ತುಮಕೂರು
ತುಮಕೂರು ಆಗಿನ್ನೂ ಪುಟ್ಟ ಊರು. ನನಗಾಗ ಆರೇಳು ವರ್ಷಗಳಿರಬಹುದು. ಅಲ್ಲಿ ನಮ್ಮದು ದೊಡ್ಡ ಮನೆ. ವಿಶಾಲವಾದ ಕಾಂಪೌಂಡು. ಹತ್ತಾರು ಮರಗಳು. ಬಸರಿ, ಮಾವು, ಹಲಸು, ನೇರಿಳೆ, ನೆಲ್ಲಿ, ಎಲಚಿ, ಹೀಗೆ. ಜೊತೆಗೆ ಮನೆಯ ಸುತ್ತ ಹೂಗಿಡಗಳು. ನಂದಿಬಟ್ಟಲು, ದಾಸವಾಳ, ಕಣಿಗಲೆ, ಮಲ್ಲಿಗೆ, ಮೊಲ್ಲೆ, ಸ್ಫಟಿಕ, ಜಾಜಿ, ಸೇವಂತಿಗೆ. ಒಂದು ಮೂಲೆಯಲ್ಲಿ ಗೋರಂಟಿ ಮತ್ತು ಸಂಪಿಗೆ ಮರಗಳು. ಮನೆಯ ಹಿಂದೆ ಕೊಟ್ಟಿಗೆ. ಅಲ್ಲಿ ಒಂದು ಬಿಳಿ ಹಸು ಪದ್ಮ, ಸೀಮೆ ಹಸು ಲಕ್ಷ್ಮಿ, ಅದರ ಮಗಳು ಕಮಲ. ಕರು ಬಸಣ್ಣ..ಒಂದು ಸೀನೀರಿನ ಬಾವಿ.
ನಮ್ಮದು ಒಟ್ಟು ಕುಟುಂಬವಾಗಿತ್ತು. ಮನೆ ತುಂಬಾ ಜನ. ಎಲ್ಲ ನೋಡಿಕೊಳ್ಳೋಕೆ ಕೆಲಸದವರು. ಅಡಿಗೆ ಭಟ್ಟರು, ಡ್ರೈವರ್, ಮನೆಗೆಲಸ ಮಾಡುವ ಹೆಂಗಸರು ಗಂಡಸರು. ಗಂಡಾಳು ತಿಮ್ಮಯ್ಯ. ಹತ್ತು ಕಿಮೀ ದೂರವಿದ್ದ ಪಂಡಿತನ ಹಳ್ಳಿಯಿಂದ ಸೈಕಲ್ಲು ತುಳಿದು ಬರುತ್ತಿದ್ದ. ಅವನು ದೊಡ್ಡ ಆಳು. ಕಚ್ಚೆ ಪಂಚೆ, ಕ್ಲೋಸ್ಡ್ ಕಾಲರ್ ಶರಟು, ಹೆಗಲ ಮೇಲೆ ಕೆಂಪು ಬಿಳಿ ಗೀರು ಗೀರು ಟವಲು. ತಲೆಗೆ ಬಿಳಿ ಪೇಟ. ಬಿಸಿಲಿಗೆ ಸುಟ್ಟು ಒರಟಾಗಿದ್ದ ಮುಖದ ಚರ್ಮ. ಎರಡು ಕಿವಿಯಲ್ಲಿ ಹೊಳೆಯುವ ಬಿಳಿ ಕಲ್ಲಿನ ಕಡಕು ಹಾಕುತ್ತಿದ್ದ ಅವನ ನಿಲುವಿನಲ್ಲಿ ಒಂದು ರೀತಿಯ ಗತ್ತಿತ್ತು. ಅದಕ್ಕೆ ಕಾರಣ ಆ ಕಡಕುಗಳು ಎಂಬುದು ನನ್ನ ಅಂದಿನ ಅನಿಸಿಕೆ.
