Thursday, April 17, 2014

ಸಂಜೆಗತ್ತಲಿನ ಮನುಷ್ಯರು; ತೃತೀಯ ಲಿಂಗಿಗಳಿಗೆ ಕೊನೆಗೂ ಸಿಕ್ಕ ನ್ಯಾಯ



ಸಂಜೆಗತ್ತಲಿನ ಮನುಷ್ಯರು
“ಇಂದು ನನ್ನನ್ನು ಜನ ‘ಹೋಮೋ’ ಎಂದು ಕರೀತಾರೆ. ಆದರೆ ಈಗ ನಾನೀ ಪದ ಕೇಳಿದಾಗ ಬೆಚ್ಚುವುದಿಲ್ಲ. ತತ್ತರಿಸುವುದಿಲ್ಲ. ಚಿಕ್ಕಂದಿನಿಂದ ಹೀಗೇ ಏನೇನೋ ಕರೆಸಿಕೊಂಡು ಅಭ್ಯಾಸವಾಗಿಹೋಗಿದೆ. ನಾನು ತುಂಬಾ ಚಿಕ್ಕವನಿದ್ದಾಗ, ಮನೆಗೆ ಬರುವ ನೆಂಟರು, ಸ್ನೇಹಿತರು-ನಾನು ಹೆಚ್ಚಾಗಿ ಬೊಂಬೆಗಳ ಜೊತೆಗೇ ಆಟವಾಡುವುದನ್ನು ಕಂಡು, ಗೋಲಿ, ಬುಗುರಿ, ಓಟ, ಈಜುಗಳಿಂದ ದೂರ ಇರುವುದನ್ನು ಕಂಡು, ಪ್ರಸಿದ್ಧ ಪೈಲ್‌ವಾನ್ ಆಗಿದ್ದ ನನ್ನ ಅಜ್ಜನ “ಗಂಡುತನ” ತೋರಿಸದಿದ್ದನ್ನು ಕಂಡು, ನನ್ನನ್ನು “ಬಾಯ್‌ಲೋ” (ಗುಜರಾತಿಯಲ್ಲಿ ಈ ಪದಕ್ಕೆ ‘ಹುಡುಗಿಯ ಹಾಗೆ’ ಎಂದರ್ಥ) ಎಂದು ಕರೀತಿದ್ದರು. ಅಂದು ಹಾಗೆ ಪ್ರಾರಂಭವಾಗಿದ್ದು ನಂತರ ಏನೇನೋ ಹೆಸರುಗಳನ್ನು ಕರೆಯಿಸಿಕೊಂಡು ಅಭ್ಯಾಸವಾಗಿಹೋಯಿತು. ಮುಂಬೈ ಹಿಂದಿಯ ‘ಗಾಂಡೂ’ ‘ಛಕ್ಕಾ.’ ಇತ್ತೀಚೆಗೆ ಸಲಿಂಗಕಾಮಿಗಳಲ್ಲಿ ಜನಪ್ರಿಯವಾಗುತ್ತಿರುವ ‘ಗೂಡ್’ (ಬೆಲ್ಲ-ಸಿಹಿ). ಇಂಗ್ಲಿಷಿನ ‘ಗೇ’ ಪದ ನನಗೆ ಪರಿಚಯವಾದದ್ದು ನಾನು ೧೫-೧೬ ವರ್ಷದವನಿದ್ದಾಗ. ಬಂಗಾಲಿಯಲ್ಲಿ ನಮ್ಮನ್ನು “ಸಮಕಾಮಿ”ಗಳೆಂದು ಕರೀತಾರೆ. ತಮ್ಮಂತೆಯೇ ಇರುವವರನ್ನು ಪ್ರೀತಿಸುವವರೆಂದು. ಅದು ಒಳ್ಳೆಯ ಪದ ಅನ್ನಿಸುತ್ತದೆ. ಆದರೆ, ಕೆಲವು ದಕ್ಷಿಣ ಪ್ರಾಂತ್ಯಗಳಲ್ಲಿ ನಮ್ಮನ್ನು “ಈವ್‌ನಿಂಗ್ ಪೀಪಲ್”-ಸಂಜೆಗತ್ತಲಿನ ಮನುಷ್ಯರೆಂದು ಕರೀತಾರೆ. ಇದು ನನಗೆ ತುಂಬಾ ಕಸಿವಿಸಿ ಹುಟ್ಟಿಸಿದ ಹೆಸರು. “ನಮಗೆ ಬೆಳಗಿನ ಸೂರ್ಯನ ಕಿರಣಗಳ ಹಕ್ಕಿಲ್ಲವೇನು...?” ಎಂದು ಕೇಳುತ್ತಾರೆ ಸಲಿಂಗಕಾಮಿಯೊಬ್ಬರು. ತಾವು ತುಳಿದ ನೋವಿನ ಹಾದಿಯನ್ನು ನೆನಪು ಮಾಡಿಕೊಳ್ಳುತ್ತಾ.
