Monday, March 31, 2014

ಟೇಬಲ್ ಸ್ಪೇಸ್











ಟೇಬಲ್ ಸ್ಪೇಸ್

ಯಶವಂತ ಚಿತ್ತಾಲರ ನೆನಪಿನಲ್ಲಿಒಂದು ಟಿಪಿಕಲ್ ಮುಂಬೈ ಕತೆ



ಮುಂಬೈ ಫೋರ್ಟ್ ಪ್ರದೇಶದಲ್ಲಿರುವ ಖ್ಯಾತ ಫಿರೋಜ಼್ ಶಾ ಮೆಹ್ತಾ ರಸ್ತೆಯ  ಬದಿಯ ಗನ್ ಬೋ ಸ್ಟ್ರೀ ಟ್ ಎಂಬ ಸಣ್ಣ ಗಲ್ಲಿಯಲ್ಲಿದ್ದ  ೧೯೩೫ ರಲ್ಲಿ ಕಟ್ಟಿದ್ದ ’ರುಸ್ತ್ಂ ಬಿಸ್ಡಿಂಗ್’ ಮನ್ಸೂನಿನ ಮಳೆಯ ಹೊಡೆತ ತಡೆಯಲಾರದೆ ಕುಸಿದು ಬಿದ್ದಿತೆಂಬ ನ್ಯೂಸ್ ತಣ್ಣಗೆ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಕುಳಿತು ಓದಿದಾಗ ಮೊದಲು ನೆನಪಾದದ್ದು ಗೋಪಿ ಪ್ರಸಾದನದು. ನಾನು ಮುಂಬೈ ಸೇರಿ ಕೆಲಸ ಮಾಡಲು ಪ್ರಾರಂಭ ಮಾಡಿದ ದಿನಗಳಿಂದ ಮತ್ತೆ ತಾಯ್ನಾಡಿಗೆ  ವಾಪಸ್ಸಾಗುವವರೆಗೂ ಸುಮಾರ್ ೧೦ ವರ್ಶಗಳ ಕಾಲ ಅವನೊಡನೆ ನನಗೆ ನಿರಂತರ ಸಂಪರ್ಕವಿತ್ತು.

ತಾನು ಕ್ರಿಷ್ಚಿಯನ್ ಧರ್ಮಕ್ಕೆ ಸೇರಿದವನೆಂದು ಹೇಳುತ್ತಿದ್ದ ಗೋಪಿ ಪ್ರಸಾದ್ ಬರ್ಮಾದಲ್ಲಿ ಹುಟ್ಟಿ ಎರಡನೇ ಮಹಾಯುಧ್ಧದ ನಂತರ  ತಂದೆ ತಾಯಿಯರೊಡನೆ ಕೊಚಿನ್ ಗೆ ಬಂದು, ಮಲೆಯಾಳಂ ಕಲಿತು, ಬಿಎ ಮಾಡಿ,  ಅವರ ನಿಧನದ ನಂತರ ಕೆಲಸ ಹುಡುಕಿ ಕೊಂಡು ಮುಂಬೈಗೆ
ಬಂದು ದಿನನಿತ್ಯಕ್ಕೆ ಬೇಕಾಗುವಷ್ಟು ಮರಾಟಿ ಮಾತಾಡುವುದನ್ನೂ ಕಲಿತಿದ್ದ. ಶುದ್ಧ ಇಂಗ್ಲಿಶ್ ನಲ್ಲಿ ಅಲಂಕಾರಿಕ ವಾಕ್ಯಗಳನ್ನು ರೆಯಬಲ್ಲವನಾಗಿದ್ದು ೭೦,೮೦ರ ದಶಕಗಳ ಅಡ್ ವಟೈಝಿಂಗ್  ಕ್ಶೇತ್ರದ ಬೇಡಿಕೆಗಳಿಗೆ ಹೊಂದುವಷ್ಟು ಪ್ರತಿಭೆ ಹೊಂದಿದ್ದ.
ಹಾಗಾಗಿ ಫ಼್ರೀ ಲಾನ್ಸ್ ಕಾಪಿರೈಟಿಂಗಿನಲ್ಲಿ ಹೊಟ್ಟೆ ಹೊರೆಯುವಶ್ಟು ದುಡ್ಡು ಮಾಡಿಕೊಳ್ಳುವುದು ಅವನಿಗೆ ಸಾಧ್ಯವಾಗಿತ್ತು.