ಇನ್ನು ಲಕ್ಕಿ. ೪೦ ವರ್ಷದ ಕಪ್ಪು ಸುಂದರಿ. ಕಡು ಕೆಂಪು, ನೀಲಿ, ಹಸಿರು ಬಣ್ಣದ ಸಣ್ಣಂಚಿನ ಸೀರೆಗಳು ಉಟ್ಟು ಬರುತ್ತಿದ್ದ ಅವಳ ಕೊರಳಲ್ಲಿದ್ದ ಬೆಳ್ಳಿ ಸರ , ಹವಳದ ಮಣಿ, ಕೈಯ್ಯಲ್ಲಿದ್ದ ಹಸಿರು ಕಪ್ಪು ಗಾಜಿನ ಬಳೆಗಳು, ಬೆಳ್ಳೀ ಕಡಗ, ಮೂಗಿನಲ್ಲಿದ್ದ ಚಿನ್ನದ ಮೂಗುಬಟ್ಟು ಎಲ್ಲಾ ಸೇರಿ ಅವಳ ದೇಹದ ಬಣ್ಣವನ್ನು ಇನ್ನೂ ಕಪ್ಪಾಗಿಸಿ ಅವಳ ಚೆಲುವನ್ನು ಎದ್ದು ಕಾಣುವಂತೆ ಮಾಡುತ್ತಿದ್ದುವು. ಎಲ್ಲರಂತೆ ಅವಳು ರವಿಕೆಗೆ ಗುಂಡಿಗಳ ಬದಲು ಸುಮ್ಮನೆ ಗಂಟು ಹಾಕಿಕೊಳ್ಳುತ್ತಿದ್ದುದು ನೋಡಿ ನನಗೆ ನಾಚಿಕೆಯಾಗುತ್ತಿತ್ತು. ಅವಳ ಕೈಮೇಲೆ ಇದ್ದ ರಂಗ ಎನ್ನುವ ಹಚ್ಚೆ ಅವಳ ಗಂಡನ ಹೆಸರಾಗಿರಲಿಲ್ಲ. ಯಾರದೆಂದು ಒಂದು ದಿನ ನಮ್ಮ ಅಜ್ಜಿ ತಮಾಷೆಯಾಗಿ ಕೇಳಿದಾಗ ಅವಳು ಮುನಿಸಿಕೊಂಡು ಹೋದವಳು ಮಾರನೆಯ ದಿನ ಕೆಲಸಕ್ಕೆ ಬಂದಿರಲಿಲ್ಲ.ಯಾವ ಕಾರಣಕ್ಕೋ ಮದುವೆಯಾಗಿ ಒಂದೆರಡು ವರ್ಷಕ್ಕೇ ಗಂಡನನ್ನು ಬಿಟ್ಟು ಬಂದು ಈಗ ಸುಮಾರು ೧೫ ವರ್ಷದ ತಂಗಿಯ ಮಗಳು ಚಿಕ್ಕಿಯನ್ನು ಸಾಕಿಕೊಂಡಿದ್ದು ಬಿಟ್ಟಿದ್ದಳು. ಇಬ್ಬರೂ ಒಟ್ಟಿಗೆ ಕೆಲಸಕ್ಕೆ ಬರುತ್ತಿದ್ದರು.
