ್ದಳು. ಹೆಸರು ಮರಿಯಾ. ದಲೈಲಾಮಾ ಅವರ ಆಶ್ರಮ ದಲ್ಲಿ ಒಂದು ವಾರ ಧ್ಯಾನ ಮಾಡಲು ಬಂದಿರುವುದಾಗಿ ಹೇಳಿದಳು. ಅದೃಷ್ಟವಶಾತ್ ತಾಶಿ ಜೋಂಗ್ ನಲ್ಲಿ ಆಗ ಇದ್ದ ತೆನ್ಜಿನ್ ಪಾಲ್ ಮೋ ಅವರನ್ನೂ ಭೇಟಿಯಾಗಲು ಪ್ರಯತ್ನ ಪಡುವುದಾಗಿ ಹೇಳಿದಳು. ಅವಳು ಯಾರೆಂಬ ಪ್ರಶ್ನೆಗೆ ಅಚ್ಚರಿಯಿಂದ  ನಿಮಗೆ ಗೊತ್ತಿಲ್ವಾ, ಹುಟ್ಟಿನಿಂದ ಅವಳೊಬ್ಬ ಬ್ರಿಟಿಶರ್. ಚಿಕ್ಕ ವಯಸ್ಸಿನಲ್ಲೇ ಬೌಧ್ಧ ಧರ್ಮಕ್ಕೆ ಮಾರು ಹೋಗಿ ಭಾರತಕ್ಕೆ ಬಂದವಳು. ೧೨ ವರ್ಷ ಹಿಮಾಲಯz ನಿರ್ಜನ ಪರ್ವತದ   ಹಿಮತುಂಬಿದ ಗುಹೆಯೊಂದರಲ್ಲಿ ಒಬ್ಬಳೇ ತಪಸ್ಸು ಮಾಡಿ ದವಳು. ತಾಶಿ ಜೋಂಗ್ ಹತ್ತಿರವಿರುವ ಸನ್ಯಾಸಿನಿಯರ ಆಶ್ರಮವನ್ನು ಕಟ್ಟಿದವಳೂ ಅವಳೇ! ಅವಕಾಶ ಸಿಕ್ಕರೆ ಖಂಡಿತ ನೋಡಿ ಬನ್ನಿ॒ ಎಂದು ವಿವರಿಸಿದಳು.

ಆ ಕ್ಷಣದಿಂದ ತೆನ್ಜಿನ್ ಪಾಲ್ ಮೋ ನನ್ನನ್ನು ಕಾಡತೊದಗಿದಳು. ಒಬ್ಬ ೧೮ ವರ್ಷದ ಬ್ರಿಟಿಶ್ ಹುಡುಗಿಗೆ ತಂದೆ ತಾಯಿ ಕುಟುಂಬ  ತೊರೆದು,  ಸ್ಕೂಲು ಕಾಲೇಜುಗಳನ್ನು ತೊರೆದು, ರಾಕ್ ಮ್ಯೂಜಿಕ್ ಸಿನೆಮಾಗಳನ್ನು ತೊರೆದು,  ಗೆಳೆಯ ಗೆಳತಿಯರೆಂಬ ವಯೋಸಹಜ ಆಕರ್ಷಣೆಗಳನ್ನು ತೊರೆದು, ಬೆಚ್ಚನೆಯ ’ ಫ಼ರ್ಸ್ಟ್ ವರ್ಲ್ಡ್’ ಬದುಕನ್ನು ತೊರೆದು  ದೂರದ  ಹಿಮಾಲಯದ ಪರ್ವತಗಳ ನಡುವೆ ಅಪರಿಚಿತ ಧರ್ಮದ  ಕಠಿಣ ಸಾಧನೆ ಮಾಡುವ ಸೆಳೆತ ಹೇಗೆ ಬಂತು?