ಆ ಕಾಲದಲ್ಲಿ ಇವನಂತೆ ಕೆಲಸ ಹುಡುಕಿಕೊಂಡು ಬಂದ ಯುವಕರು ತಮ್ಮ ಯುವ ಹೃದಯಗಳೊಳಗೆ ನಾರಿಮನ್ ಪಾಯಿಂಟ್ನಲ್ಲೋ, ಫ಼್ಲೋರಾ ಫ಼ೌಂಟನ್ ನಲ್ಲೋ ಪಾಶ್ ಅನ್ನಿಸಿಕೊಳ್ಳುವ ತಮ್ಮದೇ ಆಫ಼ೀಸನ್ನು ಹೊಂದುವ , ಇಲ್ಲವೇ ಮೊದಲು ಬಾಡಿಗೆಗೆ  ಪಡೆಯುವ, ಇಲ್ಲವೇ ಅಲ್ಲಿರುವ ಕಂಪನಿಗಳಲ್ಲಿ  ಕೆಲಸ ಗಿಟ್ಟಿಸಿಕೊಳ್ಳುವ ಕನಸುಗಳನ್ನು ಹೊತ್ತೇ ಬರುತ್ತಿದ್ದರು. ಇವರಲ್ಲಿ ಹೆಚ್ಚಾಗಿ ಕಮರ್ಶಿಯಲ್ ಆರ್ಟಿಸ್ಟ್ ಗಳೂ, ಟೈಪಿಸ್ಟ್ ಗಳು, ಅಡ್ ವಟೈಜಿಂಗ್ ಕಾಪಿರೈಟರ್ ಗಳು, ಅಕೌಂಟೆಂಟುಗಳು, ಹೀಗೇ ಸೆಲ್ಫ್ ಎಂಪ್ಲಾಯ್ದ್ ಆಗುವ ಸಾಧ್ಯತೆಯವರು ತಮ್ಮದೇ ಜಾಗಕ್ಕಾಗಿ ಹಪಹಪಿಸಿತ್ತಿದ್ದರು. ಅದರೆ ಮುಂಬೈ ಒತ್ತಡ, ಸ್ಪರ್ಧಾತ್ಮಕ ಶೈಲಿಯ ಬದುಕಿನ ಜಂಜಡದಲ್ಲಿ ಹೋರಾಡಿ ಒಂದೊಂದಾಗಿ ತಮ್ಮ ಕನಸುಗಳನ್ನು ಕೈಬಿಡಲು ಅವರಿಗೆ ಹೆಚ್ಚು ಕಾಲ ಬೇಕಾಗುತ್ತಿರಲಿಲ್ಲ.
ಇಂಥವರ ಸಮಸ್ಯೆಗೆ  ಪರಿಹಾರ ನೀಡಲು ಮುಂಬೈ ತಯಾರಾಗಿಯೇ ಇತ್ತು. ಫ಼ೋರ್ಟ್ ಪ್ರದೇಶದ ಕಿರಿದಾದ ಗಲ್ಲಿಗಳಲ್ಲಿ ನಿಂತಿದ್ದ ಮೂರು-ನಾಲ್ಕು ಮಹಡಿಯ ಕಟ್ಟಡಗಳಲ್ಲಿ ಕುಟುಂಬಗಳು ಕಡಿಮೆಯಾಗಿ  ಆ ಫ಼್ಲ್ಯಾಟುಗಳಲ್ಲಿ  ನಿಧಾನವಾಗಿ ಪುಟ್ಟ ಪುಟ್ಟ ಆಫ಼ೀಸುಗಳು  ತಲೆ ಎತ್ತಿದುವು. ಕಾಲು ತೆಗೆಯದೆ ಅಲ್ಲೇ ಕಚ್ಚಿ ಕೊಂಡಿದ್ದ ಒಂದೊಂದು ಗುಜರಾತಿ, ಮರಾಠಿ  ಸಂಸಾರಗಳು ತಮ್ಮ ಒಂದು ರೂಮಿನ ಫ಼್ಲಾಟಿನಲ್ಲಿ ದಿನಾ ಒಂದು ಗಂಟೆಗೆ ಸರಿಯಾಗಿ ಮಾಡುವ ಬಿಸಿಬಿಸಿ ರೊಟ್ಟಿಗಳ ಘಮ,೪ ಗಂಟೆಗೆ ಕುದಿಸುವ ಚಹಾದ ಪರಿಮಳ ಆ ಮನೆಗಳಿಂದ ಈ ಆಫೀಸುಗಳ ತುಂಬಾ ಹರಿದು ಎಲ್ಲರ ಹಸಿವನ್ನು ಹೊಡೆದೆಬ್ಬಿಸುತ್ತಿತು.

ಈ ಫ಼್ಲ್ಯಾಟುಗಳ ಒಡೆಯರು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು  ನಾಲ್ಕು, ಆರು, ಎಂಟು ಟೇಬಲ್ ಸ್ಪೇಸ್ ಗಳನ್ನಾಗಿ ಪರಿವರ್ತಿಸಿ  ಬಾಡಿಗೆಗೆ ಕೊಡ ತೊಡಗಿದರು. ಅಂದರೆ ಫ಼್ಲಾಟಿನ ಮಾಲಿಕರು ಅದನ್ನು ಮೂರು ಅಡಿ ಉದ್ದ ಮೂರು ಅಡಿ ಅಗಲದ ಸ್ಥಳಗಳನ್ನಾಗಿ ಪರಿವರ್ತಿಸಿ,ಅದರಲ್ಲಿ ಒಂದೊಂದು ಟೇಬಲ್ ಹಾಕಿದರು.  ಅದರ ಮೇಲೆ ಅವರವರ ಕೆಲಸಕ್ಕೆ ತಕ್ಕಂತೆ, ಟೈಪ್ ರೈಟರ್, ಡ್ರಾಯಿಂಗ್ ಬೋರ್ಡ್, ಫ಼ೈಲ್ ಗಳು, ಸ್ಟ್ಯಾಂಪ್ ಪೇಪರುಗಳು,  ಪೈಂಟಿಂಗ್ ಸಲಕರಣೆಗಳು ಏನು ಬೇಕಾದರೂ  ಇಟ್ಟುಕೊಳ್ಳಬಹುದಿತ್ತು. ಉದಾಹರಣೆಗೆ  ವಿಳಾಸ: ೪, ಫ್ಲ್ಯಾಟ್ ೧೧, ರುಸ್ತಮ್ ಬಿಲ್ಡ್ಡಿಂಗ್ ರೀತಿ ಇದ್ದರೆ ಆ ನಂಬರ್ ೪ ಹೊರಗಿನವರಿಗೆ ಅಫೀಸಿನ ನಂಬರ್ ಅನ್ನಿಸಿದರೂ ಅದು ಟೇಬಲ್ ನಂಬರ್ ಮಾತ್ರ ಆಗಿರುತ್ತಿತ್ತು. ಆದರೆ ಅಲ್ಲಿ ಕೆಲಸ ಮಾಡುವವರನ್ನು ಯಾರಾದರೂ ಎಲ್ಲಿ ಕೆಲಸ ಮಾಡ್ತೀಯಾಂತ  ಕೇಳಿದಾಗ ರೋಪಾಗಿ ಫ಼ೋರ್ಟ್ ಏರಿಯಾ ಅನ್ನಬಹುದಿತ್ತು.