ಆಗ ಗಂಡಸರು ಮತ್ತು ಹೆಂಗಸರು ಮಾಡುವ ಕೆಲಸ ತುಂಬಾ ಕರಾರುವಾಕ್ಕಾಗಿ ವಿಭಜನೆಯಾಗಿತ್ತು. ಗಂಡಸರ ಬಟ್ಟೆ ತಿಮ್ಮಯ್ಯ ಒಗೆಯಬೇಕು. ಹೆಂಗಸರದು ಲಕ್ಕಿ. ಅಕಸ್ಮಾತ್ ಎಲ್ಲಾ ಒಗೆಯುವ ಬಟ್ಟೆಗಳೂ ಗುಡ್ಡೆ ಬಿದ್ದಿದ್ದರೂ ಯಾರಾದರೂ ಮನೆಯವರೇ ಗಂಡಸರ ಬಟ್ಟೆ ಬೇರೆ ಮಾಡಿ ತಿಮ್ಮಯ್ಯನಿಗೆ ಕೊಡಬೇಕಿತ್ತು. ಅವನು ಅಪ್ಪಿತಪ್ಪಿಯೂ ಹೆಂಗಸರ ಸೀರೆ ಮುಟ್ಟುತ್ತಿರಲಿಲ್ಲ. ಇದರ ಜೊತೆಗೆ ಸೌದೆ ಒಡೆಯುವುದು,ಕಾಂಪೌಂಡು ಗುಡಿಸುವುದು, ಹಸುವಿಗೆ ಮೇವು ಹಾಕುವುದು, ನಮ್ಮಆಲ್ಸೇಶನ್ ನಾಯಿ ಯನ್ನು ತಿರುಗಾಡಿಸುವುದು, ಅಂಗಡಿಗೆ ಹೋಗಿ ಸಾಮಾನು ತರುವುದು,ಚಿಕ್ಕ ಹುಡುಗರನ್ನು ಹೇರ್ ಕಟ್ಟಿಗೆ ಕರೆದುಕೊಂಡು ಹೋಗುವುದು ಇತ್ಯಾದಿ ಕೆಲಸ ಅವನದಾಗಿತ್ತು.
ಅದೇ ಲಕ್ಕಿ ಬೀದಿ ಬಾಗಿಲ ಮೆಟ್ಟಲಿಗೆ ನೀರು ಹಾಕಿ ರಂಗೋಲಿ ಹಾಕುವುದು, ಮುಸುರೆ ಪಾತ್ರೆ ತೊಳೆಯುವುದು, ಹೆಂಗಸರ ಬಟ್ಟೆ ಒಗೆಯುವುದು, ಮನೆ ಗುಡಿಸಿ ಸಾರಿಸುವುದು, ಮುಂತಾದ ಕೆಲಸಗಳನ್ನು ಮಾಡುತ್ತಿದ್ದಳು. ಅವಳೇನಾದರೂ ಕಾರಣದಿಂದ ರಜಾ ಹಾಕಿದರೂ ತಿಮ್ಮಯ್ಯನಿಗೆ ಇವತ್ತು ಇಷ್ಟು ಮನೆ ಗುಡಿಸಿ ಬಿಡು ಅಂತಲೋ, ಬಟ್ಟೆ ಇಷ್ಟು ಹಿಂಡಿ ಹಾಕಿಬಿಡು ಎಂದು ಹೇಳುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಅಂದರೆ ಹೆಣ್ಣು ಗಂಡಿನ ಪಾತ್ರಗಳ ಈ ವಿಭಜನೆಯನ್ನು ಎಲ್ಲರೂ ಪ್ರಶ್ನಿಸದೇ ಒಪ್ಪಿಕೊಂಡಿದ್ದರು.
ಮುಂಬೈ
ನಾನು ಮದುವೆಯಾಗಿ ಮುಂಬೈ ಗೆ ಹೋದಾಗ ರಾಮಾ ಗಳ ಪರಿಚಯವಾದದ್ದು.
