ಜನ ಕಾಣದ ವಾಸಂತಿ
ಪಡುಕೋಣೆ
ಅದೊಂದೇ ಸಲ ನಾನು
ಅವರನ್ನು ನೋಡಿದ್ದು.
ವರ್ಷಗಳ ಹಿಂದೆ,
ಕರ್ನಾಟಕ ಸಂಘದಲ್ಲಿ
ಹಿರಿಯ ಲೇಖಕಿಯರನ್ನು
ಸನ್ಮಾನ ಮಾಡಿದಾಗ.
ಆಗ ಚಿ.ನ. ಮಂಗಳಾ
ಮುಖ್ಯ ಅತಿಥಿಯಾಗಿದ್ದರು.
ಆಗ ಅವರನ್ನು
ಮೂಲತಃ ಕಂಡಿದ್ದು
“ನನ್ನ ಮಗ
ಗುರುದತ್ತ”ನ
ಲೇಖಕಿಯಾಗಿ. ಗುರುದತ್ತನ ತಾಯಿಯಾಗಿ. ಅದರಾಚೆ ಯಾರಿಗೂ
ಅವರ ಬಗ್ಗೆ
ಅಷ್ಟೊಂದು ಕುತೂಹಲವಿರಲಿಲ್ಲ.
ಆದರೆ, ಅವರ
ಬಗ್ಗೆ ಎಲ್ಲರೂ
ತಿಳಿಯಬೇಕಾದ್ದು ಇನ್ನೂ ಬಹಳವಿತ್ತು.
ಅವರು ಬರ್ಮಾದಲ್ಲಿ ಹುಟ್ಟಿದವರು.
೧೨ ವರ್ಷಕ್ಕೆ
ಮದುವೆಯಾಗಿ, ೧೬ಕ್ಕೆ ಮಕ್ಕಳನ್ನು ಹಡೆಯಲು ಪ್ರಾರಂಭಿಸಿದವರು.
ಕ್ಲರ್ಕ್ ಆಗಿದ್ದ
ಗಂಡನೊಡನೆ, ಯಾವಾಗಲೂ
ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟಿನಲ್ಲಿ ಅತ್ಯಂತ ಪ್ರತಿಭಾವಂತರಾದ
ಐದು ಮಕ್ಕಳನ್ನು
ಸರಿಯಾದ ವಿದ್ಯಾಭ್ಯಾಸ,
ಮೌಲ್ಯಗಳನ್ನು ಕೊಟ್ಟು ಬೆಳೆಸಲು ಹೆಣಗಿದವರು. ಬೆಂಗಳೂರು,
ಕಲ್ಕತ್ತಾ, ಮುಂಬೈಯಲ್ಲಿ
ಕೆಲಕೆಲ ವರ್ಷಗಳು
ಕಳೆಯುತ್ತಾ ಬಂಗಾಲಿ,
ಹಿಂದಿ, ಇಂಗ್ಲಿಷ್,
ಕನ್ನಡ, ಗುಜರಾತಿ,
ಕೊಂಕಣಿ, ಮರಾಠಿ
ಭಾಷೆಗಳಲ್ಲಿ ಪರಿಣತಿ ಪಡೆದವರು. ಮೊದಲು ಹೆಚ್ಚು
ಶಾಲೆಯೇ ಕಂಡಿಲ್ಲದೆ,
ಗುರುದತ್ತನೊಡನೆಯೇ ಮೆಟ್ರಿಕ್ ಪಾಸ್ ಮಾಡಿದವರು. ಸಮಯ
ಸಿಕ್ಕಾಗಲೆಲ್ಲಾ ಸಿಕ್ಕ ಪುಸ್ತಕ, ಪತ್ರಿಕೆಗಳನ್ನು ಓದಿ
ಬದುಕೆಲ್ಲಾ ಕಲಿತವರು.
ಶಾಲೆಗಳಲ್ಲಿ ಕಲಿಸಿ, ಅವಕಾಶವಿದ್ದಾಗ ಗುಜರಾತಿ ಮಹಿಳೆಯರಿಗೆ
ಇಂಗ್ಲಿಷ್ ಹೇಳಿಕೊಟ್ಟು,
ರಾತ್ರಿ ಎಲ್ಲಾ
ಕೂತು ವಾಟರ್
ಥಾಮ್ಸ್ನ್ನಿಂದ ಬರುತ್ತಿದ್ದ
ಅಡ್ವಟೈಜಿಂಗ್ ಕಾಪಿಗಳನ್ನು ಕನ್ನಡ, ಬಂಗಾಲಿ, ಹಿಂದಿಗಳಿಗೆ
ಅನುವಾದ ಮಾಡಿ
ಸಂಸಾರ ತೂಗಿಸಲು
ಕಷ್ಟಪಟ್ಟವರು.
ಮಹಾತ್ಮಾಜಿಯವರ ಆಂದೋಳನದಲ್ಲಿ ಸಕ್ರಿಯ
ಪಾತ್ರ ವಹಿಸಲು
ಆಗದಾಗ ಒದ್ದಾಡಿದವರು.