ಲಂಡನ್ನಿನಲ್ಲಿ ಹುಟ್ಟಿದ ಅವಳ ಪೂರ್ವಾಶ್ರಮದ ಹೆಸರು ಡಯಾನೆ ಪೆರ್ರಿ ಎಂದು. ಅಪ್ಪ ಹೊಟ್ಟೆ ಹೊರೆಯಲು ಮೀನು ಮಾರುತ್ತಿದ್ದ.  ಮನೆಯಲ್ಲಿ ಆಧ್ಯಾ ತ್ಮಿಕತೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ, ಅವಳಿಗೆ ತಾನೊಬ್ಬ ಬೌಧ್ಧ ಧರ್ಮದವಳೆಂದು ಅನ್ನಿಸಿದ್ದು ಅದರ ಬಗ್ಗೆ ಒಂದು ಪುಸ್ತಕ ಓದಿದಾಗ. ಅದರ ಪgಣಾಮ- ೨೦ ವರ್ಷ ವಯಸ್ಸಿನವಳಿದ್ದ್ದಾಗ ಭಾರತಕ್ಕೆ ಬಂದು ಧರ್ಮಗುರು ೮ನೇ ಖಮ್ತ್ರುಲ್ ರಿಂಪೋಚೆ ಯವರ ಶಿಶ್ಯಳಾಗಿ  ಟಿಬೆಟನ್ ಬೌಧ್ಧಧರ್ಮದ ಬಗ್ಗೆ ನಿರಂತರ ಅಭ್ಯಾಸ ಮಾಡಿ, ೧೯೬೪ ರಲ್ಲಿ ಅದರಲ್ಲಿ ಉನ್ನತ ’ಶ್ರಮನೆರಿಕಾ’ ದೀಕ್ಷೆ ಪಡೆದ ಮೊದಲ ಪಾಶ್ಚಾತ್ಯ ಮಹಿಳೆಯಾದಳು.

ಭಿಕ್ಷುಣಿ ಯರ ಪರಂಪರೆಯೇ  ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಖಮ್ತ್ರುಲ್ ರಿಂಪೊಚೆಯ ಆಶ್ರಮದಲ್ಲಿ ೧೦೦ ಸನ್ಯಾಸಿ ಗಳ ನಡುವೆ ಇವಳೊಬ್ಬಳೇ  ಸನ್ಯಾಸಿನಿ.
ಆಗ ಅವಳಿಗಾದ ಅನುಭವ ಅವಳ ಬದುಕಿಗೆ ಹೊಸ ತಿರುವು ಕೊಟ್ಟಿತು. ಎಲ್ಲ ರೀತಿಯಲ್ಲೂ ಅವರಿಗೆ ಸರಿಸಮಳಾಗಿದ್ದರೂ ಗಂಡಸರಿಗೆ ಸುಲಭವಾಗಿ ಸಿಗುತ್ತಿದ್ದ ಹೆಚ್ಚಿನ ಜ್ನಾನ ಹೆಣ್ಣಾಗಿದ್ದರಿಂದ ಇವಳ ಕೈಯ್ಯಿಗೆ ಎಟುಕದಾಯಿತು.  ಹೆಣ್ಣೆಂಬ ಒಂದೇ ಕಾರಣದಿಂದ ಆಶ್ರಮದ ಹಲವಾರು  ಮುಖ್ಯ ಆಧ್ಯಾತ್ಮಿಕ ಚಟುವಟಿಕೆಗಳಿಂದ ಇವಳನ್ನು ಹೊರಗಿಡಲಾಯಿತು. ಇಲ್ಲೇ ಇದ್ದರೆ ತನ್ನ ಮುನ್ನಡೆ ಅಸಾಧ್ಯ ವೆಂಬ ಅರಿವು ಆಗತೊಡಗಿತು. ಇಲ್ಲಿ ಟಿಬೆಟನ್ ಸನ್ಯಾಸಿನಿಯgಗೆ ಶ್ರಮನೇರಿಕಾ ಮಟ್ಟದಿಂದ ಮೇಲೇರುವುದು , ಪೂರ್ಣ ಪ್ರಮಾಣದ ಭಿಕ್ಷುಣಿಯರಾಗುವುದು ಸಾಧ್ಯವಿರಲಿಲ್ಲ.  ಹೀಗೆ ಆರು ವರ್ಷ ಕಳೆದ ತೆನ್ಜಿನ್ ಅವಳ ಗುರುವಿನ ಬುಧ್ಧಿವಾದದ ಮೇರೆ ಆ ಆಶ್ರಮ ತೊರೆದು ಹಾಂಕಾಂಗ್ ತಲುಪಿ, ಅಲ್ಲಿ ೧೯೭೩ ರಲ್ಲಿ ಪೂರ್ಣ ಪ್ರಮಾಣದ ಭಿಕ್ಷುಣಿ ದೀಕ್ಶೆ ಪಡೆದಳು. ನಂತರ ಟಿಬೆಟ್- ಹಿಮಾಚಲ ಪ್ರದೇಶದ ಗಡಿಯಲ್ಲಿರುವ  ಲಹೌಲ್ ತಲುಪಿದಳು. ಆಧ್ಯಾತ್ಮಿಕ ಪರಿಪೂರ್ಣತೆ ಪಡೆಯುವ ಜಾqನಲ್ಲಿ  ನಿರಂತರ ಧ್ಯಾನ ಸಾಧನೆಗಳ ಆಳಕ್ಕೆ ಇಳಿಯಲು ೧೩,೨೦೦ ಅಡಿ ಎತ್ತರದ  ಪ್ರದೇಶದಲ್ಲಿ  ಒಂದು ನಿರ್ಜನ  ಗುಹೆ ಹೊಕ್ಕಳು.

ಅವಳು ಆಲ್ಲಿ ಬದುಕಿದ ರೀತಿ ನೋಡಿದರೆ ಮೈ ಜುಂ ಎನ್ನುತ್ತದೆ. ೧೦ ಅಡಿ ಅಗಲ ಮತ್ತು ಆರಡಿ ಆಳವಿದ್ದ ಆ ಗುಹೆಯಲ್ಲಿ  ಅವಳು ೧೯೭೬ ರಿಂದ ವಾಸಮಾಡತೊಡಗಿದಳು. ಹನ್ನೆರಡು ವರ್ಷಗಳು ಅಲ್ಲಿ ಕಳೆದಳು. ಮೂರು  ವರ್ಷಗಳಂತೂ ಯಾವ ಬಾಹ್ಯ ಸಂಪರ್ಕವೂ ಇಲ್ಲದೆ ಸಾಧನೆ ಮಾಡಿದಳು. ತನ್ನ ಆಹಾರ ತಾನೇ ಬೆಳೆದು ಕೊಳ್ಳುತ್ತಾ, ಪುರಾತನ ಬೌಧ್ಧ ಧರ್ಮದ ಶೈಲಿಯಲ್ಲಿ ಆಳವಾಗಿ ಧ್ಯಾನ ಮಾಡಿದಳು. ವರ್ಶದಲ್ಲಿ ಆರರಿಂದ ಎಂಟು ತಿಂಗಳು  ಕವಿದಿರುವ ಹಿಮ,  ಕಾಡು ಪ್ರಾಣಿಗಳ ಭಯ, ಅಪ್ಪಳಿಸುವ ಚಂಡಮಾರುತಗಳು,  ಕಾಡುವ ಹಸಿವು ನೀರಡಿಕೆ, ಚಳಿಗಾಲದಲ್ಲಿ -೩೫ ಡಿಗ್ರಿ ಮುಟ್ಟುವ ತಾಪಮಾನ ಎಲ್ಲವನ್ನೂ ಎದುರಿಸಿ ತನ್ನ ತಪಸ್ಸನ್ನು ಮುಂದುವರಿಸಿದಳು. ಅವಳು ಪಾಲಿಸುತ್ತಿದ್ದ ಬೌಧ್ಧ ಧರ್ಮದ ಕಟ್ಟಳೆಗಳ ಪ್ರಕಾರ  ಮೂರು ವರ್ಷಗಳ ಕಾಲ ಅವಳೆಂದೂ ಅಡ್ಡಾಗುವ ಹಾಗಿರಲಿಲ್ಲ . ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದ್ದಂತೆ . ದಿನಾ ರಾತ್ರಿ ಮೂರು ಗಂಟೆ ಕಾಲ  ಒಂದು ಮೂರು ಅಡಿ ಉದ್ದ, ಮೂರು ಅಡಿ ಅಗಲದ   ಮರದ ಧ್ಯಾನದ ಪೆಟ್ಟಿಗೆಯಲ್ಲಿ ಕುಳಿತೇ ನಿದ್ರಿಸಬೇಕಾಗಿತ್ತು! ಆದರೆ ಅವಳ ಗುರಿ ನಿಚ್ಚಳವಾಗಿತ್ತು. ತಾನು  ಹೆಣ್ಣಿನ ದೇಹದಲ್ಲಿದ್ದು ಕೊಂಡೇ ’ಜ್ನಾನೋದಯ’ ಪಡೆಯುವುದಾಗಿತ್ತು.