೬೦-೭೦ ರ ದಶಕಗಳಲ್ಲಿ ರಾಮಾಗಳು ಮುಂಬೈನ ಕೊಲಾಬಾ ದಿಂದ ದಾದರ್, ಮಾತುಂಗಾ ಸಯಾನ್ ವರೆಗೂ ಹರಡಿಹೋಗಿದ್ದರು. ಹೋದ ಹೊಸತರಲ್ಲಿ ನನ್ನ ಗೆಳತಿ ಫೋನಲ್ಲಿ ಮಾತಾಡುತ್ತಾ ನೋಡು, ಇವತ್ತು ರಾಮಾ ಬರಲೇ ಇಲ್ಲ. ಮನೆ ಕೆಲಸ ಎಲ್ಲಾ ಮಾಡ್ಕೊಳ್ಳೋದರಲ್ಲಿ ಸಾಕಾಗಿ ಹೋಯಿತು ಎಂದಾಗ ಅವಳ ಕೆಲಸದವನ ಹೆಸರು ರಾಮಾ ಅಂದುಕೊಂಡಿದ್ದೆ. ಆದರೆ ಮುಂಬೈ ಉದ್ದಗಲಕ್ಕೂ ತುಂಬಿಕೊಂಡ ಅಂಥಾ ರಾಮಾಗಳೆಂದು ಕರೆಯಲ್ಪಡುತ್ತಿದ್ದ ಸಾವಿರಾರು ಕೆಲಸದವರು ಮನೆಗಳನ್ನು ಸ್ವಚ್ಚವಾಗಿಟ್ಟು, ಗೃಹಿಣಿಯಯರಿಗೆ ಮನಶಾಂತಿ ನೀಡುತ್ತಿದ್ದರು ಎಂದು ಆಮೇಲೆ ತಿಳಿಯಿತು. ತುಮಕೂರಿನಿಂದ ಬಂದ ನನಗೆ ಈ ಗಂಡಸರು ಯಾವ ಹಿಂಜರಿಕೆಯೂ ಇಲ್ಲದೆ ಸೀರೆ ಒಗೆಯುವುದರಿಂದ ಅಡುಗೆ ಮಾಡುವವರೆಗೂ ಎಲ್ಲಾ ಕೆಲಸ ಮಾಡುವುದು ನೋಡಿ ಅಚ್ಚರಿ ಯಾಗಿತ್ತು.
ಬಿಳಿಯ ಶರಟು, ದೊಗಳೆ ಪೈಜಾಮಾ ಅಥವಾ ಧೋತಿ ತೊಟ್ಟು ಬರುತ್ತಿದ್ದ ಅವರು ತೆಳ್ಳಗೆ ಎತ್ತರಕ್ಕಿರುತ್ತಿದ್ದರು. ಹೆಚ್ಚು ಮಾತಿನವರಲ್ಲ. ಎಲ್ಲರ ಮನೆಯಲ್ಲೂ ಅವರನ್ನು ರಾಮಾ ಯೆ ಕರೋ ರಾಮಾ ವೋ ಕರೋ ಎಂದು ಹೇಳುತ್ತಿದ್ದರು. ತುಂಬಾ ನಂಬಿಕಸ್ಥರೆಂದೂ, ಅಚ್ಚುಕಟ್ಟು ಕೆಲಸ ವಂತರೆಂದೂ, ಕೆಲಸಕ್ಕೆ ಚಕ್ಕರ್ ಹೊಡೆಯದವರೆಂದೂ ಪ್ರಸಿದ್ಧರಾಗಿದ್ದರು. ಅವರಿಗೆ ಆ ಹೆಸರು ಏಕೆ ಬಂತೆಂದು ಯಾರಿಗೂ ಗೊತ್ತಿರಲಿಲ್ಲ. ರಾಜ್ ಕಪೂರ್ ನ ಪ್ರಸಿದ್ದ ಸಿನಿಮಾ ಹಾಡು ರಾಮಯ್ಯಾ ವಸ್ತಾವಯ್ಯಾ ಮೂಲಕ ಅವರು ಅಮರರಾಗಿದ್ದಾರೆ!