ಕತೆ, ಲೇಖನ,
ಚಿತ್ರಕತೆ, ಕಾದಂಬರಿ,
ಆತ್ಮಕಥೆ, ಬೇರೆ
ಬೇರೆ ಭಾಷೆಗಳಿಂದ
ಪ್ರಖ್ಯಾತ ಕಾದಂಬರಿಗಳ
ಅನುವಾದ, ನಾಟಕ,
ಸಿನಿಮಾ-ಹೀಗೆ
ಹೊಸ ಹೊಸ
ಅಭಿವ್ಯಕ್ತಿಗಳ ಹುಡುಕಾಟದಲ್ಲೇ ಇದ್ದವರು. ಮಧ್ಯಮ ವರ್ಗೀಯ
ಮೌಲ್ಯಗಳಲ್ಲಿ ಹೂತು ಹೋದ ಜನ “ಮಗ ಕುಣಿತ ಕಲಿಯಲು
ಒಪ್ಪಿಗೆ ಕೊಟ್ಟಳು”
ಎಂದೆಲ್ಲಾ ಹಂಗಿಸಿದರೂ
ಲಕ್ಷಿಸಿದೆ, ಗುರುದತ್ತನ ಪ್ರತಿಭೆ, ಆಸಕ್ತಿಗಳನ್ನು ಗುರುತಿಸಿ,
ಉದಯಶಂಕರರ ಅಲ್ಮೋಡಾದ
ನೃತ್ಯಶಾಲೆಗೆ ಅವನನ್ನು ಕಳಿಸಿದವರು. ಬದುಕೆಲ್ಲಾ ಎಡಬಿಡದೆ
ಕಾಡುತ್ತಿದ್ದ ಗುರುದತ್ತ, ಗೀತಾ, ಅವರ ಮಗ ತರುಣನ ಅಕಾಲ
ಸಾವಿನ ನೋವಿನ
ನೆರಳಿನಲ್ಲೇ, ಒಬ್ಬರೇ ಮಾತುಂಗಾದ ತಮ್ಮ ಹಳೆಯ
ಮನೆಯಲ್ಲಿ ಇರುತ್ತಾ,
ಸುತ್ತುಮುತ್ತಲಿನ ಜೋಪಡಿಗಳ ಮಕ್ಕಳಿಗೆ ಪಾಠ-ಹಾಡು
ಕಲಿಸಲು, ನೋಡಿಕೊಳ್ಳಲು
ಜೊತೆಗಿದ್ದ ಮಂಜುಳಾಗೆ
ಇಂಗ್ಲಿಷ್ ಹೇಳಿಕೊಡಲು
ಪ್ರತಿದಿನ ಕೂತವರು.
ತಮ್ಮ ಹಕ್ಕುಗಳ ಬಗ್ಗೆ,
ಸಮಾಜದಲ್ಲಿ ತಮ್ಮ
ಸ್ಥಾನದ ಬಗ್ಗೆ,
ಎಲ್ಲ ಕಡೆ
ತಾವು ಎದುರಿಸುತ್ತಿರುವ
ಶೋಷಣೆಯ ಬಗ್ಗೆ,
ಗಂಡಿನಿಂದ ತಮಗಾಗುತ್ತಿರುವ
ಅನ್ಯಾಯ, ದಬ್ಬಾಳಿಕೆಯ
ಬಗ್ಗೆ, ಒಳಗು-ಹೊರಗುಗಳನ್ನು ಸಮವಾಗಿ
ತೂಗಿಸಲು ತಾವು
ಪಡಬೇಕಾದ ಶ್ರಮದ
ಬಗ್ಗೆ, ತಮಗೆ
ಸಿಗದ ಅವಕಾಶಗಳ
ಬಗ್ಗೆ, ಮಾಡಲಾರದ
ನಿರ್ಧಾರಗಳ ಬಗ್ಗೆ
ಉಚ್ಛ ಸ್ವರದ
ಘೋಷಣೆಗಳನ್ನು ಸಿಕ್ಕ ವೇದಿಕೆಗಳಿಂದ ಮಾಡುತ್ತಿರುವ ಹಲವು
ಸ್ತ್ರೀವಾದಿಗಳಿಗಿಂತ ತುಂಬಾ ಭಿನ್ನ
ವಾಸಂತಿ. ಯಾವ
ಸೊಲ್ಲಿಲ್ಲದೆ, ತಾವು ಬದುಕಿದ ರೀತಿಯಿಂದಲೇ, ಬದುಕಿನ
ಬಗ್ಗೆ ಅತ್ಯಂತ
ಮಹತ್ವದ, ಪರಿಣಾಮಕಾರಿಯಾದ
ಹೇಳಿಕೆಗಳನ್ನು ನೀಡಿದವರು. ಸರಿ ತೋರಿದಂತೆ ಬಾಳಿದವರು.
ವಾಸಂತಿ ಪಡುಕೋಣೆ ಏಪ್ರಿಲ್
೧ರಂದು ತಮ್ಮ
೮೫ನೇ ವಯಸ್ಸಿನಲ್ಲಿ
ತೀರಿಕೊಂಡರು. ಅವರ ಬಗ್ಗೆ ಲೇಖನಕ್ಕಾಗಿ ‘ಪತ್ರಿಕೆ’ಯಿಂದ ಫೋನ್
ಬಂದಾಗ, ಬರೆಯುವ
ಮೊದಲು ಅವರು
ಮಗಳು ಕಲಾವಿದೆ
ಲಲಿತಾ ಲಾಜ್ಮಿಯವರೊಡನೆ
ಮಾತಾಡಬೇಕೆನಿಸಿತು. ಅಂಧೇರಿಯಲ್ಲಿರುವ ಅವರಿಗೆ ಫೋನ್ ಮಾಡಿದಾಗ,
೪-೫
ದಿನಗಳ ನಂತರ
ತಾವು ವಾಸಂತಿಯವರ
ಮಾತುಂಗಾದ ಮನೆಗೆ
ಬಂದು ೨
ದಿನ ಇರುವುದಾಗಿಯೂ,
ಅಲ್ಲೇ ನಾನು
ಅವರನ್ನು ಬಂದು
ನೋಡಬಹುದೆಂದೂ ಹೇಳಿದರು. ಅಂದು ಸಂಜೆ ನಾನವರ
ಮನೆಯ ಬೆಲ್
ಮಾಡಿದಾಗ, ಬಾಗಿಲು
ತೆಗೆದವರು ಲಲಿತಾ,
ಚೆಲುವೆ. ಅತ್ಯಂತ
ಸ್ನೇಹಮಯಿ. ಅವರ
ಹಿಂದೆಯೇ ಬೊಗಳುತ್ತಾ
ಬಂದ ಅವರ
ಎರಡು ನಾಯಿಗಳಿಗೆ
ಸುಮ್ಮನಿರಲು ಹೇಳುತ್ತಾ ನನ್ನನ್ನು ಕೂರಲು ಹೇಳಿದರು.