ಹೌದು. ಈಗ ಜಗತ್ತಿನಾದ್ಯಂತ ‘ಗೇ’ ಎಂದರೆ ಖುಷಿಯಲ್ಲ. ಪ್ಯಾನ್ಸಿ ಒಂದು ಹೂವು ಅಲ್ಲ. ಇದು ಸಲಿಂಗಕಾಮಿಗಳನ್ನು ಕರೆಯುವ ಹಲವಾರು ಬಗೆಗಳಲ್ಲಿ ಕೆಲವು. ಇತ್ತೀಚೆಗೆ ಇವರು ಸುದ್ದಿಯಲ್ಲಿದ್ದಾರೆ. ನೆರಳಿನಿಂದ ಬೆಳಕಿಗೆ ಬರುವ ಧೈರ್ಯ ಮಾಡಿದ್ದಾರೆ. ‘ನಾವಿರುವುದೇ ಹೀಗೆ’ ಎನ್ನುವುದನ್ನು ಗುರುತಿಸಿಕೊಂಡು, ಅದರ ಬಗ್ಗೆ ಹಿಂಸೆಪಡುವ ಅವಶ್ಯಕತೆಯಿಲ್ಲವೆಂಬುದನ್ನು ಕಂಡುಕೊಂಡಿದ್ದಾರೆ.

ಬಾಂಬೇ ದೋಸ್ತ್
ಭಾರತದ ಸಾಂಪ್ರದಾಯಿಕತೆಯ ಮಧ್ಯೆಯೂ ದಿಟ್ಟತನದಿಂದ ಹೊರಬಂದು, ತಮ್ಮ ಬಳಗದವರಿಗೆ ಗೆಳೆತನದ ಹಸ್ತ ಚಾಚಿ ನೆರವಾಗಲು ಮುಂದಾದವರು ಮುಂಬೈನ ಅಶೋಕ್ ರಾವ್ ಕವಿ. ತನ್ನ ಮಗ ಸಲಿಂಗಕಾಮಿಯೆಂದು ತಿಳಿದರೆ ಆಘಾತದಿಂದ ತತ್ತರಿಸುವ ತಾಯಿಯರಿರುವ ನಮ್ಮ ದೇಶದ ಪರಿಸ್ಥಿತಿಯಲ್ಲಿ, ಇವರು ಇಟ್ಟದ್ದು ದಿಟ್ಟಹೆಜ್ಜೆಯೇ ಸರಿ. ಅವರ ಎಲ್ಲ ರೀತಿಯ ಸಮಸ್ಯೆಗಳ ಬಗ್ಗೆ ಸಲಹೆಗಳು, ಸ್ವಾರಸ್ಯಕರ ಲೇಖನಗಳು, ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆಗಳು, ವಿಶೇಷ ಚರ್ಚಾಕೂಟಗಳು-ಸಭೆಗಳು-ಪಿಕ್‌ನಿಕ್‌ಗಳ ಬಗ್ಗೆ ವಿವರಗಳನ್ನು ಹೊತ್ತು, ಒಬ್ಬರಿಗೊಬ್ಬರು ಸಂಪರ್ಕಿಸುವ ಆತ್ಮೀಯ ವೇದಿಕೆಯಾಗಿರುವ, “ಬಾಂಬೇ ದೋಸ್ತ್” ಮ್ಯಾಗಝೀನ್ನ್ನು ಹೊರತಂದಾಗ, ಒಂದು ಚಂಡಮಾರುತವೇ ಹುಟ್ಟಿತು. ಇವರಿಗೆ ಬೆದರಿಕೆಯ ಫೋನ್ ಕಾಲ್‌ಗಳು ಬಂದವು. ಆದರೆ ಇವರು ಹಿಂಜರಿಯಲಿಲ್ಲ. ಭಾರತದಲ್ಲಿರುವ ಲಕ್ಷಾಂತರ ಅನಾಮಿಕ ಸಲಿಂಗಕಾಮಿಗಳಿಗೆ ನೆರವಾಗಲು ಚಟುವಟಿಕೆಗಳನ್ನು ಹಮ್ಮಿಕೊಂಡು, ಅದರಲ್ಲಿ ಸಕ್ರಿಯ ಪಾತ್ರವಹಿಸಿದರು.