ಈ ರೀತಿ ಇದ್ದ ಒಂದು  ಫ಼್ಲ್ಯಾಟನ್ನು ಅಗ್ಗದ ಬಾಡಿಗೆಗೆ ಗಿಟ್ಟಿಸಿದ್ದವನು  ಕೊಂಕಣಿ ನೀಲಕಾಂತ್ ಅಮೋನ್ಕರ್. ದೇವಾನಂದನಂತೆ ನಡೆಯುತ್ತಿದ್ದ  ಅವನು ಆರಡಿ ಎತ್ತರವಿದ್ದ .  ಮನೆಯಲ್ಲೇ ಬಣ್ಣ ಹಚ್ಚುತ್ತಿದ್ದ ಅವನ ಕೂದಲು ಅಲೌಕಿಕ ಕಪ್ಪು ಬಣ್ಣವಿದ್ದು ಬೈತಲೆಯ ಅತ್ತ ಇತ್ತ ಮಾತ್ರ ಬೆಳ್ಳಗಿರುತ್ತಿತ್ತು.  ಅವನು ಅಲ್ಲಿ ೪ ಟೇಬಲ್ಗಳನ್ನು ಹಾಕಿ ಬಾಡಿಗೆಗೆ ಕೊಟ್ಟಿದ್ದ. ಅದರ ನಡುವೆ ಒಂದು ಬಿಳಿ ಸನ್ ಮೈಕಾ ಟೇಬಲ್ ಹಾಕಿ ರಿಸೆಪ್ಶನಿಸ್ಟ್ ಎಂಬ ಫಲಕ ಇಟ್ಟು, ಅದರಲ್ಲಿ ಅಲ್ಕಾ ಎಂ ಕಪ್ಪು ಸಿಂಧಿ ಹುಡುಗಿಯೊಬ್ಬಳನ್ನು ತಂದು ಕೂಡಿಸಿದ್ದ.  ಜೊತೆಗೆ ಅಲ್ಲೇ ಒಂದು ಅಟ್ಟ ಕಟ್ಟಿಸಿ , ಚಿಕ್ಕ ಕ್ಯಾಬಿನ್ ಒಂದನ್ನು ಮಾಡಿಸಿ,  ಅದಕ್ಕೆ ಒಂದು ಫೋನು, ಒಂದು ಕುರ್ಚಿ, ಒಂದು ಟ್ಯೂಬ್ ಲೈಟ್, ಒಂದು ಪುಟ್ಟ ಫ್ಯಾನ್ ಸಿಕ್ಕಿಸಿ ಚೇರ್ಮನ್ ಅಂಡ್ ಎಮ್ ಡಿ, ಅಮೋನ್ಕರ್ ಎಸ್ಸೋಸಿಯೇಟ್ಸ್ ಎಂದು ಬೋರ್ಡು ತಗುಲಿಸಿದ್ದ. ಅಲ್ಲಿಂದ ಅವನು ಬೇರೆ ಬೇರೆ ರೀತಿಯ ದಂಧೆಗಳನ್ನು ಮಾಡುತ್ತಿದ್ದ. ಚಿಕ್ಕ ಚಿಕ್ಕ ಬಿಸಿನೆಸ್ ಗಳನ್ನು ಕುದುರಿಸಿ ಕೊಡುವುದು, ಸಣ್ಣ ೫ ಬೈ ೨ ಜಾಹೀರಾತುಗಳನ್ನು ಮರಾಠಿ ಪೇಪರುಗಳಲ್ಲಿ ಹಾಕಿಸಿಕೊಡುವುದು, ಅದನ್ನು ತಮ್ಮಲ್ಲೇ ಬಾಡಿಗೆಯಿದ್ದವರ ಕೈಯ್ಯಲ್ಲಿ ತಯಾರಿ ಮಾಡಿಸುವುದು, ಅಡ್ವಟೈಜಿಂಗ್ ಏಜೆನ್ಸಿಗಳಿಗೆ ಆರ್ಟಿಸ್ಟ್ ಗಳನ್ನು, ಮಟೀರಿಯಲ್ ಗಳನ್ನು ಸಪ್ಲೈ ಮಾಡುವುದು ಹೀಗೆ. ಎಲ್ಲದರಲ್ಲೂ ಅವನ ಕಮಿಶನ್ ಇರುತ್ತಿತ್ತು.  ಅಲ್ಕಾ ಅಲ್ಲಿ ಕೆಲಸ ಮಾಡುವವರಿಗೆ ಬರುವ  ಫೋನ್ ಮೆಸೇಜುಗಳು, ಪತ್ರಗಳು, ಡಾಕ್ಯುಮೆಂಟುಗಳನ್ನು ವ್ಯವಸ್ಥಿತವಾಗಿ ಇಟ್ಟು ಅವರವರಿಗೆ ಕೊಡುತ್ತಿದ್ದಳು. ಬರ್ತ್ ಡೇ ಗಳು ಬಂದಾಗ ಎಲ್ಲರಿಗೂ ಚೂಡಾ, ಲಡ್ಡು, ಚಹಾ ಆರ್ಡರ್ ಮಾಡುತ್ತಿದ್ದಳು.

ಗೋವಾ ದಿಂದ, ಮಂಗಳೂರಿನಿಂದ ಕೆಲಸ ಹುಡುಕಿಕೊಂಡು ಬಂದ ಹುಡುಗರು ಮೊದಲು ತಮ್ಮ ಹೆಸರು, ಕಾಂಟ್ಯಾಕ್ಟ್ ನಂಬರನ್ನು ಅಮೋನ್ಕರ್ ಹತ್ತಿರ ಬಿಟ್ಟಿರುತ್ತಿದ್ದರು. ಚಿಕ್ಕ ಪುಟ್ಟ ಆಫೀಸುಗಳಲ್ಲಿ ವೇಕೆನ್ಸಿಗಳು ಬಂದರೆ ಅವರು ಸಂಪರ್ಕಿಸುತ್ತಿದ್ದುದು ಅಮೋನ್ ಕರ್ ನನ್ನೆ.  ಗೋವಾ ಕೊಂಕಣಿಗಳೆಂದರೆ ಅವನಿಗೆ ಮಂಗಳೂರು ಕೊಂಕಣಿಗಳಿಗಿಂತ ಹೆಚ್ಚು ಪ್ರೀತಿ ಎಂಬ ಪ್ರತೀತಿಯೂ ಇತ್ತು.  ಆದರೆ ಅವನಿಗೆ ಗ್ಯಾರಂಟಿ ಆದಾಯ ತಂದು ಕೊಡುತ್ತಿದ್ದುದು ಈ ಟೇಬಲ್ ಸ್ಪೇಸ್ ಗಳು. ಎಂದೂ ಅವು ಖಾಲಿ ಇರುತ್ತಲೇ ಇರಲಿಲ್ಲ. ಬದಲು ಒಂದು ವೈಟಿಂಗ್ ಲಿಸ್ಟ್ ಇರುತ್ತಿತ್ತು. ಅದು ಸರಿಯಾದ  ಆರ್ಡರ್ನಲ್ಲೇ ಮಂದುವರಿಯುತ್ತಿದ್ದು ಗೋವಾ ಕೊಂಕಣಿಗಳು ಬಂದರೆ ಮಾತ್ರ ಏರುಪೇರಾಗುತ್ತಿತ್ತು.

