Friday, May 9, 2014

ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ -ಭಾಗ ೧








ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ -ಭಾಗ ೧

ಅಹೋಬಲ ಶಂಕರರನ್ನು ನೆನೆಯುತ್ತಾ॒

ಗುರುದೇವ ರವೀಂದ್ರನಾಥ ಟ್ಯಾಗೋರರ ಹುಟ್ಟುಹಬ್ಬದ ಸಮಯದಲ್ಲಿ ಅಹೋಬಲ ಶಂಕರರ ನೆನಪಾಗುತ್ತದೆ. ಅವರ ಮಗಳು ಪ್ರೇಮಾ ಮನೆಯಲ್ಲಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದುದು ನನ್ನ ಸೌಭಾಗ್ಯ. 

ಕನ್ನಡ ಓದುಗರಿಗೆ ವಿಶ್ವಕವಿ ರವೀಂದ್ರನಾಥ ಠಾಕೂರರ ಸಾಹಿತ್ಯವನ್ನು ಪರಿಚಯಿಸಿದವರು ಅಹೋಬಲ ಶಂಕರರು. ರವೀಂದ್ರರ ವಿನೋದಿನಿ, ಯೋಗಾಯೋಗ, ರಕ್ತ ಕರವೀರ ಮುಂತಾದವುಗಳಲ್ಲದೆ ಅವರ ಅಷ್ಟೂ ಕತೆಗಳನ್ನು ಒಳಗೊಂಡ ರವೀಂದ್ರ ಕಥಾಮಂಜರಿ -ಅಹೋಬಲ ಶಂಕರರು ಕನ್ನಡಿಗರಿಗೆ ಇತ್ತ ಅಮೂಲ್ಯ ಕೊಡುಗೆ. ಇಷ್ಟೇ ಅಲ್ಲದೆ, ಇವರು ಶರತ್ ಚಂದ್ರ ಚಟರ್ಜಿ, ಬಂಕಿಮ ಚಂದ್ರ ಚಟರ್ಜಿ, ಬಿಮಲ್ ಮಿತ್ರ, ತಾರಾಶಂಕರ ಬ್ಯಾನರ್ಜಿ, ವಿಭೂತಿ ಭೂಷಣ ಬಂದೋಪಾಧ್ಯಾಯ, ಮಾಣಿಕ್ ಚಂದ್ರ ಬಂದೋಪಾಧ್ಯಾಯ ಮುಂತಾದ ಶ್ರೇಷ್ಠ ಸಾಹಿತಿಗಳ ಸುಮಾರು ೨೫ ಕೃತಿಗಳನ್ನು ಬಂಗಾಲಿಯಿಂದ ಕನ್ನಡಕ್ಕೆ ತಂದಿದ್ದಾರೆ. ’ಕವಿ’ ಹಾಗೂ ’ಪಥೇರ್ ಪಾಂಚಾಲಿ’ ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಬಿ.ಎ., ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.


ಇಂಗ್ಲೀಷ್, ಕನ್ನಡ ಅಲ್ಲದೆ ಹಿಂದೆ, ಬಂಗಾಲಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ಪರಿಣಿತರಾಗಿರುವ ಇವರ ಇನ್ನೊಂದು ಮುಖ್ಯವಾದ ಕೊಡುಗೆ ಎಂದರೆ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ಇ.ಎಮ್.ಎಸ್. ನಂಬೂದರಿಪಾಡರ ಆತ್ಮಕಥೆ. ಇವರು ಕನ್ನಡದಲ್ಲಿ ಹಲವಾರು ಸಣ್ಣಕತೆ, ನಾಟಕಗಳನ್ನು ಬರೆದಿದ್ದಾರೆ.


೧೯೧೩ ರಲ್ಲಿ ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಅಹೋಬಲ ಶಂಕರರು, ನ್ಯಾಶನಲ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಚಿಕ್ಕವಯಸ್ಸಿನಿಂದಲೇ ಓದುವ ಹುಚ್ಚು. ಇಂಗ್ಲೀಷ್ ಸಾಹಿತ್ಯದಲ್ಲೂ ತುಂಬಾ ಅಭಿರುಚಿ. ಕನ್ನಡ, ಇಂಗ್ಲೀಷ್ ಅಲ್ಲದೆ ಜರ್ಮನ್, ಪ್ರೆಂಚ್ ಮತ್ತು ನಾರ್ವೇಜಿಯನ್ ಸಾಹಿತ್ಯದ ಅಧ್ಯಯನ. ಹರೆಯದಲ್ಲಿ ಸಾಹಿತ್ಯಕ್ಕಿಂತ ಹೆಚ್ಚು ರಾಜಕೀಯ ಚಳವಳಿಗಳ ಪ್ರಭಾವ. ಪರಿಣಾಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಹಾತ್ಮಗಾಂಧಿಯವರು ನಡೆಸಿದ್ದ ಸರ್ಕಾರದ ವಿರುದ್ಧ ಪ್ರಚಾರ ಚಳವಳಿಯಲ್ಲಿ ಸಕ್ರಿಯ ಪಾತ್ರ. ನಂತರ ಜೀವನೋಪಾಯಕ್ಕಾಗಿ ಮುಂಬೈಗೆ ಪ್ರಯಾಣ. ೧೯೪೫ ರಿಂದ ಇಂಗ್ಲಿಶ್ ದಿನಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಯ ಕೆಲಸ. ಅವರು ಮುಂಬೈ ಯ್ಯಲ್ಲಿಹಲವಾರು ವರ್ಷ ದುಡಿದಿದ್ದರು.  ಇಂಡಿಯನ್ ಎಕ್ಸ್ಪ್ರೆಸ್, ಫ಼್ರೀ ಪ್ರೆಸ್ ಜರ್ನಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಬರೆಯುತ್ತಿದ್ದ ಅಂಕಣ ’ಫ಼್ರಾಮ್ ದ ಈಜ಼ೀ ಚೇರ್’ ಮತ್ತು ಸಂಪಾದಕೀಯಗಳು ಅವುಗಳ ನೇರ, ದಿಟ್ಟ ನಿಲುವುಗಳಿಗಾಗಿ, ಸ್ವಾರಸ್ಯಕರ ಶೈಲಿಗಾಗಿ, ಅಪಾರ ಜನಪ್ರಿಯತೆ ಪಡೆದಿದ್ದುವು.  ಚಿಕ್ಕವಯಸ್ಸಿನಿಂದಲೇ ಓದುವ ಹುಚ್ಚು ಹಿಡಿಸಿಕೊಂಡಿದ್ದ ಅವರು, ಮೊದಲಿಂದ ಎಡಪಂಥೀಯರು. ಆ ಕಾರಣದಿಂದಲೇ ಇಂಡಿಯನ್ ಎಕ್ಸ್ಪ್ರೆಸ್ ಮ್ಯಾನೇಜ್ಮೆಂಟ್ ಜೊತೆ  ತಾತ್ವಿಕ ತಾಕಲಾಟಗಳಾಗಿ, ಅವರು ಕಾರ್ಮಿಕರ ಪರ ತೆಗೆದುಕೊಂಡ ನಿಲುವಿನಿಂದ ಕದಲದೆ ಇದ್ದಿದ್ದರಿಂದ ಕೊನೆಗೆ ಕೆಲಸಕ್ಕೇ ರಾಜೀನಾಮೆ ಕೊಟ್ಟು ಹೊರಬರಬೇಕಾಯಿತು.  ಆ ಕೆಲಸವಿಲ್ಲದ ಕಾಲದಲ್ಲಿ ಅವರು ಮನೆಯಲ್ಲೂ ಆರ್ಥಿಕ ಮುಗ್ಗಟ್ಟುಗಳನ್ನು ಅನುಭವಿಸಬೇಕದ ಪರಿಸ್ಥಿತಿ ಬಂದರೂ, ತಮ್ಮ ನಿರ್ಧಾರzಂದ ಜಗ್ಗಲಿಲ್ಲ.