“ಅಮ್ಮ ಇಲ್ಲದಿರುವುದನ್ನು
ಇವರಿಬ್ಬರೂ ತುಂಬಾ
miss ಮಾಡ್ತಿದಾರೆ... ಅದಕ್ಕೇ ತುಂಬಾ
ರೆಸ್ಟಲೆಸ್ ಆಗಿದಾರೆ.
ಒಳಗೆ ಬಿಟ್ಟು
ಬರ್ತೀನಿ...”
ಎಂದವರೇ ಒಳಗೆ
ಹೋದರು. ವಾಸಂತಿಯೊಡನೆ
೨೦ ವರ್ಷದಿಂದ
ಇದ್ದ ದಕ್ಷಿಣ
ಕನ್ನಡದ ಹುಡುಗಿ
ಮಂಜುಳಾ ತಂದ
ನಿಂಬೆಹಣ್ಣಿನ ಶರಬತ್ತು ಕುಡಿಯುತ್ತಾ, ಅವಳೊಡನೆ ಮಾತಾಡುತ್ತಿದ್ದಂತೆ,
ಸ್ವಲ್ಪ ಹೊತ್ತಿನ
ನಂತರ ಮರಳಿ
ಬಂದು ಕೂತರು.
ಅವರೊಡನೆ ತುಂಬಾ
ಪುಸ್ತಕಗಳು, ಫೋಟೋಗಳು, ಹಳದಿ ತಿರುಗಿದ ಬಿಳಿ
ಹಾಳೆಗಳ ಲೇಖನಗಳು
ಇದ್ದವು. ಅದನ್ನು
ನಮ್ಮೆದುರಿಗಿದ್ದ ಟೇಬಲ್ ಮೇಲೆ ರಾಶಿ ಹಾಕಿದರು.
ಎಷ್ಟೋ ವರ್ಷಗಳ ಡೈರಿಗಳು.
ರಾಶಿ ರಾಶಿ
ಫೋಟೋಗಳು. ಗುರುದತ್
ಗೀತಾ, ಮಕ್ಕಳು
ಲೋನಾವಾಲಾದಲ್ಲಿ ಕಳೆದ ಗಳಿಗೆಗಳು, ಸಿನಿಮಾ ಮುಹೂರ್ತಗಳು,
ವಹೀದಾ ಚಿತ್ರಗಳು,
ವಾಸಂತಿ ತನ್ನ
ಪ್ರೀತಿಯ ಬೆಕ್ಕನ್ನು
ಎತ್ತಿಕೊಂಡು ನಿಂತಿರುವ ಹದಿಹರೆಯದ ಯುವತಿ. ಆತ್ಮಾರಾಮರ
ಚಿತ್ರೋದ್ಯಮದ ಗೆಳೆಯರು. ಹುಟ್ಟುಹಬ್ಬ, ಪಾರ್ಟಿ, ಅವಾರ್ಡ್
ಬಂದ ಖುಷಿಯ
ಸಂತೋಷಕೂಟಗಳು. ಲಲಿತಾ, ಗುರುದತ್ತ, ಆತ್ಮಾರಾಮ, ದೇವಿದತ್,
ವಿಜಯ ಎಲ್ಲರೊಂದಿಗೆ
ನಗುನಗುತ್ತಾ ಇರುವ ಸಂತೃಪ್ತ ತಾಯಿ. ಪ್ರಖ್ಯಾತ
ಬ್ರಿಟಿಷ್ ಫೋಟೋಗ್ರಾಫರ್
ಒಬ್ಬರು ತೆಗೆದ
ವಾಸಂತಿಯ ಅಪೂರ್ವ
ಚಿತ್ರಗಳು. ಕಲ್ಪನಾ,
ಅರುಣಾ, ತರುಣ...
ಎಲ್ಲಾ ಮೊಮ್ಮಕ್ಕಳು.
ಹೊಳಪುಗಣ್ಣಿನ ಪುಟಾಣಿಗಳು. ಮಧ್ಯೆ ಯಾವ್ಯಾವುದೋ ಪತ್ರಗಳು.
‘ಸೋಷಿಯಲ್ ವೆಲ್‌ಫೇರ್’ ಎಂಬ
ಇಂಗ್ಲಿಷ್ ಲೇಖನ.
ಬುದ್ಧದೇವ ಬಸು
ಅವರ ಬಂಗಾಲಿ
ಕತೆಯನ್ನು ಕನ್ನಡಕ್ಕೆ
ಮಾಡಿದ ಅನುವಾದ
“ಅಪ್ಪನಾಗುವುದು.” ಸ್ತೋತ್ರಗಳು. ಮೊಮ್ಮಗಳು ಕಲ್ಪನಾ ಫೋರ್ಟ್
ಕಾನ್ವೆಂಟಿನಲ್ಲಿ ಧರಿಸುತ್ತಿದ್ದ ಬ್ಯಾಡ್ಜ್.
ಆತ್ಮಾರಾಮ್ ಅವರ ರೂಯಿಯಾ
ಕಾಲೇಜಿನ ಐಡೆಂಟಿಟಿ
ಕಾರ್ಡ್. ವಿವೇಕಾನಂದರ
ಅಮೃತವಾಣಿ.