ನಾನು ಕೆಲಸ ಮಾಡುತ್ತಿದ್ದ ಅಡ್ವಟೈಜಿಂಗ್ ಏಜೆನ್ಸಿಯ ಒಡೆಯ  ಫ಼್ರಾಂಕ್ ನರೋನ್ಹಾ ಕೂಡಾ ಒಬ್ಬ ಗೋವಾ ಕೊಂಕಣಿಯೇ ಇದ್ದು  ಅವನು ಅಮೋನ್‌ಕರ್ ಗೆಳೆಯನಾಗಿದ್ದ. ಬೆಳಗಾಗೆದ್ದು ರಮ್ ಕುಡಿದು ಅಫೀಸಿಗೆ ಬರುತ್ತಿದ್ದ  ಫ಼್ರಾಂಕ್ ತನ್ನ ಸಣ್ಣಪುಟ್ಟ ಕೆಲಸಗಳಿಗೆ ಅಮೋನ್‌ಕರ್ ನನ್ನು ಅವಲಂಬಿಸಿದ್ದ. ನನಗೂ ಆಗಾಗ ಅಲ್ಲಿಗೆ ಹಲವು ಬಾರಿ ಹೋಗಿ ಬರಬೇಕಾಗುತ್ತಿತ್ತು. ಹಾಗೆ ನನಗೆ ಅಮೋನ್‌ಕರ್ ಅಫೀಸಲ್ಲಿ  ಪರಿಚಯವಾದವನು ಗೋಪಿ ಪ್ರಸಾದ್.

ಅಲ್ಲಿದ್ದ ಟೇಬಲ್ ಸ್ಪೇಸುಗಳಲ್ಲಿ ಕೆಲಸ ಮಾಡುತ್ತಿದ್ದ ಮಿಕ್ಕ ಹುಡುಗರು ೨೦ ರಿಂದ ೨೫ ವರ್ಷದವರಿರಬಹುದು. ಅವರೆಲ್ಲರ ಮಧ್ಯೆ ಈ ಗೋಪಿ ಪ್ರಸಾದ್ ಒಂದು ಹಳೇ ಇಮಾರತಿನಂತೆ ಕಾಣುತ್ತಿದ್ದ. ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ್ದ ನರೆತ ಕೂದಲು,  ಕಪ್ಪು ಟೆರಿಲೀನ್ ಪ್ಯಾಂಟು. ಮಾಸಲು ಬಣ್ಣದ  ದೊಗಳೆ ಬುಶ್ ಶರಟು ಹೊರಗೆ ಬಿಟ್ಟು ಕೊಂಡು ಹಾಕಿಕೊಳ್ಳುತ್ತಿದ್ದ. ಬಾಸ್ ನಿಂದ ಕ್ಲರ್ಕ್ ವರೆಗೂ ಜೀನ್ಸ್ ತೊಡುವ ಅಡ್ವಟೈಜಿಂಗ್ ರಾಜ್ಯದಲ್ಲಿ ಅವನೊಬ್ಬ ವಿಚಿತ್ರವಾಗಿ ಕಾಣುತ್ತಿದ್ದ.  ’ಒಹ್, ಐ ಅಯಾಮ್ ಏನ್‌ಶಂಟ್’ ಎಂದು ಹೇಳಿಕೊಳ್ಳುತ್ತಾ ನಗುತ್ತಿದ್ದ.  ಫ್ರಾಂಕ್ ಗಿಂತಲೂ,  ಅಮೋನ್ ಕರ್ ಗಿಂತಲೂ, ಅಡ್ವಟೈಜಿಂಗ್ ಕ್ಷೇತ್ರದಲ್ಲೇ ನಾನು ಕಂಡವರೆಲ್ಲರಿಗಿಂತಲೂ ಅವನು ವಯಸ್ಸಾದವನು ಎನ್ನಿಸಿ ನನಗೆ ವಿಚಿತ್ರ ಸಂಕಟವಾಗುತ್ತಿತ್ತು. ಕಾಪಿರೈಟರ್ ಆಗಿದ್ದ ಅವನಿಗೆ ಮತ್ತೆ ಮತ್ತೆ ಕರೆಕ್ಷನ್ ಗಳಿಗೆ ಇವನು ಬರೆದ  ಜಾಹೀರಾತುಗಳು ಬಂದಾಗ, ಫೋನಿನಲ್ಲಿ ಇವನನ್ನು ಏಜೆನ್ಸಿಯವರು ತಡವಾಯಿತೆಂದು  ಗೊಣಗಿದಾಗ, ಮಾತು ಮಾತಿಗೆ ಫ಼॒ ॒ಪದ ಬಳಸಿ ಅವನೊಡನೆ ಮಾತಾಡಿದಾಗ , ಆ ಸ್ಥಳ, ಆ ಕೆಲಸ ಅವನಿಗೆ ತಕ್ಕುದಲ್ಲ ಎನ್ನಿಸುತ್ತಿತ್ತು. ಆದರೆ ಅವನು ಕೋಪ ಗೊಂಡಿದ್ದು, ನಗೆ ಅವನ ಮುಖದಿಂದ ಅಳಿಸಿದ್ದನ್ನು ನಾನು ನೋಡಿರಲಿಲ್ಲ.