ಅಹೋಬಲ ಶಂಕರ ಅವರು ೨೪ ವರ್ಷದವರಿದ್ದಾಗ  ೧೪ ವರ್ಷದ ವಯಸ್ಸಿನ ವೆಂಕಟಲಕ್ಶ್ಮಿ ಅವರೊಂದಿಗೆ ಮದುವೆ ಆಯಿತು. ಅವರಿಗೆ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು.
ಅವರ ಸಾಂಸಾರಿಕ ಬದುಕಿನಲ್ಲಿ ಬಿದ್ದ ದೊಡ್ಡ ಹೊಡೆತ ವೆಂದರೆ ಅವರ ಹೆಂಡತಿ ೨ ತಿಂಗಳ iಗುವನ್ನು ಬಿಟ್ಟು ತಮ್ಮ ೩೧ನೇ ವಯಸ್ಸಿನಲ್ಲಿ ತೀರಿಕೊಂಡಿದ್ದು.

ನನಗೆ ಅಹೋಬಲ ಶಂಕರರಂಥಾ ಅಪರೂಪದ ಸಾಹಸೀ ವ್ಯಕ್ತಿಯ ಪರಿಚಯವಾದದ್ದು ಮುಂಬೈಯ್ಯಲ್ಲಿ. ಅವರ ಮಗಳು ಪ್ರೇಮಾ, ನಾನು ಆತ್ಮೀಯ ಗೆಳತಿಯರು. ಮಗಳ ಮನೆಗೆ ವರ್ಷಕ್ಕೊಮ್ಮೆ ಬಂದು ಕೆಲವು ತಿಂಗಳುಗಳು ಕಳೆಯುವುದು ಅವರ ಅಭ್ಯಾಸವಾಗಿದ್ದಿತು .ಹಾಗಾಗಿ ನಾನು ಅವರನ್ನು ಭೇಟಿಯಾಗಲು ಆಗಾಗ ಹೋಗುತ್ತಿದ್ದೆ.
ಅವರೊಡನೆ  ಹರಟುವುದೆಂದರೆ ತುಂಬ ಮಜಾ ಇರುತ್ತಿತ್ತು.  ಎಲ್ಲಾ ಚಳುವಳಿಗಳಲ್ಲೂ, ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯ ಪಾತ್ರ ವಹಿಸಿದ್ದ ಅವರು ತಮ್ಮ ಬದುಕಿನುದ್ದದ ಅಪೂರ್ವ ಅನುಭವಗಳನ್ನು  ಹೇಳುವ ರೀತಿಯೂ ಚಿತ್ರವತ್ತಾಗಿರುತ್ತಿತ್ತು . ಅವರ ಲಿವಿಂಗ್ ರೂಮಿನ ತರೆದ ಗಾಜಿನ ಬಾಗಿಲ  ಮೂಲಕ ಸಂಜೆಯ ಸೂರ್ಯನನ್ನು ನೋಡುತ್ತಾ ಅವರಾಡಿದ ಮಾತುಗಳನ್ನು ಕೇಳುತ್ತಿದ್ದಾಗ ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ.


ಅಚ್ಚ ಬಿಳಿ ಧೋತರದ, ತೆಳುವಾದ ಮೈಕಟ್ಟಿನ, ಎಂದೂ ವಾಚ್ ತೊಡದ, ೮೦ರ ಹರೆಯದ ಅಹೋಬಲ ಶಂಕರರನ್ನು ಕಂಡ ತಕ್ಷಣ ಮನಸ್ಸಿಗೆ ತಟ್ಟುತ್ತಿದ್ದುದು ಅವರ ಕಣ್ಣುಗಳಲ್ಲಿನ ಹೊಳಪು, ಬದುಕಿನ ಸಣ್ಣಪುಟ್ಟ ಆಗುಹೋಗುಗಳಿಗೂ ಅವರು ಸ್ಪಂದಿಸುತ್ತಿದ್ದ ತೀವ್ರತೆ. ಅ ಂದೂ ಮಸುಕಾಗದಿದ್ದ ಮುಗ್ಧ ಅಚ್ಚರಿ. ಬೊಚ್ಚು ಬಾಯಿಂದ ಹರಿಯುತ್ತಿದ್ದ ಮಗುವಿನ ಮುಕ್ತ ನಗೆ. ಹೆಜ್ಜೆಹೆಜ್ಜೆಗೆ ರಾಜಿ ಮಾಡಿಕೊಳ್ಳದೆ ನಡೆದವರ ನಿಲುವಿನಲ್ಲಿ ಮಾತ್ರ ಹಣಕುವ ದಿಟ್ಟತನ. ಅಲ್ಲದೆ, ಚಿಕ್ಕಪುಟ್ಟ ಅನಾನುಕೂಲಗಳು, ಕಿರಿಕಿರಿಗಳಿಗೂ ಹೆದರುತ್ತಲೇ ಬದುಕುವ ಈಗಿನವರಿಗೆ ಅಚ್ಚರಿ ತರುವ ಒಂದು ಅಂಶವೆಂದರೆ  ತಮಗಾಗಿ ಅವರಲ್ಲಿಲ್ಲದಿದ್ದ  ದಿಗಿಲು.

ಆಗ ಅಹೋಬಲ ಶಂಕರರು ಮುಂಬೈಯಲ್ಲಿರುವ ಅವರ ಮಕ್ಕಳೊಂದಿಗಿದ್ದರು. ಅಂದು ಸಂಜೆ ಅವರ ಬದುಕಿನ ಕೆಲಕ್ಷಣಗಳ ನೆನಪುಗಳನ್ನು ಹಂಚಿಕೊಂಡಿದ್ದು ಒಂದು ಅಪೂರ್ವ ಅನುಭವ.



ಬೆಳಗು.