ಅದನ್ನೆಲ್ಲಾ ವಿಂಗಡಿಸುತ್ತಾ, ನನಗೆ
ತೋರಿಸುತ್ತಾ ಲಲಿತಾ ಅಮ್ಮನನ್ನು ನೆನೆಸಿಕೊಂಡರು.
ಲಲಿತಾ ನೆನೆದ “ಅಮ್ಮ”
ಇವತ್ತಿಗೆ ಅವರು ಹೋಗಿ
ಸರಿಯಾಗಿ ಒಂದು
ತಿಂಗಳು. ಈಗ
ತಾನೇ ಅವರ
ಕಬರ್ಡ್ ಕ್ಲೀನ್
ಮಾಡುತ್ತಿದ್ದೆ. ಎಷ್ಟೊಂದು ಪುಸ್ತಕಗಳಿತ್ತು ಅಮ್ಮನ ಹತ್ತಿರ...
ಷಿ ವಸ್
ವೆರಿ ಸೆಂಟಿಮೆಂಟಲ್...
ಬೀರು ತುಂಬಾ
ಕಾಗದಗಳು, ಡೈರಿಗಳು,
ಫೋಟೋಗಳು, ಮೊಮ್ಮಕ್ಕಳ
ಚಿಕ್ಕಪುಟ್ಟ ಗ್ರೀಟಿಂಗ್ ಕಾರ್ಡುಗಳು... ಅಲ್ಲದೆ ಷಿ
ವಸ್ ವೆರಿ
ಜನರಸ್... ಕನ್ನಡ
ಕೇಳಿಬಿಟ್ಟರಂತೂ ತುಂಬಾ ಖುಷಿ... ತಮ್ಮ ಪುಸ್ತಕಗಳನ್ನು
ಕೊಟ್ಟುಬಿಡೋರು... ಹಾಗಾಗಿ ಈಗ “ನನ್ನ ಮಗ
ಗುರುದತ್ತ” ಇರುವುದು
ಕೇವಲ ೪
ಕಾಪಿ... ನಾವು
೩ ಮಕ್ಕಳು
ಒಂದೊಂದು ಇಟ್ಟುಕೊಂಡರೆ
ಒಂದು ಉಳಿಯುತ್ತೆ...
ಇನ್ನು ಇದ್ಯಾವುದು...
ನನಗೆ ಕನ್ನಡ
ಓದೋಕೆ ಬರೊಲ್ಲ...
ಹೇಳಿ... ಬಿಮಲ್
ಮಿತ್ರಾ ‘ಮಿಥುನ
ಲಗ್ನ’ ಇದೊಂದೇ
ಕಾಪಿ ಉಳಿದಿದೆ.
ಅವರ ‘ಜೀವನ
ಹೋರಾಟ’ ಆತ್ಮಕಥೆಯಂತೂ
ಒಂದು ಕಾಪಿಯೂ
ಇಲ್ಲ... ಬೆಂಗಳೂರಲ್ಲಿ
ಸಿಕ್ಕಬಹುದೇನು?
ತುಂಬಾ ಕಷ್ಟದಲ್ಲಿ ಬೆಳೆದೆವು
ನಾವೆಲ್ಲಾ... ಅಮ್ಮ ಏನಾದರೂ ಕೆಲಸ ಮಾಡುತ್ತಿದ್ದಳು
ಸಂಸಾರ ತೂಗಿಸೋಕೆ.
ಅಪ್ಪ ಕ್ಲರ್ಕ್
ಆಗಿದ್ದರು. ಕಲ್ಕತ್ತಾದಿಂದ
ಮಹಾಯುದ್ಧದ ಸಮಯದಲ್ಲಿ
ಹೆದರಿ ಸಾವಿರಾರು
ಜನ ಓಡಿಬಂದಾಗ,
ನಾವೂ ಬಂದಿದ್ದೆವು-ಅಮ್ಮನ ಜೊತೆ.
ಅಪ್ಪ, ಗುರುದತ್ತ
ಕಲ್ಕತ್ತಾದಲ್ಲೇ ಉಳಿದಿದ್ದರು. ಹೇಗೆ ತುಂಬಿತ್ತು ಟ್ರೈನುಗಳು,
ನಮ್ಮಂಥ ಮಕ್ಕಳನ್ನೆಲ್ಲಾ
ಕಿಟಕಿಯಿಂದ ಒಳಗೆ
ತಳ್ಳಿದರು. ಅಮ್ಮ
೨ ದಿನ
ನಿಂತೇ ಪ್ರಯಾಣ
ಮಾಡಿದ್ದಳು. ಆಗ, ಮುಂಬೈಗೆ ಬಂದರೂ ಕಷ್ಟವೇ.
ಒಂದು ಸಲ
ನೆನಪಿದೆ. ನಾನಿನ್ನೂ
ತುಂಬಾ ಚಿಕ್ಕಹುಡುಗಿ.
ಅಮ್ಮ ರೇಷನ್
ಅಂಗಡಿಯಿಂದ ಸೀಮೆಎಣ್ಣೆ
ತರಲು ಕಳಿಸಿದ್ದಳು.
ನಾನು ೭
ಗಂಟೆ ಕ್ಯೂನಲ್ಲಿ
ನಿಲ್ಲಬೇಕಾಯಿತು. ನಂಬುತ್ತೀರಾ? ಕೊನೆಗೆ ನನ್ನ ಸರದಿ
ಬಂದಾಗ ಸೀಮೆಎಣ್ಣೆ
ಮುಗಿದಿತ್ತು!
ಅಮ್ಮ ತುಂಬಾ ಲೋನ್ಲಿಯಾಗಿದ್ದರು.
ಕಳೆದ ೭
ವರ್ಷಗಳಿಂದ ಈ
ಮಾತುಂಗಾ ಮನೆಯಲ್ಲಿ
ಒಬ್ಬರೇ ಇದ್ದರು.
