Monday, July 14, 2014

ಮೋನೆಯ ಮಾಯಾ ಜಗತ್ತು - ಜಿವೆರ್ನಿಗೆ ಒಂದು ಭೇಟಿ

ಮೋನೆಯ ಮಾಯಾ ಜಗತ್ತು

ಜಗತ್ತಿನಲ್ಲಿ ಚಿತ್ರಕಲೆಯ ಪ್ರೇಮಿಗಳಲ್ಲಿ ’ಇಂಪ್ರೆಶನಿಸ್ಟ್’ ಚಿತ್ರಗಳನ್ನು ನೋಡಿ ಮರುಳಾಗದವರು ವಿರಳ. ಯೂರೋಪ್, ಅಮೆರಿಕಾ, ಜಪಾನ್ ಮುಂತಾದ ದೇಶಗಳ ಪ್ರಸಿದ್ದ ಮ್ಯೂಸಿಯಮ್ ಗಳಲ್ಲಿ ಈ ಚಿತ್ರಗಳ ಗಾಲರಿಗಳಿಗೆ ಅಗಾಧ ಸ್ಥಳ ನೀಡಲಾಗಿರುತ್ತದೆ.  ಅಲ್ಲಿ ಸಾವಿರಾರು ನೋಡುಗರು ಬಿಟ್ಟಕಣ್ಣು ಬಿಟ್ಟ ಬಾಯಾಗಿ ಗಂಟೆಗಟ್ಟಳೆ ಆ ಚಿತ್ರಗಳೆದುರಿಗೆ ನಿಂತಿರುವುದನ್ನು ಕಾಣಬಹುದು.
ಕ್ಲಾಡ್ ಮೋನೆ ಎಂಬ ಮಹಾನ್ ಕಲಾವಿದ ೧೯ನೇ ಶತಮಾನದಲ್ಲಿ  ಈ ಫ಼್ರೆಂಚ್ ಇಂಪ್ರೆಶನಿಸ್ಟ್ ಕಲೆಗೆ ತಳಹದಿ ಹಾಕಿದವನು. ನಂತರ ಅದೇ ಕಾಲಘಟ್ಟದಲ್ಲಿ ಹಲವಾರು ಪ್ರತಿಭಾವಂತರು ಈ ಶೈಲಿಯಲ್ಲಿ ವರ್ಣಚಿತ್ರಗಳನ್ನು ಸೃಶ್ಟಿಸಿ ಜಗತ್ತಿನಲ್ಲಿ ಒಂದು ಅಲೆಯನ್ನೇ ಎಬ್ಬಿಸಿದರು.  ವ್ಯಾನ್ ಗೊ, ರೆನ್ವಾ, ಮಾನೆ,   ಸೆಜ಼ಾನ್ ಮುಂತಾದವರನ್ನು ಇಲ್ಲಿ ನೆನೆಸಿಕೊಳ್ಳಬಹುದು. ಇವರೆಲ್ಲ ಸುತ್ತಮುತ್ತಲಿನ ಸೊಬಗು  ತಮ್ಮ ಮನದ ಮೇಲೆ ಮೂಡಿಸಿದ  ಅಚ್ಚುಗಳನ್ನು ತಮ್ಮ ಕುಂಚದ ಹಗುರ ಸ್ಪರ್ಶದಿಂದ ನವಿರು ಬಣ್ಣಗಳಲ್ಲಿ  ಕ್ಯಾನ್ ವಾಸಿನ ಮೇಲೆ ತಂದವರು. ಕ್ಲಾಡ್ ಮೋನೆ  ಹೆಚ್ಚಾಗಿ ಲ್ಯಾಂಡ್ಸ್ಕೇಪ್ಗಳ ಮೂಲಕ ತನ್ನ  ಅಭಿವ್ಯಕ್ತಿಯನ್ನು ವ್ಯಕ್ತ ಪಡಿಸಿರುವವನು.  ಇಂದಿಗೂ ಈ ಇಂಪ್ರ್ಶನಿಸ್ಟ್ ಚಿ ತ್ರಗಳು ತಮ್ಮ ಆಕರ್ಶಣೆಯನ್ನು ಕಳೆದುಕೊಂಡಿಲ್ಲ.