ನಾನಾಗ ಸೀನಿಯರ್ ಬಿಎಸ್‌ಸಿಯಲ್ಲಿದ್ದೆ. ನಮ್ಮ ತಂದೆಗೆ ೧೨ ಮಕ್ಕಳು. ಕಾಲೇಜಿಗೆ ಹೋದವನು ನಾನೊಬ್ಬನೇ. ಯಾವ ಮಗನೂ ಒಂದು ಸಲ ಯಾವ ಕ್ಲಾಸಿನಲ್ಲಾದರೂ ಫೇಲಾದರೆ ಬಿಡಿಸಿ ಬಿಡುತ್ತಿದ್ದರು. ನನಗೆ ಲೀಟರೇಚರ್ ಓದುವ ಆಸೆ ತುಂಬಾ ಇತ್ತು. ಮೈಸೂರಿಗೆ ಕಳಿಸಲು ಅಪ್ಪನ ಹತ್ತಿರ ಹಣವಿರಲಿಲ್ಲ. ಆದ್ದರಿಂದ ಬೆಂಗಳೂರಿನಲ್ಲೇ ಬಿ.ಎಸ್.ಸಿ. ಸೇರಿದೆ. ಹೆಚ್ಚು ಆಸಕ್ತಿ ಇರಲಿಲ್ಲ. ಪ್ರಾಕ್ಟಿಕಲ್ಸ್‌ಗೆ ಚಕ್ಕರ್ ಹೊಡೆದು ಆ ಸಮಯದಲ್ಲಿ ಕೇರಂ ಆಡುತ್ತಿದ್ದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಓದುತ್ತಿದ್ದೆ.

ಅಂದು ಹೋಳಿ ಹುಣ್ಣಿಮೆ ದಿನ. ಹಿಂದಿನ ರಾತ್ರಿ ತುಂಬಾ ಹೊತ್ತು ’ಮ್ಯಾಕ್ ಬೆತ್’ ಓದುತ್ತಿದ್ದೆ. ಬೆಳಗಿನ ಜಾವ ನನ್ನ ತಮ್ಮಂದಿರು ಗಲಾಟೆ ಮಾಡುತ್ತಾ ನೀರು ಎರಚಲು ಶುರು ಮಾಡಿದರು. ಎಣ್ಣೆ ನೀರು ಹಾಕಿಕೊಳ್ಳುವ ಸಂಭ್ರಮ. ನನ್ನನ್ನೂ ಎಬ್ಬಿಸಿದರು. ತಡವಾಗಿ ಮಲಗಿದ್ದರಿಂದ ಏಳಲು ಮನಸ್ಸಿರಲಿಲ್ಲ. ಅವರ ಮೇಲೆ ರೇಗಿದೆ. ಅಪ್ಪನಿಗೆ ಸಿಟ್ಟು ಬಂತು. ವರ್ಷಾವರಿ ಹಬ್ಬ, ಬೇಗ ಎಬ್ಬಿಸಿದರೆ ರೇಗ್ತಿಯಲ್ಲಾ... ನಿಂಗೆ ಬೇಡವಾದ್ರೆ ಎಲ್ಲಾದರೂ ಹೋಗೋ... ಎಂದು ಕೂಗಾಡಿದರು. ಕೋಪದಿಂದ ಆ ನಿಮಿಷವೇ ಮನೆಯಿಂದ ಹೊರ ಬಿದ್ದೆ. ಎಲ್ಲಿ ಹೋಗ್ತೀಯೋ ಎಂದು ಕೂಗಿದ ಅಪ್ಪನಿಗೆ ಎಲ್ಲೋ ಎಂದೆ.

ಗವಿಪುರದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ನಡೆದೆ, ತುಂಬಾ ಕತ್ತಲಿತ್ತು. ಹಿಂದಿನ ರಾತ್ರಿ ಎಲ್ಲಾ ಮ್ಯಾಕ್ ಬೆತ್ ಓದಿದ್ದರಿಂದ ತಲೆ ತುಂಬಾ ಕೆಟ್ಟ, ಕೊಲೆಗಡುಕತನದ ಯೋಚನೆಗಳು. ನಮ್ಮಪ್ಪನ ಬಗ್ಗೆ, ಮನೆಯವರೆಲ್ಲರ ಬಗ್ಗೆ ದ್ವೇಷ ಉಕ್ಕಿ ಬಂತು. ಹಾಗೇ ಅಲ್ಲಿ ಇಲ್ಲಿ ತಿರುಗಾಡುತ್ತಾ ಹೋಗಿ ಲಾಲ್‌ಬಾಗ್ ತಲುಪಿದೆ. ಒಂದು ಮರದ ಹತ್ತಿರ ಕುಳಿತೆ. ಇದಕ್ಕಿದ್ದಂತೆ ಕತ್ತಲು ಕರಗತೊಡಗಿತು. ನಸು ಬೆಳಕಿನಲ್ಲಿ ಸುತ್ತುವರಿದ ಮರಗಳು, ಹೂವು, ಬಳ್ಳಿ ಆಕಾರ ತಾಳುತ್ತಾ ಹೋದವು. ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ಅಳಿಲೊಂದು ಮೇಲೆ ಕೆಳಗೆ ಓಡುತ್ತಾ ಆಟವಾಡಿಕೊಳ್ಳುತ್ತಿತ್ತು. ಎಲ್ಲಾ ಎಷ್ಟೊಂದು ಸುಂದರವಾಗಿತ್ತು. ನಿಧಾನವಾಗಿ ಬೆಳಕು ಹರಿಯಿತು. ಐ ಸಾ ದ ಸ್ಪ್ಲೆಂಡರ್ ಆಫ಼್ ದ ಫ಼ೆನಾಮೆನನ್ ಕಾಲ್ಡ್ ಡಾನ್ .ಜೊತೆಗೆ ನನ್ನೆಲ್ಲಾ ಕೆಟ್ಟ ಯೋಚನೆಗಳೂ ಚದುರಿ ಹೋದವು. ಜಗತ್ತೆಲ್ಲಾ ಸುಂದರವಾಗಿ ಕಾಣುತ್ತಿತ್ತು. ನನ್ನ ಬಗ್ಗೆ ನನಗೇ ಜಿಗುಪ್ಸೆ ಬಂದಿತು. ಛೀ, ಎಂಥಾ ಕೆಲಸ ಮಾಡಿದೆ, ಬೆಳಗಾಗೆದ್ದು ಅಪ್ಪನ ಮೇಲೆ, ಒಡಹುಟ್ಟಿದವರ ಮೇಲೆ ಹಾಗೆ ಹಾರಾಡಿದೆನಲ್ಲಾಎಂದುಕೊಂಡು ಇದ್ದು ಮನೆಯ ಕಡೆ ಹೆಜ್ಜೆ ಹಾಕಿದೆ. ದಾರಿಯಲ್ಲಿ ಸಣ್ಣ ಮಕ್ಕಳು ನೀರು ಹಾಕಿಕೊಂಡು, ಸಕ್ಕರೆ ಸರದೊಂದಿಗೆ ಸಡಗರದಿಂದ ಓಡಾಡುತ್ತಿದ್ದರು. ಅವರ ತಲೆ ತುಂಬಾ ಹೂ. ಕತ್ತಲೂ ಎಲ್ಲವನ್ನೂ ಎಷ್ಟು ಇನ್ಫ್ಲುಯೆನ್ಸ್  ಮಾಡಿ ಬಿಟ್ಟಿತ್ತು. ಬೆಳಕು ಬೇರೆಯೇ ಮಾಡಿತಲ್ಲಾ...ಎಂದು ಅಚ್ಚರಿ ಪಡುತ್ತಾ ನಡೆದೆ. ಆ ಅನುಭವದಿಂದ ಹುಟ್ಟಿದ್ದು ನನ್ನ ಮೊದಲ ಕತೆ  ’ಡಾನ್’ ಮ್ಯಾಕ್ ಬೆತ್ ಪ್ರಭಾವ ಇದ್ದಿದ್ದರಿಂದ ಯೋಚನೆಗಳೆಲ್ಲಾ ಇಂಗ್ಲೀಷಿನಲ್ಲೇ ಬಂತು. ಇಂಗ್ಲೀಷಿನಲ್ಲೇ ಬರೆದೆ.