ಅವಳೇ ಹೇಳುವಂತೆ’ ಮೊದಲು ಭಾರತಕ್ಕೆ ಅಧ್ಯಯನಕ್ಕಾಗಿ ಬಂದಾಗ ೧೦೦ ಜನ ಸನ್ಯಾಸಿಗಳ ನಡುವೆ ಇದ್ದವಳು ನಾನೊಬ್ಬಳೇ ಹೆಂಗಸು. ನನಗನ್ನಿಸೋದು ಅ  ಕ್ಷಣದಲ್ಲೇ  ನಾನೊಬ್ಬಳೇ ಗುಹೆಯಲ್ಲಿ ಬದುಕುವ  ನಿರ್ಧಾರ ನನ್ನಲ್ಲಿ ಮೂಡಿರಬೇಕು. ನನ್ನ ಜೊತೆ ಇದ್ದ ಸನ್ಯಾಸಿಗಳು ಒಳ್ಳೆಯವರೇ ಇದ್ದರು, ಸ್ನೇಹಪರರಾಗಿದ್ದರು, ಎಂದೂ ನನಗೆ ಲೈಂಗಿಕ ಶೋಷಣೆಯಂಥಾ ಸಮಸ್ಯೆಗಳನ್ನು ಎದುರಿಸಬೇಕಾಗಿರಲಿಲ್ಲ.  ಅವರ ಪ್ರಕಾರ, ನನ್ನ ದುರದೃಷ್ಟವೆಂದರೆ ನಾನು ಹೆಣ್ಣಿನ ಶರೀರದಲ್ಲಿ ಬಂದಿಯಾಗಿದ್ದೆ. ನೀನು ಮುಂದಿನ ಜನ್ಮದಲ್ಲಾದರೂ ಗಂಡಾಗಿ ಜನ್ಮ ತಾಳಿ ನಮ್ಮೆಲ್ಲ ರೊಡನೆ ಆಶ್ರಮದ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ನಾವೆಲ್ಲ ದಿನಾ ನಿನಗಾಗಿ ಪ್ರಾರ್ಥಿಸುತ್ತೇವೆ! ಎಂದೂ ಹೇಳಿದ್ದರು. ಪಾಪ, ಇವಳು ಹೆಣ್ಣಾಗಿ ಜನ್ಮ ತಾಳಿ ನಮಗಿಂತ ಕೀಳಾದಳಲ್ಲಾ ಎಂದು ಅವರಿಗೆ ಒಂದು ರೀತಿ ಕರುಣೆ. ಆದರೆ ಅದರಲ್ಲಿ ನನ್ನ ತಪ್ಪೇನೂ ಇಲ್ಲ ಎಂಬ ನಂಬಿಕೆ ಕೂಡಾ! ಆದರೆ, ನಾನು ಮನಸ್ಸು ಮಾಡಿ ಆಗಿತ್ತು, ಎಷ್ಟೇ ಜನ್ಮಗಳು ತಾಳಿದರೂ ಪರವಾಗಿಲ್ಲ, ನಾನ್ ಹೆಣ್ಣಾಗಿಯೇ ಜ್ನಾನೋದಯ ಪಡೆಯುತ್ತೇನೆಂದು!  ಮುಖ್ಯವಾಗಿ, ಗೌತಮ ಬುದ್ಧನೇ ಹೇಳಿರುವಂತೆ ಬೌದ್ಧ ಸನ್ಯಾಸಿನಿಯರ್ ಪೂರ್ಣ ಪ್ರಮಾಣದ ಭಿಕ್ಶುಣಿಯರಾಗಲು ಯವ ತಡೆಯೂ ಇರಲಿಲ್ಲ. ಅವನೆಲ್ಲೂ ಇವರು ಕೇವಲ ಮೊದಲ ಮಟ್ಟದ ’ಶ್ರಮನೇರಿಕಾ’ ದೀಕ್ಷೆಗೆ ಮಾತ್ರ ಅರ್ಹರೆಂದು ಹೇಳಿರಲಿಲ್ಲ.  ಹಾಗಾಗಿ ನಾನು ಬುದ್ಧನ ಉದ್ದೇಶವನ್ನು ಪಾಲಿಸುತ್ತಿದ್ದೇನೆಂಬುದರ ಬಗ್ಗೆ ನನಗೆ ಯಾವ ಅನುಮಾನುವೂ ಇರಲಿಲ್ಲ.’