ಅದು ಅವರ
ಇಷ್ಟ. ಜೊತೆಗೆ,
ಮಂಜುಳಾ ಅವರನ್ನು
ನೋಡಿಕೊಳ್ಳೋಕೆ ಇದ್ದಳು. ನಾವು ಮಕ್ಕಳೆಲ್ಲಾ ಬೊಂಬಾಯಲ್ಲೇ
ಇರುವುದರಿಂದ ಆಗಾಗ ಹೋಗಿ ಬರುತ್ತಿದ್ದೆವು. ಅವಳಿಗೆ
ಪತ್ರಗಳನ್ನು ಬರೆಯುವ ಹುಚ್ಚು ತುಂಬಾ ಇತ್ತು.
ಫ್ರೆಂಡ್ಸ್ಗೆ,
ಕಜಿನ್ಸ್ಗೆ,
ದೂರದ ನೆಂಟರಿಷ್ಟರಿಗೆ,
ಎಂದೋ ಎಲ್ಲೋ
ಪಕ್ಕದ ಮನೆಯಲ್ಲಿದ್ದವರಿಗೆ-ನೂರಾರು ಪತ್ರ
ಬರೆಯುತ್ತಿದ್ದಳು. ಇತ್ತೀಚೆಗೆ ಬೇರೆ ಬರವಣಿಗೆ ಕಡಿಮೆಯಾಗಿತ್ತು.
ಆದರೆ ಪತ್ರ
ಬರೆಯುವುದು ಮಾತ್ರ
ಕಡಿಮೆಯಾಗಿರಲಿಲ್ಲ.
ತುಂಬಾ ಇತ್ತೀಚೆಗೆ... ಅದೂ
ಆತ್ಮಾರಾಮ ಹೋದಮೇಲೆ...
ಪದೇಪದೇ ಹೇಳೋರು.
ದೇವರೇ, ನನಗೆ
ಇನ್ನು ಬದುಕೋಕೆ
ಇಷ್ಟವಿಲ್ಲ. ವೈ ಡೋಂಟ್ ಯೂ ಟೇಕ್
ಮೀ ಅವೇ?
ಷಿ ಲೌವ್ಡ್ ಮ್ಯಾಕರೋನಿ
ಅಂಡ್ ಮೊಗ್ರಾಸ್...
ಹೌದು. ಮಲ್ಲಿಗೆ
ಹೂ ಅಂದರೆ
ಅವರಿಗೆ ತುಂಬಾ
ಪ್ರೀತಿ. ಅವರು
ಹೋಗುವ ಮುಂಚೆ
ನಾನು, ನನ್ನ
ಗಂಡ ಅಮ್ಮನ್ನ
ನೋಡಲು ಹೊರಟಾಗ,
ದಾರಿಯಲ್ಲಿ ಟ್ರಾಫಿಕ್
ಸಿಗ್ನಲ್ನಲ್ಲಿ
ಬಂದ ಗಜರಾವಾಲಿ
ಹತ್ತಿರ ಮಲ್ಲಿಗೆ
ಹೂ ಕೊಂಡಿದ್ದೆವು...
ಅಮ್ಮ ಎಷ್ಟು
ಖುಷಿಯಿಂದ ಮುಡಿದುಕೊಂಡಿದ್ದರು.
ಅಮ್ಮ ಒರಿಜಿನಲ್ ಆಗಿ
ಬರೆಯೋದು ಬಿಟ್ಟು
ಎಷ್ಟೋ ವರ್ಷಗಳಾಗಿ
ಹೋದವು. ೩೦-೪೦ ವರ್ಷಗಳೇ
ಆಗಿರಬೇಕು. ಯಾವಾಗ್ಲೂ
ಡಿಪ್ರೆಸ್ಡ್ ಆಗಿರ್ತಿದ್ರು. ನನಗೆ ನೆನಪಿದ್ದಂತೆ,
ಗುರುದತ್ತ ಹೋದಮೇಲೆ,
“ನನ್ನ ಮಗ
ಗುರುದತ್ತ” ಬಿಟ್ಟರೆ,
ಮಾಡಿದ್ದು ಬರೀ
ಟ್ರಾನ್ಸ್ಲೇಷನ್ಸ್.
ಅದಕ್ಕೆ ಇನ್ನೊಂದು
ಕಾರಣವೂ ಇತ್ತು.
ಕನ್ನಡದಲ್ಲಿ ಏನು ಪುಸ್ತಕ ಬರೆದರೂ ಪಬ್ಲಿಷ್
ಮಾಡುವುದು ತುಂಬಾ
ಕಷ್ಟ ಅಂತಿದ್ರು.
“ಮೈ ಸನ್
ಗುರುದತ್” ಇಂಗ್ಲಿಷ್‌ನಲ್ಲಿ ಬರೆದದ್ದರಿಂದ
ತಕ್ಷಣ “ಇಂಪ್ರ್ಲಿಂಟ್’ನಲ್ಲಿ ಪಬ್ಲಿಷ್
ಆಯಿತು. ಇಲ್ಲದಿದ್ದರೆ...
ಅವರಿಗೆ ಈ
ಬಗ್ಗೆ ತುಂಬಾ
ಫ್ರೆಸ್ಟ್ರಷನ್ ಇತ್ತು. ತಮ್ಮ ಬರವಣಿಗೆಗೆ ಏನೂ
ರೆಸ್ಪಾನ್ಸ್ ಸಿಗದಿದ್ದುದು... ಬರಿ ಹಣ ಅಲ್ಲ...
ಯಾವ ರೀತಿ
ರೆಕೊಗ್ನಿಷನ್ ಸಿಕ್ಕಿರಲಿಲ್ಲ.
