ನಿಮ್ಮನ್ನು ಎಷ್ಟೊಂದು ಮಿಸ್ ಮಾಡ್ತೀನಿ.
ಹೌದು. ಸೂರ್ಯ ಮುಳುಗುತ್ತಿರುವಾಗ ನನ್ನ ಅಣುಶಕ್ತಿ ನಗರದ ಹದಿನಾರನೇ ಮಹಡಿಯ ಕಿಟಕಿಗಳಿಂದ ರುಯ್ಯನೆ ನುಗ್ಗುತ್ತಿದ್ದ ಮಾನ್ಸೂನಿನ ಗಾಳಿ ಸೃಷ್ಟಿಸಿದ ಮ್ಲಾನತೆಯ ನಡುವೆ
ಇದ್ದಕ್ಕಿದ್ದಂತೆ ಕಿಣಿಕಿಣಿಸುತ್ತಾ ಬರುತ್ತಿದ್ದ ನಿಮ್ಮ ಲವಲವಿಕೆಯ ಕರೆಗಳನ್ನು ಮಿಸ್
ಮಾಡ್ತೀನಿ. ನಿಮ್ಮ
ಅಕ್ಕರೆಯನ್ನು, ಜೋಕುಗಳನ್ನು,
ನೀವು ಬರೆಯುತ್ತಿದ್ದ ಅಂದಿನ ಕತೆಯ ಬಗ್ಗೆ ಹೇಳುವಾಗ ನಿಮಗಿರುತ್ತಿದ್ದ ಉತ್ಸಾಹವನ್ನು ಮಿಸ್ ಮಾಡ್ತ್ತೀನಿ. ಪ್ರತಿ ಪುಸ್ತಕ ಬಂದೊಡನೆ ನಿಮ್ಮ ನಲ್ಮೆಯ
ಸಹಿಯೊಂದಿಗೆ ತಲಪುತ್ತಿದ್ದ ಪ್ರತಿ,
ನೀವಷ್ಟು ದೊಡ್ಡ ಬರಹಗಾರರಾಗಿದ್ದೂ ಆಗಲೇ ಬರೆಯಲು ಪ್ರಾರಂಭ ಮಾಡಿದ್ದ ನನ್ನ ಕತೆಗಳಿಗೆ ನೀವು ಅಷ್ಟೊಂದು
ಅಸ್ಥೆಯಿಂದ ಬರೆದು ಕಳಿಸುತ್ತಿದ್ದ ದೀರ್ಘ ಟಿಪ್ಪಣಿಗಳನ್ನು ಕಳಕಳಿಯಿಂದ ನೆನೆಸಿಕೊಳ್ತೀನಿ.
ಪ್ರತಿ ಚಟುವಟಿಕೆಯಲ್ಲೂ ನಿಮ್ಮ ಶಿಸ್ತು, ನಾವು ನಿಮ್ಮ ಮನೆಗೆ ಬಂದಾಗ
ತೊಡುತ್ತಿದ್ದ ಒಂದು ಸುಕ್ಕೂ ಇಲ್ಲದ ಇಸ್ತ್ರಿ ಶರಟು, ಕೊಡುತ್ತಿದ್ದ ಕುರುಕುರು ಚಕ್ಕುಲಿ,
ಸುಂದರ ಉದ್ದದ ಗ್ಲಾಸುಗಳಲ್ಲಿ ಬರುತ್ತಿದ್ದ
ಚಿಲ್ಲ್ಡ್ ಬಿಯರ್ ಎಲ್ಲವೂ ಪರ್ಫ಼ೆಕ್ಟ್ ಆಗಿರಬೇಕು ನಿಮಗೆ. ಆಗ ನೀವು ಓದಿ
ತೋರಿಸುತ್ತಿದ್ದ ನಿಮ್ಮ ಲೇಟೆಸ್ಟ್ ಬರಹದ ತುಣುಕುಗಳು,
ನಮ್ಮೆಲ್ಲರ ಪ್ರತಿಕ್ರಿಯೆಗಾಗಿ
ಪುಟ್ಟ ಮಗುವಿನಂತೆ ಕಾಯುತ್ತಿದ್ದ ಕಾತರ ಎಲ್ಲವನ್ನೂ ಮಿಸ್ ಮಾಡ್ತೀನಿ. ನಾನು ’ಚೆನ್ನಾಗಿದೆ’ ಎಂದರೆ
ನಾನು ಹೇಳುವಂತೆ ’ತುಂಂಂಂಂಂಂಂಬಾ ಚೆನ್ನಾಗಿದೆಯಾ?’ ಎಂದು ನೀವು ತಮಾಷೆ ಮಾಡುತ್ತಿದ್ದುದು,
ಕೊಂಕಣಿ ಭಾಷೆಯ ರಾಗದಲ್ಲಿ ನೀವು ಆಡುತ್ತಿದ್ದ ಇಂಗ್ಲಿಶ್ ಮತ್ತು ಕನ್ನಡದ ಮಾತುಗಳು
ಇನ್ನೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿವೆಅ॒ದನ್ನು ಎಷ್ಟೊಂದು ಮಿಸ್ ಮಾಡ್ತೀನಿ.