ಮೋನೆಯ ಒಂದು ಲ್ಯಾಂಡ್ ಸ್ಕೇಪ್ ಎದುರು ನಿಂತು ಮರುಳಾದಾಗ ಕಾಲ ಹೋಗುವುದೇ ತಿಳಿಯದೆ ಮೈ ಮರೆಯುತ್ತೇವೆಂದುಕೊಳ್ಳಿ. ಆ ಚಿತ್ರ ಹತ್ತಿರ ಹತ್ತಿರ ಬಂದು ದೊಡ್ಡದಾಗಿ ನಿಜರೂಪ ತಾಳುತ್ತದೆ. ನಾವು ಆ ಚಿತ್ರದ ಒಳಹೊಕ್ಕು ಕಾಲು ಹಾಕತೊಡಗುತ್ತೇವೆ.  ಸುತ್ತುವರಿಯುವ  ವಿಚಿತ್ರ ಬಣ್ಣಗಳ ರಾಶಿ ರಾಶಿ ಹೂಗಿಡಗಳು, ನಡುವೆ ಒಂದು ಕಾಲುದಾರಿ, ಅವುಗಳದೇ ನೋವಿನ ಭಾರದಿಂದ ಬಾಗಿರುವ ವೀಪಿಂಗ್ ವಿಲ್ಲೋ ಮರಗಳು, ಪುಟ್ಟ  ಪುಟ್ಟ ಹಕ್ಕಿಗಳ  ಚಿಲಿಪಿಲಿ, ಪಕ್ಕದಲ್ಲಿ ಅದೆಲ್ಲದರ ಮೇಲೆ ಮಂಜು ಹಾಕಿರುವ ಮುಸುಕು, ಇದೆಲ್ಲವನ್ನೂ ಪ್ರತಿಬಿಂಬಿಸುತ್ತಿರುವ  ಸ್ತಬ್ಧ ನೀಲಿ ಕೊಳ, ಅದರಲ್ಲಿ ತೇಲುತ್ತಿರುವ ವಾಟರ್ ಲಿಲ್ಲಿಗಳು, ಸಾಗಿದಂತೆ ಎದುರಾಗುವ ಒಂದು ವಿಶಾಲ ಬಂಗಲೆ. ಇದೊಂದು ಮಾಯಾ ವಿಶ್ವ. ಇದು ತೆರೆದುಕೊಳ್ಳುವುದು ಪ್ಯಾರಿಸ್ ನಿಂದ ೮೦ ಕಿಲೋಮೀಟರ್ ದೂರದಲ್ಲಿರುವ ಜಿವೆರ್ನಿ ಎಂಬ ಪುಟ್ಟಹಳ್ಳಿಯಲ್ಲಿ.


ಈ ದೃಶ್ಯವನ್ನು ನಾವು ಮೋನೆಯ ಹಲವಾರು ಕಲಾಕೃತಿಗಳಲ್ಲಿ ಕಂಡಿದ್ದೇವೆ. ಸವಿದಿದ್ದೇವೆ. 

ಆದರೆ ವಿಚಿತ್ರವೆಂದರೆ ಇದು ಮೋನೆಯಿಂದ  ಮೂರು  ಬಾರಿ ಸೃಶ್ಟಿಯಾಗಿದೆ. ಒಂದು ಸಲ ಮನದಾಳದಲ್ಲಿ, ಒಂದು ಸಲ ನೆಲದಲ್ಲಿ, ಒಂದುಸಲ ಕ್ಯಾನ್ವಾಸಿನ ಮೇಲೆ. ಅದುವರೆಗೂ ಯುರೋಪಿನ ಬೇರೆ ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದ ಮೋನೆಯ ಕಣ್ಣಿಗೆ ಜಿವೆರ್ನಿ ಎಂಬ ಪುಟ್ಟ ಸುಂದರ ಊರು  ಬಿದ್ದಿದ್ದು ಏಪ್ರಿಲ್ ೧೮೮೩ರಲ್ಲಿ. ಅವನು ವರ್ನನ್ ಮತ್ತು ಗ್ಯಾಸ್ನಿ ಎಂಬ ಊರುಗಳ ನಡುವೆ ರೈಲಿನಲ್ಲಿ ಹೋಗುತ್ತಿದ್ದಾಗ  ಅಕಸ್ಮಾತ್ ಎದುರಾದ ಈ ಸೊಬಗಿನ ಊರು ಅವನಿಗೆ ಅಂತಹ  ಮೋಡಿ ಹಾಕಿತು.