೧೯೮೮ ರಲ್ಲಿ ತಮ್ಮ ೧೨ ವರ್ಷಗಳ ಏಕಾಂತದಿಂದ ಹೊರಬಂದ ತೆನ್ಜಿನ್ ಪಾಲ್ ಮೋ ಹೊಸ ಬೆಳಕಿನ ದಾರಿ ಹಿಡಿದರು. ಜಗತ್ತೆಲ್ಲಾ ಸುತ್ತುತ್ತಾ, ಬೌದ್ದ್ಧಧರ್ಮದ ಬಗ್ಗೆ ಅರಿವು ಮೂಡಿಸುತ್ತಾ, ಆಧ್ಯಾತ್ಮಿಕ ಒಲವುಳ್ಳ ಹೆಣ್ಣುಮಕ್ಕಳಿಗೆ  ಶಿಕ್ಶಣ, ತರಪೇತಿ, ಪರಿಪೂರ್ಣತೆಯ ದಾರಿ ತೋರುತ್ತಾ, ಬೌದ್ಧ ಸನ್ಯಾಸಿನಿಯರಿಗೆ ಸರಿಸಮ ಹಕ್ಕುಗಳಿಗಾಗಿ ಹೋರಾಡುತ್ತಾ, ತಮ್ಮ ಕನಸಿನ ಕೂಸಾಗಿದ್ದ ಆಶ್ರಮ ಕಟ್ಟಲು ಹಣ ಕೂಡಿಸುತ್ತಾ ಸಾವಿರಾರು ಮೈಲಿ ಸುತ್ತಿದರು. ಕೊನೆಗೆ ಹಿಮಾಚಲ ಪ್ರದೇಶದಲ್ಲಿ  ಸನ್ಯಾಸಿನಿಯರಿಗಾಗಿ ಡೊಂಗ್ಯು ಘ್ಯಾಟ್ಸಾಲ್ ಲಿಂಗ್ ಆಶ್ರಮ
ಕಟ್ಟಿದರು. ಇದು ತನ್ನ ಸೋದರ ಸಂಸ್ಥೆಯಾದ ಜಗದ್ವಿಖ್ಯಾತ ತಾಶಿ ಜೋಂಗ್ ಆಶ್ರಮ ದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತದೆ. ಇಂದು ಸುಮಾರು ೧೦೦ ಸನ್ಯಾಸಿನಿಯರನ್ನು ಹೊಂದಿರುವ ಈ ಸಂಸ್ಥೆ ಬೌದ್ಧ ಧರ್ಮ, ಧ್ಯಾನ, ಸಾಧನೆಗಳ ಜೊತೆಗೆ ಹೆಣ್ಣು ಮಕ್ಕಳು ಆರ್ಥಿಕ ವಾಗಿ ಸ್ವತಂತ್ರರಾಗಿರಲು ಕುಶಲ ಕಲೆಗಳನ್ನು ಕಲಿಸುತ್ತದೆ.  ಹಳ್ಳಿ ಮಕ್ಕಳಿಗೆ ಶಾಲೆಗಳನ್ನೂ, ಅಲ್ಲಿನ ಜನರಿಗಾಗಿ ಔಷಧಾಲಯಗಳನೂ ನಡೆಸುತ್ತಿದೆ.

ಇದೆಲ್ಲಾ ಮಾಡುವ ಮೂಲಕ ಸನ್ಯಾಸಿನಿಯರ ಬಗ್ಗೆ ಸಮಾಜದಲ್ಲಿ ಇರುವ ಸಾಧಾರಣ ನಂಬಿಕೆಗಳನ್ನು ತೆನ್ಜಿನ್ ಪಾಲ್ ಮೋ  ತೊಡೆದು ಹಾಕಿದ್ದಾರೆ. ಯಾವುದೋ ಕಾರಣದಿಂದ ನೊಂದು ಬದುಕಿಗೆ ಬೆನ್ನು ತಿರುಗಿಸಿದ ಹೆಣ್ಣು ಮಕ್ಕಳು ಮಾತ್ರ ಸನ್ಯಾಸದ ಹಾದಿ ಹಿಡಿಯ ಬೇಕಿಲ್ಲ,ಪ್ರತಿ ಹೆಣ್ಣಿಗೆ ಈ ಒಂದು ಆಯ್ಕೆಯೂ ಇದೆ. ಅವಳ ಒಲವು ತನ್ನ ಬದುಕಿನಲ್ಲಿ ಆಧ್ಯಾತ್ಮಿಕ ಪರಿಪೂರ್ಣತೆ ಪಡೆಯುವುದೇ ಆಗಿದ್ದರೆ, ಮುಖ್ಯ ವಾಹಿನಿಯಿಂದ ಹೊರಹೋಗದೆಯೇ ಅದನ್ನು ಪಡೆಯುವ ಪೂರ್ಣ ಸ್ವಾತಂತ್ರ್ಯ  ಅವಳಿಗೆ ಇದೆ, ಅದಕ್ಕೆ ದಾರಿಯೂ ಇದೆ ಎಂಬುದನ್ನು ಸಾರಿ ತೋರಿಸಿದ್ದಾರೆ.