ನನಗೆ ತಿಳಿದು ಬಂದ ಪ್ರಕಾರ, ಈ ರಾಮಾಗಳು ಒಂದು ಕಾಲದಲ್ಲಿ ಆಂಧ್ರದ ಭೀಕರ ಬರ ಪ್ರದೇಶಗಳಿಂದ ಹೊಟ್ಟೆ ಪಾಡಿಗಾಗಿ ಬಂದವರಂತೆ. ಇಲ್ಲಿ ಯಾವ ಕೆಲಸ ಮಾಡಲೂ ತಯಾರಿದ್ದ ಅವರು ಬರಬರುತ್ತ ಹೆಚ್ಚು ಮನೆಗಳಲ್ಲಿ ಕೆಲಸ ಹಿಡಿದು ಜನಪ್ರಿಯರಾದರಂತೆ. ಮುಖ್ಯವಾಗಿ ಮುಂಬೈ ನ ಗಡಿಬಿಡಿ ಬದುಕಿಗೆ ತಕ್ಕಂತೆ ಬೆಳಿಗ್ಗೆ ಬಂದು ಪಾತ್ರೆ, ಕಸ, ಬಟ್ಟೆ ಎಲ್ಲಾ ಮಾಡುವುದಲ್ಲದೆ, ಮತ್ತೆ ರಾತ್ರಿ ಎಂಟು ಗಂಟೆಗೆ ಬಂದು ಅಚ್ಚುಕಟ್ಟಾಗಿ ಬಿಸಿ ಬಿಸಿ ರೊಟ್ಟಿ ಮಾಡಿ ಹಾಕಲೂ ತಯಾರಿರುತ್ತಿದ್ದರಂತೆ. ಆ ಕಾಲದಲ್ಲಿ ಹೆಂಗಸರು ಕೆಲಸದವರು ಯಾರೂ ಸಂಜೆ ಕೆಲಸಕ್ಕೆ ಬರುತ್ತಿರಲಿಲ್ಲ. ಜೊತೆಗೆ ಕುಡುಕ ಗಂಡನ ಹೊಡೆತ, ಮಕ್ಕಳ ಕಾಯಿಲೆ ಕಸಾಲೆ, ತಿಂಗಳ ಸರದಿಯ ಮುಜುಗರಗಳ ಕಾರಣಗಳಿಂದ ಎಲ್ಲಾ ಮರಾಠಿ ಬಾಯಿಗಳ ಹಾಗೆ ರಜಾ ಹಾಕುತ್ತಿರಲಿಲ್ಲ. ಮುಂಬೈ ಜನಕ್ಕೆ ಇವರು ಪ್ರಿಯರಾಗಿ ಬಿಟ್ಟರು. ಇವರೆಲ್ಲ ಎಂಟು ಹತ್ತು ಜನ ಸೇರಿ ರೂಮುಗಳಲ್ಲಿರುತ್ತಿದ್ದರು. ವರ್ಷಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ ಮಕ್ಕಳು ತಂದೆ ತಾಯಿಯನ್ನು ನೋಡಿಕೊಂಡು ಬರುತ್ತಿದ್ದರು. ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆ ಒಡೆಯುವ ಆಟದಲ್ಲಿ ಇವರು ತುಂಬುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ ತಾವು ಏನು ಕೆಲಸ ಮಾಡುತ್ತೇವೆಂದು ಊರಿನಲ್ಲಿ ಹೇಳುತ್ತಿರಲಿಲ್ಲವಂತೆ.
ಆದರೆ ಅವರ ಕೆಲಸಕ್ಕೆ ಕಂಟಕ ತಂದಿದ್ದು ಟೆಕ್ಸ್ ಟೈಲ್ ಮಿಲ್ಲುಗಳು ಮುಚ್ಚುವಿಕೆ. ಆಗ ಬೀದಿ ಪಾಲಾದ ಸಹಸ್ರಾರು ಕಾರ್ಮಿಕರ ಕುಟುಂಬಗಳ ಹೆಂಗಸರು ಮನೆಗೆಲಸ ಹುಡುಕಿಕೊಂಡು ಅಲೆಯತೊಡಗಿದರು. ನಾವು ಅಷ್ಟೂ ಕೆಲಸ ಮಾಡ್ತೀವಿ, ಬೆಳಿಗ್ಗೆ ಸಂಜೆ ಬರ್ತೀವಿ , ಎಷ್ಟಾದರೂ ಸಂಬಳ ಕೊಡಿ, ಬೇಕಾದರೆ ನಿಮ್ಮ ಮಕ್ಕಳನ್ನೂ ನೋಡಿ ಕೊಳ್ತೀವಿ ಎಂದು ಬೀದಿ ಬೀದಿ ಅಲೆದು ನಿಧಾನವಾಗಿ ರಾಮಾಗಳ ಜಾಗ ಆಕ್ರಮಿಸಿದರು.
ನೂರಾರು ವರ್ಷಗಳಿಂದ ಬಂದ ಪಾತ್ರಗಳನ್ನು ಈ ಮುಂಬೈ ಒಂದೇ ಕ್ಷಣದಲ್ಲಿ ಅಳಿಸಿ ಹಾಕಿಬಿಟ್ಟ ರೀತಿ ನೋಡಿ ಎಂದು ಇಂದಿಗೂ ಅಚ್ಚರಿಯಾಗುತ್ತದೆ.