ತಿಂಗಳಲ್ಲೇ ಅವನಲ್ಲಿ ೨ ಎಕರೆ ಸ್ಥಳವನ್ನು ಕೊಂಡ. ಅಲ್ಲಿಯೇ ಮನೆ ಮತ್ತು ಸ್ಟುಡಿಯೋ ಕಟ್ಟಿಸಿಕೊಂಡ ಮೋನೆ  ಅಲ್ಲಿ ಈಗ ನಮಗೆ ಕಾಣ ಬರುವ ಅಷ್ಟೂ ಗಿಡಗಳು, ಮರಗಳು , ಕಾಲುದಾರಿಗಳು, ಕೊಳಗಳ ॒ವಿವರಗಳನ್ನು ತನ್ನ ತೋಟಗಾರರಿಗೆ ಕೊಟ್ಟು ತನ್ನ ಕನಸಿನಲ್ಲಿ ಕಂಡ ನಂದನವನನ್ನು ಸೃಸ್ಟಿಸಿಕೊಂಡ. ಅದಕ್ಕಾಗಿ ಅವನು ಏಳು ಜನ ತೋಟಗಾರರನ್ನು ನೇಮಿಸಿಕೊಂಡಿದ್ದ. ದಿನಾ ಅವರೊಂದಿಗೆ ಕೂತು   ಡಿಜೈನ್ ಮತ್ತು ಲೇ ಔಟುಗಳ ಸೂಕ್ಷ್ಮ ವಿವರಗಳು, ಹಾಕಬೇಕಾದ ಗಿಡಗಳ ಜಾತಿಗಳು,  ತರಬೇಕಾದ ಸಸ್ಯಶಾಸ್ತ್ರದ ಪುಸ್ತಕಗಳು, ಹೂಗಳ ಬಣ್ಣಗಳು  ಎಲ್ಲದರ ಬಗ್ಗೆ ಸೂಚನೆಗಳನ್ನು ಕೊಡುತ್ತಿದ್ದ.   ನಡುವೆ ಅವನ ಹೆಸರಾಂತ ಪೇಂಟಿಂಗ್ ಗಳಲ್ಲಿ ಕಾಣುವ ಜಪಾನ್ ಮಾದರಿಯ ಸೇತುವೆಯನ್ನೂ ಕಟ್ಟಿಸಿದ.  ನಡುವೆ ವಾಸಿಸಲು ತಿಳಿ ಹಸಿರು, ತಿಳಿ ನೀಲಿ, ತಿಳಿ ಗುಲಾಬಿ ಬಣ್ಣಗಳ ಕೋಣೆಗಳುಳ್ಳ  ವಿಶಾಲವಾದ ಮನೆಯನ್ನೂ, ಪಕ್ಕದಲ್ಲೇ ಕೆಲಸಮಾಡಲು ಅಚ್ಚುಕಟ್ಟಾದ ಸ್ಟುಡಿಯೋ ವನ್ನೂ ನಿರ್ಮಿಸಿದ. ಇದೆಲ್ಲಾ ಅವನು ಮಾಡಿಕೊಂಡಿರುವುದು ತನಗೆ ಕನಸಿನಲ್ಲಿ ಕಂಡ  ಆ ಲೋಕವನ್ನು ಮೊದಲು ಸೃಷ್ಟಿಸಿ ನಂತರ ಬಣ್ಣಗಳಲ್ಲಿ ಕ್ಯಾನ್ವಾಸ್ ಮೇಲೆ ಅದನ್ನು  ಹಿಡಿದಿಡಬೇಕೆಂಬ ಹುಚ್ಚು ಅಷ್ಟೊಂದು ಇದ್ದಿದ್ದರಿಂದ! ಹಿಮಾಲಯ ಕಂಡು ಮಾರು ಹೋದ ರೋರಿಚ್ ನಂತಹ ಶ್ರೇಷ್ಠ ಕಲಾವಿದರು ಕುಲು ನಲ್ಲೇ ತಳ ಊರಿ,  ಮನೆ, ಸ್ಟುಡಿಯೊ ಕಟ್ಟಿ ಅಲ್ಲೇ ಇದ್ದು ರಾಶಿ ರಾಶಿ ಚಿತ್ರಗಳನ್ನು ಬಿಡಿಸಿದ್ದು ನೋಡಿದ್ದೆ. ಆದರೆ ತಾನು ಕನಸಿನಲ್ಲಿ ಕಂಡ  ಚಿತ್ರವನ್ನು ನಿಜವಾಗಿ ಸೃಶ್ಟಿಸಿ ಮತ್ತೆ ತನ್ನ ಕುಂಚದಲ್ಲಿ ಮರು ಸೃಶ್ಟಿ ಮಾಡಿದವ ಮೋನೆ ಒಬ್ಬನೇ ಇರಬೇಕು. ಜಿವೆರ್ನಿಯಲ್ಲಿ ತನ್ನ ಬದುಕಿನ ಕೊನೆಯ ವರೆಗೂ ವಾಸಿಸುತ್ತಿದ್ದ ಮೋನೆ ಅಲ್ಲೇ ಮಣ್ಣ್ಣಾಗಲೂ ಬಯಸಿದ್ದ. ಅಲ್ಲಿ ಅವನು ಬಿಡಿಸಿದ ಪ್ರಖ್ಯಾತ  ಚಿತ್ರಗಳಲ್ಲಿ ಕೆಲವೆಂದರೆ ರೋಯೆ ಕಥೀಡ್ರಲ್, ಪಾಪ್ಲರ್ಸ್, ದ ಪಾರ್ಲಿಮೆಂಟ್ ಮತ್ತು ವಾಟರ್ ಲಿಲೀಸ್. ತನ್ನ ತೋಟ ಮತ್ತು ಹೂಗಿಡಗಳನ್ನು, ಹುಲ್ಲಿನ ಬಣವೆಗಳನ್ನು  ದಿನದ ಬೇರೆ ಬೇರೆ ಸಮಯದಲ್ಲಿ , ಬೇರೆ ಬೇರೆ ಬೆಳಕಿನಲ್ಲಿ ಬಿಡಿಸುವುದು ಅವನ ಹವ್ಯಾಸವಾಗಿತ್ತು.