ನಮಗೆ ಮುಂಬೈ ಎಂದರೆ ನೀವಿಲ್ಲದಿಲ್ಲ. ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್, ಅದರೆದುರು ಕಪ್ಪು
ಬಂಡೆಗಳ ನಡುವೆ ಭೋರ್ಗರೆಯುತ್ತಿದ್ದ ಸಮುದ್ರ. ಬಾಲ್ಕನಿಯಲ್ಲಿದ್ದ ನಿಮ್ಮ ಈಸಿಚೇರ್.
ಅಷ್ಟೊಂದು ಸುಂದರವಾಗಿ ಅಲಂಕರಿಸಿದ್ದ ಅಚ್ಚುಕಟ್ಟಾದ ನಿಮ್ಮ ಪ್ರೀತಿಯ ಫ಼್ಲ್ಯಾಟ್..
ಬ್ರಾಹ್ಮೀ ಮುಹೂರ್ತದಲ್ಲಿ ನೀವು ತಪ್ಪದೆ ಎದ್ದು ಬರೆಯುವಾಗ ಕೂಡುತ್ತಿದ್ದ ಕುರ್ಚಿ, ಅದರಲ್ಲಿ
ಮುತ್ತು ಪೋಣಿಸಿದಂತೆ ನೀಟಾದ ನೋಟ್ ಬುಕ್ಕಿನಲ್ಲಿ ಹರಿತವಾದ ಪೆನ್ಸಿಲ್ಲಿನಿಂದ ತೊಡೆಮೇಲೆ ನೋಟ್ ಬುಕ್
ಇಟ್ಟುಕೊಂಡು ಬರೆಯುತ್ತಿದ್ದ ನೀವು. ಈ ಬೆಳಗಿನ ಚಿತ್ರ ನಮ್ಮ ಮುಂದೆ ಬಿಡಿಸಿದವರು ನೀವೇ.
ಕರ್ನಾಟಕ ಸಂಘದಲ್ಲಿ, ಮೈಸೂರು ಎಸ್ಸೋಸಿಯೆಶನ್ನಿನಲ್ಲಿ ಪ್ರತಿ ಕನ್ನಡ ಕಾರ್ಯಕ್ರಮಕ್ಕೂ
ತಪ್ಪದೆ ಬರುತ್ತಿದ್ದ ನೀವು. ನಿಮ್ಮ ಜೇಬಿನಲ್ಲಿ ಯಾವಾಗಲೂ ಇರುತ್ತಿದ್ದ ಹರ್ಷಿ ಚಾಕೊಲೇಟ್ ಗಳು. ಅಕಸ್ಮಾತ್ ಶುಗರ್ ಕಡಿಮೆಯಾದರೆ?॒ ಮತ್ತೆ ಶಿಸ್ತು.