ಅಮೋನ್ ಕರ್ ನ ಆಫೀಸಿನಲ್ಲಿ ಬಾಡಿಗೆಗೆ ಇದ್ದವರು ಬದಲಾಗುತ್ತಲೇ ಇರುತ್ತಿದ್ದರು. ಶಿರೀಶನಿಗೆ ಲಿಂಟಾಸ್ ನಲ್ಲಿ ಕೆಲಸ ಸಿಕ್ಕಿತೆಂದು ಹೋದರೆ, ನಿತಿನ್ ತಾನು ಕೆಲಸ ಮಾಡುತ್ತಿದ್ದ  ಯಾವುದೋ ಏಜೆನ್ಸಿಯ ಕೈಲ್ಲಿದ್ದ ಫಾರ್ಮಸಿಟಿಕಲ್ ಕ್ಲಯಂಟ್ ನ ಲೇಬಲ್ ಆರ್ಡರುಗಳನ್ನು ತಾನು ಎಗರಿಸಿಕೊಂಡು ಒಂದು ಪುಟ್ಟ ಆಫೀಸು ತೆರೆದಿದ್ದ. ಸಾಠೆ ಎಳೆಂಟು ತಿಂಗಳು ಯಾವ ಕೆಲಸದಲ್ಲೂ ನಿಲ್ಲಲಾಗದೆ ಬೇರೆ ದಾರಿಯಿಲ್ಲದೆ  ಅಂಬೆಜೋಗೈ ಗೆ ಮರಳಿದ್ದ. ಆದರೆ ಮರು ದಿನವೇ ಮತ್ತೆ ಅಲ್ಲಿ ಹೊಸ ರಕ್ತ ತುಂಬಿಕೊಳ್ಳುತ್ತಿತ್ತು. ಅಲ್ಲಿ ಪರ್ಮನೆಂಟ್ ಎಂಬವನಂತೆ ಇದ್ದವನೆಂದರೆ ಗೋಪಿ ಪ್ರಸಾದ್.ಆಗ ಕೇವಲ ೨೫ ವರ್ಶದವನಾಗಿದ್ದ ನನಗೂ ಗೋಪಿ ಪ್ರಸಾದನಿಗೂ ವಯಸ್ಸಿನಲ್ಲಿ ಅಷ್ಟೊಂದು ಅಂತರವಿದ್ದರೂ ಅವನು ಅದೇನೋ ಸಹಜವಾಗಿಂಬಂತೆ ನನಗೆ ಆತ್ಮೀಯನಾಗಿಬಿಟ್ಟಿದ್ದ.

ಟೇಬಲ್ ನಂಬರ್ ೪ ರಲ್ಲಿ ಕೂರುತ್ತಿದ್ದ ಅವನ ಟೇಬಲ್ ಮೆಲೆ ಎದ್ದು ಕಾಣುತ್ತಿದ್ದುದು ಒಂದು ದೊಡ್ಡ ಬಿಳಿಯ ಪಿಂಗಾಣಿ ಕಪ್ ಮತ್ತು ಹಳೆಯದೊಂದು ಟೈಪ್ ರೈಟರ್. ಸಹಜವಾಗಿ ದೊಡ್ಡದಿದ್ದ ಆ ಪಿಂಗಾಣಿ ಕಪ್ಪು ಯಾರೋ ತನ್ನ ಅಭ್ಯಾಸ ಕಂಡು ಉಡುಗೊರೆಯಾಗಿ ಕೊಟ್ಟದ್ದೆಂದು ಹೇಳುತ್ತಿದ್ದ,  ಯಾವಾಗಲೂ  ಚಹಾ ಆಗಲೀ, ಕಾಫಿ ಆಗಲೀ ಅವನು ೨ ಗ್ಲಾಸು ಆರ್ಡರ್ ಮಾಡುತ್ತಿದ್ದ.
ವರ್ಷಗಳೇ ತುಂಬ ಕಷ್ಟಪಟ್ಟು ವಿರಾರ್ ನಲ್ಲಿ ಒಂದು ರೂಮು, ಬಾತ್ ರೂಮಿನ ಮನೆ ಮಾಡಿದ್ದ ಅವನಿಗೆ ಮದುವೆಯಾಗಿರಲಿಲ್ಲ. ಎಲ್ಲರೂ ಮಧ್ಯಾಹ್ನ ತಮ್ಮತಮ್ಮ ಡಬ್ಬಗಳನ್ನು ತೆಗೆದಾಗ ಇವನು ಎದ್ದು ಹತ್ತಿರವೇ ಇದ್ದ ಗುರುಪ್ರಸಾದದಲ್ಲಿ ಇಡ್ಲಿ ಸಾಂಬಾರನ್ನೋ, ಐಡಿಯಲ್ ಕೆಫೆಯಲ್ಲಿ ಪಾರ್ಸಿ ಧನ್ ಸಕ್ ಅನ್ನೋ ಅಥವಾ ಲೈಟ್ ಆಫ್ ಏಶಿಯಾ ದಲ್ಲಿ ಚಹಾ ಆಮ್ಲೆಟ್ ನ್ನೋ ತಿನ್ನುತ್ತಿದ್ದ. ನಾನು ಆ ಸಮಯದಲ್ಲಿ ಅಲ್ಲಿದ್ದರೆ  ನನ್ನನ್ನೂ ಜೊತೆಗೆ ಎಳೆದುಕೊಂಡು ಹೋಗುತ್ತಿದ್ದ.  ಶುಕ್ರವಾರ ಸಂಜೆಗಳು ನಾವಿಬ್ಬರೂ ಮೊಕಾಂಬೋಗೆ ಹೋಗಿ ಬಿಯರ್ ಕುಡಿಯುವ ಅಭ್ಯಾಸ ನಿಧಾನವಾಗಿ ಆಗಿತ್ತು. ಆದರೆ ನಮಗೆ ಯಾವಾಗಲೂ ಸರ್ವ್ ಮಾಡುತ್ತಿದ್ದ ಹರಿದ ಕಾಲರಿನ ಮುದುಕ ವೇಟರ್ ಜಾನ್ ನನ್ನು ನ್ಡಿದಾಗ ಟೇಬಲ್ ಸ್ಪೇಸಿನಲ್ಲಿ ಕೆಲಸ ಮಾಡುವ ಮುದುಕರನ್ನು ನೋಡಿದಾಗ ಅಗುವಂತೆಯೇ ಸಂಕಟವಾಗುತ್ತಿತ್ತು.