ಇವನು ಹುಟ್ಟಿರೋದೇ ಓದೋಕೇಂತ

ಮೊದಲಿಂದ ನನಗೆ ಓದೋ ಹುಚ್ಚು ಬಹಳ. ನನ್ನ ಸ್ನೇಹಿತರೆಲ್ಲಾ ತಮಾಷೆ ಮಾಡುತ್ತಿದ್ದರು. ಇವನು ಹುಟ್ಟಿರೋದೇ ಓದೋಕೇಂತ. ಅಂಗಡಿ ಪೊಟ್ಟಣ ಕಟ್ಟಿ ಎಸೆದ ನ್ಯೂಸ್ ಪೇಪರ್‌ಗಳನ್ನೂ ಬಿಡಿಸಿ ಓದುತ್ತಿದ್ದೆ. ಮೊರ್ ದ್ಯಾನ್ ರೀಡಿಂಗ್ ಐ ವಾಂಟೆಡ್ ಟು ಸೀ ದ ಲೈಫ಼್ ದಟ್ ವಸ್ ಡಿಪಿಕ್ಟೆಡ್. ಹಾಗೇ ದಾಸ್ತೋವ್ಸ್ಯಿ ಓದಿದ್ದು. ಆಗ ಎಲ್ಲರಿಗೂ ಟಾಲ್‌ಸ್ಟಾಯ್ ಗೊತ್ತಿತ್ತು. ದಾಸ್ತೋವ್ಸ್ಯಿ ಬಗ್ಗೆ ಗೊತ್ತಿರಲಿಲ್ಲ. ನಮ್ಮ ಟೀಚರ್‌ಗಳಿಗೂ ಕೂಡ. ದಾಸ್ತೋವ್ಸ್ಯಿ ಬಗ್ಗೆ ಹೇಳಿದವರು ನಮ್ಮ ಭಾವ. ದಾಸ್ತೋವ್ಸ್ಯಿಯ ’ಕ್ರೈಮ್ ಎಂಡ್ ಪನಿಶ್ಮೆಂಟ್’ ಒಂದು ದಿನ ಸೆಕೆಂಡ್ ಹ್ಯಾಂಡ್ ಅಂಗಡಿಯಲ್ಲಿ ೩ ರೂಪಾಯಿಗೆ ಸಿಕ್ಕಿತ್ತು. ರಾತ್ರಿ  ಹಗಲು ಕೂತು ಓದಿ ೩ ದಿನದಲ್ಲಿ ಮುಗಿಸಿದೆ.  ದಟ್ ಚೇಂಜ್ಡ್ ಮೈ ಎಂಟೈರ್ ಲೈಫ಼್. ಐ ಗೇವ್ ಅಪ್ ಮೈ ಆಂಬಿಶನ್ಸ್ ಟು ಸಕ್ಸೀಡ್ ಇನ್ ಲೈಫ಼್ಟು॒ ಮೇಕ್ ಮನಿ  ॒ಮದುವೆ, ಮಕ್ಕಳು ಎಲ್ಲಾ ಆದದ್ದೂ ಒಂದು ಆಕ್ಸಿಡೆಂಟ್ ಅಷ್ಟೆ!

ಇತ್ತೀಚೆಗೆ ಹೆಚ್ಚಾಗಿ ಓದೋಕಾಗೊಲ್ಲ... ಮೊದಲೆಲ್ಲಾ ಮನೆಯವರು ಕಾಫಿ ಪುಡಿ, ಬೆಣ್ಣೆ ತರಲು ಮಾತುಂಗಾಗೆ ಕಳಿಸಿದರೆ, ಅಲ್ಲಿನ ಪುಟ್‌ಪಾತಿನಿಂದ ರಾಶಿ ರಾಶಿ ಪುಸ್ತಕ ಖರೀದಿ ಮಾಡಿ ಬಂದು ಮನೆಯಲ್ಲಿ ಬೈಸಿಕೊಳ್ತಿದ್ದೆ!


ನಿರಾಶ್ರಿತರಿಗೆ ವಾಲಂಟಿಯರ್
ಆಗ ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಜಪಾನ್ ಎಲ್ಲಾ ಕಡೆ ಬಾಂಬ್ ಮಾಡುವ ಭಯ ಮುತ್ತಿಕೊಂಡಿತ್ತು. ಅಕ್ಕ - ಮಕ್ಕಳನ್ನು ಊರಿಗೆ ಕರೆದುಕೊಂಡು ಬರಲು ನನ್ನನ್ನು ಅಪ್ಪ ಕಲ್ಕತ್ತಾಗೆ ಕಳಿಸಿದರು. ಆಗ ಅಲ್ಲಿ ೨-೩ ತಿಂಗಳು ನಿಲ್ಲಬೇಕಾಯಿತು.

ಆಗ ಇದ್ದಿದ್ದು ಬ್ರಿಟಿಶ್ ಸರ್ಕಾರ. ಯುದ್ಧ ಜೋರಾಗಿ,  ಸಹಸ್ರಾರು ನಿರಾಶ್ರಿತ ಭಾರತೀಯ ಕಾರ್ಮಿಕರು, ಅವರ ಕುಟುಂಬದವರು ದೋಣಿಗಳಲ್ಲಿ ಬರ್ಮಾದಿಂದ(ಮ್ಯನ್ಮಾರ್) ಭಾರತಕ್ಕೆ ಬಂದು ಇಳಿಯ ತೊಡಗಿದ್ದರು. ಕ್ಕೊಲ್ಕತ್ತ ತಲುಪಿದ ಕೂಡಲೇ ಅವರನ್ನು ಇಳಿಸಿಕೊಂಡು ದೇಶದಲ್ಲಿ ಅವರವರ ಊರುಗಳಿಗೆ ಕಳಿಸಲು ಬ್ರಿಟಿಶ್ ಸರ್ಕಾರ ಏರ್ಪಾಟುಗಳನ್ನು ಮಾಡಿತ್ತು. ಆಗ ಅನೇಕ ಸ್ವಯಂ ಸೇವಕರ ನೆರವು ಬೇಕಾಯಿತು. ಆಗ ಕೊಲ್ಕತ್ತಾದಲ್ಲಿದ್ದ ನಾನೂ ನನ್ನ ಕೈಲಾದಷ್ಟು ಸಹಾಯ ಮಾಡೋಣವೆಂದು ಹೆಸರು ಕೊಟ್ಟೆ. ಬಂದಿಳಿದವರಿಗೆ ಅವರವರ ತಾಯಿನುಡಿ ಬಿಟ್ಟರೆ ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ  ಅವರೊಡನೆ ಸಂಪರ್ಕ ಸುಲಭವಾಗಲೆಂದು ಸ್ವಯಂಸೇವಕರನ್ನು ಅವರವರು  ಆಡುವ ಭಾಷೆ ಯ ಮೇರೆಗೆ ಗುಂಪುಗಳನ್ನಾಗಿ ವಿಂಗಡಿಸಲಾಯಿತು. ನಾನು ’ತೆಲುಗು ಸ್ಪೀಕಿಂಗ್ ವಾಲಂಟಿಯರ್’ ಗುಂಪಿಗೆ ಸೇರಿದೆ. ಅಲ್ಲಿ ಬಂದಿಳಿದವರಲ್ಲಿ ಹೆಚ್ಚು ಜನ ಒರಿಸ್ಸಾ, ಆಂಧ್ರಾ ಜನರಿದ್ದರು.