ಏಡ್ಸ್ ಹಾವಳಿ ಪ್ರಾರಂಭವಾದಾಗ ಅಶೋಕ್ ರಾವ್ ಕವಿಯವರು ಕಳಕಳಿಯಿಂದ ಮುಂದೆ ಬಂದರು. ಏಡ್ಸ್ ಬಗ್ಗೆ ಹರಡಿರುವ ಅಜ್ಞಾನದ ನಂಬಿಕೆಗಳನ್ನು ದೂರಮಾಡಿ, ಅವರನ್ನು ಆ ರೋಗದಿಂದ ದೂರ, ಸುರಕ್ಷತೆಯಿಂದ ಇರಲು ನೆರವಾಗಲು ಮುಂಬೈನ ಬೇರೆಬೇರೆ ಭಾಗಗಳಲ್ಲಿ ವಿವೇಷ ಕ್ಲಿನಿಕ್‌ಗಳನ್ನು ತೆರೆದರು. ಬಾಂಬೇ ದೋಸ್ತ್‌ನಲ್ಲಿ ಇದರ ಬಗ್ಗೆ ವಿವರವಾದ ಮಾಹಿತಿಗಳನ್ನು ಕೊಟ್ಟರು. ಆಗ ಜನರಿಗೆ ಇವರ ಬಗ್ಗೆ ಗೌರವ ಹುಟ್ಟಿತು.
ವೃತ್ತಿಯಿಂದ ಜರ್ನಲಿಸ್ಟ್ ಆಗಿರುವ ಈ ಪ್ರತಿಭಾಶಾಲಿ, ಒಂದು ರೀತಿಯ ಸಂಶಯ, ಭಯ, ಜುಗುಪ್ಸೆ, ದ್ವೇಷ ಎಲ್ಲ ಭಾವನೆಗಳನ್ನೂ ಒಟ್ಟಿಗೆ ಹುಟ್ಟಿಸುವ ವ್ಯಕ್ತಿ.’ ಇವರು ಈಗ ಜಗದ್ವಿಖ್ಯಾತರು. ಡಿಸೆಂಬರ್ ತಿಂಗಳಲ್ಲಿ ಮುಂಬೈಯಲ್ಲಿ ಇವರು ಒಂದು ಅಂತರರಾಷ್ಟ್ರೀಯ ಕಾನ್‌ಫರೆನ್ಸ್- “ಎಮರ್ಜಿಂಗ್ ಗೇ ಐಡೆಂಟಿಟೀಸ್ ಇನ್ ಸೌತ್ ಏಷಿಯಾ”- ಏರ್ಪಡಿಸಿದ್ದರು. ಜನಸಾಮಾನ್ಯರಿಗೆ ಇದಕ್ಕೆ ಪ್ರವೇಶವಿರಲಿಲ್ಲ. ಇದಕ್ಕೆ ಕೆಲವು ರಾಜಕೀಯ ಪಕ್ಷಗಳಿಂದ, ಸಾಂಪ್ರದಾಯಿಕ ತಂಡಗಳಿಂದ ಸಾಕಷ್ಟು ವಿರೋಧವೂ ಇತ್ತು. ಆದರೆ ಇದಾವುದೂ ಇವರನ್ನು, ಇವರ ತಂಡದವರನ್ನು ತಡೆಯಲಿಲ್ಲ.