ಗೋಪಿ ಪ್ರಸಾದ್ ಬಿಡುವಿನ ವೇಳೆಯಲ್ಲಿ ಏಶಿಯಾಟಿಕ್ ಲೈಬ್ರರಿಗೆ ಹೋಗಿ ಧೂಳು ತುಂಬಿದ ಓಬಿರಾಯನ ಕಾಲದ ಬುಕ್ ಶೆಲ್ಫುಗಳ ನಡುವೆ ಇದ್ದ ಬೃಹದಾಕಾರದ ಟೇಬಲ್ ಮೇಲೆ ಕೋಲಿಗೆ ಸಿಕ್ಕಿಸಿ ಇಟ್ಟಿರುತ್ತಿದ್ದ ನ್ಯೂ ಯಾರ್ಕ್ ಟೈಮ್ಸ್, ಶಿಕಾಗೊ ಟ್ರಿಬ್ಯೂನ್ ಗಳನ್ನು ಓದುತ್ತಿದ್ದ.  ಪ್ರತಿ ಗುರುವಾರ ಸಂಜೆ ಅಲ್ಕೊಹಾಲಿಕ್ಸ್ ಅನಾನಿಮಸ್ ನಲ್ಲಿ ವಾಲಂಟಿಯರ್ ಕೆಲಸಕ್ಕೆ ಹೋಗುತ್ತಿದ್ದ ಗೋಪಿ , ತನ್ನ ಬಗ್ಗೆ ಏನೂ ಹೆಚ್ಚಿಗೆ ಹೇಳಿ ಕೊಳ್ಳುತ್ತಿರಲಿಲ್ಲ. ಕ್ರಿಸ್ಚಿಯನ್ ಆದವನ ಹೆಸರು ಗೋಪಿ ಹೇಗೆ? ’ನಂಗೂ ಗೊತ್ತಿಲ್ಲ. ಚಿಕ್ಕೋನಿಂದ ನನ್ನನ್ನು ಎಲ್ಲರೂ ಹಾಗೇ ಕರೆಯುತ್ತಿದ್ದರು’ ಎಂದು ನಕ್ಕುಬಿಡುತ್ತಿದ್ದ. ತುಂಬಾ ಶಿಷ್ಟ ನಡುವಳಿಕೆಯಿದ್ದ ಅವನನ್ನು ಯಾವ ವೈಯ್ಯಕ್ತಿಕ ಪ್ರಶ್ನೆ ಗಳನ್ನು ಕೇಳುವುದೂ ಸಾಧ್ಯವಿರಲಿಲ್ಲ. ಪ್ರತಿ ತಿಂಗಳೂ ಒಂದನೇ ತಾರೀಕು ಸರಿಯಾಗಿ ಬಾಡಿಗೆ ಕೊಡುತ್ತಿದ್ದ ಅವನು ಅಮೋನ್ ಕರ್ ಗೆ ಅಚ್ಚುಮೆಚ್ಚು.

ಅಚ್ಚರಿಯೆಂದರೆ ಅಷ್ಟೊಂದು ಒಬ್ಬಂಟಿಯಾಗಿದ್ದ ಅವನನ್ನು ಭೇಟಿಯಾಗಲು ವಿಚಿತ್ರ ವ್ಯಕ್ತಿಗಳು ಬರುತ್ತಿದ್ದರು.  ಜೆಜೆ ಸ್ಕೂಲ್ ಅಫ್ ಆರ್ಟಿನಲ್ಲಿ ಓದುತ್ತಿದ್ದ,ಕಿವಿ ಉದ್ದಕ್ಕೂ ಬೆಳ್ಳಿ ರಿಂಗು ಗಳನ್ನು ಧರಿಸಿದ್ದ  ಫಿಲಿಪೀನ್ಸ್ ಹುಡುಗಿ ಸ್ಟೆಲ್ಲ. ಕೆಳಗೆ ಬಂದು ಕಾರು ನಿಲ್ಲಿಸಿ  ಫೋನ್ ಮಾಡಿ ಕರೆಯುತ್ತಿದ್ದ ಸ್ಮಾರ್ಟ್ ಎಡ್ವಟೈಜಿಂಗಿನ ಒಡತಿ ೪೫ ವರ್ಷದ ನಿವೇದಿತಾ ಕಂಟ್ರಾಕ್ಟರ್. ಎದುರು ಆಫೀಸಿನ ಥಳುಕಿನ  ರೆಸೆಪ್ಶನಿಸ್ಟ್ ರೀಟಾ. ಆಗಾಗ ಚಿಕ್ಕ ಪುಟ್ಟ ಪೋಸ್ಟರುಗಳಿಗೆ ಕಾಪಿ ಬರೆಸಿಕೊಳ್ಳುತ್ತಿದ್ದ ಫ್ರಾಂಕ್.  ಎಲ್ಲರೂ ಗೋಪಿಯಲ್ಲಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಬರುತ್ತಿದ್ದರೆಂದು ಎಷ್ಟೋ ವರ್ಷದ ಒಡನಾಟದ ನಂತರ ನನಗೆ ತಿಳಿಯಿತು.