ನಮ್ಮಲ್ಲಿ ಗುರುದತ್, ಆತ್ಮರಾಮ್,
ದೇವಿದತ್ ಫಿಲ್ಮ್
ಆರಿಸಿಕೊಂಡರು. ಇನ್ನು ವಿಜಯ್ ಅಡ್ವಟೈಜಿಂಗಿಗೆ ಹೋದ.
ಇತ್ತೀಜೆಗೆ ಅವನು
ಒಂದು ಮರಾಠಿ
ಸೀರಿಯಲ್ ಮಾಡಿದಾನೆ
ಟಿವಿಗೆ. ಅದು
ಚೆನ್ನಾಗಿ ಬಂದಿದೆ.
ನಾನೊಬ್ಬಳೇ ಪೇಂಟ್
ಮಾಡೋದು. ನನ್ನ
ಮಗಳು ಕಲ್ಪನಾ
ಕೂಡ ಫಿಲ್ಮ್
ಡೈರೆಕ್ಟ್ ಮಾಡ್ತಾಳೆ...
ಅಮ್ಮನಿಗೆ ಕಲ್ಪನಾ,
ಗುರುದತ್ತ ತುಂಬಾ
ಅಚ್ಚುಮೆಚ್ಚು ಅನ್ನಿಸ್ತಿತ್ತು.
ಅಮ್ಮನಿಗೆ ಉಪ್ಪಿನಕಾಯಿ ಅಂದ್ರೆ
ತುಂಬಾ ಇಷ್ಟ.
ಪ್ರತಿ ಬೇಸಿಗೆಯಲ್ಲಿ
ಅವರೇ ಉಪ್ಪಿನಕಾಯಿ
ಹಾಕಿ ನಮಗೆಲ್ಲಾ
ಕೊಡೋರು. ಈ
ವರ್ಷ ಅವರು
ಮಾವಿನಕಾಯಿ ತರಿಸಿದಾಗ
ನಾನು ಗಲಾಟೆ
ಮಾಡಿದ್ದೆ. ಸುಮ್ಮನೆ
ಯಾಕೆ ಒದ್ದಾಡ್ತೀಯಾಂತ...
ಈ ವರ್ಷ
ಹಾಕಿಬಿಡ್ತೀನಿ. ಮುಂದಿನ ವರ್ಷ ನಾನಿರೋಲ್ಲ ಅಂದಿದ್ರು...
ನಾವೆಲ್ಲಾ ನಮ್ಮ ನಮ್ಮ
ಕ್ಷೇತ್ರಗಳಲ್ಲಿ ಪ್ರಖ್ಯಾತರಾದಮೇಲೆ ಅವರಿಗೇಕೋ ಅನ್ನಿಸ್ತಿತ್ತು... ನನಗೂ ಈ ಕಾಲದವರಿಗೆ ಸಿಕ್ಕ
ಅವಕಾಶ ಸಿಕ್ಕಿದ್ರೆ
ಏನೆಲ್ಲಾ ಸಾಧಿಸಬಹುದಿತ್ತು
ಅಂತ... ಆದರೆ
ಹಾಗೆ ನೋಡಿದ್ರೆ
ಗುರುದತ್ಗೂ
ಅವನು ಬದುಕಿರೋವರೆಗೂ
ಈಗ ಸಿಗುತ್ತಿರುವಂಥಾ
ರೆಕೊಗ್ನಿಷನ್ ಏನೂ ಸಿಕ್ಕಿರಲಿಲ್ಲ. ಅವನ ಫಿಲ್ಮ್ಗೆ ಅವಾರ್ಡ್ಗಳು ಬಂದವು.
ಜನ ಇಷ್ಟಪಟ್ಟರು...
ಆದರೆ ಅವನು
ಹೋಗಿ ಇಷ್ಟು
ವರ್ಷಗಳ ಮೇಲೆ
ಈಗ ಪ್ರಪಂಚದಲ್ಲೆಲ್ಲಾ
ಅವನ ಫಿಲ್ಮ್ಗಳ ಫೆಸ್ಟಿವಲ್ಗಳನ್ನು, ಸೆಮಿನಾರ್ಗಳನ್ನು ನಡೆಸ್ತಿದಾರೆ...
ಇಂಥಾ ಪ್ರಖ್ಯಾತಿ
ಆಗ ಅವನಿಗೆ
ಸಿಕ್ಕಿರಲಿಲ್ಲ.
ನಮ್ಮ ತಂದೆ ತೀರಿಕೊಂಡಾಗ
ಅಮ್ಮ ನಮ್ಮೆಲ್ಲರನ್ನೂ
ಕರೆದು ಹೇಳಿದ್ರು,
“ನೋಡಿ, ನನಗೆ
ಬಿಳೀ ಸೀರೆ
ಉಟ್ಕೊಳ್ಳೋದು, ಬರೀ ಹಣೇಲಿರೋದು ಇಷ್ಟ ಇಲ್ಲ...
ನಾನು ಹೇಗೆ
ಇದ್ದೇನೋ... ಹಾಗೇ ಇರ್ತೀನಿ...” ನಾವೆಲ್ಲಾ
ಹೇಳಿದೆವು, “ಅಮ್ಮ ನಿಂಗೆ ಹೇಗೆ ಬೇಕೋ
ಹಾಗಿರು” ಅಂತ.
ಅವರಿಗೆ ಎಂದೂ
ಬಿಳೀ ಸೀರೆ
ಅಷ್ಟು ಹಿಡಿಸುತ್ತಿರಲಿಲ್ಲ.
ನಾನೊಂದು ಸಲ
ಅಹಮದಾಬಾದಿಗೆ ಹೋದಾಗ ಒಂದು ಕಪ್ಪಂಚಿನ ಬಿಳೀಸೀರೆ
ತಂದುಕೊಟ್ಟಿದ್ದೆ. ಅದನ್ನು ಉಡಲೇ ಇಲ್ಲ! ಆದ್ದರಿಂದಲೇ,
ಅವರು ಹೋದಾಗಲೂ
ನಾವು ಪದ್ಧತಿಯಂತೆ
ಅವರಿಗೆ ಬಿಳಿಸೀರೆ
ಹೊದ್ದಿಸಲಿಲ್ಲ. ಮುನ್ನಿ ಕಬೀರ್ ಗುರುದತ್ತನ ಮೇಲೆ
ಚಿತ್ರ ತಯಾರಿಸುತ್ತಿದ್ದಾಗ,
ಪದೇ ಪದೇ
ಅಮ್ಮನ ಭೇಟಿಯಾಗಿ,
ಅವರೊಡನೆ ಚರ್ಚೆ
ಮಾಡೋಕೆ ಬರ್ತಿದ್ದರು. ಅವರಿಗೆ
ಅಮ್ಮನ್ನ ಕಂಡರೆ
ತುಂಬಾ ಪ್ರೀತಿ.
ಸ್ವಲ್ಪ ದಿನಗಳ
ಹಿಂದೆ, ಅವರು
ಅಮ್ಮನಿಗೆ ಒಂದು
ಒಳ್ಳೇ ಬಣ್ಣಬಣ್ಣದ
ಟಸರ್ ಸೀರೆ
ತಂದು ಕೊಟ್ಟಿದ್ದರು.
ಅಮ್ಮ ಅದನ್ನು
“ನನ್ನ ಹುಟ್ಟಿದಹಬ್ಬದ
ದಿನ ಉಟ್ಕೋತೀನೀಂತ”
ಇಟ್ಕೊಂಡಿದ್ದರು ಹಾಗೇ. ಈ ವರ್ಷ ಅವರ
ಹುಟ್ಟುಹಬ್ಬ ನೋಡಲೇ ಇಲ್ಲ. ಮೇ ೨೫. ನಾವೆಲ್ಲಾ ಅವರ
ಹುಟ್ಟುಹಬ್ಬದ ದಿನ ಯಾವಾಗ್ಲೂ ಸೇರ‍್ತಿದ್ದೆವು.
ಆ ಸೀರೆ
ಅವರಿಗೆ ಹೊದಿಸಿದ್ವಿ...
ಇತ್ತೀಚೆಗೆ ಗುರುದತ್ತನ ಮಗ-ಮಗಳು, ಅವನ
ಲೋನಾವ್ಲಾ ಫಾರ್ಮ್
ಹೌಸ್ ಮಾರಿದಾಗ
ಅಮ್ಮನಿಗೆ ತುಂಬಾ
ಬೇಸರವಾಯ್ತು. ಗುರುದತ್ ಅದನ್ನು ತುಂಬಾ ಪ್ರೀತಿಯಿಂದ
ಕಟ್ಟಿದ್ದ. ಎಷ್ಟು
ಸಲ ನಾವೆಲ್ಲಾ
ಸೇರ್ತಿದ್ವಿ
ಅಲ್ಲಿ. ಎಷ್ಟೊಂದು
ಫಿಲ್ಮ್ ಸ್ಕ್ರಿಪ್ಟ್
ಚರ್ಚೆ ಆಗ್ತಾ
ಇತ್ತು. ಈಗ
ಕೂಡಾ ನೆನಪಿದೆ..
“ಸಾಹಿಬ್ ಬೀಬಿ
ಔರ್ ಗುಲಾಮ್”
ಆ ಮರದ
ಕೆಳಗೆ ಕೂತು
ಚರ್ಚಿಸಿದ್ದು... ಅಮ್ಮ ಕೂಡ ತುಂಬಾ ಚೆನ್ನಾಗಿ
ಸ್ಕ್ರಿಪ್ಟ್ ಬರೆಯೋರು. ಮೊನ್ನೆ ಹೋದಾಗ ನೋಡಿದರೆ,
ಅಲ್ಲೆಲ್ಲಾ ಪಾಳು
ಬಿದ್ದಿತ್ತು. ನಾವು ಕೂಡುತ್ತಿದ್ದ ಸ್ಥಳದಲ್ಲಿ ಹುಚ್ಚಾಪಟ್ಟೆ
ಕಾಡುಗಿಡ, ಪೊದೆ
ಬೆಳೆದು ಬಿಟ್ಟಿತ್ತು...
ಬೇಸರವಾಯಿತು...
ಅಮ್ಮನಿಗೆ ಮೊದಲಿಂದ ಕಲಿಸೋ
ಹುಚ್ಚು ಬಹಳ.
ಎಷ್ಟೊಂದು ಸ್ಕೂಲುಗಳಲ್ಲಿ,
ಮನೆಯಲ್ಲಿ ಹೆಂಗಸರಿಗೆ-ಪಾಠ ಹೇಳ್ತಿದ್ರು.
ಕೊನೇ ದಿನದವರೆಗೂ
ಸುತ್ತಮುತ್ತಲಿನ ಜೋಪಡಿಗಳಲ್ಲಿರುವ ಮಕ್ಕಳು, ಇಲ್ಲಿನ ಕಸಗುಡಿಸುವವರ,
ಕೆಲಸದವರ ಮಕ್ಕಳಿಗೆ
ದಿನಾ ಕಲಿಸುತ್ತಿದ್ದರು.
ಮಂಜುಳಾಗೆ ಇಂಗ್ಲಿಷ್
ಹೇಳಿಕೊಡ್ತಿದ್ದರು. ವಿವೇಕಾನಂದರ ಪುಸ್ತಕಗಳನ್ನು ಓದಿ ಹೇಳುತ್ತಿದ್ದರು.