ಆಗ ಭೇಟಿಯಾಗಿ ಇದುವರೆಗೂ ಮನಸ್ಸಿನಲ್ಲಿ ಕೂತುಬಿಟ್ಟಿರುವರು ಇವರಿಬ್ಬರು.  ಒಂದೇ ದೋಣಿಯಲ್ಲಿ ಬಂದಿಳಿದ ಈ ಜೋಡಿ ನನ್ನ ಟೇಬಲ್ಲಿಗೆ ನಡೆದು ಬಂದರು. ಅವಳು ತುಂಬಿದ ಬಸುರಿ. ಆಗಲೇ ನೋವು ಹತ್ತಿತ್ತು. ಭಯದಿಂದ ಅಳುತ್ತಿದ್ದಳು. ನಿಲ್ಲಲಾರದೆ ಒದ್ದಾಡುತ್ತಿದ್ದಳು. ಅವನು ಸಮಾಧಾನ ಮಾಡುತ್ತಿದ್ದ. ಧೈರ್ಯ ಹೇಳುತ್ತಿದ್ದ. ಯಾವುದೋ ಬುಡಕಟ್ಟು ಜನಾಂಗದವರಂತ್ತಿದ್ದ ಅವರು ವಿಚಿತ್ರ ತೆಲುಗು ಮಾತಾಡುತ್ತಿದ್ದರು. ನಾವು ಅವರನ್ನು ಪಬ್ಲಿಕ್ ಆಸ್ಪತ್ರೆಗೆ ವ್ಯಾನಿನಲ್ಲಿ ಕರೆದುಕೊಂಡು ಹೋದೆವು. ದಾರಿಯುದ್ದಕ್ಕೂ ಅವಳು ಅಳುತ್ತಲೇಇದ್ದಳು. ಅವನು ಧೈರ್ಯ ಹೇಳುತ್ತಿದ್ದ. ಪ್ರಯಾಣದ ಮಧ್ಯೆ ಚೆರೂಟ್ ಸೇದಬೇಕೆಂದಳು. ಅವನು ಹತ್ತಿಸಿಕೊಟ್ಟ. ಡಾಕ್ಟರ್ ಅವಳನ್ನು ಪರೀಕ್ಷಿಸಿ ಇನ್ನೂ ಒಂದು ದಿನ ಹೆರಿಗೆಯಾಗಲಾರದೆಂದು ಹೇಳಿ ಹೋದರು.

ಆಗ ನಾವು ಅವರಿಬ್ಬರನ್ನೂ ಕೂಡಿಸಿಕೊಂಡು ಅವರ ವಿವರಗಳನ್ನು ದಾಖಲು ಮಾಡಿಕೊಳ್ಳ ತೊಡಗಿದೆವು. ಆಗ ಅವಳ ಮುಖ್ಯ ಭಯ ಹೊರಬಿತ್ತು.’ನನ್ನ ಹತ್ತಿರ ಹಣ ಇಲ್ಲ. ನಾನು ಒಂದು ಪೈಸಾನೂ ಕೊಡಲಾರೆ’ ಎಂದು ಮತ್ತಷ್ಟು ಅತ್ತಳು.. ನಾವು ಅವನನ್ನು ಹತ್ತಿರ ಕರೆದು ಕೂಡಿಸಿಕೊಂಡು ’ನೀನೇನೂ ಹೆದರಿಕೋಬೇಡ. ಆಸ್ಪತ್ರೆ ಖರ್ಚು, ಔಷಧಿ ವೆಚ್ಚ ಎಲ್ಲಾ ಸರ್ಕಾರ ಕೊಡುತ್ತೆ. ನಾವೇ ನೋಡಿಕೊಳ್ಳುತ್ತೇವೆ. ನಿನ್ನ ಹೆಂಡತಿ ಬಗ್ಗೆ ಏನೂ ಯೋಚನೆ ಮಾಡಬೇಡ. ಹೆರಿಗೆಯಾಗಿ, ಡಾಕ್ಟರ್ ಒಪ್ಪಿಗೆ ಕೊಟ್ಟ ತಕ್ಷಣ ನೀನು ನಿನ್ನ ಹೆಂಡತಿ, ಮಗೂನ ನ ಕರ್ಕೊಂಡು ನಿನ್ನೂರಿಗೆ ಹೋಗಬಹುದು’ ಎಂದೆವು

ಅವನ ಮುಖ ಪೆಚ್ಚಾಯಿತು.’ ಹಂಡತಿಯಾ॒ರು ಹೆಂಡತಿ? ಅವಳು ನನ್ನ ಹೆಂಡತಿ ಅಲ್ಲ..ಎಂದು ಮುಗ್ಧತೆಯಿಂದ ಹೇಳಿದ.

ನನಗೂ ಕೋಪ ಬಂತು. ’ಏನು ಮಾತಾಡ್ತಾ ಇದೀಯಜೊ॒ತೆಜೊತೆಯಾಗಿ ಬಂದಿಳಿದಿದೀರಿಅ॒ವಳನ್ನು ಬಿಡದೆ ನೋಡ್ಕೋತಾ ಇದೀಯಾ.॒ಸಮಾಧಾನ ಮಾಡ್ತಾ ಇದೀಯಾನಾ॒ಚಿಕೆ ಆಗೊಲ್ವಾಅ॒ವಳನ್ನು ಊರಿಗೆ ಕರ್ಕೊಂಡು ಹೋಗು ಅಂದ ತಕ್ಷಣ
ಅವಳು ನನಗೆ ಏನೂ ಅಲ್ಲ ॒ನನ್ನ ಹೆಂಡತೀನೇ ಅಲ್ಲ ಅನ್ನೋಕೆ’॒ ಎಂದು ಬೈದೆ.