ಸ್ಟೆಲ್ಲ ತಾನು ಚುಚ್ಚ್ಚಿಸಿ ಕೊಂಡ ಕಿವಿ ಕೀವಾಗಿ ತೊಂದರೆ ಕೊಟ್ಟದ್ದರಿಂದ ಹಿಡಿದು ತನ್ನ ಬಾಯ್ ಫ಼್ರೆಂಡ್ ಡ್ರಗ್ಸ್ ತಗೊಳ್ಳುತ್ತಾನೆಂದು  ಬಂದಿರುವ ಅನುಮಾನದ ವರೆಗೂ ಎಲ್ಲಾಗೋಪಿಗೆ  ಹೇಳುತ್ತಿದ್ದಳು. ಅವಳಿಗೆ ವಿಪರೀತ ಜ್ವರ ಬಂದಾಗ  ಡಾಕ್ಟರ್ ಹತ್ತಿರ ಕರೆದುಕೊಂದು ಹೋದವನೂ ಅವನೇ. ಊರಿಂದ ದುಡ್ಡು ಬರುವುದು ತಡವಾದಾಗ ಸಾಲ ಕೊಡುತ್ತಿದ್ದವನೂ ಅವನೇ.  ಊರಿಗೆ ರಜಕ್ಕೆಂದು ಹೋದಾಗ ತನ್ನ ಮೂಲೆಯಲ್ಲಿ ಅವಳ ಆರ್ಟ್ ಮಟೀರಿಯಲ್ ಗಳನ್ನು ಇಟ್ಟುಕೊಳ್ಳುತ್ತಿದ್ದವನೂ ಅವನೇ.
ಅಲ್ಕಾನ್ನ ನೋಡಲು ಬಂದ ಹುಡುಗ ’ತುಂಬಾ ಕಪ್ಪು, ಬೇಡ’ ಎಂದಿದ್ದಿರಬಹುದು,  ನಿವೇದಿತಾಳ ಗಂಡನ ಕುಡಿತ ಹೆಚ್ಚಾಗಿದ್ದು, ಡಿವೋರ್ಸ್ ಪೇಪರ್ಸ್ ಫ಼ೈಲ್ ಮಾಡಿರುವ ಸಂಗತಿ ಇರಬಹುದು, ಹೋದ ಸಲ ಅಫೀಸಿನ ನ್ಯೂ ಇಯರ್ ಪಾರ್ಟಿಗೆ ದುಡ್ಡಿಲ್ಲವೆಂದು ನನ್ನ ಹಣದಲ್ಲೇ ಬಿಯರ್ ತರಿಸಿದ ಅಮೋನ್ ಕರ್   ದುಡ್ಡು ಇನ್ನೂ ತಿರುಗಿ ಕೊಟ್ಟಿಲ್ಲವೆಂಬ ವಿಷಯವಿರಹುದು ಎಲ್ಲಾ ಗೋಪಿಯ ಸೇಫ಼್ ವಾಲ್ಟಿನೊಳಗೆ ಹೋಗುತ್ತಿತ್ತು. ಅದೆಂದೂ ಹೊರಬರುವುದಿಲ್ಲವೆಂಬ ಧೈರ್ಯ ಎಲ್ಲರಿಗೂ ಇತ್ತು. ಅದರಿಂದ ಅವರಿಗೆ ವಿಚಿತ್ರ ಸಮಾಧಾನ ಸಿಗುತ್ತಿತ್ತು. ಆದರೆ ಅವನು ಎಂದೂ  ಬೇರೆಯವರ ಎದುರಿಗೆ ತೆರೆದುಕೊಳ್ಳುತ್ತಿರಲ್ಲ, ಎಂದೂ ಸಹಾಯ ತೆಗೆದು ಕೊಳ್ಳುತ್ತಿರಲಿಲ್ಲ. . ಒಂದು ಸಲ ವಾರವೆಲ್ಲಾ ಅಫೀಸಿಗೆ ಬರದವನು ಮತ್ತೆ ಬಂದಾಗ ತುಂಬಾ ಇಳಿದು ಹೋಗಿದ್ದ. ಕೇಳಿದಾಗ ವೈರಲ್ ಫೀವರ್ ನಿಂದ ತುಂಬಾ ಮಲಗಿಬಿಟ್ಟಿದ್ದನ್ನು ಹೇಳಿದ್ದ. ನನಗ್ಯಾಕೆ ಹೇಳಲಿಲ್ಲ ಎಂದು ಜೋರುಮಾಡಿದಾಗ ’ಇಟ್ಸ್ ಓಕೆ, ನಥಿಂಗ್ ಸೀರಿಯಸ್ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದ. ಇದು ನನ್ನಲ್ಲಿ ವಿಚಿತ್ರ ಕಿರಿಕಿರಿಯನ್ನೂ ಹುಟ್ಟಿಸುತ್ತಿತ್ತು.

ನಾನು ಮುಂಬೈಯ್ಯಿಂದ ಹೊರಟು ಬಂದದಿನ  ವಿದಾಯ ಹೇಳಲು ಹೋದಾಗ ಒಂದು ವಿಚಿತ್ರ ಘಟನೆ ನಡೆದಿತ್ತು. ನರೆ ಕೂದಲಿನ ಬಾಬ್ ಕಟ್ಟು, ಪುಟ್ಟ ಹೂಗಳಿದ್ದ ಮಾಸಿದ ಫ್ರಾಕು, ಕೈಯ್ಯಲ್ಲೊಂದು ಚೀಲ ಹಿಡಿದ ವ್ರುದ್ಧೆಯೊಬ್ಬಳು ಗೋಪಿಗಾಗಿ ಕೇಳಿಕೊಂಡು ಆಫೀಸಿಗೆ ಬಂದಿದ್ದಳು. ಹೊರಗಿನಿಂದ ಅದೇ ಬಂದ ಗೋಪಿ ಟೇಬಲ್ ಮುಂದೆ ಕುರ್ಚಿಯಲ್ಲಿ ಕೂತಿದ್ದ ಅವಳನ್ನು ನೋಡಿದ ತಕ್ಷಣ ಅಧೀರನಾದ. ಅವನ ಮುಖ ಬಿಳಿಚಿಕೊಂದು ಕೈ ಕಾಲು ಸಣ್ಣಗೆ ನಡುಗತೊಡಗಿದುವು. ಆ ಕ್ಷಣ ಕೈಯ್ಯಲ್ಲಿದ್ದ ಬ್ರೀಫ಼್ ಕೇಸ್ ಅಲ್ಲೇ ಕುಕ್ಕಿ ಬಿರಬಿರನೆ ಹೊರಗೆ ನಡೆದಿದ್ದ. ಮೊದಲಬಾರಿ ಗೋಪಿ ಕೋಪ ಗೊಂಡಿದ್ದನ್ನು ನಾನು ನೋಡಿದ್ದೆ. ಆದರೆ ಅವನನ್ನು ಕಾರಣ ಕೇಳುವ ಧೈರ್ಯ ಯಾರಿಗೂ ಇರಲಿಲ್ಲ.