ನಿಮ್ಮ ಮೊಮ್ಮಗಳು ವೈಶಾಲಿಯ ಬಗ್ಗೆ ನೀವು ಪುಂಖಾನುಪುಂಖವಾಗಿ ಬರೆದ ಮುದ್ದಿನ ಪದ್ಯಗಳೂ,
ಫೋನಿನಲ್ಲಿ ವಿವರಿಸುತ್ತಿದ್ದ ಅಭಿನಂದನನ ಆಟಗಳು, ಮಾಲತಿ ಅವರನ್ನು ಪ್ರತಿವರ್ಷ ತವರೂರಿಗೆ
ಕರೆದುಕೊಂಡು ಹೋಗುತ್ತಿದ್ದ ಅಸ್ಥೆ, ಒಂದು ಚಿತ್ತು ಕಾಟು ಇಲ್ಲದ ನಿಮ್ಮ ಮಾನ್ಯುಸ್ಕ್ರಿಪ್ಟ್ ಗಳು ..ಎಲ್ಲವೂ ಹಾಗೇ ಇದೆ ॒ನಮ್ಮ ಮನದಲ್ಲಿರುವ ಬ್ಯಾಂಡ್ ಸ್ಟ್ಯಾಂಡ್
ಅಪಾರ್ಟ್ ಮೆಂಟಿನಲ್ಲಿ.
ಇಲ್ಲಿ ಎಲ್ಲರಿಗೂ ಪರಿಚಯ ಅದ್ಭುತ ಸಾಹಿತಿ ಯಶವಂತ ಚಿತ್ತಾಲರು. ಅವರು ಬರೆದ ಹೊಸ
ರೀತಿಯ , ನಗರ ಪ್ರಜ್ನೆ ಒಸರುವ ಕತೆ, ಕಾದಂಬರಿಗಳು. ಅಪರೂಪಕ್ಕೆ ಸಮಾರಂಭಗಳಲ್ಲಿ
ಟಿಪ್ ಟಾಪಾಗಿ ಪ್ರತ್ಯಕ್ಷರಾಗುತ್ತಿದ್ದ,
ಕನ್ನಡಿಗರ ಪ್ರೀತಿಗಾಗಿ ಹಂಬಲಿಸುತ್ತಿದ್ದ ಈ ಸರಳ, ಸಂಪನ್ನ ವ್ಯಕ್ತಿ.
ಐ ಮಿಸ್ ಯೂ ಎಂದು ಹೇಳುವಾಗ ವಿಚಿತ್ರ ಸಂಕಟ, ಅಶ್ಚರ್ಯ ಎರಡೂ ಆಗುತ್ತದೆ ॒ಏಕೆಂದರೆ
ನೀವು ಒಂದು ನಡುರಾತ್ರಿ ಎಲ್ಲಾ ಬಿಟ್ಟು ಸದ್ದಿಲ್ಲದೆ ನಿಮ್ಮ ಪ್ರೀತಿಯ ಬ್ಯಾಂಡ್ ಸ್ಟ್ಯಾಂಡ್ ಮನೆಯಿಂದ
ನಿಮ್ಮೆದುರಿನ ಕಡಲಿನ ಕತ್ತಲೊಳಗೆ ನಡೆದು ಬಿಟ್ಟಿರಿ. ಆದರೆ ನೀವು ನನ್ನ, ನಿಮ್ಮೆಲ್ಲಾ
ಆಪ್ತ ಮುಂಬೈ ಗೆಳೆಯರ ಬಳಗದ ಹೃದಯಗಳಲ್ಲಿ ಹಾಗೇ ನಗುತ್ತಿದ್ದೀರಿಟಿ॒ಪಿಕಲ್ ಕೊಂಕಣಿ ಶೈಲಿಯಲ್ಲಿ
’ಜೋಕಾ,,,?!’ ಎಂದು ಕೇಳುತ್ತಾ!
ಚಿತ್ರ: ಸ್ಮಿತಾ ಕಾಯ್ಕಿಣಿ
ಚಿತ್ತಾಲರ ಬಗ್ಗೆ ಮತ್ತು ಅವರ ಬದುಕಿನ ಚಂದದ ಚಿತ್ರ ನೀಡಿದಕ್ಕೆ ವಂದನೆ,
ReplyDeleteಚಿತ್ತಾಲರ ಬಗ್ಗೆ ಮತ್ತು ಅವರ ಬದುಕಿನ ಚಂದದ ಚಿತ್ರ ನೀಡಿದಕ್ಕೆ ವಂದನೆ,
ReplyDeleteಚಿತ್ತಾಲರ ಬಗ್ಗೆ ಮತ್ತು ಅವರ ಬದುಕಿನ ಚಂದದ ಚಿತ್ರ ನೀಡಿದಕ್ಕೆ ವಂದನೆ,
ReplyDelete