ಅವನು ಶಾಂತವಾಗೇ ಹೇಳಿದ. ’ಇಲ್ಲಅಯ್ಯಾ, ನಾವು ದೋಣಿ ಹತ್ತಿದಾಗಲೇ ನಾನು ಮೊದಲ ಸಲ ಅವಳನ್ನು ನೋಡಿದ್ದು. ತುಂಬಿದ ಬಸುರಿ, ನೋವು ತಿನ್ನುತ್ತಿದ್ದಳು, ಒಬ್ಬಂಟಿಯಾಗಿದ್ದಳು, ತುಂಬಾ ಹೆದರಿದ್ದಳು.  ಅವಳ ಜೊತೆ ಯಾರೂ ಇರಲಿಲ್ಲ. ಅವಳಿಗೆ ನಮ್ಮ ಭಾಷೆ ಬಿಟ್ಟರೆ ಏನೂ ಅರ್ಥವಾಗುತ್ತಿರಲಿಲ್ಲ. ಅವಳನ್ನು ಹೇಗಾದರೂ ಮಾಡಿ ಊರು ಸೇರಿಸಬೇಕು ಅಂದುಕೊಂಡೆ ಅಷ್ಟೆ.  ಅವಳು ಯಾರೆಂದು ನನಗೂ ಗೊತ್ತಿಲ್ಲ..’
ಅವನ ಮಾತುಗಳು ಕೇಳಿ ನಾವು ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು

ಯೂ ಸ್ವೈನ್ಸ್!

’ಇನ್ನೊಂದು ಘಟನೆಹೇ॒ಳಲೇಬೇಕು.  ರೆಫ಼್ಯೂಜಿಗಳನ್ನು ತುಂಬಿಕೊಂಡು ಬಂದ ದೋಣಿಗಳು ಬರುತ್ತಲೇ, ತಕ್ಕ ವ್ಯವಸ್ಥೆ ಮಾಡುವ ಉಸ್ತುವಾರಿ ನಡೆಸಲು ಸಲು ಒಬ್ಬ ಬ್ರಿಟಿಶ್ ಅಧಿಕಾರಿಯನ್ನು ನೇಮಿಸಿದ್ದರು.  ಅವನು ಮಹಾ ದರ್ಪದ ಮನುಷ್ಯ. ಕೋಪಿಷ್ಠ. ಅಹಂಕಾರಿ. ಮಾತು ಮಾತಿಗೂ ’ಹಂದಿಗಳಾ!’ ಎಂದು ರೇಗಾಡುವುದು, ನಮ್ಮೆಲ್ಲರಿಗೆ ಕೆಟ್ಟ ಕೆಟ್ಟ ಮಾತು ಬೈಯ್ಯೋದು, ಕೊಂಚ ತಪ್ಪಾದರೂ ಸಿಡಿದೇಳುವುದು ಮಾಡುತ್ತಿದ್ದ. ನಮಗೆಲ್ಲಾ ಅವನನ್ನು ಕಂಡರೆ ಆಗುತ್ತಿರಲಿಲ್ಲ.ಕ್ರೂರಿ,  ರಾಕ್ಷಸ , ಹೃದಯಹೀನ ಪಶು ಎಂದೆಲ್ಲಾ ಅವನ ಹಿಂದೆ ಶಾಪ ಹಾಕುತ್ತಿದ್ದೆವು.

ಅವತ್ತು ನೂರಾರು ಮುದುಕರನ್ನು ಹೊತ್ತ ದೋಣಿಯೊಂದು ಬಂದಿತು. ಎಲ್ಲರೂ ರೋಗ, ನಿತ್ರಾuದಿಂದ ನರಳುತ್ತಿದ್ದವರು. ಅವರೊಬ್ಬರಿಗೂ ಎದ್ದು ನಿಲ್ಲಲೂ ತ್ರಾಣವಿರಲಿಲ್ಲ. ಹಾಗಾಗಿ ನಾವುಗಳು ಎತ್ತಿಕೊಂಡು ಬಂದು ಮಲಗಿಸಬೇಕಾಗಿತ್ತು.
ಆ ಮುದುಕರಿದ್ದ ಸ್ಥಿತಿ ನೋಡಿ ನಾವೆಲ್ಲಾ ಅನುಮಾನಿಸುತ್ತಾ ಹಾಗೇ ನಿಂತು ಬಿಟ್ಟೆವು.’ಈ ಬಿಳಿಯ ಬಂದವನೇ ’ಏನು ಹಾಗೆ ನೋಡ್ತಾ ನಿಂತಿದೀರಾ, ಒಬ್ಬೊಬ್ಬರಾಗಿ ಎಲ್ಲರನ್ನು ಹೊತ್ತುಕೊಂಡು ಹೋಗಿ ಮಲಗಿಸಿ’ ಎಂದು ಆರ್ಡರ್ ಕೊಟ್ಟ.
ದೋಣಿಯ ಹತ್ತಿರ ಹೋದರೇ ಕೆಟ್ಟ ವಾಸನೆ ಹೊಡೆಯುತ್ತಿತ್ತು. ವಾಕರಿಕೆ ಬರುತ್ತಿತ್ತು. ನಿರ್ವಾಹವಿಲ್ಲದೆ, ಹಿಂಜರಿಯುತ್ತಲೇ ಒಬ್ಬೊಬ್ಬರನ್ನಾಗಿ ಎತ್ತಿಕೊಂಡು ಬಂದು ಮಲಗಿಸಿದೆವು. ಕೊನೆಗೊಬ್ಬ ಮುದುಕ ಉಳಿದೇ ಬಿಟ್ಟ.  ತನ್ನದೇ ಹೊಲಸಿನಲ್ಲಿ ಮುಳುಗಿಹೋಗಿದ್ದ ಅವನ ಹತ್ತಿರ ಸುಳಿಯಲೂ ಯಾರೂ ತಯಾರಿರಲಿಲ್ಲ.’
ಅಧಿಕಾರಿಗೆ ರೇಗಿ ಹೋಯಿತು. ’ಯೂ ಸ್ವೈನ್ಸ್,  ಯಾಕೆ ಕಾಯ್ತಿದೀರಿ? ಹೋಗಿ ಅವನನ್ನು ಎತ್ತಿಕೊಂಡು ಬನ್ನಿ!’ ಎಂದು ಘರ್ಜಿಸಿದ. ಆದರು ಯಾರೂ ಒಂದು  ಹೆಜ್ಜೆ ಮುಂದಿಡಲಿಲ್ಲ. ತಲೆ ತಗ್ಗಿಸಿ ನಿಂತು ಬಿಟ್ಟೆವು.

ಮರುಕ್ಷಣವೇ ಅವನು ಮಾತಾಡದೇ ದೋಣಿಯತ್ತ ಹೆಜ್ಜೆ ಹಾಕಿದ. ಬಾಗಿ ಅ ಮುದುಕನನ್ನು ಹಗುರಾಗಿ ಎತ್ತಿ, ಹುಷಾರಾಗಿ ಬೆನ್ನ ಮೇಲೆಹಾಕಿಕೊಂಡು ನಿಧಾನವಾಗಿ ನಡೆದುಬಂದ. ಶಿಬಿರದಲ್ಲಿ ಅವನನ್ನು ಮಲಗಿಸಿ ಏನೂ ಆಗದವನಂತೆ ಮರಳಿಬಂದ. ನಮ್ಮತ್ತ ತಿರುಗಿ, ನಮ್ಮೆಲ್ಲರ ಕೆಲಸ ಮುಂದುವರಿಸಲು ಹೇಳಿದ.