ಸಲಿಂಕಾಮಿಗಳು ಘನತೆ, ಗೌರವದಿಂದ ಬಾಳಲು ಶ್ರಮಿಸುತ್ತಿರುವ ಇವರ ಕಾರ್ಯ ಸಫಲವಾಗುತ್ತಿದೆ. ಸಾಮಾಜಿಕವಾಗಿ ಒಪ್ಪಿಗೆ ಪಡೆದ ನಡವಳಿಕೆಯಿಂದ ದೂರವಿರುವವರನ್ನು ಸಮಾಜ ಹೆಚ್ಚು ಸಹಾನುಭೂತಿಯಿಂದ ಒಪ್ಪಿಕೊಳ್ಳುವುದು ಸಾಧ್ಯವಾಗಿದೆ.

ಎಲ್ಲೆಲ್ಲೂ ಹೊಸ ತುಮುಲ
ಈಗ ಅಮೆರಿಕಾದಲ್ಲಿ ಸಾವಿರಾರು ಸಲಿಂಗಕಾಮಿಗಳ ಜೋಡಿಗಳು ಮದುವೆಯಾಗಿದ್ದಾರೆ. ೪ ಲಕ್ಷ ‘ಸೇಮ್ ಸೆಕ್ಸ್ ಕಪಲ್ಸ್’ ಅಲ್ಲಿ ದತ್ತು ತೆಗೆದುಕೊಳ್ಳುವ ಹಕ್ಕಿಗಾಗಿ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ. ಇವರನ್ನು ಮನಸ್ಸಿನಲ್ಲಿಟ್ಟುಕೊಂಡು ಎಡ್‌ವಟೈಸಿಂಗ್ ಕಮಿರ್ಷಿಯಲ್ಸ್ ತಯಾರಾಗುವಷ್ಟು ಅಲ್ಲಿನ ಸಮಾಜ ಇವರನ್ನು ವೇದಿಕೆಗಳನ್ನು ತಯಾರಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನಾವೇನೂ ದೂರ ಉಳಿದಿಲ್ಲ. ಇತ್ತೀಚೆಗೆ ಜಮಖಂಡಿ ತಾಲ್ಲೂಕಿನ ರಾಮಪುರದಲ್ಲಿ ಸಲಿಂಗಕಾಮಿಗಳ ನಡುವೆ ಒಂದು ಮದುವೆ ನಡೆದುಹೋಯಿತು. ಆದರೂ, ಸಲಿಂಕಗಾಮಿಗಳಾದ ತಾಯಿಯರಿಂದ ಮಕ್ಕಳನ್ನು ಎಷ್ಟೋ ದೇಶದ ಸರ್ಕಾರಗಳು ಕಿತ್ತುಕೊಳ್ಳುತ್ತಿವೆ. ಕೆಲವು ಚರ್ಚ್‌ಗಳಂತೂ ಕಟುವಾಗಿ ಸಲಿಂಗಕಾಮಿಗಳನ್ನು ವಿರೋಧಿಸಿವೆ. ಇರಾನ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇವರಿಗೆ ಮರಣದಂಡನೆ ಕೊಡಲಾಗಿದೆ. ಆದರೆ, ಅವರ ಹೋರಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಕೈರೋದಲ್ಲಿ ನಡೆದ “ಯುನೈಟೆಡ್ ನೇಷನ್ಸ್ ಕಾನ್‌ಫರೆನ್ಸ್ ಆನ್ ಪಾಪ್ಯುಲೇಷನ್ಸ್”ನಲ್ಲಿ ಹೆಣ್ಣಿಗೆ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿರುವ ವಿಷಯವನ್ನು ದೃಢಪಡಿಸುವ ಪ್ರಯತ್ನ ನಡೆಯಿತು.

ಒಬ್ಬಳೇ ಹೋಗಬೇಡ!