ಧರ್ಮಶಾಲಾ ದಿಂದ  ಸುಮಾರು ಒಂದು ಗಂಟೆ ಕಾಲ ಕಾರಿನಲ್ಲಿ ಪ್ರಯಾಣಮಾಡಿ ತಾಶಿ ಜೋಂಗ್ ತಲುಪಿದೆ. ೧೯೫೮ ರಲ್ಲಿಧರ್ಮಗುರು  ೮ನೆಯ ಖಮ್ತ್ರುಲ್ ರಿಂಪೋಚೆ ಕಮ್ಮುನಿಸ್ಟರ ದಾಳಿಗೆ ಹೆದರಿ ಪುರಾತನ ಪವಿತ್ರ ಹಸ್ತಪ್ರತಿಗಳನ್ನೆತ್ತಿಕೊಂಡು  ಒಂದಷ್ಟು ಸನ್ಯಾಸಿಗಳು ಮತ್ತು ಲಾಮಾಗಳೊಂದಿಗೆ ಭಾರತಕ್ಕೆ ಓಡಿ ಬಂದರಂತೆ. ಮೊದಲ ಕೆಲವು ವರ್ಷಗಳು ಕಲಿಂಪಾಂಗ್ ನಲ್ಲಿ ಕಳೆದು ೧೯೬೯ ರಲ್ಲಿ ಹಿಮಾಚಲ ಪ್ರದೇಶಕ್ಕೆ  ಬಂದರಂತೆ. ಅಲ್ಲಿ ಅವರು ತುಂಬಾ ಪವಿತ್ರವೆಂದೂ,’ಐದು ಮಂಜುಶ್ರೀ ಗಳ ಭೂಮಿ’ಯೆಂದೂ ಕಂಡುಕೊಂಡ  ೩೭ ಎಕರೆಗಳ ಸ್ಥಳದಲ್ಲಿ ’ತಾಶಿ ಜೋಂಗ್’ ಆಶ್ರಮವನ್ನು ಸ್ಥಾಪಿಸಿದರು. ಈ ಟಿಬೆmನ್ ಪದಗಳ ಅರ್ಥ ’ಪವಿತ್ರ ಕಣಿವೆ’ ಎಂದು.(ನಂತರ ಪುರಾತತ್ವ ಇಲಾಖೆಯವರು ಉತ್ಖನನ ಮಾಡಿದಾಗ ಪಳೆಯುಳಿಕೆಗಳು ಸಿಕ್ಕಿಸಾವಿರಾರು ವರ್ಷದ ಹಿಂದೆ ಇಲ್ಲಿ ಬೌಧ್ಧ ವಿಹಾರವೊಂದಿತ್ತೆಂದು ತಿಳಿದಿ ಬಂದಿದೆ.) ಇಲ್ಲಿಂದ ಸ್ವಲ್ಪ ದೂರದಲ್ಲೇ ಸನ್ಯಾಸಿನಿಯರಿಗಾಗಿ ತೆನ್ಜಿನ್ ಪಾಲ್ ಮೋ ಕಟ್ಟಿದ ಆಶ್ರಮ ’ ಡೊಂಗ್ಯು ಗ್ಯಾಟ್ಸಾಲ್ ಲಿಂಗ್ ನನರಿ ’ ಇದೆ.

ನಾನು ಅಲ್ಲಿ ತಲುಪಿದಾಗ ಮಧ್ಯಾಹ್ನದ ಹೊತ್ತು.  ಫಳಿಚ್ಚೆಂದು ಬಿಸಿಲು, ಜತೆಗೇ ಚುಮುಚುಮು ಚಳಿ. ಬಾಗಿಲು ಮುಚ್ಚಿದ್ದ ಮಂದಿರದ ಕಟೆಕಟೆ ಗಂದಲೇ ಮೌನ ಬುಧ್ಧನ ದರ್ಶನ ಮಾಡಿಕೊಂಡು  ಅಫೀಸಿನತ್ತ ನಡೆದೆ. ಹೊರಗಡೆ ಅಂಗಳದಲ್ಲಿ ಎಣ್ಣೆಗೆಂಪು ಬಣ್ಣದ ಸನ್ಯಾಸಿನಿಯರ ಉಡುಗೆಗೆಳು ಒಣಗುತ್ತಿದ್ದುವು. ಹೇಸರಕತ್ತೆಂiಂದು ಎಲ್ಲಿಂದಲೋ ಸಾಮಾನು ಹೊತ್ತು ತಂದು ಹಾಕಿ ಹಗುರಾಗಿ  ಹಾಯಾಗಿ ಮಲಗಿ ಬಿಸಿಲು ಕಾಸುತ್ತಿತ್ತು. ಸುತ್ತಲೂ ಮತ್ತಷ್ಟು ಕೋಣೆಗಳನ್ನು ಕಟ್ಟುವ ಕಾಯಕ ನಡೆಯುತ್ತಿತ್ತು. ಸನ್ಯಾಸಿನಿಯರ ಜೊತೆಗೆ ಊರಿನ ಹೆಂಗಸರು, ಗಂಡಸರು ಮಾತಿಲ್ಲದೆ ದುಡಿಯುತ್ತಿದ್ದರು. ತೋmದಲ್ಲಿ ಹೂಗಳು ನಳನಳಿಸುತ್ತಿದ್ದುವು.