ರವೀಂದ್ರರು ಕನ್ನಡಕ್ಕೆ
ನಾನು ಕೊಲ್ಕತ್ತಾದಲ್ಲಿದ್ದ  ಸಮಯದಲ್ಲಿ ನನ್ನ ಅಕ್ಕನ ಮಕ್ಕಳು. ನೀನು ಶುಭದಾ ಓದಲೇಬೇಕು, ತುಂಬಾ ಚೆನ್ನಾಗಿದೆ ಎಂದು ಒತ್ತಾಯ ಮಾಡಿದರು. ನನಗೆ ಶಾಸ್ತ್ರೋಕ್ತವಾಗಿ ಬಂಗಾಲಿ ಅಕ್ಷರಾಭ್ಯಾಸ ಮಾಡಿಸಿದರು. ೩ ತಿಂಗಳಲ್ಲಿ ಬಂಗಾಲಿ ಕಲಿತೆ. ಶುಭದಾ ಓದಿದಾಗ ತುಂಬಾ ಹಿಡಿಸಿತು. ನಾನು ಕನ್ನಡಕ್ಕೆ ಮೊದಲು ಅನುವಾದ ಮಾಡಿದ ಪುಸ್ತಕ ಅದು. ಅದು ತುಂಬಾ ಜನಪ್ರಿಯವಾಯಿತು.  ಆಮೇಲೆ ಎಷ್ಟೋ ಬಂಗಾಲಿ ಪುಸ್ತಕಗಳನ್ನು ಓದಿದೆ.

ನಾನು ಅನುವಾದ ಸರಿಯಾಗಿ ಪ್ರಾರಂಭಿಸಿದ್ದು ಮುಂಬೈಗೆ ಬಂದ ಮೇಲೆ.. ಆಗ ಕಾವ್ಯಾಲಯದ ಚಿದಂಬರರು ರವೀಂದ್ರ ಕತೆಗಳನ್ನಷ್ಟನ್ನೂ ಕನ್ನಡಕ್ಕೆ ಮಾಡಿಕೊಡುತ್ತೀರಾ ಎಂದು ಕೇಳಿದರು. ಅವರ ಕತೆಗಳನ್ನು ಕನ್ನಡಕ್ಕೆ ತರಬೇಕೆಂಬುದು ನನ್ನ ಬಹುದೊಡ್ಡ ಆಸೆಯಾಗಿತ್ತು. ಮೊದಲಿಂದಲೇ, ಖುಷಿಯಿಂದ ಒಪ್ಪಿದೆ. ಹಾಗೇ ರವೀಂದ್ರ ಕಥಾಮಂಜರಿ ಬಂದದ್ದು. ೩ ಸಂಪುಟಗಳಲ್ಲಿ ಅದು ಮಾಡಿದಾಗ ತುಂಬಾ ತೃಪ್ತಿ ಸಿಕ್ಕಿತು. ಆಮೇಲೆ ಇನ್ನೂ ತುಂಬಾ ಪುಸ್ತಕಗಳನ್ನು ಅನುವಾದ ಮಾಡಿದೆ. ಛೋಕೆರ್‌ಬಾಲಿಯನ್ನು ಅದುವರೆಗೂ ಯಾರೂ ಅನುವಾದ ಮಾಡಿರಲಿಲ್ಲ. ಅಸಾಧಾರಣ ಕೃತಿ ಅದು. ಸಾಹಿಬ್ ಬೀಬಿ ಔರ್ ಗುಲಾಮ್ ಕೂಡ ಅಷ್ಟೆ. ಅದು ಮಾಡುವ ಹೊತ್ತಿಗೆ ಗುರುದತ್ತನ ಸಿನಿಮಾ ಬಂದಿತ್ತು. ಕಾದಂಬರಿ ಇನ್ನೂ ಚೆನ್ನಾಗಿದೆ ’ವಿನೋದಿನಿ’ ೨ ವರ್ಷ ಪಬ್ಲಿಷ್ ಮಾಡಲಾಗದೆ ತೊಂದರೆಯಾಯ್ತು. ಕೊನೆಗೆ ನಿರಂಜನರು ಓದಿ ತುಂಬಾ ಇಷ್ಟಪಟ್ಟರು. ೮ ದಿನದಲ್ಲೇ ಪತ್ರ ಬರೆದರು.

ಮಲೆಯಾಳಂನಲ್ಲಿ ಎಲ್ಲಕ್ಕಿಂತ ಒಳ್ಳೆಯ ಸಾಹಿತ್ಯ ಇದೆ

ನಾನು ಇಂಗ್ಲಿಷ್ ಅಲ್ಲದೆ ತೆಲುಗು, ತಮಿಳು, ಮಲೆಯಾಳಂ, ಬಂಗಾಲಿಯಲ್ಲಿ ಬೇಕಾದಷ್ಟು ಪುಸ್ತಕಗಳನ್ನು ಓದಿದ್ದೇನೆ. ಮಲೆಯಾಳಂ ಸಾಹಿತ್ಯದ ರಿಚ್ ನೆಸ್ ನೋಡಿ ಮಲೆಯಾಳಂ ಕಲಿತೆ. ಆಗ ನನಗೆ ೫೦ ವರ್ಷ. ನಂಬೂದರಿಪಾಡರ ಆತ್ಮಕಥೆ ಅನುವಾದ ಮಾಡಿದೆ. ಸುಮಾರಾಗಿ ಬಂದಿದೆ...