‘ಬಾಂಬೇ ದೋಸ್ತ್’ ವರ್ಷಗಳ ಹಿಂದೆ ಮೊದಲು ಬಂದಾಗ, ಎಲ್ಲೆಲ್ಲೂ ಅದರ ಬಗ್ಗೆ ಗುಸುಗುಸು ನಡೆಯುತ್ತಿತ್ತು. “ಅದು ಮಾರಾಟಕ್ಕೆ ಸಿಗುವುದಿಲ್ಲವಂತೆ. ಫೈವ್ ಸ್ಟಾರ್ ಹೋಟೆಲ್‌ಗಳ ಟಾಯ್‌ಲೆಟ್‌ಗಳಲ್ಲಿ ಕಂಡೂ ಕಾಣದ ಹಾಗೆ ಇಟ್ಟಿರ‍್ತಾರಂತೆ” ಎಂದೆಲ್ಲ. ಹಾಗೇ ನಿಜವಾಗಿಯೂ ಒಂದು ದಿನ ಅದು ಕಣ್ಣಿಗೆ ಬಿದ್ದಾಗ ಎತ್ತಿಕೊಳ್ಳಲು ಹಿಂಜರಿಕೆಯಾಗಿತ್ತು!
ಮೊನ್ನೆ ‘ಬಾಂಬೇ ದೋಸ್ತ್’ ಕಾಪಿ ಹುಡುಕಿಕೊಂಡು ಹೊರಟಾಗ, ಗೆಳೆಯ-ಗೆಳತಿಯರು “ಅದು ಫೌಂಟನ್ ಸುತ್ತಮುತ್ತ ಎಲ್ಲಾ ಬುಕ್ಸ್-ಮ್ಯಾಗಝೀನ್ ಸೆಲ್ಲರ‍್ಸ್ ಹತ್ತಿರವೂ ಸಿಗುತ್ತೆ” ಎಂದು ಹೇಳಿದರು. “ಆದರೆ ಕೊಳ್ಳಲು ಹೋದಾಗ ಒಬ್ಬಳೇ ಹೋಗಬೇಡ!” ಎಂದು ಎಚ್ಚರಿಸಿದರು.
ಎಷ್ಟೇ ಅಂಗಡಿಗಳು, ಫುಟ್‌ಪಾತಿನ ಮಾರಾಟಗಾರರಲ್ಲಿ ವಿಚಾರಿಸಿದರೂ, ಈಗಿಲ್ಲ, ಮುಂದಿನವಾರ ತರಿಸಿಕೊಡುತ್ತೇನೆ. ಅದು ಪ್ರೈವಟ್ ಸರ್ಕ್ಯುಲೇಷನ್‌ಗೆ ಮಾತ್ರ ಎಂದೆಲ್ಲಾ ಪ್ರತಿಕ್ರಿಯೆಗಳು ಬಂದವು. ಬೆಲೆ ಕೇಳಿದಾಗ “೫೦-೬೦-೭೦- ಪ್ರತಿ ಇಷ್ಯೂ ಮೇಲೆ ಹೋಗುತ್ತೆ” ಎಂದು ಉತ್ತರ.
ಕೊನೆಗೊಬ್ಬ ಪೆಟ್ಟಿಗೆ ಅಂಗಡಿಯವ ತರಿಸಿಕೊಟ್ಟ. ಅದರ ಮೇಲೆ ಪ್ರಿಂಟಾಗಿದ್ದ ೨೦ ರೂ.ಗಳ ಮೇಲೆ ೫೦ ರೂ.ಗಳ ಚೀಟಿ ಅಂಟಿಸಿದ್ದ. “ಪ್ರತಿ ತಿಂಗಳೂ ಬನ್ನಿ ನಾನೇ ತರಿಸಿಕೊಡುತ್ತೇನೆ” ಎಂದು ಹೇಳುತ್ತಾ ೫೦ ರೂಪಾಯಿ ಜೇಬಿಗೆ ಬಿಟ್ಟುಕೊಂಡ.
“ಪ್ರತಿ ತಿಂಗಳೂ ಬೇಡ., ಒಂದು ಲೇಖನ ಬರೆಯುವುದಿತ್ತು. ಅದಕ್ಕೋಸ್ಕರ ಬೇಕಿತ್ತು” ಎಂದು ನಾನು ಅವನಿಗೆ ವಿವರಣೆ ಕೊಟ್ಟಾಗ, ಅದರ ಅವಶ್ಯಕತೆಯಿರಲಿಲ್ಲ ಎಂಬ ಅರಿವು ನಗೆ ತರಿಸಿತು.

(ಲಂಕೇಶ್ ಪತ್ರಿಕೆ, ಫ಼ೆಬ್ರುವರಿ ೧, ೧೯೯೫)

No comments:

Post a Comment