ಅಫೀಸಿನೊಳಗೆ ಹೊಕ್ಕಾಗ  ಮೆಲ್ಲನೆ ಟಿಬೆಟನ್ ವಾದ್ಯ ಸಂಗೀತ ಕೇಳಿಬರುತ್ತಿತ್ತು. ಜೊತೆಗೆ  ಸಮಾಧಿ ಸ್ಥಿತಿಯಲ್ಲಿದ್ದ ಗೌತಮ ಬುದ್ಧನಿಗೆ ಹಚ್ಚಿದ್ದ ಊದುಕಡ್ಡಿಯ ಘಮ. ಅಲ್ಲಲ್ಲಿ ಧ್ಯಾನಸ್ಥ ಮಂಜುಶ್ರೀ ತಾಂಖಾಗಳು. ಒಂದು ಕಡೆ  ಜಗತ್ತಿನೆಲ್ಲೆಡೆ ಈ ಪಂಥದ ಸನ್ಯಾಸಿನಿಯರು ಮಾಡುತ್ತಿರುವ ಕೆಲಸಗಳು, ತೆನ್ಜಿನ್ ಪಾಲ್ ಮೋ ವಿಷ್ವ ಪರ್ಯಾಟನೆಯ ಚಿತ್ರಗಳನ್ನು  ಹಾಕಿದ್ದರು. ಇನ್ನೊಂದು  ಕಡೆ ಸಾಲು ಸಾಲು ಪುಸ್ತಕಗಳು, ಸೀಡೀಗಳು. 
ತೆನ್ಜಿನ್ ಪಾಲ್ ಮೋ ಬರೆದ ಕೆಲವು ಪುಸ್ತಕ ಗಳನ್ನು ಕೊಂಡಮೇಲೆ  ಆಫೀಸಿನ ಹುಡುಗಿ ತಮ್ಮ ಸಂಘದ ಚಟುವಟಿಕೆಗಳನ್ನು ವಿವರಿಸಿದಳು.  ಆಗಲೇ ಮರಿಯಾ ಳಿಂದ ಸುದ್ದಿ  ತಿಳಿದಿದ್ದ ನಾನು ಆಸೆಯಿಂದ ಕೊನೆಗೆ ಕೇಳಿದೆ’ತೆನ್ಜಿನ್ ಪಾಲ್ ಮೋ ಅವರನ್ನು ನೋಡುವುದು ಸಾದ್ಯವೇ?’
ಅವಳು ನಗುತ್ತಾ ’ಸಾರಿ’ಎಂದಳು. ಅವರು ರಿಂಪೋಚೆಯೊಂದಿಗೆ ಮಹತ್ವದ ಮೀಟಿಂಗಿನಲ್ಲಿದ್ದರು. ’ನಾಳೆ ಅಪಾಯಂಟ್ ಮೆಂಟ್ ತಗೊಂಡು ಬನ್ನಿ’ ಎಂದಳು.
ಮಾರನೆಯ ದಿನ ನಾವು ವಾಪಸ್ಸು ಹೋಗಲು ಟಿಕೆಟ್ ಬುಕ್ಕಾಗಿತ್ತು. ನನ್ನ ನಿರಾಸೆ ಮುಚ್ಚಿಟ್ಟುಕೊಳ್ಳಲಾಗಲಿಲ್ಲ. ಅವಳು ಮತ್ತೆ ’ಸಾರಿ, ನಾಳೆ ಬನ್ನಿ’ ಎಂದು ಬೆನ್ನು ತಟ್ಟಿದಳು.