ಶಿಕಾಗೋ
ಪಾಶ್ಚಿಮಾತ್ಯ ದೇಶಗಳಲ್ಲಿ ಈ ಜೆಂಡರ್ ರೊಲ್ಸ್ ಗಳ ಬಗ್ಗೆ ದಿನಕ್ಕೊಂದು ಸೆಮಿನಾರುಗಳು ನಡೆಯುತ್ತವೆ. ದಿನನಿತ್ಯದ ಬದುಕಿನ ಒಂದೊಂದು ಹಂತದಲ್ಲೂ ನೂರಾರು ವರ್ಷಗಳಿಂದ ಬೇರೂರಿರುವ ಈ ಪಾತ್ರಗಳನ್ನು ಒಡೆಯವ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಭಾಷೆಯನ್ನು ಬದಲಿಸಲಾಗುತ್ತಿದೆ.(ಉದಾ: ಚೇರ್ಪರ್ಸನ್.)
ಮಕ್ಕಳಿಗೆ ಹುಟ್ಟಿನಿಂದ ಗಂಡೆಂದರೆ ಹೀಗಿರಬೇಕು , ಹೆಣ್ಣು ಹೀಗಿರಬೇಕು ಎಂದು ಯಾವ ರೀತಿಯ ಕಂಡೀಶನಿಂಗ್ ಆಗದ ಹಾಗೆ ಎಚ್ಚರ ವಹಿಸಿ, ಸಹಜ , ಸಕಾರಾತ್ಮಕ ಬೆಳವಣಿಗೆಯ ಮೇಲೆ ಒತ್ತು ಕೊಡಲಾಗುತ್ತಿದೆ. ಆದರೆ ಅಮೆರಿಕಾದಲ್ಲೂ ಇಂದಿಗೂ ಬ್ಲೂ ಫಾರ್ ಬಾಯ್ಸ್, ಪಿಂಕ್ ಫಾರ್ ಗರ್ಲ್ಸ್ ಎಲ್ಲಾ ಕಡೆ ಚಲಾವಣೆಯಲ್ಲಿದೆ. ಮಕ್ಕಳ ಅಂಗಡಿಗಳಲ್ಲಿ ಕಣ್ಣು ಕೋರೈಸುವಂತೆ ಆಕರ್ಷಕವಾಗಿ ಈ ಥೀಮ್ ಗಳನ್ನು ಪ್ರದರ್ಶಿಸಿರುತ್ತಾರೆ.
ಮಗು ಹುಟ್ಟಿದ ತಕ್ಷಣ ಗಂಡಾದರೆ ತೆಳು ನೀಲಿ ಬಟ್ಟೆ, ಹೊದಿಕೆಗಳು, ಪರಿಕರಗಳು, ಮಗುವಿನ ಕೋಣೆಗೂ ತೆಳು ನೀಲಿ ಬಣ್ಣ ಹೀಗೆ. ಅದೇ ಹೆಣ್ಣಾದರೆ ಎಲ್ಲೆಲ್ಲೂ ತಿಳಿ ಗುಲಾಬಿ. ಈ ಬಣ್ಣಗಳಿಂದಲೇ ಹುಟ್ಟುವ ಒಳ ಅರ್ಥಗಳು , ಮಕ್ಕಳ ಮನಸ್ಸಿನ ಮೇಲೆ ಹುಟ್ಟಿನಿಂದಲೇ ಆಗುವ ಪರಿಣಾಮ ಏನಿರಬಹುದು? ಇದನ್ನು ಅಲ್ಲಿನ ಮಕ್ಕಳ ಬಟ್ಟೆ, ಅವು ಬಳಸುವ ಉಪಕರಣಗಳನ್ನು ಮಾರುವ ವ್ಯಾಪಾರೀ ಸಂಸ್ಥೆಗಳಂತೂ ಹೆಚ್ಚು ಹಣ ಗಳಿಸಲು ಬಂಡವಾಳ ಮಾಡಿಕೊಂಡು, ಲಾಭ ಗಳಿಸಲು ಈ ನೀಲಿ-ತೆಳಿ ಗುಲಾಬಿ ಕಾಂಸೆಪ್ಟ್‌ಗೆ ಹೆಚ್ಚು ಹೆಚ್ಚು ಒತ್ತುಕೊಟ್ಟು ಪರ್ಪೆಚುಯೇಟ್ ಮಾಡುತ್ತಿವೆ. ಇದು ನಿಧಾನವಾಗಿ ಅಂತರ ರಾಷ್ಟ್ರೀಯ ಮಾಲ್ ಗಳ ಮೂಲಕ ನಮ್ಮ ದೇಶದಲ್ಲೂ ಕಾಲಿಡುತ್ತಿರುವುದು ಕಾಣಬರುತ್ತಿದೆ. ಇದರ ಬಗ್ಗೆ ಸಂಶೋಧನೆ ಮಾಡಿದ ಕೆಲವು ವಿಜ್ಞಾನಿಗಳ ಪ್ರಕಾರ ಈ ಬಣ್ಣಗಳ ಆಯ್ಕೆ ಸೈಂಟಿಫಿಕ್ ಎಂದಿದ್ದರೂ, ಅಲ್ಲ ಎನ್ನುವುದಕ್ಕೂ ಸಾಕಷ್ಟು ಪುರಾವೆಗಳಿವೆ.
ಸುಮಾರು ೫೦ರ ದಶಕದಲ್ಲಿ ಅಮೆರಿಕಾದಲ್ಲಿ ಚಾಲ್ತಿ ಗೆ ಬಂದ ಈ ಅಭ್ಯಾಸ, ಅದಕ್ಕೆ ಮೊದಲು ಉಲ್ಟಾ ಇತ್ತಂತೆ. ಅಂದರೆ ಗಂಡು ಮಕ್ಕಳಿಗೆ ಗುಲಾಬಿ, ಹೆಣ್ಣು ಮಕ್ಕಳಿಗೆ ತಿಳಿ ನೀಲಿ! ಅದೇಕೆ ಬದಲಾಯಿತು ಅನ್ನುವುದಕ್ಕು ಸ್ಪಷ್ಟ ಕಾರಣಗಳಿಲ್ಲ. ಒಂದು ಮೂಲದ ಪ್ರಕಾರ, ಜರ್ಮನಿಯಲ್ಲಿ ನಾಜಿಗಳು ಸಲಿಂಗಕಾಮಿಗಳಾಗಿದ್ದ ಹುಡುಗರಿಗೆ ಗುಲಾಬಿ ಹಚ್ಚೆ ಹಾಕುತ್ತಿದ್ದುದರಿಂದ ಈ ಬಣ್ಣ ಗಳನ್ನು ಎಲ್ಲ ದೇಶಗಳಲ್ಲೂ ಅದಲು ಬದಲು ಮಾಡಿದರು ಎನ್ನುವುದು. ಆದರೆ ಸತ್ಯ ಇದೇ ಎಂದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ.
ಕೆಲವರು ಗಮನಿಸಿರುವುದು, ಕೆಲವು ಬಣ್ಣಬಣ್ಣದ ಗಿಣಿಗಳಲ್ಲಿ , ಗಂಡು ಗಿಣಿಗೆ ನೀಲಿ ಮೂತಿ, ಹೆಣ್ಣು ಗಿಣಿಗೆ ಗುಲಾಬಿ ಬಣ್ಣದ ಮೂತಿಯಿರುತ್ತದೆ , ಆ ಮೂಲದಿಂದ ಈ ಅಭ್ಯಾಸ ಶುರುವಾಯಿತೆಂದು! ಸಧ್ಯಕ್ಕೆ ಅದನ್ನು ನಂಬುವುದೇ ಬುದ್ಧಿವಂತಿಕೆಯಲ್ಲವೇ?
(ಕೆಂಡಸಂಪಿಗೆ, ಸೆಪ್ಟೆಂಬರ್, ೨೦೦೯)
ಚಿತ್ರ: ಪಿಕಾಸ್ಸೋ
No comments:
Post a Comment