ನಾವು ಪ್ಯಾರಿಸ್ಸಿನಿಂದ ಜಿವೆರ್ನಿಗೆ ಬೆಳಿಗ್ಗೆ ಬಸ್ ನಲ್ಲಿ ಹೊರಟು ಸಂಜೆ ಮರಳಿ ಬರುವ ಡೇ ಟ್ರಿಪ್ ಬುಕ್ ಮಾಡಿದ್ದೆವು. ಬಸ್ಸಿನ ತುಂಬಾ ಜಗತ್ತಿನ ಬೇರೆ ಬೇರೆ ದೇಶಗಳಿಂದ ಬಂದ ಜನರಿಗೆ ಅರ್ಥವಾಗುವಂತೆ ಕಾಮೆಂಟರಿ ಹೇಳಲು ಬೇರೆ ಬೇರೆ ಭಾಷೆ ಮಾತಾಡುವ ಗೈಡುಗಳು. ನಮ್ಮ ಗೈಡ್ ಸುಮಾರು ೫೫ ವರ್ಷದ ಪೋರ್ಚುಗೀಸ್ ಮನುಷ್ಯ. ಅವನು ಹರಕು ಮುರುಕು ಇಂಗ್ಲಿಶಿನಲ್ಲಿ ವಿವರಗಳನ್ನು ಕೊಡುವ ಕೆಲಸವನ್ನೂ ನಿಭಾಯಿಸುತ್ತಿದ್ದ.  ಮೋನೆಯ ದೊಡ್ಡ ಅಭಿಮಾನಿಯಾಗಿದ್ದ ಅವನು ತಂಬಾ ಅಕ್ಕರೆಯಿಂದ ತನಗೆ ತಿಳಿದ ವಿಶಯಗಳನ್ನೆಲ್ಲ ಬೇಸರವಿಲ್ಲದೆ ಹೇಳುತ್ತಿದ್ದ. ಅವನು ಪೋರ್ಚುಗೀಸ್ ಭಾಶೆಯ ರಾಗದಲ್ಲಿ  ’ಕ್ಲಾಡ್ ಮೋನೆ..ಆ.., ಜಿವೆರ್ನಿಅ॒,॒ ಜೀನಿಯಸ॒,॒ ಲವ್ಡ್ ಗುಡ್ ಫ಼ುಡ್, ಗುಡ್ ವೈನ್, ಗುಡ್ ಫ಼್ರೆನ್ಡ್ಜಾ॒..’ ಎಂದು ಇಂಗ್ಲಿಶ್  ಮಾತಾಡುತ್ತಿದ್ದುದು ತಮಾಶೆ ಅನ್ನಿಸುತ್ತಿತ್ತು. ಜಿವರ್ನಿಯಲ್ಲಿ ಇಳಿದಾಗ ನಮ್ಮ ಕೈಯ್ಯಿಗೆ ಮ್ಯಾಪ್ ಕೊಟ್ಟು ಎಲ್ಲಾ ವಿವರಗಳನ್ನು ಹೇಳಿ ತಿರುಗಾಡಲು ಬಿಟ್ಟರು. ಒಳಗೆ ನಡೆದಂತೆ ಆ ಹಸಿರು ಸ್ವರ್ಗವನ್ನು ಅನುಭವಿಸುವ ಖುಶಿ ನಮ್ಮದಾಯಿತು. ಈಗ ಮ್ಯೂಜಿಯಮ್ ಎನ್ನಿಸಿಕೊಂಡು ಜನಸಮುದಾಯಕ್ಕೆ ಸ್ವಾಗತ ನೀಡುವ  ಅವನು ಹೆಂಡತಿ, ಮಕ್ಕಳೊಂದಿಗೆ ಇದ್ದ ಮನೆಯನ್ನು ಅವರು ಬಳಸುತ್ತಿದ್ದ ಮೇಜು, ಕುರ್ಚಿ, ಮಂಚಗಳು, ಅಡಿಗೆಮನೆಯ ತಾಮ್ರದ ಪಾತ್ರೆಗಳು, ಆ ಕಾಲದ ಒಲೆ ಎಲ್ಲ ಸೇರಿದಂತೆ ಹಾಗೇ ಇಟ್ಟಿದ್ದಾರೆ.
ಎಲ್ಲೆಲ್ಲೂ ಫೋಟೋ ತೆಗೆಯುವವರು, ಹಲವಾರು ಕೋನಗಳಿಂದ ಚಿತ್ರ ಬಿಡಿಸುವ ಕಲಾವಿದರು.