ಅಷ್ಟ ಹೊತ್ತಿಗೆ ಮೇಲ್ಮಹಡಿಯಿಂದ ಹತ್ತಾರು ಹೆಜ್ಜೆ ಸದ್ದುಗಳು, ಮೆಲು ಮಾತುಗಳು, ಕುಲುಕುಲ ನಗು ಕೇಳಿಸಿತು. ಆ ಹುಡುಗಿ ಎಲ್ಲಾ ಬಿಟ್ಟು ಹೊರಗೋಡಿದಳು. ನಾನೂ ಅವಳ ಹಿಂದೆ ಹೋದೆ. ತೆನ್ಜಿನ್ ಪಾಲ್ ಮೋ ಮೀಟಿಂಗ್ ಮುಗಿದಿತ್ತು. ಧರ್ಮಗುರು ರಿಂಪೋಚೆಯವರನ್ನು ಕಳಿಸಿಕೊಡಲು ಅವರು ಕಾರಿನತ್ತ ನಡೆದು ಬರುತ್ತಿದ್ದರು. ಆ ದಿವ್ಯ ಮೂರ್ತಿಗಳನ್ನು ನೋಡಲು ಎಣ್ಣೆಗೆಂಪಿನ ಉಡುಗೆಯ, ಬೋಳುತಲೆಯ, ಹೊಳಪುಗಣ್ಣಿನ ಹತ್ತಾರು ಎಳೆ ಸನ್ಯಾಸಿನಿಯರೂ ತಮ್ಮ ತಮ್ಮ ಕೆಲಸ ಬಿಟ್ಟು  ಓಡಿ ಬಂದರು. ಅವರ ಖುಶಿ ಉತ್ಸಾಹ ಎಲ್ಲೆಡೆ ತುಂಬಿ  ಇಡೀ ವಾತಾವರಣ ಹಗುರಾಯಿತು. ಕಾರು ಹೊರಟಿತು.

ತೆನ್ಜಿನ್ ಪಾಲ್ ಮೋ ರಿಂಪೋಚೆ ಅವರಿಗೆ ಕೈ ಬೀಸಿ ಮರಳುತ್ತಿದ್ದಂತೆ ಅವರ ಮುಖ ನೋಡಿದೆ. ಮೇಲಿದ್ದ  ವಿಶಾಲ ಆಗಸ  ಅವರ ನೀಲಿ ಕಣ್ಣುಗಳಲ್ಲಿ ಮೂಡಿತ್ತು. ಶಾಂತ  ಮಂದಹಾಸದ ತೇಜಸ್ವಿ ವ್ಯಕ್ತಿ.  ನಾನು ಅವರತ್ತ ಹೋಗಿ ಪರಿಚಯ ಮಾಡಿಕೊಂಡೆ. ’ನಿಮ್ಮ ಭೇಟಿಗಾಗಿ ಅಷ್ಟೊಂದು ಕಾತರದಿಂದ ಕಾಯುತ್ತಿದ್ದಾಗ ಬರಿಗೈಯ್ಯಲ್ಲಿ
ಹೋಗಬೇಕಾಗುತ್ತೇನೋಂತ ಅಷ್ಟು ಬೇಜರಾಗಿತ್ತು. ಅಯಾಮ್ ಲಕಿ’ಎಂದೆ.
ಚಿಕ್ಕ ಹುಡುಗಿಯಂತೆ ಉತ್ಸಾಹದಿಂದ ’ದೇರ್ ಯು ಗೋ! ಎಂದವರೇ ನನಗಾಗಿಯೇ ಕಾದಿದ್ದವರಂತೆ  ಹತ್ತಿರ ಬಂದು ತೋಳು ಬಳಸಿ ಅಪ್ಪಿಕೊಂಡರು.
’ನಾನು ತುಂಬಾ ಬಿಜಿಯಾಗಿದ್ದೇನೆ. ನಮ್ಮ ಆಶ್ರಮ ಸುತ್ತಾಡಿ. ಕೆಲಸ ನಡೆಯುತ್ತಿದೆ ನೋಡಿ. ವರ್ಕ್ ಶಾಪ್ ಗಳನ್ನೂ ನೋಡಿ ಬನ್ನಿ’ ಎಂದು ಒಬ್ಬ ೧೩-೧೪ ವರ್ಷದ ಹುಡುಗಿಯನ್ನು ಜೊತೆಗೆ  ಕಳಿಸಿ ಕೊmಟರು. ಹಳೆಯ ಗೆಳತಿಯಂತೆ, ’ಮತ್ತೆ ಬನ್ನಿ, ಮಾತಾಡೋಣ’ ಎಂದು ಕೈ ಬೀಸಿದರು.
ಯುವ ಸನ್ಯಾಸಿನಿಯರ ಆಶ್ರಮವೆಂದರೆ ಮುಸುಗಿನ ಹಿಂದೆ ಇಣುಕಿನೋಡುವ ದಿಗಿಲುಗಣ್ಣುಗಳ ವಿಷಾದ ತುಂಬಿದ ಮುಖಗಳೇ ಕಣ್ಣು ಮುಂದೆ ಬರುತ್ತಿದ್ದ ನನ್ನ ಮನಸ್ಸಿನ ಪರದೆಯ ಮೇಲೆ  ಹೊಸ ಬೆಳಕು ಮೂಡಿತ್ತು.

-ಉಮಾ ರಾವ್
ಧರ್ಮಶಾಲಾ, ೨೦೧೦



No comments:

Post a Comment