ಮಲೆಯಾಳಂನಲ್ಲಿ ಒಂದು ರೀತಿಯ ಅನನ್ಯತೆಇದೆ. ಡಿಸ್ಟಿಂಕ್ಟ್  ಥಿಂಕಿಂಗ್ ಇದೆ. ಭಾಷೆ ಉಪಯೋಗದಲ್ಲೂ ಅಷ್ಟೆ... ಮಲೆಯಾಳಂನಲ್ಲಿ ಸಂಸ್ಕೃತ ಸೇರಿರುವ ರೀತಿ ತುಂಬಾ ಚೆನ್ನಾಗಿದೆ. ಇಟ್ ಇಸ್ ಅನ್ ಎಕ್ಸಾಲ್ಟೆಡ್ ಲ್ಯಾನ್ಗ್ವೇಜ್. ಅಲ್ಲಿನ ಜನರಿಗೆ ಓದುವ ಹುಚ್ಚಿದೆ. ಇಂಗ್ಲಿಷಿನ ಪತ್ತೇದಾರಿ ಕಾದಂಬರಿಗಳು ಕೂಡ ಮಲೆಯಾಳಂನಲ್ಲಿ ಕಾಣಬಹುದು! ಕನ್ನಡದಲ್ಲೂ ಕೆಲವು ಗ್ರೇಟ್ ವರ್ಕ್ಸ್ ಇವೆ. ಅಂದಿನ ಮಾಡಿದ್ದುಣ್ಣೋ ಮಾರಾಯ, ನಿಸರ್ಗ ಇಂದಿರಾ ಉತ್ಕೃಷ್ಷ ಕೃತಿಗಳು. ಚಿಕ್ಕಂದಿನಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಪುಸ್ತಕಗಳಲ್ಲಿ ಚೋಮನ ದುಡಿ ಮುಖ್ಯವಾದದ್ದು. ಅಲ್ಲದೆ ಕೈಲಾಸಂ ನಾಟಕಗಳು ಮುಖ್ಯವಾಗಿ ಸೂಳೆ. ಆದರೂ... ಕನ್ನಡದಲ್ಲಿ ಜಗತ್ತಿನ ಉತ್ಕೃಷ್ಟ ಸಾಹಿತ್ಯಕ್ಕೆ ಸಾಟಿಯಾಗಿ ನಿಲ್ಲುವ ಕೃತಿಗಳು ಹೆಚ್ಚಿಲ್ಲ ಅನ್ನಿಸುತ್ತೆ. ಕೆಲವು ಇರಬಹುದು. ಹೆಮಿಂಗ್ವೇನ ’ಓಲ್ಡ್ ಮ್ಯಾನ್ ಎಂಡ್ ದ ಸೀ’ರೀತಿಯದು... ಪ್ರಪಂಚದಲ್ಲಿ ಎಲ್ಲರಿಗೂ ತಟ್ಟುವಂಥಾದ್ದು... ಎಷ್ಟಿದೆ? ಎಲ್ಲೋ ಏನೋ ಇನ್ನೂ ಒಂದು ಚೂರು ಬೇಕೆನಿಸುತ್ತದೆ. ಬೇರೆ ಭಾಷೆಗಳಲ್ಲೂ ಅಷ್ಟೆ. ಆದರೆ ಮಲೆಯಾಳಂನಲ್ಲಿ ಮಾತ್ರ ಆ ರೀತಿಯ ಅದ್ಭುತ ಕತೆಗಳಿವೆ. ಆ ಸೂಕ್ಷ್ಮತೆ, ಆ ದೃಷ್ಟಿ ಕೋನ ಎ॒ಬೌಟ್ ದಟ್ ಇಸ್ ಎಟೆರ್ನಲ್ ಇನ್ ಲೈಫ಼್ ಗಹನವಾದ ಒಳನೋಟಗಳು, ಬರೀ ಪ್ರಖ್ಯಾತ ಲೇಖಕರಲ್ಲಿ ಮಾತ್ರವಲ್ಲ, ಇನ್ನೂ ಇದೀಗ ಬರೆಯಲು ಶುರು ಮಾಡಿರುವ ಲೇಖಕರಲ್ಲೂ ಆ ರೀತಿಯ ಇನ್ಸೈಟ್ಸ್ ಇವೆ. ಅಮೇಜ಼ಿಂಗ್ ॒ತಕಳಿ ಶಿವಶಂಕರ ಪಿಳ್ಳೆಯಂಥ ಲೇಖಕರು. ಇಲ್ಲಿಗೆ ಬಂದ ಮೇಲೆ ಕನ್ನಡದಲ್ಲಿ ಹೊಸದಾಗಿ ಬರುತ್ತಿರುವ ಪುಸ್ತಕಗಳು ಅಷ್ಟಾಗಿ ಸಿಕ್ಕೊಲ್ಲ. ಸಿಕ್ಕದ್ದು ಓದುತ್ತೇನೆ.

ಆ ಎತ್ತರ

ಸಣ್ಣ್ಣ ಕತೆ ’ಡಾನ್’ ಇಂಗ್ಲಿಷಿನಲ್ಲಿ ಬರೆದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡಿದೆ. ’ಕತೆಗಾರ’ದಲ್ಲಿ ಬಂತು. ತುಂಬಾ ಜನ ಇಷ್ಟಪಟ್ಟರು. ಅದು ಇಂಗ್ಲಿಷಿನಲ್ಲೂ ಪ್ರಕಟವಾದದ್ದು ಸುಮಾರು ೨೦ ವರ್ಷಗಳ ನಂತರ! ಆಗ ಅದನ್ನು ತುಂಬಾ ಇಷ್ಟಪಟ್ಟ ಓದುಗರೊಬ್ಬರು, ಅದನ್ನು ಕನ್ನಡಕ್ಕೆ ಅನುವಾದ ಮಾಡಿ ’ಕರ್ಮವೀರ’ಕ್ಕೆ ಕಳಿಸಿದ್ದರು! ಅದು ಅವರಿಗೆ ಆಗಲೇ ಕನ್ನಡದಲ್ಲಿ ಬಂದಿದ್ದು ಗೊತ್ತಿರಲಿಲ್ಲ! ಆಮೇಲೆ, ಎಷ್ಟೋ ಕತೆಗಳು, ಕೆಲವು ನಾಟಕಗಳನ್ನು ಬರೆದೆ.

ಆದರೆ ಅನುವಾದ  ಶುರು ಮಾಡಿದ ಮೇಲೆ ಒರಿಜಿನಲ್ ಬಿಟ್ಟ ಹಾಗೇ ಆಯಿತು. ಆದರೆ, ನನಗೆ ರವೀಂದ್ರ ಕಥಾಮಂಜರಿಯಂಥಾ ಶ್ರೇಷ್ಠ ಕೃತಿಗಳನ್ನು ಅನುವಾದ ಮಾಡಿ, ಹೆಚ್ಚು ಜನರಿಗೆ ಮುಟ್ಟಿಸಿದಾಗ ತುಂಬಾ ತೃಪ್ತಿ ಸಿಗುತ್ತೆ. ಐ ಹ್ಯಾವ್ ಬಿಕಮ್ ರಿಯಲಿಸ್ಟಿಕ್. ಕೆಲವರು ಹೇಳುವಂತೆ ಅದು ಥ್ಯಾನ್ಕ್ ಲೆಸ್ ಜಾಬ್ ಅನ್ನಿಸೋಲ್ಲ. ಆದರೆ ’ಅಪರಾಜಿತೆ’ ೧೦ ವರ್ಷಗಳಿಂದ ಹಾಗೇ ಇದೆ. ಪಬ್ಲಿಷರ್‍ಸ್ ಸಿಕ್ಕಿಲ್ಲ.
ಅಷ್ಟೊಂದು ಒಳ್ಳೆ ಕತೆಗಳನ್ನು ಓದಿ,  ಆ ಮಟ್ಟದ ಬರವಣಿಗೆ ಎಕ್ಸ್ಪೀರಿಯನ್ಸ್ ಮಾಡಿದ ಮೇಲೆ ಅದರಲ್ಲಿ ನಾನು ಹತ್ತನೇ ಒಂದರಷ್ಟೂ ಬರೆಯಲಾರೆ ಅನ್ನಿಸುತ್ತೆ.ಪ್ಲಾಟ್ಸ್ ನನ್ನ ತಲೆ ತುಂಬಾ ಇದೆ. ಭಾಷೆ, ಅಭಿವ್ಯಕ್ತಿಯಲ್ಲಿ ಆ ಮಟ್ಟಕ್ಕೆ ಏರಲಾರೆ ಅನ್ನಿಸುತ್ತೆ. ನನಗೀಗೆ ಅಂಥಾ ಆತ್ಮವಿಶ್ವಾಸವೇ ಇಲ್ಲ.॒ಏನಾದರೂ ಅಂಥಾ ಗಹನವಾದದ್ದು, ಯಾರಿಗೂ ಸಿಕ್ಕದ ಆಳ ಸಿಕ್ಕರೆ ಮಾತ್ರ ಬರೀಬೇಕೂಂತ ಅನ್ನಿಸುತ್ತೆ...



-ಉಮಾ ರಾವ್



No comments:

Post a Comment