ಅಂದು  ನಾನು ರುಸ್ತ್ಂ ಬಿಲ್ದಿಂಗಿನಿಂದ ಹೊರಗೆ ಬಂದು ಮುಂಬೈಯ್ಯಲ್ಲಿ ನನಗೆ  ಅಷ್ಟೊಂದು ಆತ್ಮೀಯವಾಗಿದ್ದ, ನಿರ್ಮಾಣದ ನಂತರ ಎಂದೂ ಸುಣ್ಣಬಣ್ಣ ಕಾಣದ ಆ ಕಟ್ಟಡದತ್ತ ಸ್ವಲ್ಪ ಹೊತ್ತು ನಿಂತು ನೋಡಿದೆ. ಮುನಿಸಿಪಾಲಿಟಿಯವರು ಅದೇ ಅಪಾಯದಲ್ಲಿರುವ ಕಟ್ಟಡವೆಂದು ಅದಕ್ಕೆ ಚೀಟಿ ಅಂಟಿಸಿ ಹೋಗಿದ್ದರಿಂದ ಕೆಲಸಗಾರರು ಅದರ ಮುಂಬಗಿಲಿಗೆ ಗಟ್ಟಿ ಮರದ ತೊಲೆಗಳನ್ನು ಆಧಾರ ಸ್ಥ್ಂಭಗಳಾಗಿ ನಿಲ್ಲಿಸಲು ಒಂದು ಕಡೆ ಪೇರಿಸುತ್ತಿದ್ದರು. ಎಲ್ಲೆಲ್ಲೂ ಧೂಳು ಏಳುತ್ತಿತ್ತು.

ನಾನು ಬೆಂಗಳೂರಿಗೆ ಬಂದು ಇಲ್ಲಿ ತಳ ಊರುವ ಜಂಜಡಗಳಲ್ಲಿ ಗೋಪಿ ಮನಸ್ಸಿನಿಂದ ಮರೆಯಾಗಿದ್ದ. ಮತ್ತೆ ನಾನವನಿಗೆ ಫೋನೂ ಮಾಡಿರಲಿಲ್ಲ.  ಇವತ್ತು ಪೇಪರಿನಲ್ಲಿ ಓದಿದ ನ್ಯೂಸ್ ಮನಸ್ಸು ಕಲಕಿತ್ತು.  ಬೆಳಿಗ್ಗೆ ೧೧ ಗಂಟೆಗೆ ಕಟ್ಟಡ ಕುಸಿದಿತ್ತು. ಪೀಕ್ ಅವರ್. ಏನೆಲ್ಲಾ ಆಗಿರಬಹುದು. ಎಷ್ಟು ಜನ ಇದ್ದರೋ ಒಳಗೆ.  ಫೋನ್ ಪುಸ್ತಕ ತೆರೆದು ಮುಂಬೈ ನಂಬರುಗಳನ್ನು ತೆಗೆದಿಟ್ಟುಕೊಂದೆ.  ಆ ಕ್ಷಣದಲ್ಲಿ ಮರದ ತೊಲೆಗಳ ಆಧಾರದ ಮೇಲೆ ನಿಂತಿರುವ ರುಸ್ತುಂ ಬಿಲ್ದಿಂಗ್ , ಅಲ್ಲಿನ ಅಮೋನ್ಕರ್ ಆಫ್ಹೀಸು, ಬಿಲ್ದಿಂಗ್ ತುಂಬಾ ಇರುವ ನೂರಾರು ಟೇಬಲ್ ಸ್ಪೇಸುಗಳು,ಅಲ್ಲಿ ದಿನವೆಲ್ಲಾ ಕೂತು  ತಲೆಬಗ್ಗಿಸಿ ಕೆಲಸ ಮಾಡುವ ತರುಣರು,  ಎಲ್ಲರ ನಡುವೆ ಮೊದಲ ಮಹಡಿಯ  ಟೇಬಲ್ ೪ ರ ಲ್ಲಿ ಹಳೆಯ ಆಲದ ಮರದಂತೆ ಕೂತಿರುವ ಗೋಪಿ, ಅವನ ಮುಂದಿರುತ್ತಿದ್ದ ದೊಡ್ಡ ಪಿಂಗಾಣಿ ಬಟ್ಟಲು,  ಅವನನ್ನು ಭೇಟಿಯಾಗಲು ಬರುತ್ತಿದ್ದ ನೊಂದ ಎಳೆ ಮನಸ್ಸುಗಳು ಎಲ್ಲವೂ ಕಣ್ಣಿಗೆ ಕಟ್ಟಿತು॒ ॒ಅದೇಕೋ ಆ ಚಿತ್ರವನ್ನು ಕದಡುವ ಮನಸ್ಸಿಲ್ಲದೆ ಹಾಗೇ ಫೋನ್ ಕೆಳಗಿಟ್ಟೆ.

-ಉಮಾ ರಾವ್

ಚಿತ್ರ: ಸೃಜನ ಕಾಯ್ಕಿಣಿ
(ಪ್ರಜಾವಾಣಿಯಲ್ಲಿ ಪ್ರಕಟಿತ)


No comments:

Post a Comment