ಮನೆಯೊಳಗೆ ಗೋಡೆಗಳನ್ನು ಅಲಂಕರಿಸಿರುವುದು ಅವನ ಜ್ಯಾಪನೀಸ್ ಸ್ಕೆಚ್ ಗಳು. ಆದರೆ ಅವುಗಳು ಒರಿಜಿನಲ್ ಅಲ್ಲ, ಮೋನೆ ಸ್ವತಃ ಚಿತ್ರಿಸಿದ್ದಲ್ಲ,ಸುರಕ್ಷತೆಯ ದೃಷ್ಟಿಯಿಂದ ಒರಿಜಿನಲ್  ಗಳನ್ನು ಇಟ್ಟಿಲ್ಲ ಎಂದು ಅಲ್ಲಿ ನಿಂತಿದ್ದ ವಾಲಂಟಿಯರ್ ವಿವರಿಸಿದಳು. ಜೊತೆಗೆ ಮೋನೆಗೆ ವೃಧ್ಯಾಪ್ಯ ಹತ್ತಿರವಾದಂತೆ ದಿನವೂ ವಾಟರ್ ಲಿಲ್ಲಿಗಳ ನೂರಾರು  ಚಿತ್ರಗಳನ್ನು ಪೇಂಟ್ ಮಾಡಿ ಹರಿದು ಹಾಕುತ್ತಿದ್ದ ಎಂಬ ಅವನ ವೈಯಕ್ತಿಕ ಬದುಕಿನ ಬೆಚ್ಚಿಸುವ ವಿವರ ಒಂದನ್ನೂ ತೆರೆದಿಟ್ಟಳು.


ಅರ್ಥವಾಗದ ವಿಶಾದ ಮನಸ್ಸಿನಲ್ಲಿ ತುಂಬಿಕೊಂಡು ಅದೇ ಗುಂಗಿನಲ್ಲಿ ಮರಳಿ ಬಸ್ಸಿಗೆ ಬಂದಾಗ ಮೋನೆ ಯನ್ನು ಹಿಂಬಾಲಿಸಿ ಹಲವಾರು ಕಲಾವಿದರು ಜಿವೆರ್ನಿಗೆ ಬಂದ ಕತೆ ನಮ್ಮ ಗೈಡ್ ಹೇಳಲು ಪ್ರಾರಂಭಿಸಿದ. ಮೋನೆ ಅಲ್ಲಿ ಬಂದು ವಾಸಿಸಲು ತೊಡಗಿದ ಮೇಲೆ ಅಲ್ಲಿ ಇರುವುದು ಹೆಮ್ಮೆಯ ವಿಶಯವಾಗಿ ಹೋಯಿತು, ಹಾಗಾಗಿ ಯೂರೊಪಿನ  ಹಲವಾರು ಕಲಾವಿದರು ಅಲ್ಲೇ ತಳ ಊರಿದರು  ಎಂದು ವಿವರಣೆ ಕೊಟ್ಟ. ಆಗಿನ ಕಾಲದಲ್ಲಿ ತುಂಬಾ ಪ್ರತಿಭಾವಂತ ಕಲಾವಿದರು ಬಡತನದಲ್ಲಿಯೇ ಬದುಕಿ ಬಡತನದಲ್ಲಿಯೇ ತೀರಿಹೋದರು, ಆದರೆ ಮೋನೆ ಗೆ ಜಗತ್ತಿನಾದ್ಯಂತ, ಅಮೆರಿಕಾ, ರಶ್ಯಾ  ಅಂಥಾ ದೇಶಗಳ ಶ್ರೀಮಂತರೂ ಅಭಿಮಾನಿಗಳಾಗಿದ್ದರಿಂದ, ಅವರೆಲ್ಲ ಸಾವಿರಾರು ಡಾಲರ್ ಕೊಟ್ಟು ಅವನ ಕ್ರೃತಿಗಳನ್ನು ಕೊಳ್ಳುತ್ತಿದ್ದರು,ಹಾಗಾಗಿ ಅವನು ಕನಸು ಕಂಡಂತೆಯೇ  ಬದುಕಿದ ಎಂದು ನಮ್ಮ ಗೈಡ್ ಹೆಮ್ಮೆಯಿಂದ ಹೆಳುತ್ತಿದ್ದಂತೆ ಬಸ್ಸು ಪ್ಯಾರಿಸ್ ಕಡೆಗೆ ಹೊರಟಿತ್ತು.

-ಉಮಾ ರಾವ್(೨೦೦೮)