ಅವರು ಅಷ್ಟೇ
ಶ್ರದ್ಧೆಯಿಂದ ಕಲಿಯುವುದಿಲ್ಲ ಎಂಬ ನೋವು ಇತ್ತು.
ಅವರು ಮನೆಗೆ ಬಂದು
ಹೋಗುವವರೊಡನೆ, ಕೆಲಸದವರು-ದೋಭಿಗಳೊಡನೆ ಇತ್ತೀಚೆಗೆ ತುಂಬಾ
ಮಾತಡೋರು... ಅವರ ಹತ್ತಿರ ತಮ್ಮ ವೈಯಕ್ತಿಕ
ನೋವುಗಳನ್ನು ಸಂಸಾರದ ತೊಂದರೆಗಳನ್ನು ಬಿಚ್ಚುಮನಸ್ಸಿನಿಂದ ಹೇಳಿಕೊಳ್ಳೋರು!... ನಾವೆಷ್ಟು ಹೇಳಿದರೂ ಅವರಿಗೆ
ಅರ್ಥ ಆಗ್ತಿರಲಿಲ್ಲ.
ಎಷ್ಟೋ ಜನ
ಕೇವಲ ಕುತೂಹಲಕ್ಕೋಸ್ಕರ
ಹಾಗೆ ಬಂದು
ಕೇಳ್ತಾರೇಂತ.॒
ತುಂಬಾ ಚೆನ್ನಾಗಿ ಅಡಿಗೆ
ಮಾಡೋರು ಅಮ್ಮ.
ದಿನಾ ರುಟೀನ್
ಕುಕಿಂಗ್ ಅವರಿಗೆ
ಇಷ್ಟ ಇರ್ಲಿಲ್ಲ. ನಾವು
ಅವರು ಹೋಗುವ
ಒಂದು ವಾರ
ಮುಂಚೆ ಹೋದಾಗಲೂ,
ಏನೆಲ್ಲಾ ಮಾಡಿಸಿದ್ದರು.
ಮಂಜುಳಾಗೆ ನಮ್ಮ
ರೀತಿ ಅಡಿಗೆ
ಎಲ್ಲಾ ಹೇಳ್ಕೊಟ್ಟಿದ್ದಾರೆ.
ಈಗ ಮಂಜುಳಾ
ಎಷ್ಟು ಚೆನ್ನಾಗಿ
ಅಡಿಗೆ ಮಾಡ್ತಾಳೆ
ಗೊತ್ತಾ?
ಮೊದಲಿಂದ ಅವರಿಗೆ ಡೈರಿ
ಬರೆಯೋ ಅಭ್ಯಾಸ
ಇತ್ತು. ಷಿ
ವಸ್ ವೆರಿ
ಡಿಸಿಪ್ಲಿನ್ಡ್ ಇನ್ ಹರ್ ಲೈಫ್... ಇಂಗ್ಲಿಷ್ನಲ್ಲೇ ಬರೆಯೋರು ಡೈರಿ...
ನೋಡಿ ಈಗ
ತಾನೇ ಕಣ್ಣು
ಹಾಯಿಸ್ತಿದ್ದೆ... ಗುರುದತ್ತನ ಸಾವು, ಗೀತಾ ಸಾವು,
ಇತ್ತೀಚೆಗೆ ಅವರ
ಮೊಮ್ಮಗನ ದುರ್ಮರಣ,
ಆತ್ಮಾರಾಮನ ಸಾವು.
ತಾಯಿ ತಂದೆಯ
ಆಸರೆ ಇಲ್ಲದೆ
ಬೆಳೆದ ಗುರುದತ್ತನ
ಮಕ್ಕಳ ನೋವು...
ಎಲ್ಲಾ ಇದೆ
ಅಲ್ಲಿ ನೋಡಿ...
ಒಂದು ವೆಡಿಂಗ್
ಆನಿವರ್ಸರಿ ದಿನ
ಬರೀತಾರೆ “ಅವರ್
ವೆಡಿಂಗ್ ಆನಿವರ್ಸರಿ.
(ಹೌಸೂನ್ ೧೯೨೦
ಟು ೧೯೮೯)
ಸಿಕ್ಸ್ಟಿನೈನ್
ಇಯರ್ಸ್
ಆರ್ ಓವರ್.
ವಾಟ್ ಕೈನ್ಡ್
ಆಫ್ ಮ್ಯಾರೀಡ್
ಲೈಫ಼್? ಗಾಡ್
ಆಲೋನ್ ನೋಸ್
ವಾಟ್ ಈಸ್
ಇನ್ ಸ್ಟೋರ್
ಫಾರ್ ದಿ
ಫ್ಯೂಚರ್.”
“ವೈ ಐ ಡ್ರೀಮ್
ಆಫ್ ಗುರುದತ್?
ಸಿನ್ಸ್ ಎ
ಫ್ಯೂ ಡೇಸ್
ಐ ಕೀಪ್
ಸೀಯಿಂಗ್ ಹಿಸ್
ಡ್ರೀಮ್ಸ್. ಓಹ್!
ಹೌ ಟ್ರೂ
ಐ ಫೆಲ್ಟ್
ಅಂಡ್ ಎಂಜಾಯ್ಡ್
ಹಿಸ್ ಸ್ಮೈಲಿಂಗ್
ಫೇಸ್...” (ಏಪ್ರಿಲ್
೫, ೧೯೬೯)
ಮತ್ತೆ... ಶುಕ್ರವಾರ ೧೯,
ಜೂನ ೧೯೬೩,
“ವಾಟ್? ಟುಡೇ?”
(ಲಂಕೇಶ್ ಪತ್ರಿಕೆ/ಮುಂಬೈ ಡೈರಿ)
No comments:
Post a Comment